ಕನ್ನಡದ ಮೊದಲ ಹಾಸ್ಯಬರಹಗಾರ್ತಿ ಟಿ.ಸುನಂದಮ್ಮ

ಜನ್ಮದಿನದ ವಿಶೇಷ

ಕನ್ನಡದ ಮೊದಲ ಹಾಸ್ಯಬರಹಗಾರ್ತಿ

ಟಿ.ಸುನಂದಮ್ಮ

  ಆಗ   ಹಾಸ್ಯ ಸಾಹಿತ್ಯ ರಚನೆ ಮಾಡುವವರೇ ಕಡಿಮೆ. ಅದರಲ್ಲೂ ಮಹಿಳೆಯರು ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪ್ರಸಿದ್ಧಿ ಪಡೆಯುವದು ಇನ್ನಷ್ಟು ಕಡಿಮೆ. ಕನ್ನಡದಲ್ಲಿ ಅಂತಹ ಪ್ರಯತ್ನವನ್ನು ಮಾಡಿ ಹೆಸರು ಗಳಿಸಿದವರು ಟಿ. ಸುನಂದಮ್ಮನವರು.  ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವದೂ ಬಹಳ ಅಪರೂಪವೆ ಎಂಬಂತಹ ಕಾಲದಲ್ಲಿ  ಶಾಲೆಗೆ ಹೋಗುವ ದಿಟ್ಟತನ ತೋರಿ , ಅದೂ ಸಾಲದೆಂಬಂತೆ ಹಾಸ್ಯ ಬರೆಹಗಳನ್ನು ಬರೆದು ಸಮಾಜಕ್ಕೇ ಸವಾಲು ಹಾಕಿದವರು.
                      ೧೯೧೭ ಅಗಸ್ಟ್ ೮ ರಂದು ತರೀಕೆರೆಯಲ್ಲಿ ರಾಮಯ್ಯ ಮತ್ತು ನಾಗಮ್ಮ ದಂಪತಿಗಳ ಮಗಳಾಗಿ  ಸುನಂದಮ್ಮನವರು ಜನಿಸಿದರು. ಆಗ ತರೀಕೆರೆಯಲ್ಲಿ ಬಾಲಕಿಯರಿಗೆಂದು ಶಾಲೆಯೇ ಇರಲಿಲ್ಲ. ಇದ್ದುದು ಹುಡುಗರ ಶಾಲೆ. ತಂದೆ ಡೆಪ್ಯೂಟಿ ಕಮಿಷನರ್. ಮಗಳನ್ನು ಹುಡುಗರ ಶಾಲೆಗೇ ಸೇರಿಸಿದರು. ಸುನಂದಮ್ಮ ಪ್ರತಿಭಾವಂತ ಬಾಲಕಿ. ಅದು ಕೆಲವರಿಗೆ ಸಹಿಸಲಿಲ್ಲ. ಅವರು ಆ ಬಾಲಕಿ ಶಾಲೆ ಬಿಡುವಂತೆ ಮಾಡಿದರು. ಆದರೆ ತಾಯಿಗೆ ಹಟ. ಮಗಳಿಗೆ ಮನೆಯಲ್ಲೇ ಪಾಠ ಹೇಳಿಸಿ ಲೋವರ ಸೆಕೆಂಡರಿ ಶಿಕ್ಷಣ ಕೊಡಿಸಿದರು. ಮುಂದೆ ಇಂಟರಮೀಡಿಯೆಟ್ ತನಕ ಪ್ರಥಮ ದರ್ಜೆಯಲ್ಲೇ ಪಾಸಾದ ಸುನಂದಮ್ನ ವಾಣಿ ವಿಲಾಸ ಕಾಲೇಜಲ್ಲಿ ಕಾಲೇಜಿಗೇ ಮೊದಲಿಗರಾಗಿ ಉತ್ತೀರ್ಣರಾದರು. ಅಂದರೆ ಆಗ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವದು ಸಹ ಕಷ್ಟವೆಂಬ ಪರಿಸ್ಥಿತಿ ಇತ್ತು.
                ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ಕವನ ಬರೆಯಲಾರಂಭಿಸಿದ ಸುನಂದಮ್ಮ ತಮ್ಮ ತಾತ ಮತ್ತು ತಂದೆತಾಯಿಯಿಂದಾಗಿ ಪುಸ್ತಕ ಓದುವ ಅಭಿರುಚಿಯನ್ನೂ ಬೆಳೆಸಿಕೊಂಡು ಅಂದಿನ ಕನ್ನಡ ಇಂಗ್ಲಿಷ ಸಾಹಿತ್ಯವನ್ನು ಅಧ್ಯಯನ ಮಾಡಿ ಇದರು. ಒಂಬತ್ತನೇ ವಯಸ್ಸಿಗೆ ಕವನ,  ಹನ್ನೆರಡನೇ ವಯಸ್ಸಿಗೆ ಕಥೆ ಬರೆಯಲಾರಂಭಿಸಿದರು. ಆಗಿನ ತಾಯಿನಾಡು, ವಿಶ್ವಕರ್ನಾಟಕ, ನವಜೀವನ ಮೊದಲಾದ ಪತ್ರಿಕೆಗಳಲ್ಲಿ ಅವು ಪ್ರಕಟವಾಗತೊಡಗಿದವು.  
         ೧೯೪೨ ರಲ್ಲಿ ಡಾ. ರಾಶಿ ಅವರ ಕೊರವಂಜಿ ಹಾಸ್ಯ ಪತ್ರಿಕೆ ಆರಂಭವಾದಾಗ ಅದರಲ್ಲಿ ಸುನಂದಮ್ಮನವರೂ ಹಾಸ್ಯಬರೆಹ ಬರೆಯಲಾರಂಭಿಸಿದರು. ಮುಂದೆ ೨೫ ವರ್ಷಗಳತನಕ ಸತತ ಆ ಪತ್ರಿಕೆ ನಿಲ್ಲುವತನಕವೂ ಅವರ ಬರೆಹಗಳು ಪ್ರಕಟಗೊಂಡವು. ನಾ. ಕಸ್ತೂರಿ, ರಾಜರತ್ನಂ ಮೊದಲಾದವರಿಂದ ಅವು ಪ್ರಶಂಸೆಗೊಳಗಾದವು. ಮೈಲಾರಯ್ಯ – ಸರಸು ದಂಪತಿ ಜೋಡಿಯನ್ನು ತಮ್ಮ ಹಾಸ್ಯಕ್ಕೆ ಬಳಸಿಕೊಂಡ ಅವರು ಹಾಸ್ಯಪ್ರಿಯ ಓದುಗರ ಅಪಾರ ಮೆಚ್ಚುಗೆಗೆ ಪಾತ್ರರಾದರು. ರಾಜ್ಯದ ಉಳಿದ ದಿನ , ವಾರಪತ್ರಿಕೆಗಳಲ್ಲೂ , ದೀಪಾವಳಿ ವಿಶೇಷಾಂಕಗಳಲ್ಲೂ ಸುನಂದಮ್ಮ ನವರ ಹಾಸ್ಯಬರೆಹಗಳು ನಿರಂತರ ಕಾಣಿಸಿಕೊಂಡವು.  ಆಕಾಶವಾಣಿ ಕೇಂದ್ರಗಳಲ್ಲೂ ಅವರ ಹಲವು ಹಾಸ್ಯ ನಾಟಕ, ಭಾಷಣ, ಪ್ರಹಸನಗಳು ಪ್ರಸಾರವಾದವು. ಅವರು ಗಂಭೀರ ಸಾಹಿತ್ಯವನ್ನೂ ರಚಿಸಿದ್ದು ೧೯೮೧ ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು. ಹಲವು ಮಕ್ಕಳ ಪುಸ್ತಕಗಳನ್ನೂ ಬರೆದಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಮೊದಲ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು. ಸುಮಾರು ಆರು ದಶಕಗಳ ಕಾಲ ಸಾಹಿತ್ಯರಚನೆ ಮಾಡಿದ ಸುನಂದಮ್ಮ 2006 ಜನೆವರಿ 27 ರಂದು ನಿಧನ ಹೊಂದಿದರು. ಕನ್ನಡದ ನಗೆಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯ ಮತ್ತು ಅಪಾರ.

————————

ಎಲ್. ಎಸ್. ಶಾಸ್ತ್ರಿ

Leave a Reply

Back To Top