ಶಿವಲೆಂಕ ಮಂಚಣ್ಣನ ವಚನ-ಪ್ರೊ. ಜಿ.ಎ. ತಿಗಡಿ.

ವಚನ ಸಂಗಾತಿ

ಶಿವಲೆಂಕ ಮಂಚಣ್ಣನ ವಚನ-

ಪ್ರೊ. ಜಿ.ಎ. ತಿಗಡಿ.

ಗುರು ವೈಭವಕ್ಕೆ ಸಿಕ್ಕಿದಾಗಲೆ ಶಿಷ್ಯಂಗೆ ನರಕ ಪ್ರಾಪ್ತಿ
ಲಿಂಗ ಭಜನೆಗೆ ಸಿಕ್ಕಿದಾಗಲೆ ಮರಣಕ್ಕೊಳಗು.
ಜಂಗಮ ಜಂಗುಳಿಯಾಗಿ,
ಕಂಡಕಂಡವರಂಗಳಕ್ಕೆ ಜಂಘೆಯನಿಕ್ಕಲಾಗಿ, ನಿರಂಗಕ್ಕೆ ಹೊರಗು.
ಇಂತೀ ಇವರು ನಿಂದುದಕ್ಕೆ ಬಂಧವಿಲ್ಲದಿರಬೇಕು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ.

  ಶರಣ ಧರ್ಮದ ತತ್ವ ಸಿದ್ಧಾಂತಗಳ ಪ್ರತಿಪಾದಕರಾದ ಗುರು – ಲಿಂಗ – ಜಂಗಮರು ತಮ್ಮ ತಮ್ಮ ತತ್ವಗಳಿಗೆ ಬದ್ಧರಾಗಿ ವರ್ತಿಸಬೇಕು.  ಗುರುವನ್ನು ಪೀಠಸ್ಥಾನಕ್ಕೇರಿಸಿ ಹೊಗಳುತ್ತ ವೈಭವೀಕರಿಸತೊಡಗಿದರೆ ಆತನ ಶಿಷ್ಯರಿಗೆ ನರಕಪ್ರಾಪ್ತಿಯಾಗುತ್ತದೆ.     ಲಿಂಗವು ಅಂತರಂಗದ ಅನುಸಂಧಾನಕ್ಕೆ ಬದಲಾಗಿ ಕೇವಲ ಭಜನೆ – ಗೀತೆಗಳಿಂದ ಹೊಗಳಿಕೆಯ ವಸ್ತುವಾಗಿಬಿಟ್ಟರೆ ಅದು ಸತ್ತಂತಾಗುತ್ತದೆ.   ಅದರಂತೆ ಜಂಗಮ ಸಿಕ್ಕಸಿಕ್ಕವರ ಮನೆಯ ಅಂಗಳಕ್ಕೆ ಹೋಗಿ ಬೇಡತೊಡಗಿದರೆ ಮುಕ್ತಿಯಿಂದ ದೂರಾಗಿ ಹೊರಗಾಗುತ್ತಾನೆಂದು ಶಿವಲೆoಕ ಮಂಚಣ್ಣ  ಅಭಿಪ್ರಾಯಪಡುತ್ತಾನೆ.   ಹೀಗೆ ಈ  ರೀತಿ  ಮೂವರು ಲೌಕಿಕದ ಬಂಧನಗಳಿಗೆ ಸಿಲುಕದೆ ತಮ್ಮ ತಮ್ಮ ಮೂಲ ತತ್ವಗಳಿಗೆ ಬದ್ಧರಾಗಿ ಅವುಗಳನ್ನು ಅನುಷ್ಠಾನಗೊಳಿಸಿ ಕಾರ್ಯತತ್ಪರರಾದರೆ ಮಾತ್ರ ಈಶಾನ್ಯಮೂರ್ತಿ ಮಲ್ಲಿಕಾರ್ಜುನನನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾನೆ.

ಗುರು ಶಿಷ್ಯ ಪರಂಪರೆಗೆ ನಮ್ಮ ದೇಶದಲ್ಲಿ ಭವ್ಯ ಇತಿಹಾಸವಿದೆ.  ಆದರೆ ಈ ಪರಂಪರೆ  ಶ್ರೇಣಿಕೃತವಾಗಿರುವುದಷ್ಟೇ ಅಲ್ಲದೆ ಶೋಷಣಾ ಮೂಲವೂ ಆಗಿರುವುದನ್ನು ಪುರಾಣ ಕಾಲದಿಂದ ಮೊದಲಾಗಿ ಇತಿಹಾಸದುದ್ದಕ್ಕೂ  ಕಾಣುತ್ತ ಬಂದಿದ್ದೇವೆ.  ಇದಕ್ಕೆ ದ್ರೋಣ – ಏಕಲವ್ಯ,  ಪರಶುರಾಮ – ಕರ್ಣ,  ಸತ್ಯಕಾಮ, ಜಾಬಾಲ,  ಹೀಗೆ ಬೇಕಾದಷ್ಟು ನಿದರ್ಶನಗಳು ನಮ್ಮ ಕಣ್ಣಮುಂದಿವೆ.  ಕಾಲಾಂತರದಲ್ಲಿ,  ಗುರು ಒಂದು ವೃತ್ತಿಯ, ಜಾತಿಯ ಪೀಠವಾಗಿ ದೈವತ್ವಕ್ಕೇರಿ,  ಶಿಷ್ಯ ಸಮೂಹಗಳು  ಹೊಗಳು ಭಟ್ಟರಾದರು.  ಕೊನೆ  ಕೊನೆಗಂತೂ  ಗುಲಾಮರಂತೆ ಅವರ ಕಾಲಡಿಯಲ್ಲಿ ಬದುಕುವಂತಾಯಿತು.  ‘ಗುರುವಿನ ಗುಲಾಮನಾಗುವ ತನಕ ದೊರೆಯದನ್ನ ಮುಕುತಿ’ ಎಂಬ ಮಾತು ಜನಜನಿತವಾಯಿತು.  ಇದನ್ನು  ಕಣ್ಣಾರೆ ಕಂಡ ಶರಣರು ಗುರುವಿನ ಬಗ್ಗೆ,  ಶಿಷ್ಯನ ಬಗ್ಗೆ  ಹಾಗೂ ಇವರಿಬ್ಬರ ಸಂಬಂಧಗಳ ಸ್ವರೂಪದ ಬಗ್ಗೆ ಹಲವು ವಚನಗಳಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ.   ಇಲ್ಲಿ  ಶಿವಲೆಂಕ ಮಂಚಣ್ಣನೂ ಕೂಡ ಗುರು – ಶಿಷ್ಯರ ನಡತೆಯ ಕುರಿತು ಹೇಳುತ್ತಾ,  ಗುರು ಹೊಗಳಿಸಿಕೊಳ್ಳುವ ವ್ಯಕ್ತಿಯಾದರೆ,  ಶಿಷ್ಯರು ಹೊಗಳು ಭಟ್ಟರಾದರೆ , ಗುರು ಗುರುತ್ವ ಕಳೆದುಕೊಳ್ಳುತ್ತಾನೆ, ಶಿಷ್ಯರಿಗೆ ನರಕ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ.


 ” ಆಸೆವಿರಹಿತ ಗುರುವಾದಲ್ಲಿ,  ಪಾಶವಿರಹಿತ ಪೂಜಿಸುವ ಶಿಷ್ಯನಾಗಬೇಕು…”  
ಎಂದು ಇನ್ನೊಂದು ವಚನದಲ್ಲಿ ಗುರು ಶಿಷ್ಯರ ರೀತಿಯನ್ನು ವಿವರಿಸುತ್ತಾರೆ.  

      ಇನ್ನು ಲಿಂಗವೆಂಬುದು  ಪರಾತ್ಪರ ಪರವಸ್ತುವಿನ ಸಂಕೇತ, ಪರಿಪೂರ್ಣ ಅಖಂಡ.    ಇದು  ಜಡವೊ?  ಚೈತನ್ಯವೊ? ವಿನಾಶಿಯೋ ?  ಅವಿನಾಶಿಯೋ ? ಅಕ್ಷರಾಕ್ಷರಕ್ಕೆ ಮೀರಿದ ಘನವೋ ?  ಇದರ ಅರಿವು, ತಿಳುವಳಿಕೆ, ಜ್ಞಾನಗಳು  ಲಿಂಗ ಧರಿಸಿದವರಿಗೆ, ಲಿಂಗಧಾರಣ ಮಾಡಿಸಿದವರಿಗೆ ಇವೆಯೇ ?  ಒಟ್ಟಿನಲ್ಲಿ ಇದೊಂದು ಸಂಪ್ರದಾಯವೆಂಬಂತೆ ಬೆಳೆದು ಬಂದು ಒಂದು  ಪದ್ಧತಿಯಾಗಿಬಿಟ್ಟಿದೆ .  ಲಿಂಗತತ್ವ ವ್ಯಾಪಕವಾದದ್ದಷ್ಟೇ ಅಲ್ಲದೆ, ವಿಶ್ವವೇ ಲಿಂಗತತ್ವವಾಗಿದೆ.    ಇಂತಹ ಲಿಂಗದ ನಿಜ ಸ್ವರೂಪವನ್ನರಿಯದೆ,  ಅನುಷ್ಠಾನಗೊಳಿಸಿಕೊಳ್ಳದೆ, ಸ್ಥಾವರವಾಗಿಸಿ ಕೇವಲ  ಪೂಜೆ ಹಾಡು ಭಜನೆಗಳಿಂದ ಅದನ್ನು ಮೃತ ವಸ್ತುವಾಗಿಸಿಬಿಟ್ಟಿದ್ದೇವೆಂದು  ಮಂಚಣ್ಣನವರು ಖಾರವಾಗಿ ಹೇಳುತ್ತಾರೆ.

    ಇನ್ನು ‘ ಅನುಭಾವಕ್ಕೆ’  ಸಂಕೇತವಾದ ಜಂಗಮ ಚೈತನ್ಯ ಸ್ವರೂಪಿಯಾಗಿದ್ದಾನೆ. ‘ಅನುಭಾವವಿಲ್ಲದ ಜಂಗಮವು ಕಾಲಿಲ್ಲದ ಹೆಳವನಂತೆ… ‘ ಎಂದಿದ್ದಾರೆ ಅಲ್ಲಮರು.
ಮುಂದುವರಿದು,

 ಒಡಲ ಕಕ್ಕುಲತೆಗೆ ಆಶನವನನುಂಡು
ವ್ಯಸನದ ಕಕ್ಕುಲತೆಗೆ ಹಣವಬೇಡಿ
ಕೊಟ್ಟಡೆ ಕೊಂಡಾಡಿ, ಕೊಡದಿರ್ದೊಡೆ
ದೂರಿಕೊಂಡು ಹೋಹಾತ
ಜಂಗಮವಲ್ಲ……”

       ಎಂದಿದ್ದಾರೆ.   ಜಂಗಮ ನೀಡಬೇಕೆ ವಿನಹ ಬೇಡಬಾರದು.


” ಜಂಗಮದ ಅರಿವು
   ಬೇಡಿದಲ್ಲಿ ಹೋಯಿತ್ತು….”
 ” ಜಂಗಮದ ಘನ ಬೇಡಿ ಕಿರಿದಾಯ್ತು”


  ಎಂಬ ಶರಣರ ನುಡಿಗಳು ಜಂಗಮದ ಮಹತ್ವವನ್ನು ಸಾರಿ ಹೇಳುತ್ತವೆ. ಇಂತಹ ಜಂಗಮ ಕಂಡ ಕಂಡವರ ಮನೆಯ ಅಂಗಳಕ್ಕೆ ಹೋಗಿ ಬೇಡತೊಡಗಿದರೆ ಆತ ಮುಕ್ತಿಯಿಂದ ದೂರಾಗಿ ಹೊರಗಾಗುತ್ತಾನೆಂದು  ಮಂಚಣ್ಣನವರು ಅಭಿಪ್ರಾಯಪಡುತ್ತಾರೆ.   ಈ ರೀತಿ ಗುರು, ಲಿಂಗ, ಜಂಗಮರು ಲೌಕಿಕದ ಬಾಹ್ಯ ಬಂಧನಗಳಿಗೆ ಸಿಲುಕದೆ ತಮ್ಮ ತಮ್ಮ ಮೂಲ ಸ್ವರೂಪದ ತತ್ವಗಳಿಗೆ ಬದ್ಧರಾಗಿ ಅವುಗಳನ್ನು ಅಳವಡಿಸಿಕೊಂಡು ಅನುಷ್ಠಾನಗೊಳಿಸಿದರೆ ಮಾತ್ರ ಈಶಾನ್ಯ ಮೂರ್ತಿ ಮಲ್ಲಿಕಾರ್ಜುನನನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ.

   ಗುರು ಲಿಂಗ ಜಂಗಮ ಈ ಮೂರರ ಸ್ವರೂಪವನ್ನು ಮಂಚಣ್ಣನವರೇ ಇನ್ನೊಂದು ವಚನದಲ್ಲಿ ಇನ್ನೂ ಸ್ಪಷ್ಟವಾಗಿ ಹೀಗೆ ವಿವರಿಸಿದ್ದಾರೆ.

” ಗುರುವೆಂದಡೂ ಕಾಯವುಳ್ಳನ್ನಕ್ಕ,
ದೋಷಕ್ಕೆ ಹೊರಗಾಗಬೇಕು.
ಲಿಂಗವೆಂದಡೂ ಪೀಠಕ್ಕೆ ಸಿಕ್ಕಿಹನ್ನಕ್ಕ,
ಜಗದ ಆಗುಚೇಗೆಯನರಿಯಬೇಕು.
ಜಂಗಮವೆಂದಡೂ ಸುಖದುಃಖವುಳ್ಳನ್ನಕ್ಕ,
ಕಾಯವಿಡಿದು ಇಹ ಕಾರಣ, ಪಾಪ ತಾಪಕ್ಕೆ ಹೊರಗಾಗಬೇಕು.
ಶೂನ್ಯವಾದಡೂ ಆ ಕುರುಹುಳ್ಳನ್ನಕ್ಕ, ಸುಖದುಃಖಕ್ಕೊಳಗು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾದ.”
———————————
——————–

ಪ್ರೊ. ಜಿ.ಎ. ತಿಗಡಿ.

Leave a Reply

Back To Top