ಅಂಕಣ ಸಂಗಾತಿ.
ಶಿಕ್ಷಣ ಲೋಕ
ಡಾ.ದಾನಮ್ಮ ಝಳಕಿ
ಶಾಲಾ ದಾಖಲಾತಿಯ ಆತಂಕಗಳು
ಇತ್ತೀಚಿಗೆ ತಮ್ಮ ಮಕ್ಕಳ ಶಾಲಾ ದಾಖಲಾತಿಗಾಗಿ ಪಾಲಕರ/ಪೋಷಕರ ಕಾಳಜಿ, ಚಿಂತೆ ಹಾಗೂ ಗೊಂದಲಗಳು ಹೆಚ್ಚುತ್ತಲೇ ಇವೆ. ಯಾವ ಶಾಲೆಗೆ ದಾಖಲಾತಿ ಪಡೆಯಬೇಕು? ಅಲ್ಲಿ ದಾಖಲಾತಿ ಸಿಗುತ್ತದೆಯೇ? ಎಂದೆಲ್ಲಾ ಮನದಲ್ಲಿ ನೂರಾರು ಪ್ರಶ್ನೆಗಳು ಮೂಡುತ್ತವೆ. ಮೊನ್ನೆ ನನ್ನ ಸ್ನೇಹಿತೆ ಮುಂಬೈ ಯಿಂದ ಬಂದಾಗ ನಾನು ಅವಳಿಗೆ ನಿನ್ನ ಮೊಮ್ಮಗಳು ಶಾಲೆಗೆ ಹೋಗುತ್ತಿದ್ದಾಳೆಯೇ ಎಂದು ಕೇಳಿದಾಗ, ಅಯ್ಯೋ ಅದರ ಕಥೆ ಏನು ಕೇಳ್ತೀಯಾ, ನನ್ನ ಮೊಮ್ಮಗಳು ಹೊಟ್ಟೆಯಲ್ಲಿ ಇದ್ದಾಗಲೇ ಶಾಲೆಗೆ ನೊಂದಣೆಗಾಗಿ ಅರ್ಜಿ ಸಲ್ಲಿಸಲಾಗಿತ್ತು, ತದ ನಂತರ ಜನ್ಮ ದಾಖಲೆ ಒದಗಿಸಲಾಗಿತ್ತು ನಂತರದಲ್ಲಿ ತಂದೆ, ತಾಯಿ, ಅಜ್ಜ, ಅಜ್ಜಿಯರೆಲ್ಲರ ಸಂದರ್ಶನವೂ ನಡೆದಿತ್ತು ಇಷ್ಟೆಲ್ಲಾ ಆದ ನಂತರ ಈಗ ಜ್ಯುನಿಯರ್ ಕೆ ಜಿ ಓದುತ್ತಿದ್ದಾಳೆ. ಅದು ಪ್ರತಿಷ್ಟಿತ ಶಾಲೆಯಂತೆ, ಏನ್ ಕೇಳ್ತೀಯಾ ಶಾಲೆಯ ಕಥೆ. ಇನ್ನು ಫೀ ಎಷ್ಟು ಅಂತ ಕೇಳ್ಬೇಡಾ ಅಂದಳು. ಅದಕ್ಕೆ ನಾನು ಏಕೆ ಎಂದೆ. ಅದನ್ನು ನೀನು ಊಹಿಸಲು ಸಾಧ್ಯವಿಲ್ಲ ಎಂದಳು. ನಾನು ಅದಕ್ಕೆ ಇರಲಿ ಹೇಳು ಎಂದೆ. ಆಗ ಅವಳು ನನ್ನ ಮಗಳು ಸರಕಾರಿ ಕಾಲೇಜು ಒಂದರಲ್ಲಿ ತನ್ನ ಇಡೀ MBBS ನ್ನು ಒಟ್ಟು 66000 ಸಾವಿರದಲ್ಲಿ ಮುಗಿಸಿದ್ದಾಳೆ. ಆದರೆ ನನ್ನ ಮೊಮ್ಮಗಳಿಗೆ ಜ್ಯುನಿಯರ್ ಕೆ ಜಿ ಗೆ ಒಂದು ವರ್ಷಕ್ಕೆ ಒಂದು ಲಕ್ಷ ಎಂಭತ್ತು ಸಾವಿರವಂತೆ ಎಂದಳು. ಇದನ್ನೆಲ್ಲ ಕೇಳಿ ವಿಚಿತ್ರವೆನಿಸಿತು. ಏನಿದು ಇಷ್ಟೊಂದು ಕಷ್ಟವೇ ಶಾಲಯ ದಾಖಲಾತಿ ಎಂದು ಆಲೋಚಿಸತೊಡಗಿದೆ.
ಅಷ್ಟರಲ್ಲಿ ನನ್ನ ಮಗನ ಪೋನ್ ಬಂದಿತು. ನಾಳೆ ತಾವು ಬೆಂಗಳೂರಿಗೆ ಬರಬೇಕು ಎಂದನು ಆಗ ಏಕೆ ಎಂದು ಕೇಳಿದೆ. ಆಗ ಆರ್ಯನ ಶಾಲೆಯ ದಾಖಲಾತಿಗಾಗಿ ಶಾಲೆಯನ್ನು ಸಂದರ್ಶಿಸಬೇಕಿತ್ತು ಎಂದನು. ಆಗ ಇನ್ನು ಈಗ 3 ವರ್ಷ ಅಲ್ಲವೇ ಅವಳಿಗೆ ಎಂದೆ. ಆಗ ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ಈಗಲೇ ದಾಖಲಾತಿ ಪ್ರಾರಂಭವಾಗಿವೆ ಅದಕ್ಕಾಗಿ ಬಂದು ನೋಡಿ ಹೋಗಿ ಎಂದನು. ಸರಿ ಹಾಗಾದರೆ ನಾಳೆ ಬರುವೆ ಎಂದು ಬೆಂಗಳೂರಿಗೆ ಹೊರಟು ನಿಂತೆ. ಅಷ್ಟರಲ್ಲಿ ಮನಸ್ಸಿನಲ್ಲಿ ಅನೇಕ ಆಲೋಚನೆಗಳು. ಈಗಾಗಲೇ ನನ್ನ ಸ್ನೇಹಿತೆ ತನ್ನ ಮೊಮ್ಮಗಳ ಶಾಲೆಗಾಗಿ ಪಟ್ಟ ಪಾಡೆಲ್ಲಾ ಕೇಳಿದ್ದೆ ನನಗೆ ನನ್ನ ಮೊಮ್ಮಗಳ ಶಾಲೆಯ ಬಗ್ಗೆ ಅನೇಕ ಆಲೋಚನೆಗಳು ಬರಲು ಪ್ರಾರಂಭಿಸಿದವು. ನಮ್ಮ ಸರಕಾರಿ ಶಾಲೆಗಾಗಿ ಮಕ್ಕಳನ್ನು ಮನೆ ಮನೆಗೆ ಹೋಗಿ ದಾಖಲಾತಿ ಮಾಡಿಕೊಂಡು ಬರುವರು. ಆದರೆ ಕಾಸಗಿ ಶಾಲೆಗಾಗಿ ಇಷ್ಟೊಂದು ಪರದಾಟವೇಕೇ? ಎಂಬ ವಿಚಾರವೂ ಸುಳಿಯುತ್ತಲಿತ್ತು. ಆದರೂ ನಮ್ಮ ಸರಕಾರಿ ಶಾಲೆಯಲ್ಲಿ ಇರದ ಯಾವ ಆಕರ್ಷಣೆ ಖಾಸಗಿ ಶಾಲೆಯಲ್ಲಿದೆ ಎಂಬ ವಿಚಾರ ಮಾಡುತ್ತಾ ರೈಲು ಹತ್ತಿದೆನು.
ಮರುದಿನ ಪ್ರತಿಷ್ಠಿತ ಶಾಲೆಗಳನ್ನು ನನ್ನ ಮಗ ತೋರಿಸುತ್ತಾ ನಡೆದನು ಅದರಲ್ಲಿ ಕೆಲವು ಶಾಲೆಗಳಲ್ಲಿ ನಾನು ಕಂಡ ದೃಶ್ಯಗಳನ್ನು ವಿವರಿಸುವೆ. ಎಲ್ಲ ಶಾಲೆಯವರು Reception ದಲ್ಲಿ ಸ್ವಾಗತ ಮಾಡುತ್ತಾ ತಮ್ಮ ತಮ್ಮ ಶಾಲೆಯ ಬ್ರೋಚರ ಗಳನ್ನು ನೀಡಿ ತಮ್ಮ ಶಾಲೆಯ ಫೀ ಬಗ್ಗೆ ವಿವರಿಸಿದರು. ತದನಂತರ ತಮ್ಮ ಶಾಲಯನ್ನು ತೋರಿಸುತ್ತಾ, ತಮ್ಮ ಶಾಲೆಯ AC ರೋಮ ಗಳನ್ನು ಒಳಗೊಂಡಿದೆ, ತಮ್ಮ ಶಾಲೆಯಲ್ಲಿ ಥೀಮೆಟಿಕ್ ಬೇಸ್ ದಲ್ಲಿ ಕಲಿಸಲಾಗುತ್ತದೆ. ಅಲ್ಲದೇ ಜೋಡೋ ತರಗತಿ, ಮ್ಯೂಸಿಕ್ ತರಗತಿ, ಗ್ರಂಥಾಲಯ, Hobby Club, ಕಂಪ್ಯೂಟರ್ ತರಗತಿ, ಪೇಟಿಂಗ್ ಕ್ಲಾಸ್, ಹೀಗೆ ಅನೇಕ ಸಹಪಠ್ಯಗಳ ಬಗ್ಗೆ ಹೇಳುತ್ತಾ ಬೀಗುತ್ತಾ ನಡೆದರು. ಅಲ್ಲದೇ ಕೆಲವು ಶಾಲೆಯವರು ತಮ್ಮದು ಇಂಟಿಗ್ರೇಟೆಡ್ ಪಠ್ಯಕ್ರಮ ಅದರಲ್ಲಿ CBSC ಹಾಗೂ ICS ಎರಡು ಸಮ್ಮಿಳಿಗೊಂಡಿದೆ ಎಂದು ತಿಳಿಸಿದರು. ಇನ್ನು ಕೆಲವರು ತಮ್ಮ ಶಾಲೆಯಲ್ಲಿ ಬಾಸ್ಕೆಟ್ ಬಾಲ್, ಥ್ರೋಬಾಲ್, SWIMMING ಪೋಲ್ ಇತ್ಯಾದಿಗಳು ಇವೆ ಎಂದೆಲ್ಲಾ ತಿಳಿಸಿದರು. ಅವರ ಕಟ್ಟಡಗಳು 5 Star ಹೋಟೆಲ್ ಗಳಂತೆ ಇದ್ದವು. ಇದನ್ನೆಲ್ಲಾ ತೋರಿಸಿ ನಮ್ ಶಾಲೆಗೆ ದಾಗಲಾತಿಗಾಗಿ ಇನ್ನು ಕೇವಲ 15 ದಿನ ಮಾತ್ರ ಉಳಿದಿವೆ. ಆದ್ದರಿಂದ ಬೇಗನೇ ಫಾರಂ ತುಂಬಿ ಎಂದರು. ಅಲ್ಲದೇ ಬಸ್ ಸೌಲಭ್ಯಕ್ಕಾಗಿ ಬೇರೆ ಫೀ ಇದೆ ಎಂಬುದನ್ನು ಸಹ ಮರೆಯದೇ ತಿಳಿಸಿದರು. ಅಲ್ಲದೇ ಪುಸ್ತಕ ಹಾಗೂ ಸಮವಸ್ತ್ರ ಫೀ ಪ್ರತ್ಯೇಕವಾಗಿ ಸಲ್ಲಿಸಬೇಕು ಎಂದು ತಿಳಿಸಿದರು. ಆಗ ನನ್ನ ಮಗ ನನ್ನ ಕಡೆ ನೋಡಿ ಹೇಗೆ ಎನಿಸಿತು ಶಾಲೆ ಎಂದು ಪ್ರಶ್ನಿಸಿದ. ಅದಕ್ಕೆ ನಾನು ನನ್ನ ಮೂರ್ನಾಲ್ಕು ಪ್ರಶ್ನೆಗಳನ್ನು ಕೇಳಿದೆನು. ಅವುಗಳೆಂದರೆ,
1 ಶಿಕ್ಷಕರ ಹೆಸರು ಹಾಗೂ ವಿದ್ಯಾರ್ಹತೆಯ ಮಾಹಿತಿ ತಿಳಿಸಿ
2 ಪ್ರತ್ಯೇಕ ತರಗತಿಗಳಾದ ಸಹಪಠ್ಯದ ಚಟುವಟಿಕೆಗಾಗಿ ಶಿಕ್ಷಕರ ವ್ಯವಸ್ಥೆ ಹೇಗಿದೆ?
3 NTS ಹಾಗೂ ಒಲಂಪಿಯಾಡ್ ದಂತಹ ಪರೀಕ್ಷೆಗಳನ್ನು ಈ ಶಾಲೆಗಳಲ್ಲಿ ನಡೆಸಲಾಗುತ್ತದೆಯೇ?
6 NCC, NSS ಹಾಗೂ SPC ಯಂತಹ ಸೌಲಭ್ಯಗಳು ಈ ಶಾಲೆಯಲ್ಲಿ ಇವೆಯೇ?
7 ಈ ಎಲ್ಲ ಶಾಲೆಗಳು Register ಆಗಿವೆಯೇ? ಹಾಗೂ ರಜಿಸ್ಟರ ಆಗುವಾಗ ಯಾವ ಪಠ್ಯಕ್ರಮ
ಎಂದು ಆಗಿವೆ ಎಂಬುದನ್ನು ತಿಳಿಸಿ ಎಂದು ಕೇಳಿದೆ
8 ಶಾಲೆಯ ಫಲಿತಾಂಶ ಹೇಗಿದೆ?
ಅದಕ್ಕೆ ಆ ಶಾಲೆಯ ಆಡಳಿತ ಮಂಡಳಿಯ ಉತ್ತರ ಎಂದರೆ, ಸಹಪಠ್ಯಕ್ಕಾಗಿ ಇರುವ ಶಿಕ್ಷಕರ ಮಾಹಿತಿಯನ್ನೂ ಸೇರಿಸಿ, ಶಾಲೆಯ ಎಲ್ಲ ಶಿಕ್ಷಕರ ಬಗ್ಗೆ ಹಾಗೂ ಅವರ ವಿದ್ಯಾರ್ಹತೆಯ ಬಗ್ಗೆ ತಿಳಿಸುವದು ನಮ್ಮ ಸಂಸ್ಥೆಯ ನಿಯಮದಲ್ಲಿ ಇಲ್ಲ. NTS ಹಾಗೂ ಒಲಂಪಿಯಾಡ್ ಪರೀಕ್ಷೆಗಳ ಬಗ್ಗೆ ಬಾಹ್ಯವಾಗಿ WEBSITE ನೋಡಿ ಮಾಹಿತಿ ಪಡೆದುಕೊಳ್ಳಿ, NCC, NSS ಹಾಗೂ SPC ಸೌಲಭ್ಯಗಳು ನಮ್ಮ ಶಾಲೆಯಲ್ಲಿ ಇಲ್ಲ. ಶಾಲೆಯ Registration ಗಾಗಿ ಅರ್ಜಿ ಸಲ್ಲಿಸಿದ್ದೇವೆ ಮುಂದೆ ಸಿಗಬಹುದು, ಅದರಲ್ಲಿ CBSC ಪಠ್ಯಕ್ರಮ ಎಂದು ಇದೆ ಎಂಬ ಉತ್ತರ ದೊರಕಿತು. ಶಾಲೆಯಲ್ಲಿ ಇದೇ ವರ್ಷ SSLC ನ್ನು ಮಕ್ಕಳು ಬರೆಯುತ್ತಾರೆ ಇನ್ನು ಮುಂದಿನ ವರ್ಷದಲ್ಲಿ ಫಲಿತಾಂಶ ತಿಳಿಯುತ್ತದೆ ಎಂದು ಉತ್ತರ ಸಿಕ್ಕಿತು.
ಈಗ ಆಲೋಚಿಸಿ, ಖಾಸಗಿ ಶಾಲೆಯವರು ಕೇವಲ ಭೌತಿಕ ಸೌಲಭ್ಯಗಳನ್ನು ಪ್ರದರ್ಶಿಸಿ ಶಿಕ್ಷಣವನ್ನು ಹೇಗೆ ವ್ಯಾಪರೀಕರಣವಾಗಿಸಿಕೊಂಡಿದ್ದಾರೆ ಎಂಬುದನ್ನು ತಿಳಿದು ಮನಸ್ಸಿಗೆ ಕಸಿವಿಸಿಯಾಯಿತು ಭೌತಿಗ ಸೌಲಭ್ಯಗಳು ಶಿಕ್ಷಣಕ್ಕೆ ಪೂರಕ. ಆದರೆ ಅವೇ ಶಿಕ್ಷಣವನ್ನು ಒದಗಿಸಲಾರವು. ನಿಜವಾದ ಶಿಕ್ಷಣದ ಬೀಜಗಳನ್ನು ಬಿತ್ತಿ ಸಂಸ್ಕಾರಯುತ ಶಿಕ್ಷಣಕ್ಕೆ ಕಾರಣೀಕರ್ತರಾದ ಶಿಕ್ಷಕರ ಮಾಹಿತಿಯನ್ನು ನೀಡದೇ, ಶಾಲೆಯ ಕಟ್ಟಡವನ್ನು ತೋರಿಸಿ ದಾಖಲಾತಿಯನ್ನು ಗಿಟ್ಟಿಸಿಕೊಳ್ಳುವ ಪ್ರಕ್ರಿಯೆ, ಹುನ್ನಾರ ನಡೆಯುತ್ತಿದೆ. ನಮ್ಮ ಸರಕಾರಿ ಶಾಲೆಗಳಲ್ಲಿ ಎಲ್ಲ ಶಿಕ್ಷಕರ ಮಾಹಿತಿ ಒಳಗೊಂಡ ಬೋರ್ಡುಗಳು, NCC, NSS ಹಾಗೂ SPC ಸೌಲಭ್ಯಗಳು, ಇತ್ಯಾದಿಗಳಿದ್ದರೂ ಅದರ ಬಗ್ಗೆ ತಾತ್ಸಾರ ಇದೆ ಏಕೆಂದರೆ ಅವು ಕಾನ್ವೆಂಟ್ ದಂತೆ Tie, Sho̧e ಸಂಸ್ಕೃತಿ ಹೊಂದಿಲ್ಲ, ಅದ್ಭುತವಾದ ಕಟ್ಟಡ ಇಲ್ಲ, ಇಂಗ್ಲೀಷನಲ್ಲಿ ಮಾತನಾಡುವಂತೆ ಕಲಿಸುತ್ತಿಲ್ಲ ಎಂಬ ಕಾರಣವಿರಬಹುದು. ಆದರೆ ಶಿಕ್ಷಣ ಎಂದರೆ ಏನು? ನಿಜವಾಗಿ ಮಗುವಿನಲ್ಲಿ ಹೊಂದಿರುವ ಸುಪ್ತ ಕೌಶಲಗಳನ್ನು ಹೊರತೆಗೆಯುವುದೇ ಶಿಕ್ಷಣ ಎಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತು ನೆನೆಪಿಗೆ ಬಂದಿತು. ಇದೆಲ್ಲಾ ಖಾಸಗಿ ಶಾಲೆಯಲ್ಲಿ ಆಗುತ್ತಿದೆಯೇ ಎಂಬ ಪ್ರಶ್ನೆ ಸಹ ಕಾಡತೊಡಗಿತು.
ಇಷ್ಟೆಲ್ಲಾ ವೀಕ್ಷಿಸಿ ಹೊರಬರುತ್ತಿದ್ದಂತೆಯೇ, ನನಗೆ ನನ್ನ ಸ್ನೇಹಿತೆ ಕರೆ ಮಾಡಿ ತನ್ನ ಮೊಮ್ಮಗನ ಶಾಲೆಯ ಬಗ್ಗೆ ಹೇಳುತ್ತಾ, ತನ್ನ ಮೊಮ್ಮಗ ಓದುತ್ತಿರುವ ಶಾಲೆ CBSC ಶಾಲೆಯಾಗಿದ್ದು ಅಲ್ಲಿ ಯಾವುದೇ ರೀತಿಯ ಉತ್ತಮವಾದ ಪಾಠಗಳು ನಡೆಯುತ್ತಿಲ್ಲ . ಅನುಕೂಲಿಸುವಿಕೆ ಪ್ರಕ್ರಿಯೆ ಸರಿಯಾಗಿಲ್ಲ ಕೇವಲ ಹೊರಗಡೆ ಕಟ್ಟಡ ಮಾತ್ರ ಅತ್ಯುತ್ತಮವಾಗಿದೆ ಈ ವರ್ಷ 10 ನೇಯ ತರಗತಿಲ್ಲಿ ಓದುತ್ತಿರುವನು. ನನಗೆ ಅವನದೇ ಚಿಂತೆ ಎಂದೆಲ್ಲಾ ತೆರೆದಿಟ್ಟಳು
ಈ ಮೇಲಿನ ಎಲ್ಲ ಅಂಶಗಳನ್ನು ಪರಿಶೀಲಿಸಿದಾಗ, ನಮ್ಮ ಸರಕಾರಿ ಶಾಲೆಗಳಲ್ಲಿ ಭೌತಿಕ ಸೌಲಭ್ಯಗಳ ಸುಧಾರಣೆಯ ಅಗತ್ಯತೆ ಇದೆ. ಖಾಸಗಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಕರ ಕೊರತೆ, ಶಿಕ್ಷಕರ ಮಾಹಿತಿಯ ಪಾದರ್ಶಕತೆಯ ಬಗ್ಗೆ ಹಾಗೂ ಶಿಕ್ಷಕರ ಗೌರವದ ಬಗ್ಗೆ ಕೊರತೆ ಇದೆ ಎನಿಸಿತು. ಒಟ್ಟಾರೆ ಶಿಕ್ಷಣ ವ್ಯಾಪರೀಕರಣವಾಗುತ್ತಿದೆ. ಸಮಾನ ಶಿಕ್ಷಣ ಮರಿಚಿಕೆ ಆಗುತ್ತಿದೆ. ಶಿಕ್ಷಣದ ನಿಜವಾದ ಉದ್ದೇಶ ಹಾಗೂ ಗುರಿ ಸಾಧನೆ ಅಸಾಧ್ಯವಾಗುತ್ತಿದೆಯೇ? ಎಂದು ಬಾವನೆ ಬರತೊಡಗಿತು. ಸರ್ವರಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಲೀ ಎಂಬ ಆಶಯ ಮನದಲ್ಲಿ ಗುಣಗುಟ್ಟುತೊಡಗಿತು.
ಡಾ ದಾನಮ್ಮ ಝಳಕಿ
ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ
ಖಾಸಗಿ ಶಾಲೆಗಳ ವಾಸ್ತವ ಚಿತ್ರಣವನ್ನು ಎತ್ತಿ
ಹಿಡಿಯುವ ಲೇಖನ…. ಎಲ್ಲರಿಗೂ ಅದರ ಬಗೆಗೆ (ವ್ಯಾಪಾರೀಕರಣ )ಮೂಡಿಸುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ಶ್ಲಾಘನೀಯ… ಮೇಡಂ
ಹೃದಯಪೂರ್ವಕ ಧನ್ಯವಾದಗಳು ಮೇಡಂ
ಧನ್ಯವಾದ ಮೇಡಂ ಒಳ್ಳೆಯ ಲೇಖಕರು ತಾವು