ಕಥಾಯಾನ

ಬಣ್ಣಾತೀತ

ಅಶ್ವಥ್

ಅವತ್ತೊಂದು ದಿನ ಭಟ್ರಿಗೆ ಶ್ಯಾವಿಗೆ ಪಾಯಸ ಮಾಡುವ ಮನಸ್ಸಾಯಿತು.
ಆಹಾ, ಸಿಹಿ… ಎಂಥಾ ಆಲೋಚನೆ, ರುಚಿರುಚಿಯಾದ ಶ್ಯಾವಿಗೆ ಪಾಯಸ, ಮನೆಯೆಲ್ಲ ಘಮಘಮ ಎಂದುಕೊಳ್ಳುತ್ತಲೇ ಪದಾರ್ಥಗಳ ಪಟ್ಟಿ ಮಾಡಿಕೊಳ್ಳುತ್ತಿರುವಾಗ….
ಬೆಲ್ಲ? ಸಕ್ಕರೆ? ಸದ್ಯಕ್ಕೆ ಸಿಗುವಂಥಾದ್ದು ಯಾವುದು? ಅಗ್ಗದ ಬೆಲೆಯಲ್ಲಿ ಸರಳವಾಗಿ ಸಿಗುವಂಥಾದ್ದು ಯಾವುದು? ಅನ್ನುವ ಯೋಚನೆ ಕೊರೆಯತೊಡಗಿತು.
ಬೆಲ್ಲವಾದರೆ ಶ್ಯಾವಿಗೆಯ ಮಹತ್ತೇ ಹೊರಟುಹೋಗಿಬಿಡುತ್ತೆ. ಸಕ್ಕರೆಯಾದರೆ ಬಣ್ಣ ಅಷ್ಟಿಲ್ಲದ್ದರಿಂದ ಶ್ಯಾವಿಗೆ ನಳನಳಿಸುತ್ತಾ ರುಚಿಯ ಜೊತೆಗೆ ನೋಟವೂ ಅಂದ… ಹಾಗಾಗಿ ಸಕ್ಕರೆ ಬಣ್ಣಾತೀತ ಅಂದುಕೊಳ್ಳುತ್ತಿರುವಾಗ, ಇಲ್ಲೊಂದು ಕತೆಯೇ ಉಂಟಲ್ಲ ಅನ್ನುವ ವಿಚಾರವೂ ಹೊಳೆಯಿತು!
ಹಳೆ ಕಾಲದಲ್ಲಿ ಭಟ್ರ ಪೂರ್ವಜರು ಕಟ್ಟಿದ್ದ ಬೆಲ್ಲದ ಕತೆಯ ನೆನಪು ಮರುಕಳಿಸತೊಡಗಿತು.


ಮೆದ್ದವನೇ ಬಲ್ಲ ಬೆಲ್ಲದ ರುಚಿಯ…. ಆದರೆ ಬೆಳೆದವನೇ ಬಲ್ಲ ಬೆಲ್ಲದ ನಿಜಬಂಡವಾಳವ.
ಒಂದು ಮಾರಗಲದ ಚೌಕದಲ್ಲಿ ಬೆಳೆದಿರುವ ಎರಡು ಹೊರೆಯಷ್ಟು ಕಬ್ಬನ್ನು ಗಾಣದಲ್ಲಿ ಅರೆದು ಮೂರು ಸೇರು ಕಬ್ಬಿನ ಹಾಲು ಹಿಂಡಿ, ನಾಲ್ಕಡಿ ಬಾಯಗಲದ ಬಾಣಲೆಯೊಳಗೆ ಐದು ಗಂಟೆ ನಿಧಾನದ ಉರಿಯಲ್ಲಿ ಕುದಿಯಿಸಿ ಕುದಿಯಿಸಿ ಕುದಿಸುತ್ತಲೇ ಅರೆದ್ರವಘನರೂಪದ ಪಾಕದ ಹದಕ್ಕೆ ತಂದು ಕಡೆಗೆ ಒಂದಡಿ ಅಗಲದ ಅಚ್ಚಿನ ಮಣೆಯೊಳಗೆ ಸುರಿಯಬಹುದಾದಷ್ಟು ಪಾಕವಷ್ಟೇ… ಒಂದು ವಾರದ ಕಾಫಿಗೆ ಸಾಕಾಗದೆ ಉಳಿಯದಷ್ಟು ಬೆಲ್ಲಕ್ಕಾಗಿ ಎರಡು ದೊಡ್ಡ ಹೊರೆ ಕಬ್ಬನ್ನು ಅರೆಯುವುದರ ಹಿಂದಿನ ನಿಜ ಅರ್ಥ ಪೂರ್ವಜರಿಗೆ ಗೊತ್ತಿತ್ತು. ಖುದ್ದಾಗಿ ಕಬ್ಬಿನ ಜಲ್ಲೆಯನ್ನು ಹಿಡಿದು ಸೀಳುವಾಗ ಒಂದೋ ಅಥವಾ ಅಬ್ಬಬ್ಬಾ ಅಂದರೆ ಎರಡು ಜಲ್ಲೆಯನ್ನು ಜಗಿಯುವಷ್ಟರಲ್ಲಿ ವಸಡುಗಳು ತಡವರಿಸುವಂತಾಗಿ ಕಬ್ಬಿನ ಸಿಹಿಯನ್ನು ಹೀರುವುದರ ಮಹತ್ವದ ಜೊತೆಯಲ್ಲೇ ಅದಕ್ಕೆ ಪಡಬೇಕಾದ ಶ್ರಮದ ಅರಿವೂ ಆಗುತ್ತಿತ್ತು. ಆ ಅರಿವಿನ ಹಿನ್ನೆಲೆಯಲ್ಲಿ ಎರಡು ಹೊರೆ ಕಬ್ಬಿನಿಂದಾದ ಬೆಲ್ಲದ ಅಚ್ಚು ಎಷ್ಟು ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದೆಂದು ಭಟ್ರ ಪೂರ್ವಜರಿಗೆ ಗೊತ್ತಿತ್ತು. ಆದರೆ ಆರೋಗ್ಯದ ವಿಚಾರವನ್ನೇನೂ ಹೇಳದೇ, ಅವರು ಆವಿಷ್ಕರಿಸಿದ ಆಕರ್ಷಕ ಬೆಲ್ಲದ ರುಚಿಯನ್ನಷ್ಟೇ ಮುಂದುವರಿಸಿಕೊಂಡು ಬಂದು ಕಡೆಗೆ ದಾಸರ ಪದವೂ ಸೇರಿ ʼಸಕ್ಕರೆ ತುಪ್ಪದ ಕಾಲುವೆ ಹರಿಸಿ…ʼ. ತನಕವೂ ಬಂದು ಬೆಲ್ಲ ಸಕ್ಕರೆಯೆಲ್ಲವೂ ರುಚಿಯ ಮಾರುಕಟ್ಟೆಯಲ್ಲಿ ಹೊಳೆಯುವಾಗ, ಆರೋಗ್ಯದ ಅರಿವು ಮೂಲೆ ಹಿಡಿದು ಕೂತಿತ್ತು.


ಈಗ ಭಟ್ಟರಿಗೆ ಸಕ್ಕರೆಯೇ ಬೇಕೆನಿಸಿದ್ದಕ್ಕೆ ಕಾರಣವಿದೆ. ಮುಖ್ಯವಾಹಿನಿಯಲ್ಲಿ ಸಕ್ಕರೆಯದೇ ಕಾರುಬಾರು. ಈ ಸಕ್ಕರೆ ಬಣ್ಣಾತೀತ. ಪಾನಕ ಮಾಡಿದರೆ ಅದರಲ್ಲಿ ಬಣ್ಣವೇ ಇಲ್ಲ ಹಾಗಾಗಿ ಸಿಹಿಯಲ್ಲಿರುವ ಬೇರೆ ಪದಾರ್ಥಗಳನ್ನು ಹೆಚ್ಚು ಆಕರ್ಷಕವನ್ನಾಗಿಸಬಹುದು. ಸಕ್ಕರೆಯ ಹಿಂದಿನ ಆರೋಗ್ಯದ ಗುಟ್ಟಂತೂ ಬೆಲ್ಲಕ್ಕಿಂತ ಇನ್ನೂ ಅತ್ತತ್ತ. ಯಾಕೆಂದ್ರೆ ಮುಖ್ಯವಾಹಿನಿಗೆ ಸಕ್ಕರೆಯನ್ನು ತರುವುದಕ್ಕೋಸುಗ, ಅದನ್ನು ಕಾರ್ಖಾನೆಗಳಲ್ಲಿ ತಯಾರಿಸಬೇಕಾದ್ದು. ದೊಡ್ಡದೊಡ್ಡ ಕಾರ್ಖಾನೆ, ಅದಕ್ಕಂಟಿಕೊಂಡ ಕುಂಠಿತ ಆಡಳಿತ ವಗೈರೆ ವಗೈರೆ… ಆದರೆ ಈಗ ಭಟ್ರಿಗಿನ್ನೊಂದು ವಿಷಯ ಹೊಳೆಯಿತು. ಪೂರ್ವಜರ ಬೆಲ್ಲದ ಹಿನ್ನೆಲೆಯ ಕತೆ. ಈಗಿರುವ ಮುಖ್ಯವಾಹಿನಿಯ ಬಣ್ಣಾತೀತ ಸಕ್ಕರೆಯ ಕತೆ. ಎರಡನ್ನೂ ಒಮ್ಮೆ ಮಿಲಾಯಿಸಿದರೆ! ಬಣ್ಣರೂಪಾಂತರ…
ಕತೆ…ಪೂರ್ವಜರ ಬೆಲ್ಲದ ಪಾಯಸದ ಘಮಲು ಮನೆಯಲ್ಲಷ್ಟೇ ಆವರಿಸದೇ ಊರಿಗೂರೇ ಆವರಿಸುತ್ತಿತ್ತು. ಸಕ್ಕರೆಯವರು ಬಂದು ಸುವಾಸೆಯನ್ನು ಕಡಿಮೆ ಮಾಡಲಾಗಿ, ಸದ್ಯ ಮನೆಯನ್ನಷ್ಟೇ ಆವರಿಸುತ್ತಿದೆ.
ಭಟ್ಟರು ಮರೆತ ವಿಚಾರ, ಬೆಲ್ಲವೂ ಸಕ್ಕರೆಯೂ ಅಥವಾ ಮತ್ತೊಂದು ಸಿಹಿಯೂ ಮೂಲದಲ್ಲಿ ಕಬ್ಬಿನ ಹೊರೆಗಳೆಲ್ಲ ಒಂದೇ ಆಗಿದ್ದು, ಅದರ ಹಿಂದಿರುವ ಆರೋಗ್ಯದ ಅರಿವಿನ ಕತೆ ಅತಿ ಮುಖ್ಯವಾದುದೆಂದು. ಹಾಗೆಂದುಬಿಟ್ಟರೆ ಭಟ್ಟರ ಪಾಯಸದ ಕತೆಯ ಗತಿಯೇನು?

*******

Leave a Reply

Back To Top