ಗಝಲ್
ಸ್ಮಿತಾ ರಾಘವೇಂದ್ರ
ಬಿಂದುವೊಂದು ಸರಳ ರೇಖೆಯಮುಂದೆ ಸಾಗುತ್ತಿದೆ ಎಂದರೇನರ್ಥ
ಲೋಕದೊಳಗೆ ಸಕಲವೂ ಸನ್ಮಾರ್ಗ ನೀಗುತ್ತಿದೆ ಎಂದರೇನರ್ಥ
ಲೋಭ,ಮೋಹಾದಿಗಳೊಳಗೆ ಬಂಧಿಯಾಗುವೆವು ಈ ಭವದೊಳಗೆ
ಬಾಳಿನರ್ಥವ ಸಾರಿದವನ ತ್ಯಾಗವೇ ಸಂಶಯವಾಗುತ್ತಿದೆ ಎಂದರೇನರ್ಥ
ಲೋಕ ಬಿಡಲೂ ಬೇಕು, ಅಳಲೂ ಬೇಕು ಅಂತರಂಗವು ಕದಡಿ,ಅವನೆಲ್ಲಿ ಮುಕ್ತ
ಮೆಚ್ಚಿ ಆಡಿದ,ಅಚ್ಚೊತ್ತಿದ ಅಭಿನಯವೇ ಮರೆಯುತ್ತಿದೆ ಎಂದರೇನರ್ಥ.
ಒಬ್ಬನೇ ನಿರ್ಗಮಿಸುವಾಗ ಯಾರೂ ಹತ್ತಿರವಿರೆ,ಇಲ್ಲದಿರೆ ಏನು ಅಂತರ?
ಮುಗಿಯಲಾರದ್ದು,ಮುಗಿಯಾಬಾರದ್ದು,ಮುಗಿದಂತೆ ತೋರುತ್ತಿದೆ ಎಂದರೇನರ್ಥ
ಅಗಲಿಕೆಯ ಸಂಕಟವ ಹೆಚ್ಚಿಸುವುದು ಜೊತೆಯಾದ ಬಂಧ
ಏಕಾಂಗಿ ಬಯಲಿನಲಿ ಮರವೊಂದು ರೋದಿಸುತ್ತಿದೆ ಎಂದರೇನರ್ಥ
.
ದೌರ್ಬಲ್ಯಗಳು ಇಲ್ಲದೆಯೇ ಬದುಕು ಚಲಿಸದ ಪಯಣ “ಸ್ಮಿತ”
ಹೃದಯದ ಭಾಷೆ ಅರಿಯಲು ಅಶಕ್ತವಾಗುತ್ತಿದೆ ಎಂದರೇನರ್ಥ
********