ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಭಾಗ-2
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಸಮಾನ ಶಿಕ್ಷೆ ಸರಿಯೇ ಹರಿಯೇ?
ಅಷ್ಟರಲ್ಲಿ ಹೊರಗಡೆಯಿಂದಲೇ ನಾಯ್ಕ ಮಾಸ್ತರು ಬಾಗಿಲು ತೆರೆದರು. ಅವರ ಕಂಗಳು ಕೋಪದಿಂದ ಕೆಂಪಾಗಿದ್ದವು. ರೌದ್ರಾವತಾರ ತಾಳಿ ಒಳಗೆ ಬಂದವರೆ ಎಲ್ಲರೂ ಅವರವರ ಜಾಗದಲ್ಲಿ ನಿಲ್ಲಿ, ಎರಡೂ ಕೈ ಮುಂದೆ ಚಾಚಿ ಎಂದರು. ಎಲ್ಲರೂ ಹೆದರುತ್ತ ಅವರವರ ಜಾಗಕ್ಕೆ ಹೋಗಿ ನಿಂತೆವು. ಬೋರ್ಡ ಹಿಂದಿಟ್ಟ ಬೆತ್ತ ತೆಗೆದು ಎಲ್ಲರ ಕೈಮೇಲೂ ಎರಡೇಟು ಬಿಗಿದರು. ಉರಿ ತಾಳದೇ ಅನೇಕರು ಚೀರಿದರು, ಅಳಲಾರಂಭಿಸಿದರು. ಕೆಲವರು ‘ನಾನು ಗಲಾಟೆ ಮಾಡಲಿಲ್ಲಾಗಿತ್ತು’ ಎನ್ನುತ್ತಾ ತಾವು ಬರೆದಿದ್ದನ್ನು ತೋರಿಸಿದರು. (ಶಾಲಾಧ್ಯಕ್ಷರು ಬಂದಾಗಲೇ ನಾವು ಗಲಾಟೆ ಮಾಡಿದ್ದರಿಂದ ಅವರಿಗೆ ಅವಮಾನವಾಗಿ ಸಿಟ್ಟು ಬಂದಿತ್ತು. ಆದರೆ ನಮ್ಮ ಬಾಲ ಬುದ್ಧಿಗೆ ಆಗ ಅದು ಅರ್ಥ ಆಗಿರಲಿಲ್ಲ) ಎಂದೂ ಮಕ್ಕಳ ಮೇಲೆ ಸಿಟ್ಟು ಮಾಡದ ಮಾಸ್ತರು ಅಂದು ತಾಳ್ಮೆ ಕಳೆದುಕೊಂಡಿದ್ದರು. ಗಲಾಟೆ ಮಾಡಿದವರಿಗೆ, ಮಾತಾಡಿದವರಿಗೆ, ಮೌನವಾಗಿ ಕುಳಿತವರಿಗೆ ಸಮಾನವಾದ ಶಿಕ್ಷೆ ಕೊಟ್ಟರು.
ಕೆಲವರು ಶಾಲೆಯಲ್ಲಿ ಅತ್ತು ಮನೆಗೆ ಹೋಗಿ ಹೇಳದೆ ವಿಷಯ ಮುಚ್ಚಿಟ್ಟರು. ಕೆಲವರು ಮನೆಗೆ ಹೋಗುವಾಗ ದಾರಿಯುದ್ದಕ್ಕೂ ಮಾಸ್ತರು ಹೊಡೆದಿದ್ದು ಸರಿಯೋ ತಪ್ಪೋ ಎನ್ನುವ ಕುರಿತು ತಮಗೆ ತಿಳಿದಂತೆ ವಿಮರ್ಶೆ ಮಾಡಿದರು. ಕೆಲವರು ಅಪ್ಪ ಅಮ್ಮನವರೆಗೆ ದೂರನ್ನು ಕೊಂಡೊಯ್ದರು. ರಾತ್ರಿ ಎಲ್ಲ ಮಕ್ಕಳ ಮನೆಗಳಲ್ಲಿ ಚರ್ಚೆ ಆಯಿತು. ಮರುದಿನ ಒಬ್ಬ ಪಾಲಕರು ಶಾಲೆಗೆ ಬಂದು ಮಾಸ್ತರರಿಗೇ ‘ಹುಡುಗರಿಗೆ ಹಿಂಗೆಲ್ಲ ಹೊಡೆಯುದೆಂತಕ್ಕೆ? ಮಕ್ಕಳಿಗೆ ನಾವೇ ಹೊಡೆಯೋದಿಲ್ಲ. ನೀವೆಂತಕ್ಕೆ ಹೊಡೆದಿದ್ದು? ಬಾಸುಂಡೆ ಬರೋ ಹಂಗೆ
ಹೊಡೆದು ಬಿಟ್ಟೀರಿ. ಊಟ ಮಾಡಲಿಕ್ಕು ಆಗಲಿಲ್ಲ ನಮ್ಮ ಮಗನಿಗೆ…’ ಎಂದು ಬೈದು ಹೋದರು. ಇನ್ನೊಬ್ಬ ಪಾಲಕರು ‘ತಪ್ಪು ಮಾಡಿದ್ರೆ ನಮ್ಮ ಮಕ್ಕಳಿಗೆ ನಾಲ್ಕು ಬಿಗೀರಿ ಬುದ್ದಿ ಬರ್ತದೆ ಎಂದರು!
ಕರೋನಾ ಶಿಕ್ಷೆಯೂ ಥೇಟ್ ಮಾಸ್ತರು ಕೊಟ್ಟ ಶಿಕ್ಷೆಯಂತೆನಿಸುತ್ತದೆ. ಭುವಿಯ ಮೇಲಿನ ಎಲ್ಲ ಜೀವಿಗಳಂತೆ ನಾವು ಎನ್ನುವುದನ್ನು ಒಪ್ಪದೇ ನಾವೇ ಶ್ರೇಷ್ಠರೆಂಬ ಹಮ್ಮಿನಲ್ಲಿ ಮೆರೆದೆವು. ಚೀನಿಯರಂತೂ ಆಧುನಿಕ ಬಕಾಸುರರಂತೆ ಸಿಕ್ಕಿದ್ದನ್ನೆಲ್ಲ ಮೆದ್ದು ಕೋವಿಡ್ ೧೯ ವೈರಸ್ಸನ್ನು ಪ್ರಾಣಿಗಳಿಂದ ಮನುಕುಲಕ್ಕೆ ವರ್ಗಾ ಯಿಸಿದರು. ನೆಲ ಜಲ, ಗಾಳಿಯನ್ನು ಮಲಿನಗೊಳಿಸುವಲ್ಲಿ, ನಮ್ಮ ಅಗತ್ಯಕ್ಕೆ ಮೀರಿ ಸಂಗ್ರಹಿಸುವುದರಲ್ಲಿ ಎಲ್ಲರೂ ನಾ ಮುಂದೆ, ತಾ ಮುಂದೆ.. ಸೋಂಕನ್ನು ತಿಳಿದೋ ತಿಳಿಯದೆಯೋ ಹಬ್ಬಿಸುತ್ತಿರುವವರು, ಅರಿತೋ ಅರಿಯದೆಯೋ ಅವರ ಸಂಪರ್ಕಕ್ಕೆ ಬಂದವರು..
ಹೀಗೆ ಎಲ್ಲರಿಗೂ ತಪ್ಪಿಗೆತಕ್ಕ ಶಿಕ್ಷೆಯೋ ಅಥವಾ ಮಾಸ್ತರರ ಹೊಡೆತದಂತೆಯೋ? ತಪ್ಪು ಮಾಡಿದವರಿಗೆ ತಪ್ಪಿನ ಅರಿವಾದರೂ ಇದೆಯೋ? ಇಲ್ಲವೋ ?ಕನಿಷ್ಟ ಪಕ್ಷ ಪಶ್ಚಾತ್ತಾಪವಾದರೂ ಇದೆಯೋ? ಕಾಲವೇ ಉತ್ತರಿಸಬೇಕು…
**********
(ಮುಂದುವರಿಯುವುದು….)
ಮಾಲತಿ ಹೆಗಡೆ