ಪ್ರಕೃತಿ ಮುನಿದರೆ ಬಂದೀತು ನೆರೆ (ಪ್ರವಾಹ )-. ಎನ್. ಚಿದಾನಂದ

ಲೇಖನ ಸಂಗಾತಿ

ಪ್ರಕೃತಿ ಮುನಿದರೆ ಬಂದೀತು ನೆರೆ (ಪ್ರವಾಹ )

ಕೆ. ಎನ್. ಚಿದಾನಂದ .

ಪ್ರಕೃತಿ ಮಾತೆ ಸದಾ ನಗುತ್ತಿದ್ದರೇನೆ ಚೆಂದ. ಯಾವಾಗಲೂ ಹಚ್ಚನೆ ಹಸಿರು ತುಂಬಿದ ಮಡಿಲಲ್ಲಿ ಅರಳಿ ನಗುವ ಹೂಗಳು ಮತ್ತು ಹೂಬನಗಳು , ಪಕ್ಷಿಗಳು ಮತ್ತು ಪಕ್ಷಿ ಪಂಕ್ತಿಗಳು , ಪ್ರಾಣಿಗಳು ಮತ್ತು ತಮ್ಮ ಸಮೂಹಗಳು, ಸಹನಾ ಶೀಲ ಹೆಣ್ಣಿನಂತಹ ಭೂಮಿ, ಜಳು ಜುಳು ನಿನಾದ ಗೈಯುತ್ತಾ ಹರಿವ ನದಿಗಳು ಮತ್ತು ಭೋರ್ಗರೆಯುವ ಜಲಪಾತಗಳ ಸೌಂದರ್ಯ, ಎಲ್ಲೂ ನಿಲ್ಲದೆ ನಿತ್ಯವೂ ಓಡುವ ಮೋಡಗಳು, ನವಿರಾದ ಸೂರ್ಯನ ಎಳೆಬಿಸಿಲ ಸೌಂದರ್ಯರಾಶಿ, ಬಿಳಿಯ ಹರಳೆಯಂತೆ ನಿರ್ಮಲವಾದ ಆಕಾಶದ ಶುಭ್ರತೆ, ತಂಪಾದ ಎಳೆ ಗಾಳಿ ಎಲ್ಲವೂ ಚೆಂದ.

ಆದರೆ ಯಾವುದಾರೂ ಒಂದು ಕಾರಣದಿಂದಾಗಿ ಪ್ರಕೃತಿ ಮಾತೆ ಆಗಾಗ್ಯೆ ಮುನಿಸಿಕೊಳ್ಳುತ್ತಾಳೆ. ಪ್ರಕೃತಿ ಮುನಿದರೆ ಆಗಬಾರದ್ದೆಲ್ಲಾ ಆಗುತ್ತೆ ಮತ್ತೆ ಹೋಗಬಾರದ್ದೆಲ್ಲಾ ಹೋಗತ್ತೆ . ಪ್ರಕೃತಿಮಾತೆಯ ಮುನಿಸಿನ ಪ್ರಭಾವ ಅಷ್ಟಿಷ್ಟಲ್ಲ. ಹವಾಮಾನ ವೈಪರೀತ್ಯ ಉಂಟಾಗುವುದು ಒಂದು ಭೌಗೋಳಿಕ ವಿದ್ಯಮಾನವಾಗಿದೆ. ಈ ಹವಾಮಾನ ವೈಪರೀತ್ಯದಿಂದಾಗಿ ಅತಿವೃಷ್ಟಿಗೆ ಕಾರಣವಾಗಬಹುದು ಅಂದರೆ ವಿಪರೀತ ಮಳೆ ಬಂದು ಜಲ ಪ್ರಳಯವನ್ನೇ ಸೃಷ್ಟಿಸುವ ಪ್ರವಾಹಗಳು ಜನಜೀವನವನ್ನು ಅಸ್ತವ್ಯಸ್ತವನ್ನಾಗಿಸುತ್ತವೆ. ಪ್ರಕೃತಿ ಮಾತೆಯ ಮುನಿಸು ಅನಾವೃಷ್ಟಿಗೂ ಕಾರಣವಾಗಬಹುದು ಅಂದರೆ ಮಳೆಯೇ ಬಾರದೆ ಹೋದರೆ ಸಂಪೂರ್ಣ ಬರಗಾಲಕ್ಕೆ ಕಾರಣವಾಗಬಹುದು. ಹೀಗೆಯೇ ಮುಂದುವರಿದ ಪ್ರಕೃತಿ ಮಾತೆಯ ಮುನಿಸು ಭೂಕಂಪ, ಬರಬಿಸಿಲು, ಚಂಡಮಾರುತ, ಪ್ರವಾಹ, ಬಿರುಗಾಳಿ, ಮೇಘ ಸ್ಫೋಟಗಳಿಗೆ ಕಾರಣವಾಗುತ್ತದೆ.

ಪ್ರಸ್ತುತದಲ್ಲಿ ನಾವು ಬಹಳವಾಗಿ ಕೇಳುತ್ತಿರುವ ಶಬ್ದ ಎಂದರೆ ಅದು “ಪ್ರವಾಹ”. ಇದಕ್ಕೆ ‘ನೆರೆ’ ಎಂಬ ಶಬ್ದವೂ ಇದೆ. ಭಾರತವು ಪ್ರತಿ ವರ್ಷ ಎದುರಿಸುತ್ತಿರುವ ನೈಸರ್ಗಿಕ ವಿಕೋಪಗಳಲ್ಲಿ ಪ್ರವಾಹಗಳು ಅತ್ಯಂತ ಅಪಾಯಕಾರಿಯಾ ಗಿವೆ. ಅತ್ಯಧಿಕ ಮಳೆ ಸುರಿದಾಗ ಮತ್ತು ಅತ್ಯಧಿಕ ಪ್ರಮಾಣದಲ್ಲಿ ಹಿಮ ಕರಗಿದಾಗ ನದಿಗಳ ನೀರಿನ ಪ್ರಮಾಣವು ಅವುಗಳ ಪಾತ್ರದ ಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿ ನದಿ ದಂಡೆಗಳ ಇಕ್ಕೆಲಗಳಲ್ಲಿ ಉಕ್ಕಿ ಹರಿಯುವುದು. ಇದನ್ನು ನದಿ ಪ್ರವಾಹಗಳೆಂದು ಕರೆಯುತ್ತಾರೆ. ನದಿಗಳ ನೀರು ನದಿಯ ಪಾತ್ರದಲ್ಲಿ ಹರಿಯಲಾಗದೆ ಎರಡೂ ಕಡೆಯ ತಗ್ಗು ಭಾಗಗಳನ್ನು ಆವರಿಸುವುದು. ಕೆಲವು ವೇಳೆ ಒಂದೇ ಕಡೆಯಲ್ಲಿ ಧಾರಾಕಾರವಾದ ಮಳೆ ಬೀಳುವುದರಿಂದ ಒಮ್ಮೆಲೇ ನದಿಗಳು ಉಕ್ಕಿ ಹರಿಯುತ್ತವೆ. ಈ ರೀತಿಯಲ್ಲಿ ನದಿಯ ಎರಡೂ ಕಡೆಯ ಪ್ರದೇಶಗಳಲ್ಲಿ ಯಥೇಚ್ಛವಾದ ನೀರಿನ ಏರಿಕೆಯ ಪ್ರಮಾಣವನ್ನು ಪ್ರವಾಹ ಎಂದು ಕರೆಯಲಾಗುತ್ತದೆ. ಪ್ರವಾಹದ ಹಾವಳಿಯಿಂದ ಹಾನಿಯೇ ಹೆಚ್ಚೆ ಹೊರತು ಲಾಭವಂತೂ ಅಲ್ಲ. ಪ್ರವಾಹದಿಂದ ಬಹಳಷ್ಟು ಜನರ ಜೀವ ಮತ್ತು ಸಂಪತ್ತು ಹಾನಿ ಆಗುತ್ತದೆ. ಪ್ರವಾಹದ ಸನ್ನಿವೇಶಗಳನ್ನು ಸುದ್ಧಿ ಮಾಧ್ಯಮಗಳಲ್ಲಿ ವಿಭಿನ್ನ ಹಾಗೂ ವೈವಿಧ್ಯಮಯವಾಗಿ ನೋಡುತ್ತಿದ್ದೇವೆ. ಕೆಲವೊಮ್ಮೆ ಹಲವಾರು ಕಾರಣಗಳಿಂದ ತಗ್ಗು ಪ್ರದೇಶಗಳು ನೀರಿನಿಂದ ಆವರಿಸಲ್ಪಟ್ಟು ವಿಪರೀತವಾದ ಅನಾಹುತಗಳನ್ನು ಉಂಟುಮಾಡುತ್ತದೆ. ಪ್ರವಾಹ ಪೀಡಿತ ಪ್ರದೇಶಗಳು ಜಲಾವೃತಗೊಳ್ಳುವುದರಿಂದ ಕುಡಿಯುವ ನೀರಿನಿಂದ ಹಿಡಿದು ನಿತ್ಯದ ಬದುಕನ್ನು ಸಾಗಿಸುವವರೆಗೂ ಸಮಸ್ಯೆಗಳು ಉದ್ಭವಿಸುತ್ತವೆ. ಪ್ರವಾಹಗಳು ರಾಕ್ಷಸನ ಹಾಗೆ ಅಬ್ಬರಿಸಿ ಜೀವಸಂಕುಲಗಳ ವಿನಾಶಕ್ಕೆ ಕಾರಣವಾಗುತ್ತವೆ. ಆರೋಗ್ಯಕರ ವಾತಾವರಣವನ್ನು ನಾಶ ಮಾಡಿ ನಗರ ಸುವ್ಯವಸ್ಥಗೆ ಸರಿಪಡಿಸಲಾಗದ ನಷ್ಟ ಉಂಟುಮಾಡುತ್ತದೆ. ನದಿಗಳಲ್ಲಿ ಹರಿಯುವ ನೀರಿಗೆ ದಡಗಳಿರುತ್ತವೆಯೇ ವಿನಃ ಕೊಚ್ಚಿ ಬರುವ ಪ್ರವಾಹಕ್ಕಲ್ಲ ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕು. ಈ ಪ್ರವಾಹಕ್ಕೆ ನಿಸರ್ಗ ಮತ್ತು ಮಾನವ ಅಂಶಗಳೆರಡೂ ಕಾರಣವಾಗುತ್ತವೆ. ಮಾನ್‌ಸೂನ್ ಮಳೆಗಳು ಕೆಲವು ವೇಳೆ ಅನಿಶ್ಚಿತ, ಕೆಲವು ವೇಳೆ ಅತ್ಯಧಿಕವಾಗಿ ಬೀಳುವುದರಿಂದ ಪ್ರವಾಹಗಳುಂಟಾಗುತ್ತವೆ. ನದಿಯ ಪಾತ್ರಗಳಲ್ಲಿ ಹೂಳು ತುಂಬಿ ನೀರು ಇಕ್ಕೆಲಗಳಲ್ಲಿಯೂ ಹರಿದು ಪ್ರವಾಹಗಳು ಉಂಟಾಗುತ್ತವೆ. ಅಣೆಕಟ್ಟು ಹಾಗೂ ಇತರೆ ಅಡ್ಡಗಟ್ಟೆಗಳು ಒಡೆದು ಒಮ್ಮೆಗೇ ಬಿಡುಗಡೆಯಾಗುವ ನೀರಿನಿಂದ ನದಿಗಳು ಪಾತ್ರವನ್ನು ಬದಲಾಯಿಸುವುದರಿಂದಲೂ ಪ್ರವಾಹಗಳು ಉಂಟಾಗುತ್ತವೆ. ಚಂಡಮಾರುತಗಳಿಂದ ಅಪಾರ ಮಳೆ ಬೀಳುವುದೂ ಸಹ ಪ್ರವಾಹಗಳಿಗೆ ಕಾರಣವಾಗುವುದು. ಸಮುದ್ರಗಳ ಮಧ್ಯದಲ್ಲಿ ಭೂಕಂಪನಗಳು ಸಂಭವಿಸುವುದರಿಂದಲೂ ಪ್ರವಾಹಗಳುಂಟಾಗುತ್ತವೆ. ಅತಿಯಾದ ಮಳೆ, ಹಿಮ ಕರಗುವಿಕೆ, ಭೂಸವೆತ, ಸಮುದ್ರದಲ್ಲಿ ನೀರಿನ ಏರಿಕೆ ಇವು ನೈಸರ್ಗಿಕ ಕಾರಣಗಳಾಗಿವೆ. ಮಾನವ ಅಂಶಗಳೆಂದರೆ ಅರಣ್ಯನಾಶ, ಸರಿಯಾದ ರೀತಿಯಲ್ಲಿ ಕಟ್ಟಿರದ ಸೇತುವೆಗಳು, ಒಡ್ಡುಗಳು, ನದಿ ಪಾತ್ರ, ರಸ್ತೆಗಳು, ಅಕ್ರಮವಾಗಿ ಭೂ ಬಳಕೆಯಲ್ಲಾಗುತ್ತಿರುವ ಬದಲಾವಣೆ ಮುಂತಾದವುಗಳು ಪ್ರಮುಖವಾಗಿವೆ. ನೀರಿನ ಸಂಗ್ರಹಣಾ ಸಾಮಾರ್ಥ್ಯವಿರುವ ಅಣೆಕಟ್ಟು, ಜಲಾಶಯ, ಕೆರೆಗಳ ಸಂಖ್ಯೆ ಕಡಿಮೆ ಇರುವುದು ಪ್ರವಾಹಕ್ಕೆ ಪ್ರಮುಖ ಕಾರಣಗಳಾಗಿವೆ ಎಂಬ ವಿಚಾರಗಳು ಅಧ್ಯಯನದಿಂದ ತಿಳಿದು ಬರುತ್ತವೆ.

ಕರ್ನಾಟಕದಲ್ಲಿ ಕೃಷ್ಣಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ದೋಣಿನದಿ, ಮುಂತಾದವುಗಳು ಮಳೆಗಾಲದಲ್ಲಿ ರಭಸವಾಗಿ ಹರಿದು ಪ್ರವಾಹವನ್ನುಂಟು ಮಾಡುತ್ತವೆ. ಭಾರತದ ಉತ್ತರ ಭಾಗದಲ್ಲಿ ಮತ್ತು ಹಿಮಾಲಯ ಪರ್ವತಗಳಲ್ಲಿ ಮೇಘಸ್ಫೋಟ ದಿಂದ ಆಗಿಂದಾಗ್ಗೆ ಕ್ಷೇತ್ರ ಪ್ರವಾಹಗಳುಂಟಾ ಗುತ್ತವೆ. ನರ್ಮದಾ, ತಪತಿ, ಸಬರಮತಿ ಮತ್ತು ಮಹಿ ನದಿಗಳು ವರ್ಷದ ಕೆಲವು ದಿನಗಳಲ್ಲಿ ಗುಜರಾತ್ ರಾಜ್ಯದಲ್ಲಿ ಪ್ರವಾಹ ಉಂಟುಮಾಡುತ್ತವೆ. ಗಂಗಾ ನದಿಯ ಉಪನದಿಗಳಾದ ಯಮುನಾ, ಗಂಡಕ್, ಕೋಸಿ, ಘಾಘ್ರ ನದಿಗಳು ಉತ್ತರ ಪ್ರದೇಶ, ಬಿಹಾರಗಳಲ್ಲಿ ಪ್ರವಾಹವನ್ನುಂಟು ಮಾಡುತ್ತವೆ. ದಾಮೋದರ ಮತ್ತು ಸುವರ್ಣ ರೇಖಾ ನದಿಗಳು ಛತ್ತೀಸಘಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಪ್ರವಾಹವನ್ನುಂಟು ಮಾಡುತ್ತವೆ. ಬ್ರಹ್ಮಪುತ್ರ ಮತ್ತು ಇದರ ಉಪನದಿಗಳು, ಅಸ್ಸಾಂ ಕಣಿವೆ ನದಿಗಳಿಂದ ಅಸ್ಸಾಂನಲ್ಲಿ ಪ್ರವಾಹ ಉಂಟಾಗುತ್ತವೆ. ಪ್ರಸಕ್ತ ವರ್ಷದ ಮಳೆಗಾಲದಲ್ಲಿ ಸಿಂಧೂ ನದಿಯ ಉಪನದಿಗಳಾದ ಬಿಯಾಸ್ ಮತ್ತು ಪಾರ್ವತಿ ನದಿಗಳು ಹಿಮಾಚಲ ಪ್ರದೇಶಗಳಲ್ಲಿ ಪ್ರವಾಹಗಳನ್ನು ಉಂಟು ಮಾಡಿವೆ.

ಪ್ರವಾಹಗಳು ಜನರ ಆಸ್ತಿ-ಪಾಸ್ತಿ, ಮನೆ, ಭೂಮಿ ಮತ್ತು ಬೆಳೆಗಳನ್ನು ಹಾನಿಗೀಡುಮಾ ಡುತ್ತವೆ. ಜನ ಜೀವನ ವ್ಯವಸ್ಥೆ ಅಸ್ತವ್ಯಸ್ತಗೊ ಳ್ಳುತ್ತವೆ. ದೂರ ಸಂಪರ್ಕ, ವಿದ್ಯುತ್‌ ಪೂರೈಕೆ, ಸಾರಿಗೆ ಸೌಲಭ್ಯ ಮುಂತಾದವುಗಳು ಅಸ್ತವ್ಯಸ್ತಗೊಳ್ಳುತ್ತವೆ. ಪ್ರವಾಹಗಳ ಪರಿಣಾಮದಿಂದ ಫಲವತ್ತಾದ ಮಣ್ಣಿನ ಮೇಲ್ಬಾಗವು ಕೊಚ್ಚಿಹೋಗುತ್ತದೆ. ಹಾಗೂ ಅನೇಕ ಗಿಡ ಮರಗಳು ಹಾನಿಗೊಳಗಾಗುತ್ತವೆ. ಪ್ರವಾಹಗಳಿಂದ ವಿಶಾಲವಾಗಿ ಹರಡಿದ ನೀರು ಅನೇಕ ರೋಗಗಳು ಉಲ್ಬಣಕ್ಕೆ ಕಾರಣವಾಗುತ್ತವೆ.

ಪ್ರವಾಹ ನಿಯಂತ್ರಣಕ್ಕೆ ನದಿಯ ಇಕ್ಕೆಲಗಳಲ್ಲಿ ಅಡ್ಡಗಟ್ಟಗಳನ್ನು ನಿರ್ಮಿಸುವುದು. ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಿ ಜಲಾಶಯಗಳಲ್ಲಿ ನೀರನ್ನು ಸಂಗ್ರಹಿಸಿ ಇತರ ಕಡೆಗಳಿಗೆ ನೀರನ್ನು ಹರಿಸುವುದು. ಪ್ರವಾಹಗಳ ಮುನ್ಸೂಚನೆಯ ನ್ನು ನೀಡಲು ಕೇಂದ್ರಗಳನ್ನು ಸ್ಥಾಪಿಸುವುದು. ಜಲಾನಯನ ಪ್ರದೇಶಗಳಲ್ಲಿ ಅರಣ್ಯಗಳನ್ನು ಬೆಳೆಸುವುದು. ಇದರಿಂದ ಮಣ್ಣಿನ ಸವೆತವನ್ನು ನಿಯಂತ್ರಿಸಿ, ನದಿ ಹಾಗೂ ಜಲಾಶಯಗಳಲ್ಲಿ ಹೂಳು ತುಂಬುವುದನ್ನು ತಪ್ಪಿಸುವ ಮೂಲಕ ಪ್ರವಾಹಗಳನ್ನು ತಡೆಗಟ್ಟಬಹುದಾಗಿದೆ. ಈಗ ನಾವೇ ಅರ್ಥ ಮಾಡಿಕೊಳ್ಳೋಣ. ಪ್ರಕೃತಿ ಮಾತೆ ಮುನಿಸಿಕೊಳ್ಳದಂತೆ ಯಾವುದೇ ರೀತಿಯ ನೈಸರ್ಗಿಕ ಅವಘಡಗಳು ಉಂಟಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರವಾಹಗಳಂತಹ ಪ್ರಕೃತಿ ವಿಕೋಪಗಳನ್ನು ತಪ್ಪಿಸಲು ವನಸಂರಕ್ಷಣೆ ಮಾಡುವ ಮೂಲಕ ನಿಸರ್ಗ ಆರಾಧನೆ ಮಾಡೋಣ.


ಕೆ. ಎನ್. ಚಿದಾನಂದ .

Leave a Reply

Back To Top