ಲಹರಿ ಸಂಗಾತಿ
ಭಾರತಿ ಅಶೋಕ್
ಭರವಸೆಯ ಹಾದಿಯಲಿ
ಎಷ್ಟೋ ಕನಸುಗಳನ್ನು ಒಟ್ಟುಗೂಡಿಸಿ ಒಂದು,ಒಂದೇ ಒಂದು ಬೀಜದಲ್ಲಿರಿಸಿ ಸಸಿ, ಗಿಡ, ಮರವಾಗಿ ಅದರಲ್ಲಿ ಚಿಗುರು ಹೂ, ಕಾಯಿ ಹಣ್ಣಾಗಿ ಕನಸಿನ ಫಲ ಕೊಡಲೆಂದು ಎದೆಯ ಭೂಮಿಯನ್ನು ಹದವಾಗಿಸಿ ನೆಟ್ಟಿರುವೆ
ಪ್ರೀತಿಯ ನೀರೆರೆದು,ವಾತ್ಸಲ್ಯದ ಗೊಬ್ಬರ ಹಾಕುತ್ತಾ ಸಮಾನತೆಯ ಬೆಳಕು,ನಿರ್ವಂಚನೆಯ ನಿಷ್ಕಲ್ಮಶ ಗಾಳಿಯನ್ನು ಸದಾ ಕೊಡುತ್ತಾ ಭವಿಷ್ಯದ ಕನಸಿನ ಹಣ್ಣಿನ ನಿರೀಕ್ಷೆಯಲ್ಲಿದ್ದೆ.
ಒಂದಿನ ಕೌತುಕ! ಏನ್ ಗೊತ್ತಾ….? ಬೀಜ ಮೊಳೆತಿತ್ತು. ಅಬ್ಬಾ!ನನ್ನ ಖುಷಿಗೆ ಪಾರವೇ ಇರಲಿಲ್ಲ ನೋಡುತ ಹರ್ಷಗೊಂಡೆ.ಹಾಗೆ ಮೊಳಕೆ ದೊಡ್ಡದಾಗುತ್ತಾ ಎರಡೆಲೆ ಬಿಟ್ಟಿತು.ತುಂಬಾ ಸಂತಸ ಮತ್ತದೆ ಕನಸಿನ ಹಣ್ಣು ಕಾಣುವ ಕಾತರ ..
ಆಯ್ತು ಬೆಳೆಯುತ್ತಾ ಸುಂದರ ಗಿಡ, ಮರವಾಗಿ, ಹೆಮ್ಮರವಾಗಿ ಮೈತುಂಬಾ ಭರವಸೆಯ ಕಾಪು ತುಂಬಿಕೊಂಡಿತ್ತು ನನ್ನದೋ ಸಡಗರವೇ ಸಡಗರ. ದಿನಕ್ಕೊಂದು ಚೆಂದವಾಗಿ ಬೆಳೆಯುತ್ತಾ…ರೆಂಬೆ ಕೊಂಬೆ ತುಂಬಿ ಮೈ ಮದುವಣಿಗಿತ್ತಿಯಂತೆ ಕಂಗೊಳಿಸುತ್ತಿತ್ತು.ಕಾಣುತ್ತಿದ್ದ ನನ್ನಲ್ಲಿ ಇನ್ನಷ್ಟು ಮತ್ತಷ್ಟು ಉತ್ಸಾಹ ಹೆಚ್ಚಾಗುತ್ತಿತ್ತು.
ಒಂದಿನ ಚಿಗುರಿನ ನಡುವೆ ಮೊಗ್ಗುಗಳನ್ನು ಕಂಡೆ ಹತ್ತಾರು. ದಿನ ಕಳೆದಂತೆ ಲೆಕ್ಕವಿಲ್ಲದಷ್ಟು. ಇನ್ನಷ್ಟು ಕಾತರ ಕಾಯುವ ಕ್ಷಣಗಳವು ಅತಿ ಮಧುರ. ಆ ಮಧುರ ಕ್ಷಣಗಳಿಗಾಗಿ ಈ ಮಧುರ ಕ್ಷಣಗಳನ್ನು ಕಣ್ಣೆವೆ ಇಕ್ಕದೇ ನೋಡುತ್ತಿದ್ದೆ…..
ಮತ್ತೊಂದಿನ ನಸುಕಿನ ಜಾವದಲಿ ಎದ್ದು ಕಣ್ಣುಜ್ಜುತ ಮರದ ಹತ್ತಿರ ಬಂದೆ ಅಲ್ಲಿ ಒಂದಷ್ಟು ಮೊಗ್ಗುಗಳು ಕೆಳಗೆ ಬಿದ್ದಿರುವುದ ಕಂಡೆ ಅಷ್ಟೆ, ಕತ್ತು ಮೇಲೆತ್ತಿದರೆ ನೆನ್ನೆಯ ಮೊಗ್ಗುಗಳಿಲ್ಲ, ಬದಲಾಗಿ ಹೂವಾಗಿದ್ದವು!ಅಲ್ಲಿ ಕೆಳಗೆ ತೊಟ್ಟು ಕಳಚಿ ಬಿದ್ದಿದ್ದ ಮೊಗ್ಗುಗಳ ಕಳೆದುಕೊಂಡ ನೋವು ಬಾದಿಸಲಿಲ್ಲ ಅಂದು.
ಕುತೂಹಲದ ಮತ್ತೊಂದು ದಿನ ಮರದ ಕೆಳಗೆ ರಾಶಿ ಹೂಗಳು ಉದುರಿದ್ದ ಕಂಡು ಮನಸ್ಸು ರೋಧಿಸಲು ಪ್ರಾರಂಭಿಸಿತು.ಮತ್ತದೆ ಮರದಲ್ಲಿ ಒಂದಷ್ಟು ಈಚು,ಕಾಯಿಗಳನ್ನು ಕಂಡು ಸ್ವಲ್ಪ ಸಮಾಧಾನವಾಯ್ತು.
ಕಾಯಿಗಳು ದೊಡ್ಡವಾಗ್ತಾ ಇವೆ ಇನ್ನೆನು ಹಣ್ಣಾಗುತ್ತವೆ
ಅಂದುಕೊಂಡು ಸುಮ್ಮನಾದೆ. ಬಂತು ನೋಡಿ ಭಯಂಕರ ಬಿರುಗಾಳಿ. ಅಯ್ಯೋ… ಮರದ ರೆಂಬೆಗಳೇ ಕಳಚಿ ಬುದ್ದವು ಅದಂತೂ ಯಾತನೀಯ.ಮತ್ತೇ ಒಂದು ಸಮಾಧಾನ ಏನೆಂದರೆ ಕೆಲವು ಗೊಂಚಲು ಮತ್ತೆ ಅದರಲ್ಲಿ ಒಂದಷ್ಟು ಕಾಯಿಗಳು ಉಳಿದಿದ್ದವು.
ಸ್ವಲ್ಪ ದಿನ ಕಳೆಯಿತು ನೋಡುತ್ತಿದ್ದಂತೆ ಅವು ಒಗರಾಗುತ್ತಿದ್ದವು ಕೆಲವೊಂದು ಕೆಂಪಾಗುತ್ತಿದ್ದವು.ಇನ್ನೇನು ಹಣ್ಣಾಗುತ್ತಿವೆ ಎಂದು ಸಂತಸದಿ ತೇಲಾಡುತ್ತಿದ್ದೆ ಆದರೆ ಕೆಂಪಾಗುತ್ತಿದ್ದ ಆ ಕಾಯಿ/ ಹಣ್ಣುಗಳು ಭುತಾಯಿಗೆ ಎಡೆಯಾದವು ಅದೊಂದು ಖುಷಿ.ಜೊತೆಗೆ ಒಗರಾಗಿದ್ದ ಕೇವಲ ಬೆರಳೆಣಿಕೆಯಷ್ಟಿದ್ದ ಕಾಯಿಗಳು ಒಂದಷ್ಟು ಭರವಸೆ ಇತ್ತವು.
ಮತ್ತೊಮ್ಮೆ ಇದ್ದ ಕಾಯಿಗಳು ಹಣ್ಣಾಗಿವೆ ಎನ್ನುವಷ್ಟರಲ್ಲಿ ಪಕ್ಷಿಗಳು ಕಚ್ಚಿ ಅರ್ಧ ತಿಂದು ಹಣ್ಣಾಗದೇ ಇದ್ದುದಕ್ಕೆ ನೆಲಕ್ಕೆ ಬಿಸುಟಿವೆ. ಕನಸ ಹಣ್ಣು ಕಾಣುವೆನಾ…??
ಭರವಸೆ ಇದೆ….
ಎಲೆ ಕಾಯಿ ಒಗರು ಎಲ್ಲಾ ಕಳಚಿ ಬಿದ್ದು ಬೋಳಾದ ಮರದಲ್ಲಿ ಮತ್ತೆ ಚಿಗುರು ಕಾಣ್ತಿದೆ! ಅದನ್ನಾದರೂ ಜೋಪಾನವಾಗಿಸಿ ಕನಸ ಹಣ್ಣು ಪಡೆಯುವ….
ಭರವಸೆಯ ಹಾದಿಯಲ್ಲಿ ಕಣ್ಬಿಟ್ಟು ಕುಳಿತಿಹೆನು
ಭಾರತಿ ಅಶೋಕ್
Very Nice