ನಿಜವಾದ ವಿಮೋಚಕ
ಸುರೇಶ ಎನ್ ಶಿಕಾರಿಪುರ
ಹಿಂದೂ ಧರ್ಮದ ಪ್ರಕಾರ ಹೆಣ್ಣುಮಕ್ಕಳಿಗೆ ಆಸ್ತಿಯ ಹಕ್ಕಿರಲಿಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಮಾತಿನ ಮೂಲಕ ತವರಿನ ಯಾವುದೇ ಆಸ್ತಿಗೆ ಆಕೆ ಹಕ್ಕುದಾರಳಲ್ಲ ಸಂಬಂಧದವಳಲ್ಲ ಎಂಬುದನ್ನು ನೆಲೆಗೊಳಿಸಲಾಗಿತ್ತು. ಅವಳಿಗೆ ತವರಿನ ಆಸ್ತಿಯೇನಾದರೂ ಇದ್ದರೆ ಅದು ಆಕೆಯ ತಾಯಿ ಮಾತ್ರವೇ ಆಗಿರುತ್ತಿದ್ದಳು. ಅದೂ ಬದುಕಿದ್ದರೆ ಇಲ್ಲದಿದ್ದರೆ ಅದೂ ಇಲ್ಲ. ಹಿಂದೆಲ್ಲಾ ಬಾಲ್ಯ ವಿವಾಹವಾಗಿ ಚಿಕ್ಕ ವಯಸ್ಸಿನಲ್ಲೇ ಗಂಡ ತೀರಿ ಹೋದರಂತೂ ಮುಗಿಯಿತು. ಇಟ್ಟುಕೊಂಡರೆ ಗಂಡನ ಮನೆ ಇಲ್ಲದಿದ್ದರೆ ತವರು ಮನೆ. ಹೊಟ್ಟೆ ಪಾಡಿಗಾಗಿ ಆಕೆ ಅಣ್ಣ ಅತ್ತಿಗೆ ನಾದಿನಿ ಅತ್ತೆ ಮಾವ ಮಲತಾಯಿ ಎಲ್ಲರನ್ನೂ ಸಹಿಸಿಕೊಂಡು ದೀನಳಾಗಿ ಬದುಕಬೇಕಾದ ದುಸ್ಥಿತಿ ಇತ್ತು. ತುತ್ತಿನ ಚೀಲ ತುಂಬಿಕೊಳ್ಳಲು ಆಕೆ ಎಲ್ಲ ಅವಮಾನಗಳನ್ನು ಸಹಿಸಿಕೊಂಡು ಇದ್ದು ಸಾಯಬೇಕಾಗಿತ್ತು. ಮೇಲ್ವರ್ಗ ಮೇಲ್ಜಾತಿಯ ಕುಟುಂಬಗಳಲ್ಲಂತೂ ಇದು ಅವ್ಯಾಹತ. ಆಸ್ತಿ ಕೊಡುವ ಯೋಚನೆ ಆಕೆಯ ಸಹೋದರನಿಗೋ ತಂದೆಗೋ ಇದ್ದರೆ ಅದನ್ನು ಆಕ್ಷೇಪಿಸುವ ವಿರೋಧಿಸುವ ಅತ್ತಿಗೆಯೋ ನಾದಿನಿಯೋ ಮಲತಾಯಿಯೋ ಇರುತ್ತಿದ್ದಳು. ಅಂದರೆ ಶೋಷಿತ ಹೆಣ್ಣು ಹೆಣ್ಣಿನಿಂದಲೇ ಈ ಪರಿಯ ಹಿಂಸೆ ವಧೆ ಅನುಭವಿಸಬೇಕಾಗಿತ್ತು. ಹೆಣ್ಣು ಹೆಣ್ಣಿಗೇ ಆಸರೆ ಎಂಬುದು ಮಾತ್ರ ಇಂತಹಾ ಸಂದರ್ಭದಲ್ಲಿ ಸುಳ್ಳಾಗದೇ ಇರುವುದಿಲ್ಲ. ಇಲ್ಲಿ ಒಂದು ಜೀವಕ್ಕಿಂತ ತನ್ನ ಕುಟುಂಬದ ತನ್ನ ಮಕ್ಕಳ ಸ್ವಾರ್ಥ ಮುಖ್ಯವಾಗುತ್ತದೆ. ಹಾಗಾಗಿ ವಿಧವೆಯೋ ನಿರ್ಗತಿಕಳೋ ಆದ ಹೆಣ್ಣಿಗೆ ಹೀನಾಯವಾದ ಬಾಳು ತಪ್ಪುತ್ತಿರಲಿಲ್ಲ. ಗಂಡ ಸತ್ತ ಮೇಲೆ ಚಿತೆ ಏರುತ್ತಿದ್ದ ಬಹುತೇಕ ಹೆಣ್ಣು ಮಕ್ಕಳು ಇಂಥಹಾ ಭೀಕರ ಭವಿಷ್ಯವನ್ನು ಕಲ್ಪಿಸಿಕೊಂಡೇ ಚಿತೆ ಏರಲು ನಿರ್ಧರಿಸುತ್ತಿದ್ದದ್ದೂ ಇದೆ. ಗಂಡ ಸತ್ತ ಮೇಲೆ ನಮಗೇನೂ ಇಲ್ಲ ಎಂಬುದು ಹೆಚ್ಚಿನದಾಗಿ ಅವಳು ಆಸ್ತಿಯ ಹಕ್ಕಾಗಲೀ ಬದುಕುವ ಬಾಳುವ ಅವಕಾಶವಾಗಲೀ ಇಲ್ಲದ ದುರ್ಬರ ಸನ್ನಿವೇಷವನ್ನು ಎದುರಿಸಬೇಕಾದ ಭೀತಿಯನ್ನೇ ದ್ವನಿಸುತ್ತದೆ.
ಬಾಬಾ ಸಾಹೇಬ ಅಂಬೇಡ್ಕರರು ಹಿಂದೂ ಕೋಡ್ ಬಿಲ್ಲನ್ನು ತರಲು ಹೋರಾಡಿದ್ದು ಇದೇ ಉದ್ದೇಶಕ್ಕೆ. ಭಾರತದ ಹಿಂದೂ ಮಹಿಳೆಯರ ವಿಮೋಚಕ ಬಾಬಾ ಸಾಹೇಬರೇ ಆಗಿದ್ದಾರೆ. ಅವರು ಹಿಂದೂ ಕೋಡ್ ಬಿಲ್ಲಿನ ಮೂಲಕ ಹಿಂದೂ ಮಹಿಳೆಯ ಆಸ್ತಿಯ ಹಕ್ಕನ್ನು ಪ್ರತಿಪಾದಿಸಿದ್ದು ನಮ್ಮ ಸಂಪ್ರದಾಯವಾದೀ ಹಿಂದೂ ಪುರುಷ ಪುಂಗವರಿಗೆ ಸರಿ ಬರಲಿಲ್ಲ. ಅವರ ಪ್ರಕಾರ ಹಿಂದೂ ಧರ್ಮವೆಂಬ ಆಲದ ಮರಕ್ಕೆ ಬಾಬಾ ಸಾಹೇಬರು ಕೊಡಲಿ ಪೆಟ್ಟು ನೀಡುತ್ತಿದ್ದಾರೆಂಬುದೇ ನುಂಗಲಾರದ ತುತ್ತಾಗಿತ್ತು. ಒಂದು ಧರ್ಮದಲ್ಲಿ ಸುಧಾರಣೆ ತಂದರೆ ಅದು ಹೇಗೆ ಧರ್ಮಕ್ಕೆ ಚ್ಯುತಿ ಬರುತ್ತದೋ ಕಾಣೆ. ಬದಲಾವಣೆ ಇಲ್ಲದ ಧರ್ಮಕ್ಕೆ ಭವಿಷ್ಯವೂ ಇಲ್ಲ ಉಳಿಗಾಲವೂ ಇಲ್ಲ. ಹೆಣ್ಣು ಧರ್ಮದ ಭಾಗವೋ ಹೊರತು ಆಕೆ ಧರ್ಮ ಭ್ರಷ್ಟಳಲ್ಲ. ಹೆಣ್ಣನ್ನು ಗೌರವಿಸದ ಬದುಕಲು ಬಿಡದ ಧರ್ಮ ಧರ್ಮವೇ ಅಲ್ಲ. ಹಿಂದೂ ಸೋಗು ಹಾಕಿಕೊಂಡಿರುವ ಸನಾತನ ವೈದಿಕರಿಗೆ ಅಂಬೇಡ್ಕರರ ಈ ಹಿಂದೂ ಕೋಡ್ ಬಿಲ್ ಪುರಿಗಣೆಯಾಗಿ ಕಾಡಿದ್ದರ ಪರಿಣಾಮವೇ ಅವರು ಆ ಬಿಲ್ ಪಾಸಾಗದಂತೆ ತಡೆಯುವ ಎಲ್ಲಾ ಹೋರಾಟವನ್ನೂ ತಂತ್ರ ಕುತಂತ್ರಗಳನ್ನೂ ಶುರುವಿಟ್ಟುಕೊಂಡರು. ಮಹಿಳಾ ಪರವಾದ ಕಾಯ್ದೆಯನ್ನು ಮಹಿಳೆಯರ ಮೂಲಕವೇ ಹಿಮ್ಮೆಟ್ಟಿಸಲು ಹರಸಾಹಸ ಪಟ್ಟು ಹೋರಾಡಿದರು. ಜಢ ಸಮಾಜದ ಸಿಕ್ಕುಗಳಲ್ಲಿ ಸಿಕ್ಕು ನಾಶವಾಗುತ್ತಿದ್ದ ಮಹಿಳೆಯರನ್ನು ರಕ್ಷಿಸಲು ಅಂಬೇಡ್ಕರ್ ಪ್ರಾಮಾಣಿಕ ಮತ್ತು ನಿರ್ಣಾಯಕ ಹೋರಾಟ ನಡೆಸಿದ್ದರು. ಆದರೆ ಅವರಿಗೆ ಸಹಕಾರ ಸಿಗಲಿಲ್ಲ ಬಿಲ್ ಇದ್ದದ್ದು ಇದ್ದಂತೆ ಜಾರಿಗೆ ಬರಲಿಲ್ಲ. ಬಾಬಾ ಸಾಹೇಬರು ರಾಜಿನಾಮೆ ಸಲ್ಲಿಸಿದರು. ನಮ್ಮ ಮಹಿಳೆಯರು ಕೆಲವರು ಮಾತ್ರ ಚರಿತ್ರೆಯ ಈ ಘಟನೆಯನ್ನು ಮರೆತು ತಮ್ಮನ್ನು ತುಳಿಯುವ ಮನು ಸಿದ್ಧಾಂತಿಗಳ ಜೊತೆ ಕೈ ಜೋಡಿಸಿ ತಮ್ಮನ್ನು ತಾವೇ ಬಲಿಹಾಕಿಕೊಳ್ಳುತ್ತಿದ್ದಾರೆ. ಬಾಬಾ ಸಾಹೇಬರ ಪ್ರಯತ್ನದ ಫಲ ಬಿಲ್ ಬಹಳಷ್ಟು ತಿದ್ದುಪಡಿಗಳ ಮೂಲಕ ಪಾಸಾಗಿ ಮಹಿಳೆಯರಿಗೆ ಆಸ್ತಿಯ ಹಕ್ಕು ಲಭಿಸಿದ್ದರೂ ಈ ಸಮಾಜ ಅದನ್ನಿನ್ನು ಮಾನಸಿಕವಾಗಿ ಒಪ್ಪಿಲ್ಲ. ಅದರ ಅಂತರಂಗದೊಳಗೆ ಆಕೆಗೆ ಯಾವ ಹಕ್ಕೂ ಇನ್ನೂ ದೊರೆತಿಲ್ಲ. ಅವಳು ಈ ವಿಚಾರದಲ್ಲಿ ಬಹುದೊಡ್ಡ ವಂಚನೆ ಅನುಭವಿಸುತ್ತಿದ್ದಾಳೆ. ಸಮಾಜ ಅವಳ ಬಾಳು ಕೆಟ್ಟಿತೆಂದರೆ ಈಗಲೂ ಅನಾಥಳಾಗಿಯೇ ಇರಿಸುವ ಮನಸ್ಥಿತಿಯಲ್ಲಿದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಬಾಬಾ ಸಾಹೇಬರ ಹೋರಾಟದ ಒಳಗಿನ ಅಂತಃಕ್ಕರಣ ಎಲ್ಲರಿಗೂ ಅರ್ಥವಾಗಬೇಕು. ಮಹಿಳೆಯು ದೇವರು ಮತ್ತು ಭಕ್ತಿಯ ಹಾಗೂ ಪುರುಷಪ್ರಧಾನ ಧಾರ್ಮಿಕ ವ್ಯವಸ್ಥೆಯು ಹೇರುವ ಮೂಲಕ ನಂಬಿಸಲ್ಪಟ್ಟ ಮೌಢ್ಯಗಳಿಂದ ಹಾಗೂ ಸಂಪ್ರದಾಯ ಕಟ್ಟುಕಟ್ಟಳೆಗಳ ದಾಸ್ಯದಿಂದ ಹೊರಬಂದು ಹಕ್ಕನ್ನು ಪಡೆಯುವ, ಶೋಷಣೆಯನ್ನು ಪ್ರಶ್ನಿಸುವ ದಾಸ್ಯವನ್ನು ನಿರಾಕರಿಸುವ ಪ್ರಗತಿಶೀಲೆಯರಾಗಬೇಕು ಎಂದೇ ಅವರು ಮಹಿಳೆಯರು ದೇವಾಲಯಗಳ ಮುಂದು ಸಾಲುಹಚ್ಚಿ ನಿಲ್ಲುವುದಕ್ಕಿಂತ ಗ್ರಂಥಾಲಯಗಳ ಮುಂದು ಸಾಲುಹಚ್ಚಿ ನಿಲ್ಲಬೇಕೆಂದಿದ್ದರು. ಶೋಷಿತ ಹಿಂದೂ ಹೆಣ್ಣುಮಕ್ಕಳ ಬಿಡುಗಡೆ ಶಿಕ್ಷಣದಿಂದ ಮಾತ್ರ ಸಾಧ್ಯವೆಂಬುದು ಅವರ ಧೋರಣೆಯಾಗಿತ್ತು. ಇಂದು ಎಷ್ಟು ಜನ ಇದನ್ನು ಸ್ಮರಿಸುತ್ತಾರೆ. ಎಷ್ಟು ಜನಕ್ಕೆ ಬಾಬಾಸಾಹೇಬರ ಈ ಬಡಿದಾಟದ ಒಳಗಿನ ಕಾಳಜಿ ಅರ್ಥವಾಗಿದೆ? ಇಂದೂ ಕೂಡಾ ಕತ್ತಿಯಂಚಿನ ದಾರಿಯಲ್ಲೇ ನಡೆಯುತ್ತಿರುವ ನಮ್ಮ ದೇಶದ ಮಹಿಳೆಯರೆಲ್ಲರೂ ಇದನ್ನು ಯೋಚಿಸಬೇಕು. ಹಾಗೆ ನೋಡಿದರೆ ಈ ದೇಶದ ಎಲ್ಲಾ ಬಗೆಯ ಶೋಷಣೆಗಳ ನಿಜವಾದ ವಿಮೋಚಕ ಅಂಬೇಡ್ಕರರೇ.
*********
❤
ಸಂತೋಷ ಸರ್
Nice explaination. Good luck
ವಂದನೆಗಳು ಸನ್ಮಿತ್ರರೇ…
ವಂದನೆಗಳು ಸನ್ಮಿತ್ರರೇ
ಸಂಗಾತಿ ಪತ್ರಿಕೆಯ ಸಂಪಾದಕರಿಗೂ ಸಂಪಾದಕ ಮಂಡಳಿಯ ಎಲ್ಲ ಹಿರಿಯರಿಗೂ ನನ್ನ ಕಿರು ಲೇಖನ ಪ್ರಕಟಿಸಿದ್ದಕ್ಕಾಗಿ ವಂದಿಸುವೆ…