ಅಂಕಣ ಸಂಗಾತಿ.

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿ

ಶಾಲೆಗಳಲ್ಲಿ ವಸ್ತ್ರಸಂಹಿತೆ ಅಗತ್ಯವೇ?

4 ವರ್ಷದ ಪುಟ್ಟ ಮೊಮ್ಮಗಳು ಓಡುತ್ತಾ ಬಂದು ನಮ್ಮ ಮಿಸ್‌ ಇವತ್ತು ಈ ಡ್ರೆಸ್‌ ಹಾಕಿದ್ದರು ಆ ಡ್ರೆಸ್‌ ಹಾಕಿದ್ದರು ಎಂದು ವಿವರಣೆ ಮಾಡುತ್ತಾ ತಮ್ಮ ಮಿಸ್‌ ಹಾಕಿದ ಮಿಡಿ ಹಾಗೂ ಟೀ ಶರ್ಟ ಬಗ್ಗೆ ಮಾತನಾಡುತ್ತಿದ್ದಳು. ಆಗ ನಾನು ಅವಳಿಗೆ ಕೇಳಿದೆ, ಹಾಗಾದರೆ ನಿಮ್ಮ ಶಾಲೆಯಲ್ಲಿ ಎಲ್ಲ ತರಗತಿಯಲ್ಲಿ ಇದೇ ರೀತಿಯ ಡ್ರೆಸ್‌ ಗಳನ್ನು ನಿಮ್ಮ ಮಿಸ್‌ ಗಳು ಹಾಕುತ್ತಾರೆಯೇ? ಎಂದು, ಆಗ ಅವಳು ಹೌದು ಅಮ್ಮಮ್ಮಾ ನಮ್ಮ ಶಾಲೆಯಲ್ಲಿ ಎಲ್ಲ ತರಗತಿಗಳಲ್ಲಿ ಮಿಸ್‌ ಗಳು ಹೀಗೇಯೇ ಎಂದಳು. ಅದಕ್ಕೆ ನನ್ನ ಮಗ ತನ್ನ ಮಗಳಿಗೆ ಹೇಳಿದ, ಪುಟ್ಟಾ ಅಮ್ಮಮ್ಮಾ ಸಹ ದೊಡ್ಡ ಮಕ್ಕಳಿಗೆ ಅಂದರೆ 8, 9 ಹಾಗೂ 10 ನೇಯ ತರಗತಿಯ ಮಕ್ಕಳಿಗೆ ಪಾಠ ಕಲಿಸ್ತಾರೆ ಅವರು ಟೀಚರ್‌ ಎಂದ, ಅದಕ್ಕೆ ಅವಳು ಸಾಧ್ಯವೇ ಇಲ್ಲ ಇವರು ಸೀರೆ ಹಾಕ್ತಾರೆ, ಅವರು ಮಿಡಿ ಹಾಕಿದ್ದೇ ನೋಡಿಲ್ಲ, ಇವರು ಹೇಗೆ ಟೀಚರ್‌ ಎಂದಳು. ಅವಳ ಮಾತುಗಳು, ನನಗೆ ಶಾಲೆಯಲ್ಲಿ ವಸ್ತ್ರ ಸಂಹಿತೆ ಅಗತ್ಯವೇ ಎಂಬುದರ ಆಲೋಚನೆಯಲ್ಲಿ ಮುಳುಗಿಸಿತು.
ಹೌದು ಪೋಲೀಸರಿಗೆ, ಸೈನಿಕರಿಗೆ, ವೈದ್ಯರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ ಇದೆ. ಅವರ ವಸ್ತ್ರವನ್ನು ನೋಡಿದರೆ ಅವರ ಮೇಲೆ ಭಕ್ತಿ, ಅಪಾರ ನಂಬಿಕೆ ಹಾಗೂ ಗೌರವ ಹೆಚ್ಚುತ್ತದೆ. ವಸ್ತ್ರ ಸಂಹಿತೆ ನಮ್ಮ ದೇಶದ ಸಂಸ್ಕೃತಿ, ಪರಂಪರೆಯನ್ನು ತಿಳಿಸುತ್ತದೆ. ಅದೇ ರೀತಿ ಶಿಕ್ಷಕರನ್ನು ಸದಾ ಗಮನಿಸುತ್ತಿರುವ ಹಾಗೂ ಅನುಕರಿಸುತ್ತಿರುವ ಮಕ್ಕಳ ಮೇಲೆ ಅವರ ವಸ್ತ್ರಗಳು ತುಂಬಾ ಪ್ರಭಾವ ಬೀರುತ್ತದೆ. ಮನಸ್ಸಿನ ಮೇಲಿನ ಭಾವನೆಗಳಿಗೆ ಸಹ ವಸ್ತ್ರ ಸಂಹಿತೆ ಅತ್ಯಂತ ಪ್ರಭಾವ ಬೀರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ೪ ವರ್ಷದ ಮಗುವಿನ ಮನಸ್ಸಿನ ಮೇಲೆ ತನ್ನ ಮಿಸ್‌ ಧರಿಸಿರುವ ಉಡುಗೆ ಅಷ್ಟೊಂದು ಆಳವಾಗಿ ಪ್ರಭಾವ ಬೀರುತ್ತಿರುವಾಗ, ಇನ್ನು ಬೆಳೆಯುತ್ತಿರುವ ಹದಿಹರೆಯದ ಮಕ್ಕಳ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬುದನ್ನು ಆಲೋಚಿಸುವ ಅಗತ್ಯವಿದೆ.
ಇತ್ತೀಚಿಗೆ ಅನೇಕರು ಸಮಾಜದಲ್ಲಿ ಆಗುತ್ತಿರುವ ದುಷ್ಟ ಕಾರ್ಯದ ಬಗ್ಗೆ ಚರ್ಚಿಸುವುದು ಹಾಗೂ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಚರ್ಚಿಸುವುದನ್ನು ಗಮನಿಸಿದಾಗ, ಬಹುಶಃ ಅದಕ್ಕೆಲ್ಲ ಕಾರಣ ನಾವೇ ಎನಿಸುತ್ತದೆ. ಕೆಲವು ಪ್ರತಿಷ್ಠಿತ ಶಾಲೆಗಳಲ್ಲಿ ಪಾಶ್ಚಾತೀಕರಣ ಅನುಕರಣೆಯಲ್ಲಿ ಮುಳುಗಿ ಹೋಗಿರುವುದು ಹಾಗೂ ಬೇಕಾಬಿಟ್ಟಿ ಉಡುಗೆಗಳನ್ನು ಧರಿಸುತ್ತಿರುವುದು ಕಾರಣವಾಗುತ್ತಿರಬಹುದು ಅಲ್ಲವೇ? ಹೀಗೆಂದಾಗ ಇಲ್ಲಿ ಇನ್ನೊಂದು ಪಂಥ ವಾದಿಸಬಹುದು. ಉಡುಗೆಯಲ್ಲೂ ಸ್ವಾತಂತ್ರವಿಲ್ಲವೇ? ಅಥವಾ ಸೀರೆಯುಟ್ಟರೆ ಅದು ಹಳ್ಳಿ ಗೊಡ್ಡು ಎಂಬ ಸಂಪ್ರದಾಯದ ಭಾವನೆ, ಅಥವಾ ಮಿಡಿ ಟೀಶರ್ಟ ಹಾಕಿದರೆ ಏನು ತೊಂದರೆ, ನೋಡುವವರ ದೃಷ್ಠಿಕೋನ ಸರಿಯಾಗಿರಬೇಕು ಇತ್ಯಾದಿ ಚರ್ಚೆ, ವಾದ ಮಾಡಬಹುದು. ಆದರೆ ಸ್ವಲ್ಪ ಯೋಚಿಸಿ, ನಮ್ಮ ಉಡುಗೆ ತೊಡುಗೆ ನಮ್ಮ ಸಂಪ್ರದಾಯ, ಸಂಸ್ಕೃತಿಯೊಂದಿಗೆ ಉತ್ತಮ ಭಾವನೆಗಳನ್ನು ಬಿತ್ತುತ್ತವೆ. ಶಿಸ್ತನ್ನು ರೂಢಿಸುತ್ತವೆ. ಅಲ್ಲದೇ ಶಿಕ್ಷಕ ಎಂಬ ವೃತ್ತಿಗೆ ಗೌರವವನ್ನು ತಂದುಕೊಡುತ್ತವೆ. ಆತ್ಮೀಯತೆ ಗೌರವ ಪ್ರೀತಿ ಹೆಚ್ಚಲು ಕಾರಣವಾಗುತ್ತವೆ. ಅಲ್ಲದೇ ನೀತಿ ನಿಯಮಗಳ ಚೌಕಟ್ಟಲ್ಲಿ ನಮ್ಮನ್ನು ಬೆಳೆಯುವಂತೆ ಮಾಡುತ್ತದೆ ಅಲ್ಲವೇ?


ಪೋಲೀಸ ಅಥವಾ ಸೈನಿಕ ಅಥವಾ ವೈದ್ಯರು ವಸ್ತ್ರ ಸಂಹಿತೆಯಲ್ಲಿದ್ದಾಗ ಅವರ ಬಗ್ಗೆ ನಮ್ಮ ಅಭಿಪ್ರಾಯ ಮತ್ತು ಭಾವನೆಗಳು ಹೇಗಿರುತ್ತವೆ, ಅವರು ಯಾವುದೇ ವಸ್ತ್ರಸಂಹಿತೆ ಇಲ್ಲದೇ ಇದ್ದಾಗ ನಮ್ಮ ಭಾವನೆ ಮತ್ತು ಅಭಿಪ್ರಾಯ ಹೇಗಿರುತ್ತದೆ ಎಂಬುದನ್ನು ಕಲ್ಪನೆ ಮಾಡಿಕೊಳ್ಳಿ. ವಸ್ತ್ರ ಸಂಹಿತೆ ನಮ್ಮ ಮನಸ್ಸು ಹಾಗೂ ಹೃದಯದ ಮೇಲೆ ಆಳವಾದ ಪರಿಣಾಮ, ಪ್ರಭಾವ ಬೀರುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
ಹಾಗಾದರೆ ಶಾಲಾ ಮಟ್ಟದಲ್ಲಿ ಸೀರೆಯನ್ನು ಕಡ್ಡಾಯ ಮಾಡಬೇಕೇ? ಎಂಬುದನ್ನು ತಾವು ಆಲೋಚಿಸುತ್ತಿರಬಹುದು. ಹಾಗೇನಿಲ್ಲ ಸೀರೆ ಅಥವಾ ಚೂಡಿದಾರ ಇರಬಹುದು ಒಟ್ಟಾರೆ ಉತ್ತಮ, ಭಾವನೆ, ಗೌರವ ಹೆಚ್ಚಿಸುವ ಶಿಕ್ಷಕ ವೃತ್ತಿಗೆ ಗೌರವ ಕೊಡುವ ಉಡುಗೆ ಅತ್ಯಗತ್ಯ ಅಲ್ಲವೇ?
ಹಾಗಾದರೆ ಶಿಕ್ಷಕರು ಪುರುಷರಾಗಿದ್ದರೆ ಅವರ ಉಡುಗೆ ತೊಡುಗೆ ಹೇಗಿರಬೇಕು ಎಂದು ತಾವು ಆಲೋಚಿಸುತ್ತಿರಬಹುದು ಅಲ್ಲವೇ? ಮುಂಚೆ ಶಿಕ್ಷಕರಿಗೆ ಗುರೂಜೀ ಎಂತಲೂ, ಅವರು ದೊತರ, ಟೊಪ್ಪಿಗೆ ಧರಿಸುತ್ತಿದ್ದರು ಎಂತಲೂ ನಮ್ಮ ಅಪ್ಪ, ಅಮ್ಮ ಹೇಳುವದನ್ನು ಕೇಳಿದ್ದೇವೆ. ಆದರೆ ಇತ್ತೀಚಿಗೆ ಬಹಳಷ್ಟು ಜನರಿಗೆ ದೊತರ ಉಟ್ಟುಕೊಳ್ಳಲು ಬರುವುದಿಲ್ಲ ಅದಕ್ಕೆ ಮಾರುಕಟ್ಟೆಯಲ್ಲಿ ರೆಡಿಮೆಡ್‌ ದೊತರಗಳ ಸುಗ್ಗಿ ನಡೆಯುತ್ತಿದೆ. ಇರಲಿ ಅದರ ಬಗ್ಗೆ ಚರ್ಚೆ ಬೇಡ. ಹಾಗಾದರೆ ಪುರುಷ ಶಿಕ್ಷಕರ ಉಡುಪು ಹೇಗಿರಬೇಕು ?


ಪುರುಷರು ಪ್ಯಾಂಟ್‌ ಹಾಗೂ ಶರ್ಟ ಧರಿಸಿದೆ ಉತ್ತಮ ಆದರೆ ಇತ್ತೀಚಿಗೆ ಪುರುಷ ಶಿಕ್ಷಕರು ಟೀ ಶರ್ಟ ಹಾಗೂ ವಿಚಿತ್ರವಾದ ತೋಳಿಲ್ಲದ ಅಂಗಿಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಅಭ್ಯಾಸದ ಕಡೆಗಿಂತ ಅವರ ಉಡುಪುಗಳ ಕಡೆಗೇ ಹೆಚ್ಚಿನ ಗಮನ ಹೋಗುತ್ತಿದೆ. ಮಕ್ಕಳ ಏಕಾಗ್ರತೆಗೆ ತೊಂದರೆ ಆಗುತ್ತಿದೆ. ಅವರ ಭಾವನೆಗಳು ವಿಚಲಿತವಾಗುತ್ತಿವೆ.
ಒಟ್ಟಾರೆ ಶಿಕ್ಷಕ ವೃತ್ತಿ ಎಂಬುದು ದೇಶದ ಭಾವೀ ಪ್ರಜೆಗಳನ್ನು ಉತ್ತಮ ಸತ್ಪ್ರಜೆಯಾಗಿ ನೀತಿವಂತರನ್ನಾಗಿ ಸಂಸ್ಕೃತಿಯ ರೂವಾರಿಗಳನ್ನಾಗಿ ತಯಾರಿಸುವ ಕಾರ್ಯ. ಇಂತಹ ಕಾರ್ಯ ಅತ್ಯಂತ ಗೌರವಯುತವಾದ ಹಾಗೂ ಅಭಿಮಾನದ ಕಾರ್ಯ. ಮಗು ಕೇವಲ ಹೇಳಿದ್ದನ್ನು ಮಾತ್ರ ಕಲಿಯುವದಿಲ್ಲ, ನೋಡಿ ತುಂಬಾ ಕಲಿಯುತ್ತಿರುತ್ತದೆ. ಅದು ಪರಿಸರದಲ್ಲಿಯ ಎಲ್ಲ ಆಗುಹೋಗುಗಳನ್ನು ಆಲಿಸುತ್ತದೆ ಹಾಗೂ ಅನುಕರಿಸುತ್ತಿರುತ್ತದೆ. ಅದರಿಂದ ನಮ್ಮ ಸಂಸ್ಕೃತಿ ಯನ್ನು ಪೋಷಿಸುವುದು ಮತ್ತು ಉತ್ತಮ ಭಾವನೆಗಳನ್ನು ಬೆಳೆಸುವುದು ಅಗತ್ಯ. ಮಕ್ಕಳ ಕೋಮಲ ಮನಸ್ಸಿನಲ್ಲಿ ನಮ್ಮ ಉಡುಗೆಗಳು ಯಾವುದೇ ಘಾಸಿ ಆಗದಂತೆ ಇರಬೇಕು. ಆದ್ದರಿಂದಲೇ ಶಾಲಾ ಹಂತದಲ್ಲಿಯೂ ಶಿಕ್ಷಕರಿಗೆ ವಸ್ತ್ರಸಂಹಿತೆ ಇಂದು ಅತ್ಯಗತ್ಯವೇ ಆಗಿದೆ ಎಂದು ಹೇಳಬಹುದು. ಇಂದಿನ ಅನೇಕ ಶಾಲೆಗಳಲ್ಲಿ ಶಿಕ್ಷಕ ವೃಂದದ ಉಡುಪುಗಳು ಮಕ್ಕಳ ಮನಸ್ಸನ್ನು ವಿಕೃತಗೊಳಿಸುತ್ತಿರುವುದನ್ನು ನೋಡಿದಾಗ ವಸ್ತ್ರಸಂಹಿತೆ ಅಗತ್ಯವಾಗಿದೆ ಎನ್ನಬಹುದು. ಒಟ್ಟಾರೆ ನಮ್ಮ ಮಕ್ಕಳು ಸುಸಂಸ್ಕೃತರಾಗಲು ನಮ್ಮ ಸಂಸ್ಕೃತಿಯ ಉಡಪನ್ನೇ ಧರಿಸುವುದು ಅತ್ಯಗತ್ಯ ಮತ್ತು ಅವಶ್ಯಕ ಎನ್ನಬಹುದು. ಭಾರತ ದೇಶ ತನ್ನ ಸಂಸೃತಿಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೀಮಂತಿಕೆ ಪಡೆದುಕೊಂಡಿದೆ. ಆ ಶ್ರೀಮಂತ ಸಂಸ್ಕೃತಿ ಉಳಿಸೋಣ, ಬೇಳೆಸೋಣ.
———————————————–

ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

Leave a Reply

Back To Top