ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಮೌಲ್ಯಗಳು
ಎಲ್ಲಿಹವು ಜೀವನದ ಮೌಲ್ಯಗಳು…
ಹುಡುಕಬೇಕಾಗಿದೆ..
ಅಸ್ಥಿರ ಬುನಾದಿಯ
ಆಶಾಸೌಧಗಳ
ಸ್ವಾರ್ಥದ ಹೇಯಕರ ಭೂತಗಳ
ಮೋಸ ಕುತಂತ್ರದ ಪ್ರೇತಗಳ
ಈರ್ಷ್ಯೆಯ ಕಬಂಧ ಬಾಹುಗಳ
ಬಲೆಯೊಳಗೆ ಸಿಲುಕಿಹವು
ಮರಮರನೆ ಮರುಗಿಹವು…
ಅನ್ಯಾಯದ ಬೇರುಗಳು
ನ್ಯಾಯದ ನೆಲದೊಳಗೆ
ಆಳವಾಗಿಳಿದಿಹವು
ಕೊಳೆತಿರುವ ಬೊಡ್ಡೆಯೊಳು
ಕೊಳೆತಿನಿಗಳಾಗಿಹವು..
ಸತ್ಯದ ಕೊಂಬೆಗಳು
ಬೆಳೆಯಬಹುದೇ ಇಲ್ಲಿ
ಪ್ರೀತಿಯ ಕುಸುಮಗಳು
ಅರಳಬಹುದೇ ಇಲ್ಲಿ
ನೀತಿಯ ಕಾಯಿಗಳು
ಮಾಗಬಹುದೇ ಇಲ್ಲಿ…
ಕೊರಗಿ ಸೊರಗಿಹವು
ಪರಾವಲಂಬಿಗಳಾಗಿ
ಕಾಳಸಂತೆಯ ಕೈಲಿ
ಬಿಳಿಯ ನಾಣ್ಯಗಳಾಗಿ
ಅಧಿಕಾರ ಮುಷ್ಠಿಯಲಿ
ಮಣ್ಣ ಬೊಂಬೆಗಳಾಗಿ…
ಕೊಲೆಗಡುಕರ ಕೈಲಿ
ಸಿಂಗರಿಪ ರುಂಡಗಳಾಗಿ
ತಲೆಹಿಡುಕರ ಅಡಿಗೆ
ಪಾದರಕ್ಷೆಗಳಾಗಿ…
ಬಲಿಯಾಗಿ ಬಿಟ್ಟಿಹವು
ರಕ್ಕಸರ ಯಜ್ಞದಲಿ..
ಬೂದಿಯ ರಾಶಿಯಲಿ
ಹುಡುಕಬೇಕಾಗಿದೆ ಈಗ
ಜೀವನದ ಮೌಲ್ಯಗಳನ್ನು….
————————
ಜೀವನ ಮೌಲ್ಯದ ಅರ್ಥಪೂರ್ಣ ಕವನ.