ಅಂಕಣ ಸಂಗಾತಿ.

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿ

ಶಾಲೆಗಳಲ್ಲಿ ಪರಿಸರ ದಿನಾಚರಣೆಯ

ಆತ್ಮಾವಲೋಕನ

[ವಿಶ್ವ ಪರಿಸರ ದಿನ (World Environment Day)ವನ್ನು ಪ್ರತಿ ವರ್ಷ ಜೂನ್ 5 ರಂದು ಆಚರಿಸಲಾಗುತ್ತದೆ. ಇದು ಹಸಿರನ್ನು ಉಳಿಸಿ ಬೆಳೆಸುವ ಮೂಲಕ ಹೆಚ್ಚು ಸಮರ್ಥನೀಯ ಭವಿಷ್ಯವನ್ನು (Future) ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ದಿನದಂದು ಪರಿಸರದ ಬಗ್ಗೆ ಜಾಗೃತಿ (Awareness) ಮೂಡಿಸಲು ಮತ್ತು ಪರಿಸರದ ರಕ್ಷಣೆಗೆ (Protection) ಉತ್ತೇಜನೆ ನೀಡಲು ಆಚರಿಸಲಾಗುತ್ತದೆ. ಎಲ್ಲರಿಗೂ ‘ಒಂದೇ ಒಂದು ಭೂಮಿ’, ಪರಿಸರ ಉಳಿಸಿ, ಬೆಳೆಸಿ ಭೂಮಿಯನ್ನು ರಕ್ಷಿಸಿ ಎಂಬ ಆಶಯವನ್ನು ಇದು ಒಳಗೊಂಡಿದೆ. ವಿಶ್ವ ಪರಿಸರ ದಿನವು ಸಾರ್ವಜನಿಕವಾಗಿ ತಲುಪಲು ಜಾಗತಿಕ ವೇದಿಕೆಯಾಗಿ ಬೆಳೆದಿದೆ.
ಪರಿಸರ ಕುರಿತು ಜಾಗೃತಿ ಮತ್ತು ಅರಿವು ಮೂಡಿಸಲು ಪ್ರತಿ ವರ್ಷ ಬೇರೆ ಬೇರೆ ಧ್ಯೇಯವಾಕ್ಯ (Theme)ದೊಂದಿಗೆ ವಿಶ್ವ ಪರಿಸರ ದಿನವನ್ನು ಆಯೋಜಿಸಲಾಗುತ್ತದೆ.
 ಇದರ ಮುಖ್ಯ ಉದ್ದೇಶ ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನು ತಡೆಯುವುದಾಗಿದೆ.  2023ನೇ ವರ್ಷದ ಆಚರಣೆಯನ್ನು ” ಪ್ಲಾಸ್ಟಿಕ್ ಮಾಲಿನ್ಯ ಮೆಟ್ಟಿ ನಿಲ್ಲೋಣ ” (Beat Plastic Pollution) ಎಂಬ ಥೀಮ್ ದೊಂದಿಗೆ ಆಚರಣೆ ಮಾಡಲಾಗುತ್ತದೆ.

 ವಿಶ್ವ ಪರಿಸರ ದಿನದ ಆಚರಣೆ ಆರಂಭವಾಗಿದ್ದು ಯಾವಾಗ ?
ವಿಶ್ವ ಪರಿಸರ ದಿನವನ್ನು 1974ರಲ್ಲಿ ವಿಶ್ವಸಂಸ್ಥೆಯ ಅನುಮೋದನೆಯೊಂದಿಗೆ ಆರಂಭಿಸಲಾಯಿತು. ಈ ಕುರಿತು 1972ರಲ್ಲಿಯೇ ಚರ್ಚೆಗಳು ಆರಂಭವಾಗಿತ್ತು. ಆದರೆ ಎರಡು ವರ್ಷಗಳ ಕಾಲ ಈ ಚರ್ಚೆ ನಡೆಸಿ, 1974 ಜೂನ್ 5ರಂದು ಮೊದಲು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಒಂದು ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ.

 ವಿಶ್ವ ಪರಿಸರ ದಿನವನ್ನು ಯಾಕೆ ಆಚರಿಸಲಾಗುತ್ತದೆ ?
ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್‌ 5ರಂದು ವಿಶ್ವಪರಿಸರ ದಿನವನ್ನು ಆಚರಿಸಲಾಗುತ್ತದೆ.ಇದರ
ಮುಖ್ಯ ಉದ್ದೇಶ ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನು ತಡೆಯುವುದಾಗಿದೆ.

ಈ ಮೇಲಿನ ಎಲ್ಲ ವಿಷಯಗಳು ಬಗ್ಗೆ ಅರಿವನ್ನು ಮೂಢಿಸಿ ಪರಿಸರ ಕಾಳಜಿಯನ್ನು ಮಕ್ಕಳಲ್ಲಿ ತರಲು ಪ್ರತಿ ವರ್ಷ ಇಕೋ ಕ್ಲಬ್‌ ಮೂಲಕ ಪರಿಸರ ದಿನಾಚರಣೆಯನ್ನು ಶಾಲೆಗಳಲ್ಲಿ ಆಚರಿಸಲಾಗುತ್ತದೆ. ಮಕ್ಕಳು ವಿವಿಧ ಘೋಷವಾಕ್ಯಗಳ  ಮೂಲಕ ಊರಲ್ಲಿ ಜಾಥಾ ಮಾಡುತ್ತಾರೆ. ಪರಿಸರ ಪ್ರಜ್ಞೆಯ ಅರಿವನ್ನು ಮೂಡಿಸುತ್ತಾರೆ.  ಪ್ರಮುಖ ಘೋಷವಾಕ್ಯಗಳೆಂದರೆ,


• ಹೆಸಿರೇ ಉಸಿರು
• ಕಾಡಿದ್ದರೆ ನಾಡು
• ಒಂದು ಭೂಮಿ ಒಂದೇ ಭವಿಷ್ಯ
• ಮನೆಗೊಂದು ಮರ ಊರಿಗೊಂದು ವನ
• ಅರಣ್ಯವಿಲ್ಲದೇ ಮಳೆ ಇಲ್ಲ, ಮಳೆ ಇಲ್ಲದೇ ಬೆಳೆ ಇಲ್ಲ
• ಗಿಡ ನಕ್ಕರೆ ಜಗ ನಗುವುದು, ಗಿಡ ಅಳಿದರೆ ಜಗ ಅಳಿವುದು
• ಅಕ್ಷರ ಅನ್ನ,ಪರಿಸರ ಚಿನ್ನ
• ವೃಕ್ಷ ಕಡಿದವನಿಗೆ ಬೀಕ್ಷೆ ತಪ್ಪದು
• ಕಾಡು ಬೆಳೆಸಿ ಭೂತಾಪಮಾನ ಇಳಿಸಿ
• ಮಳೆ ಬೀಜಕ್ಕಾಗಿ ಮರ ಬೆಳೆಸಿ
• ಕಾಡು ಉಳಿದರೆ ನಾಡು ಉಳಿವುದು
• ಪರಿಸರ ಉಳಿಸಿ ಭೂಮಿಯನ್ನು ರಕ್ಷಿಸಿ ಇತ್ಯಾದಿ

ಪರಿಸರ ದಿನಾಚರಣೆಯ ನಿಮಿತ್ಯ ಚಿತ್ರಕಲೆ, ರಂಗೋಲಿ, ಭಾಷಣ ಹಾಗೂ ನಿಬಂಧಗಳ ಸ್ಪರ್ಥೆಯನ್ನು ಏರ್ಪಡಿಸುತ್ತಾರೆ. ಸಸಿಗಳನ್ನು ನೆಡುತ್ತಾರೆ.
ಆದರೆ ಇಷ್ಟೆಲ್ಲಾ ಆಚರಣೆಯನ್ನು ಪ್ರತಿ ವರ್ಷ ಮಾಡುತ್ತಿರುವ ನಮಗೆ ಕೆಲವು ಮೂಲಭೂತ ಪ್ರಶ್ನೆಗಳು ಕಾಡುತ್ತವೆ ಅವುಗಳೆಂದರೆ,
• ಪ್ರತಿ ವರ್ಷ ನಾವು ನಮ್ಮ ಶಾಲೆಗಳಲ್ಲಿ ಸಸಿಗಳನ್ನು ನೆಡುತ್ತೇವೆ ಅದರಲ್ಲಿ ಎಷ್ಟು ಬೆಳೆಯುತ್ತವೆ? ಎಷ್ಟು ಉಳಿಯುತ್ತವೆ
• ನಮ್ಮ ಶಾಲೆಯ ಪರಿಸರ ಹಾಗೂ ಶಾಲೆ ಇರುವ ಊರು ಪ್ಲಾಸ್ಟಿಕ್‌ ಮುಕ್ತವಾಗುವಲ್ಲಿ ನಮ್ಮ ಶಾಲೆ ಹಾಗೂ ಮಕ್ಕಳ ಕಾರ್ಯ ಎಷ್ಟರ ಮಟ್ಟಿಗೆ ಆಗುತ್ತಿದೆ?
• ನಮ್ಮ ಶಾಲೆಯ ಸುತ್ತಮುತ್ತಲಿರುವ ನೀರಿನ ಮೂಲಗಳಾದ ಕೆರೆ ಹಳ್ಳ,ಕೊಳ್ಳ,ಗಳಲ್ಲಿ ಎಷ್ಟರ ಮಟ್ಟಿಗೆ ಮಾಲಿನ್ಯ ತಡೆಗಟ್ಟಲು ನಾವು ಸಹಾಯಕರಾಗಿದ್ದೇವೆ?
• ನೀರಿನ ದುರಪಯೋಗವನ್ನು ಎಷ್ಟರ ಮಟ್ಟಿಗೆ ತಡೆಟ್ಟಿದ್ದೇವೆ?
• ಕಸದ ಬುಟ್ಟಿಯಲ್ಲಿಯೇ ಕಸವನ್ನು ಹಾಕುತ್ತಿದ್ದೇವೆಯೇ? ಹಸಿ ಕಸ ಹಾಗೂ ಒಣ ಕಸ ಎಂದು ಪ್ರತ್ಯೇಕಿಸುತ್ತಿದ್ದೇವೆಯೇ?
• ಕಡಿಮೆ ದೂರ ಅಥವಾ ಹತ್ತಿರದ ದೂರಕ್ಕೆ ಹೋಗಲು ಸೈಕಲ್‌ ಬಳಸುತ್ತಿದ್ದೇವೆ?
• ವಾಯು ಮಾಲಿನ್ಯ ಮಣ್ಣು ಮಾಲಿನ್ಯ ತಡೆಗಟ್ಟಲು ನಾವು ಕೈಗೊಂಡ ಕ್ರಮಗಳೇನು?
• ಪ್ಲಾಸ್ಟಿಕ ಬಳಕೆಯನ್ನು ನಿಲ್ಲಿಸಿದ್ದೇವೆಯೇ?


ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಪ್ರತಿ ವರ್ಷ ಅದೇ ಜಾಗದಲ್ಲಿ ಅದೇ Pot ದಲ್ಲಿ ದಾಖಲೆಗಳಿಗಾಗಿ ಸಸಿ ನೆಡುತ್ತಿದ್ದೆವೆಯೇ? ಎಂಬುದನ್ನು ಅತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮಗಾಗಿ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಈ ನೆಲ ಜಲಗಳನ್ನು ಉಳಿಸಿ, ಭವಿಷ್ಯತ್ವದ ಭವ್ಯ ನಿರ್ಮಾಣ ಮಾಡಬೇಕಿದೆ. ಆಧುನಿಕತೆಯ ಭರಾಟೆಯಲ್ಲಿ ನಾವು ನಿಂತ ನೆಲವನ್ನೇ ಚಿದ್ರಗೊಳಿಸುತ್ತಿರವ ನಾವು ಎಚ್ಚರಗೊಳ್ಳಬೇಕಿದೆ.
ಒಟ್ಟಾರೆ ಪರಿಸರ ದಿನಾಚರಣೆಯಿಂದ ಪ್ರತಿ ವರ್ಷ ಪರಿಸರದ ನೈರ್ಮಲ್ಯ ಆಗಬೇಕಿದೆ, ಮಾಲಿನ್ಯಕ್ಕೆ ಸಂಪೂರ್ಣ ಅಂತ್ಯ ಹಾಡಬೇಕಿದೆ. ನಾಡು ಕಾಡಾಗಿ ಶಾಲೆಗಳು ಹಸಿರು ಬನಗಳಲ್ಲಿ ಕಂಗೋಳಿಸಬೇಕಿದೆ. ಶಾಲೆಗಳು‌, ವಿದ್ಯಾರ್ಥಿಗಳು ಪರಿಸರ ರಕ್ಷಕರಾಗಿ ಬೆಳೆಯಬೇಕಿದೆ.


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

Leave a Reply

Back To Top