ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್
ಕಾಡಿ ಬೇಡಿ ಪಡೆಯುವುದಲ್ಲ ಪ್ರೇಮ
ನಿಂತ ನೀರಾಗಿ ಹೋಗುವುದಲ್ಲ ಪ್ರೇಮ
ಭಾವನೆಗಳ ತಡೆಯಲು ಸಾಧ್ಯವೆ
ನೋವುಂಡೂ ಬಾಗುವುದಲ್ಲ ಪ್ರೇಮ
ಸವಿಗನಸು ಮೂಡುವುದು ಕರಿ ನೆರಳಲ್ಲಿ
ಕರಾಳತೆಗೂ ಕರಗುವುದಲ್ಲ ಪ್ರೇಮ
ಹಾವಿನ ಮುಕುಟ ಮಣಿಯಂತೆ ಅದು
ಕಂಡ ಕಂಡವರಿಗೆ ಸಿಗುವುದಲ್ಲ ಪ್ರೇಮ
ಹೊಡೆದಾಟ ಮುಗಿಯುವುದಿಲ್ಲ “ಮಾಜಾ”
ಒತ್ತಾಯಕ್ಕೆ ಸೋಲುವುದಲ್ಲ ಪ್ರೇಮ