ಪ್ರಸ್ತುತ

ಹೊಸ ಮನ್ವಂತರ

woman in black long sleeve shirt using laptop computer

ಗಣೇಶಭಟ್ ಶಿರಸಿ

ಹೊಸ ಮನ್ವಂತರ ದಾರಿ ತೋರಲಿರುವ ಕೊರೋನಾ ಪಿಡುಗು


ಆಗಿದ್ದೆಲ್ಲ ಒಳ್ಳೆಯದಕ್ಕೇ, ಆಗುತ್ತಿರುವುದು ಒಳ್ಳೆಯದಕ್ಕೆ. ಮುಂದಾಗುವುದೂ ಒಳ್ಳೆಯದಕ್ಕೇ ಎಂಬುದು ಭಗವದ್ಗೀತೆಯ ಪಾಠ. ಕೊರೊನಾ ಪಿಡುಗಿನಿಂದ ಉಂಟಾಗಿರುವ ಆವಾಂತರವನ್ನು ಗಮನಸಿದಾಗ ಮುಂಬರುವ ದಿನಗಳಲ್ಲಿ ಆಗುವ ಒಳಿತನ್ನು ಸುಲಭದಲ್ಲಿ ಊಹಿಸಬಹುದು.


ಕೊರೊನಾ ಕುರಿತು ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳು ಭೀತಿಯನ್ನು ಹುಟ್ಟಿಸುತ್ತಿವೆ. ಕೊರೊನಾ ವೈರಾಣುವಿನಿಂದ ಸತ್ತವರ ಸಂಖ್ಯೆ ಮೂವತ್ತು ಸಾವಿರ ಮೀರಿದೆ. ಸೋಂಕಿತರ ಸಂಖ್ಯೆ ಐದು ಲಕ್ಷ ಮೀರುತ್ತಿದೆ ಇತ್ಯಾದಿ. ಯಾವುದೇ ರೋಗ ಇಡೀ ಪ್ರಪಂಚವನ್ನು ಕಾಡುತ್ತಿರುವದು ಇದು ಮೊದಲನೇ ಬಾರಿಯಂತೂ ಅಲ್ಲ.


ಜನವರಿ ೧೯೧೮ ರಿಂದ ಡಿಸೆಂಬರ್ ೧೯೨೦ ರವರೆಗೆ ಇಡೀ ಜಗತ್ತನ್ನು ಆವರಿಸಿ, ಅಂದಿನ ಜನಸಂಖ್ಯೆಯ ಕಾಲು ಭಾಗದಷ್ಟು ಜನರಿಗೆ ತಗಲಿ, ಸುಮಾರು ಐದು ಕೋಟಿ ಜನರ ಮರಣಕ್ಕೆ ಕಾರಣವಾದ ಸ್ಪೇನ್‌ನ ಪ್ಲೂ ಎಂದೇ ಕರೆಯಲ್ಪಡುವ , ಪ್ಲೂ ಇತಿಹಾಸದಲ್ಲಿ ದಾಖಲಾದ ಭೀಕರ ಸಾಂಕ್ರಾಮಿಕ ರೋಗವೆಂದು ಹೇಳಲಾಗುತ್ತದೆ. ಪ್ಲೂ ವೈರಾಣುವಿನ ಆಕ್ರಮಣ ಶೀಲತೆಗಿಂತ ಅಪೌಷ್ಠಿಕತೆ , ವೈದ್ಯಕೀಯ ಸೌಲಭ್ಯಗಳ ಕೊರತೆ, ನೈರ್ಮಲ್ಯದ ಅಭಾವ ಮುಂತಾದವುಗಳೇ ಸಾವಿಗೆ ಕಾರಣವೆಂದು ನಂತರ ನಡೆಸಿದ ಅಧ್ಯಯನದಿಂದ ಬಹಿರಂಗವಾಯಿತು.


ಇನ್‌ಪ್ಲೂಯೆಂಜಾ ಹಾಗೂ ಅಂತಹುದೇ ಜ್ವರಕ್ಕೆ ಕಾರಣವಾದ ವೈರಾಣುಗಳ ವಿವಿಧ ಪ್ರಬೇಧಗಳು ಮಾನವನನ್ನು ಕಾಡುತ್ತಲೇ ಇವೆ. ಇತ್ತೀಚಿನ ದಶಕಗಳಲ್ಲಿ ಜನರನ್ನು ಕಂಗೆಡಿಸುತ್ತಿರುವ ಮಂಗನಕಾಯಿಲೆ, ಚಿಕನ್‌ಗುನ್ಯ, ಸಾರ್ಸ್, ಹಂದಿಜ್ವರ ಮುಂತಾದ ಹಲವು ವಿಧದ ಅನಾರೋಗ್ಯವನ್ನುಂಟು ಮಾಡುವ ವೈರಾಣುಗಳಿಂದಲೇ ರೋಗಿಗಳ ಸಾವುಂಟಾಗುತ್ತದೆ ಎನ್ನುವುದಕ್ಕಿಂತ ಹೆಚ್ಚಾಗಿ ಇತರ ರೋಗಗಳಿಂದ ಪೀಡಿತರಾಗಿರುವವರೇ ಈ ಸೋಂಕು ತಗಲಿದ ನಂತರ ಮರಣ ಹೊಂದುವದು ಕಂಡು ಬಂದಿದೆ.


ಮಾಧ್ಯಮಗಳ ಅಬ್ಬರದ ಪ್ರಚಾರಕ್ಕೆ ಕಂಗೆಟ್ಟಿರುವ ಜನರನ್ನು ಇನ್ನಷ್ಟು ಬೆದರಿಸುವಂತೆ ಸರ್ಕಾರದ ನಡೆಯಿದೆ. ಕೊರೊನಾ ವೈರಸ್ ಇಂದು ಪ್ರಚಾರ ಪಡೆಯುತ್ತಿರುವಷ್ಟು ಆಕ್ರಮಣಕಾರಿಯೇ ಎಂಬುದನ್ನು ಅರಿಯಲು ವೆಬ್‌ಸೈಟ್ ಮೊರೆ ಹೋಗುವುದು ಉತ್ತಮ. ಹಲವು ದೇಶಗಳ ಆರೋಗ್ಯ ಇಲಾಖೆಯ ಅಧಿಕೃತ ವೆಬ್ ಸೈಟ್‌ಗಳು ತಮ್ಮ ದೇಶದಲ್ಲಿ ವಿವಿಧ ಕಾರಣಗಳಿಂದ ಮೃತರಾದವ ಅಂಕಿಅಂಶಗಳನ್ನು ಪ್ರಕಟಿಸುತ್ತವೆ. ಪ್ಲೂ ಸಂಬಂಧಿತ ವೈರಾಣು ಪೀಡೆಯಿಂದ ಮರಣ ಹೊಂದಿದವರು (Deaths Due to Flue Related Diseases)ಎಂದು ಅಂತರ್ಜಾಲದಲ್ಲಿ ದೇಶವಾರು ಹುಡುಕಿದರೆ ಕೆಳಗಿನ ಮಾಹಿತಿ ಲಭ್ಯವಾಗುತ್ತದೆ.


ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಶೀತಜ್ವರ ಸಂಬಂಧಿತ ರೋಗಗಳಿಂದ ಜಗತ್ತಿನಾದ್ಯಂತ ಪ್ರತಿ ವರ್ಷ ಆರರಿಂದ ಆರೂವರೆ ಲಕ್ಷ ಜನರು ಸಾಯುತ್ತಾರೆ.


ಪೃಥ್ವಿಯ ಉತ್ತರ ಗೋಲಾಧದಲ್ಲಿ ಅಕ್ಟೋಬರ್ ಕೊನೆಯವಾರದಿಂದ ಎಪ್ರಿಲ್ ಕೊನೆಯವರೆಗೂ ಚಳಿಗಾಲ ಇರುವುದರಿಂದ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿರುತ್ತದೆ.ಹೀಗಾಗಿ ಆ ಸಮಯದಲ್ಲಿ ಪಾಶ್ಚಾತ್ಯ ದೇಶದಲ್ಲಿ ಶೀತಜ್ವರ ಸಂಬಂಧಿತ ವೈರಾಣುಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತದೆ.


ಅಮೇರಿಕಾ ಸರ್ಕಾರದ ಪ್ರಕಟಣೆಯಂತೆ ೨೦೧೭ ರಲ್ಲಿ ಆ ದೇಶದಲ್ಲಿ ಮರಣಹೊಂದಿರುವ ಒಟ್ಟು ೨೮ ಲಕ್ಷ ಜನರಲ್ಲಿ ಪ್ಲೂ ಸಂಬಂಧಿತ ವೈರಾಣುವಿನಿಂದ ಸತ್ತವರ ಸಂಖ್ಯೆ ೫೫೬೭೨. ಈ ವಿಧದ ರೋಗಗಳಿಂದ ೨೦೧೯-೨೦ ರ ಸಾಲಿನಲ್ಲಿ ಸುಮಾರು ಎಂಬತ್ತು ಸಾವಿರ ಜನರು ಮರಣ ಹೊಂದಬಹುದೆಂದು ಅಲ್ಲಿನ ಸರ್ಕಾರ ಅಂದಾಜಿಸಿತ್ತು.


ಭಾರತ ಸರ್ಕಾರದ ರಾಷ್ಟ್ರೀಯ ರೋಗನಿಯಂತ್ರಣ ಕೇಂದ್ರ (National Center For Disease Control) ಪ್ರಕಟಿಸಿರುವ ಮಾಹಿತಿಯಂತೆ ಶೀತಜ್ವರ ಸಂಬಂಧಿ ವೈರಾಣುಗಳಿಂದ ೨೦೧೯ ರಲ್ಲಿ ೨೮೭೯೮ ಜನರಿಗೆ ಸೋಂಕು ತಗುಲಿದ್ದು ೧೨೧೮ ಜನ ಸತ್ತಿದ್ದಾರೆ. ಅದೇ ವರ್ಷ ಕರ್ನಾಟಕ ದಲ್ಲಿ ೨೦೩೦ ಜನರಿಗೆ ಸೋಂಕು ತಗುಲಿದ್ದು ೯೬ ಜನರು ಮೃತ ಪಟ್ಟಿದ್ದರು. ೨೦೧೫ ರಲ್ಲಿ ಇಡೀ ದೇಶದಲ್ಲಿ ೪೨೫೯೨ ಸೋಂಕಿತರಲ್ಲಿ ೨೯೯೧ ಜನರ ಮರಣ ಹೊಂದಿದ್ದರೆ, ಕರ್ನಾಟಕದಲ್ಲಿ ಸೋಂಕಿತರು ೩೫೬೫ ಹಾಗೂ ೯೪ ಸಾವಿನ ಸಂಖ್ಯೆ. ೨೦೧೭ ರಲ್ಲಿ ದೇಶ ಹಾಗೂ ಕರ್ನಾಟಕದಲ್ಲಿ ಅನುಕ್ರಮವಾಗಿ ಸೋಂಕಿತರು ೩೮೮೧೧ ಮತ್ತು ೩೨೬೦, ಸಾವು ೨೨೭೦ ಮತ್ತು ೧೫.


ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೀತಜ್ವರ ವೈರಾಣುವಿನ ಕುಟುಂಬಕ್ಕೆ ಸೇರಿದ ಕೊರೊನಾದಿಂದ ಆಗುತ್ತಿರುವ ಅನಾಹುತಕ್ಕಿಂತ ಅದರ ವೈಭವೀಕರಣವೇ ಹೆಚ್ಚು ಎಂಬುದು ವೇದ್ಯವಾಗುತ್ತದೆ. 24×7 ರ ಸುದ್ದಿ ವಾಹಿನಿಗಳು, ಜಾಗತಿಕ ಆರ್ಥಿಕ ಷಡ್ಯಂತ್ರ, ಮಾಧ್ಯಮ ಪ್ರತಿನಿಧಿಗಳಲ್ಲಿ ಅಧ್ಯಯನದ ಕೊರತೆಗಳೇ ಇವಕ್ಕೆ ಮುಖ್ಯ ಕಾರಣಗಳು.


ಕಳೆದ ವಾರ ಅಂದರೆ ೧೯-೦೩-೨೦೨೦ ರಂದು ಬ್ರಿಟನ್ ಸರ್ಕಾರ ಕೊರೊನಾ ವೈರಾಣುವಿನ ತೀವ್ರತೆಯ ಕುರಿತಾದ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿತು. ಅಲ್ಲಿನ ತಜ್ಞರ ತಂಡವು ಕೆಲವು ತಿಂಗಳುಗಳ ಹಿಂದೆ ನೀಡಿದ ತಮ್ಮ ಅಭಿಪ್ರಾಯವನ್ನು ಪುನರ್ವಿಮರ್ಶಿಸಿ , ಕೊರೊನಾ ವೈರಸ್ ತಾವು ಊಹಿಸಿದಷ್ಟು ಆಕ್ರಮಣಕಾರಿ ಮತ್ತು ಅಪಾಯಕಾರಿಯಲ್ಲವೆಂದು ಘೋಷಿಸಿತು. ಬ್ರಿಟನ್ ಪ್ರಧಾನಿಗೆ ಸೋಂಕು ತಗಲಿರುವುದನ್ನೇ ವೈಭವೀಕರಿಸುತ್ತಿರುವ ಮಾಧ್ಯಮದವರಿಗೆ ಈ ವರದಿ ಕಾಣಲೇ ಇಲ್ಲ.


ದೇಶದಲ್ಲಿ ವಿಧಿಸಿರುವ ಲಾಕ್ ಡೌನ್ ನಿಂದ ಅತಿ ಹೆಚ್ಚು ತೊಂದರೆಗೊಳಗಾದವರೆಂದರೆ ದೈನಂದಿನ ದುಡಿಮೆಯಿಂದ ಬದುಕು ಸಾಗಿಸುವವರು. ನಿಲ್ಲಲು ನೆಲೆ ಇಲ್ಲದೆ, ದುಡಿಮೆಯ ಅವಕಾಶ ಸಿಗದೇ, ಊಟ, ತಿಂಡಿಗಾಗಿ ಪರದಾಡುವ ಬದಲು ನಗರಗಳಿಂದ ತಮ್ಮ ಗ್ರಾಮಗಳಿಗೆ ಮರು ವಲಸೆ ಹೊರಟಿದ್ದಾರೆ. ಕೊರೊನಾ ರೋಗದ ಭಯಕ್ಕಿಂತ ಹೆಚ್ಚಾಗಿ ಹಸಿವು ಅವರನ್ನು ಕಾಡುತ್ತಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ನೂರಾರು ಕಿ.ಲೋ ಮೀಟರ್ ನಡೆದು ತಮ್ಮ ಊರಿನತ್ತ ಸಾಗುತ್ತಿದ್ದಾರೆ. ದುಡಿಯಲು ಬಂದಿರುವ ಊರಿನಲ್ಲಿ ಇದ್ದು, ಹಸಿವೆಯಿಂದ ಸಾಯುವ ಬದಲಿಗೆ ತಮ್ಮ ಊರಿಗೆ ತಲ್ಪಿ ರೋಗದಿಂದ ಸತ್ತರೂ ಚಿಂತೆಯಿಲ್ಲವೆಂದೂ ಗೋಳಾಡುತ್ತಿರುವ ಜನಸಾಮಾನ್ಯರ ಸಂಕಷ್ಟ ಮಾಧ್ಯಮ ಸರ್ವಜ್ಞರಿಗೆ, ರಾಜಕಾರಣಿಗಳಿಗೆ ಅರ್ಥವಾಗುವುದಿಲ್ಲ. ಮನೆಯಲ್ಲಿ ಅಗತ್ಯ ವಸ್ತುಗಳಿಲ್ಲದೇ , ಮಾರುಕಟ್ಟೆಯಲ್ಲಿ ಲಭ್ಯವಾಗದಿರುವ ಪರಿಸ್ಥಿತಿಯಲ್ಲಿ ಜನರು ನಿಸ್ಸಹಾಯಕರಾಗಿ ಬಾಗಿಲು ಮುಚ್ಚಿರುವ ಮಾರುಕಟ್ಟೆಯಲ್ಲಿ ಕಾಣುವುದನ್ನು ನಮ್ಮ ಜನಕ್ಕೆ ಬುದ್ದಿಯೇ ಇಲ್ಲ ವೆಂದು ಕೂಗಾಡುತ್ತಿರುವ ಮಾಧ್ಯಮ ಪ್ರಭೃತಿಗಳು ಮನುಷ್ಯತ್ವವನ್ನು ಮರೆತಿದ್ದಾರೆಯೇ ಎಂದು ಎನಿಸುತ್ತದೆ.


ದೇಶದ ಲಾಕ್ ಡೌನ್‌ಗೆ ಜನರು ಸ್ಪಂದಿಸುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ ಕೊರೊನಾದಿಂದ ಉಂಟಾಗಬಹುದಾದ ಸಾವಿನ ಭೀತಿ (ಈ ಭೀತಿ ಹುಟ್ಟ್ಟಿಸಲು ಮಾಧ್ಯಮಗಳೇ ಕಾರಣ) ಹಾಗೂ ಪೋಲೀಸ್ ಲಾಠಿಯ ಹೆದರಿಕೆ. ಬೀದಿಯಲ್ಲಿ ಜನರ ಸಂಚಾರ ವಿರಳವಾಗಿರುವುದನ್ನೇ ಲಾಕ್ ಡೌನ್ ಯಶಸ್ಸು ಎಂದು ಬಣ್ಣಿಸುವವರಿಗೆ ಕಟಾವಿಗೆ ಬಂದಿರುವ ಬೆಳೆ ಹೊಲದಲ್ಲೇ ಕೊಳೆಯುತ್ತಿರುವುದನ್ನು ಮೌನವಾಗಿ ಕಾಣುವ ರೈತನ ಹತಾಶೆ, ಅಂಗಡಿ ಬಾಗಿಲು ತೆರೆಯಲಾರದೇ ಪರಿತಪಿಸುತ್ತಿರುವ ಸಣ್ಣ ಪುಟ್ಟ ಅಂಗಡಿಕಾರರು ಹಾಗೂ ಉದ್ಯಮಿಗಳ ಹತಾಶೆ ಅರ್ಥವಾಗುವುದಿಲ್ಲ..


ಅಮೇರಿಕಾ ಮತ್ತು ಪಾಶ್ವಾತ್ಯ ದೇಶಗಳನ್ನು ಆರ್ಥಿಕವಾಗಿ ಮಣಿಸಿದ ಚೀನಾ ತೋಡಿದ ಖೆಡ್ಡಾಕ್ಕೆ ಆ ದೇಶಗಳು ಬಿದ್ದಿವೆ. ಪಾಶ್ಚಾತ್ಯ ದೇಶಗಳ ಅಂಧಾನುಕರಣೆ ಮಾಡಲು ಹೋಗಿ ಭಾರತದ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಕಬ್ಬಿಣದ ಪರದೆಯ ಹಿಂದೆ ಕಾರ್ಯನಿರ್ವಹಿಸುತ್ತಾ, ತನ್ನದೇ ಆದ ಅಂತರ್ಜಾಲ ವ್ಯವಸ್ಥೆಯನ್ನು ಹೊಂದಿರುವ ಚೀನಾ ದೇಶವು , ತನ್ನ ದೇಶದಲ್ಲಿ ಕೊರೊನಾ ಪೀಡಿತವಾದ ಪ್ರದೇಶವನ್ನು ಇಡೀ ಜಗತ್ತಿಗೆ ತೆರೆದು ತೋರಿಸಿತು. ಸರ್ಕಾರದ ನಡೆ ವಿರೋಧಿಸುವ ಸಾವಿರಾರು ಜನರನ್ನು ಪ್ರತಿದಿನ ಮಟ್ಟ ಹಾಕುತ್ತಿದ್ದರೂ ಬಾಹ್ಯ ಜಗತ್ತಿಗೆ ಗುಟ್ಟು ಬಿಟ್ಟು ಕೊಡದ ಚೀನಾ , ರೋಗಗ್ರಸ್ಥರ ಕೆಲವರ ಸಾವನ್ನು ಇಡೀ ಜಗತ್ತಿಗೆ ಪ್ರದರ್ಶಿಸತೊಡಗಿತು.


ಕೊರೊನಾ ನಿಯಂತ್ರಣಕ್ಕಾಗಿ ಬಲಾತ್ಕಾರದ ಲಾಕ್ ಡೌನ್ ಮಾಡುತ್ತಿದ್ದೇವೆಂದು ಮಾಧ್ಯಮಗಳೆದುರು ಚೀನಾ ಬಿಂಬಿಸಿತು. ಮನೆಮನೆಗಳಲ್ಲೂ ಸಾಮಾಜಿಕ – ಅಂತರ ಕಾದುಕೊಳ್ಳಲು ಕೆಲವೆಡೆ ಪೋಲೀಸ್ ಬಲದಿಂದ ಪ್ರಯತ್ನಿಸುತ್ತಿರುವುದಾಗಿಯೂ ತೋರಿಸಲಾಯಿತು.


ಇದಾದ ಕೆಲವೇ ವಾರಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆಯೆಂದು ಘೋಷಿಸಲಾಯಿತು. ಸಾಕಷ್ಟು ಪೂರ್ವತಯಾರಿಯಿಂದ ಚೀನಾ ನಡೆಸಿದ ಈ ನಾಟಕದ ಖೆಡ್ಡಾಕ್ಕೆ ಪಾಶ್ಚಾತ್ಯ ದೇಶಗಳು ಸುಲಭವಾಗಿ ಬಿದ್ದವು. ಅಷ್ಟರಲ್ಲಾಗಲೇ ಕೊರೊನಾ ಪಾಶ್ಚಾತ್ಯ ದೇಶಗಳಲ್ಲಿ ಹಬ್ಬಿದ್ದರಿಂದ ( ಪ್ರತಿ ವರ್ಷ ಚಳಿಗಾಲದಲ್ಲಿ ವ್ಯಾಪಕವಾಗುವ ಶೀತಜ್ವರ ರೀತಿಯ ರೋಗಗಳಂತೆ) ಅವು ಕೂಡಾ ಚೀನಾದ ನಾಟಕವನ್ನು ನಂಬಿ ಲಾಕ್ ಡೌನ್ ಘೋಷಿಸಿಕೊಂಡವು. ಇದರ ಪರಿಣಾಮದಿಂದ ಆರ್ಥಿಕ ಹಿನ್ನೆಡೆಯಾಗಿ ಶೇರು ಮಾರುಕಟ್ಟೆ ಕುಸಿಯತೊಡಗಿತು.


ಈ ಸನ್ನಿವೇಶವನ್ನು ನಿರೀಕ್ಷಿಸಿದ್ದ ಚೀನಾ ತನ್ನ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಬಹುರಾಷ್ಟ್ರಿಯ ಕಂಪನಿಗಳ ಶೇರನ್ನು ಖರೀದಿಸಿ ತನ್ನ ಹತೋಟಿಗೆ ತೆಗೆದುಕೊಂಡಿತು.


ಸಾಮಾಜಿಕವಾಗಿ, ಆರ್ಥಿಕವಾಗಿ, ಪಾಶ್ಚಾತ್ಯ ದೇಶಗಳಿಂದ ತೀರಾ ಭಿನ್ನವಾಗಿರುವ ಭಾರತವೂ ಲಾಕ್ ಡೌನ್ ಘೋಷಿಸುವ ಪ್ರಮಾದ ಎಸಗಿ ಜನಸಾಮಾನ್ಯರನ್ನು ಹಾಗೂ ದೇಶದ ಅರ್ಥವ್ಯವಸ್ಥೆಯನ್ನು ಸಂಕಷ್ಟಕ್ಕೆ ದೂಡಿತು. ಇಲ್ಲಿ ಕೂಡಾ ಶೇರುಮಾರುಕಟ್ಟೆ ಕುಸಿತ ಕಂಡಿತು. ಬೆರಳೆಣಿಕೆಯ ಶ್ರೀಮಂತರು ಈ ಪರಿಸ್ಥಿತಿಯ ಲಾಭಪಡೆದು, ಸಾರ್ವಜನಿಕರ ಕೈ ಸೇರಿದ್ದ ತಮ್ಮದೇ ಕಂಪನಿಯ ಷೇರುಗಳನ್ನು ಅಗ್ಗದಲ್ಲಿ ಖರೀದಿ ಮಾಡಿ ತಮ್ಮ ಪಾರಮ್ಯ ಮತ್ತು ನಿಯಂತ್ರಣ ಹೆಚ್ಚಿಸಿಕೊಂಡಿದ್ದಾರೆ.


ಕೊರೊನಾ ಭಯದಿಂದ ಹೊರಬಂದು ಪುನಃ ದೇಶದ ಹಾಗೂ ವೈಯಕ್ತಿಕ ಆರ್ಥಿಕತೆಯನ್ನು ಬಲಪಡಿಸುವುದು ಈಗ ಅನುಸರಿಸುತ್ತಿರುವ ಅಭಿವೃದ್ಧಿಯ ಮಾದರಿ ಎಂದರೆ ಬಂಡವಾಳವಾದ ಆಧಾರಿತ ಕೇಂದ್ರೀಕೃತ ಅರ್ಥನೀತಿಯನ್ವಯ ಸಾಧ್ಯವಾಗದ ಕೆಲಸ. ಈ ನಿರಾಶಾದಾಯಕ ಸ್ಥಿತಿಯಲ್ಲಿ ಅಭಿವ್ಯದ್ಧಿಯ ಪರ್ಯಾಯ ಮಾದರಿಗಳ ಕುರಿತು ಚಿಂತಿಸುವುದು ಅನಿವಾರ್ಯವಾಗಲಿದೆ.


ಉದಾಹಣೆಗಾಗಿ ನಗರಗಳಿಂದ ಕಾರ್ಮಿಕರ ಮರು ವಲಸೆಯಿಂದಾಗಿ ಗ್ರಾಮೀಣ ಭಾಗದಲ್ಲಿ ನಿರುದ್ಯೋಗದ ಹೊಸ ಸಮಸ್ಯೆ ಎದುರಾಗಲಿದೆ. ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಗಳಿಂದ ಇದು ಪರಿಹಾರ ಕಾಣದು. ಪ್ರಾದೇಶಿಕ ಆರ್ಥಿಕ ಸ್ವಾವಲಂಬನೆ ಸೂತ್ರವೇ ಇದಕ್ಕೆ ಪರಿಹಾರ. ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಬಲ್ಲ ಪ್ರದೇಶವನ್ನು ಗುರ್ತಿಸಿ ( ಇದು ಒಂದಿಡೀ ರಾಜ್ಯವಾಗಬಹುದು ಅಥವಾ ಒಂದೇ ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ಘಟಕಗಳೂ ಆಗಬಹುದು) ಅಲ್ಲಿನ ಪ್ರತಿಯೋರ್ವ ವ್ಯಕ್ತಿಗೂ ಫಲಪ್ರದವಾದ ಉದ್ಯೋಗ ಸೃಷ್ಟಿಸುವ ಸಲುವಾಗಿ ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಉದ್ದಿಮೆ ಸ್ಥಾಪಿಸಲು ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು. ದೆಹಲಿ, ಬೆಂಗಳೂರು, ಚೆನ್ನೈಗಳಲ್ಲಿ ಕೇಂದ್ರೀಕೃತವಾಗಿರುವ ಉದ್ದಿಮೆಗಳನ್ನು ದೇಶದ ಉದ್ದಗಲಕ್ಕೂ ವಿಸ್ತರಿಸುವ ಕುರಿತು ಯೋಚಿಸಿದಾಗ ಮಾತ್ರ ಸಮಸ್ಯೆಗೆ ಪರಿಹಾರ ದೊರಕುತ್ತದೆ.


“ಕರ್ನಾಟಕದ ಉದ್ಯೋಗ ಕನ್ನಡಿಗರ ಹಕ್ಕು”, “ಕನ್ನಡಿಗರೆಲ್ಲರಿಗೂ ಕರ್ನಾಟಕದಲ್ಲೇ ಉದ್ಯೋಗ” ಎಂಬ ಈಗಾಗಲೇ ಪ್ರಾರಂಭವಾಗಿರುವ ಅಭಿಯಾನ ಇಡೀ ದೇಶವನ್ನು ವ್ಯಾಪಿಸಲಿದೆ. ಬಿಹಾರಿಗಳಿಗೆ ಬಿಹಾರದಲ್ಲೇ ಉದ್ಯೋಗ ಓಡಿಸ್ಸಿಗರಿಗೆ ಓಡಿಶಾದಲ್ಲೇ ಉದ್ಯೋಗ, ಮುಂತಾದ ಪ್ರಾದೇಶಿಕ ಆರ್ಥಿಕ ಸ್ವಾಯತ್ತತೆಯ ಚಳವಳಿಗಳು ಬಹುಬೇಗ ರೂಪುಗೊಳ್ಳಲಿವೆ.


ಜಗತ್ತಿನ ಬಹಳಷ್ಟು ರಾಷ್ಟ್ರಗಳು ಲಾಕ್ ಡೌನ್ ಅನುಸರಸುತ್ತಿರುವುದರಿಂದಾಗಿ ಆಯಾತ ನಿರ್ಯಾತಗಳಿಗೆ ತಡೆ ಬಿದ್ದಿದೆ. ಉದಾಹರಣೆಗಾಗಿ ಭಾರತ ಮತ್ತು ವಿಯೇಟ್ನಾಂ ಅಕ್ಕಿಯ ನಿರ್ಯಾತಕ್ಕೆ ತಡೆ ಒಡ್ಡಿವೆ. ಆಹಾರ ಪದಾರ್ಥಗಳ ಆಯಾತವನ್ನೇ ಅವಲಂಬಿಸಿದ ದೇಶಗಳು ಇಂತಹ ಪರಿಸ್ಥಿತಿಯಲ್ಲಿ ಸಂಕಷ್ಟ ಎದುರಿಸಲಿವೆ. ಇದಕ್ಕೆ ಪರಿಹಾರವೆಂದರೆ , ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ವಸ್ತ್ರ, ವಸತಿ, ಶಿಕ್ಷಣ, ಔಷದೋಪಚಾರಗಳ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸುವುದು. ಚಿಕ್ಕಪುಟ್ಟ ದೇಶಗಳು, ದೇಶದ ಹಂತದಲ್ಲಿ ಸ್ವಾವಲಂಬಿ ಯಾಗುವ ರೀತಿಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತವೆ. ಆದರೆ ಭಾರತದಂತಹ ವೈವಿದ್ಯಮಯ ದೇಶದಲ್ಲಿ ಜೀವನದ ಕನಿಷ್ಠ ಅಗತ್ಯತೆಗಳ ಉತ್ಪಾದನೆಯ ಸ್ವಾವಲಂಬನೆಯನ್ನು ಪ್ರಾದೇಶಿಕ ಹಂತದಲ್ಲೇ ಸಾಧಿಸಬೇಕಾಗುತ್ತದೆ.


ಪ್ರಕೃತಿ ಎಂದೂ ಪಕ್ಷಪಾತಿಯಲ್ಲ, ಪೃಥ್ವಿಯ ಎಲ್ಲೆಡೆಗೂ ಸಂಪನ್ಮೂಲಗಳನ್ನು ನೀಡಿದೆ ಹಾಗೂ ಅವುಗಳಲ್ಲಿ ವೈವಿಧತೆಯನ್ನು ತುಂಬಿದೆ. ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆಯನ್ನು ಗುರ್ತಿಸಿ, ಅವುಗಳನ್ನು ಸೂಕ್ತ ವಿಧಾನದಲ್ಲಿ ಬಳಸಿ, ಆ ಪ್ರದೇಶದ ವಾಸಿಗಳೆಲ್ಲರಿಗೂ ಉತ್ತಮವಾದ ಬದುಕು ಕಟ್ಟಿಕೊಳ್ಳುವ ರೀತಿಯನ್ನೂ ಕಂಡುಕೊಳ್ಳುವ ಬುದ್ಧಿಮತ್ತೆಯನ್ನು ಮಾನವನಿಗೆ ನೀಡಿದೆ. ನಿಸರ್ಗದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಮಾನವನ ಅಹಂಕಾರ ಚಿಕ್ಕ ಅಣು ಕೊರೊನಾ ವೈರಸ್ ಮುಖೇನ ಧೂಳೀಪಟವಾಗಿದೆ. ಇನ್ನು ಮುಂದಾದರೂ ಪರಿಸರ ಪೂರಕ ಅಭಿವೃದ್ಧಿ ಪಥದಲ್ಲಿ ನಡೆಯುವಂತೆ ಎಚ್ಚರಿಕೆಯನ್ನು ನೀಡಿದೆ.


ಕೊರೊನಾ ವೈರಾಣು ಹರಡುವುದು ಸಂಪರ್ಕ, ಸ್ಪರ್ಶ, ಗಾಳಿಯ ಮೂಲಕ ಅಂದರೆ ಸ್ಥೂಲ ವಾಹಕಗಳ ಮೂಲಕ. ಇದಕ್ಕಿಂತ ಭಿನ್ನವಾದ, ಶಬ್ದಗಳ ಮೂಲಕ ಹರಡಬಲ್ಲ, ವಿಚಾರಗಳ ಮುಖೇನ ಪ್ರಸಾರಗೊಳ್ಳಬಲ್ಲ, ಅಣುಗಳ ಕುರಿತು ಆಧ್ಯಾತ್ಮದ ಅನುಭಾವಿಗಳು ಹೇಳಿದ್ದಾರಾದರೂ ಜಗತ್ತು ಇವುಗಳನ್ನು ಇನ್ನೂ ಎದುರಿಸಿಲ್ಲ. ಅಣುವಿನ ಸ್ಥೂಲ ರೂಪಕ್ಕೇ ತತ್ತರಿಸಿರುವ ಮಾನವ ಸಮಾಜ ಸೂಕ್ಷ್ಮ ರೂಪದ ಅಣುವಿನ ಆಕ್ರಮಣವನ್ನು ಎಂತು ಎದುರಿಸೀತು?


ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು ಜಾಗತಿಕ ಸರ್ಕಾರ ಸ್ಥಾಪನೆ ಅನಿವಾರ್ಯವಾಗಲಿದೆ. ೧೯೪೫ ರಲ್ಲಿ ಪ್ರಾರಂಭವಾದ ವಿಶ್ವಸಂಸ್ಥೆಯ ಸ್ಥಾನದಲ್ಲಿ ಪ್ರಬಲವಾದ ಜಾಗತಿಕ ಸರ್ಕಾರ ಬರಲಿದೆ. ಅದರ ರೂಪುರೇಷೆಯನ್ನು ದಾರ್ಶನಿಕ ಶ್ರೀ ಪ್ರಭಾತ ರಂಜನ್ ಸರ್ಕಾರರು ೧೯೫೮ ರಲ್ಲೇ ನೀಡಿದ್ದಾರೆ.
ಕೊರೊನಾ ಪಿಡುಗಿನಿಂದಾಗಿ ಮಾನವೀಯತೆಯ ಜಾಗತೀಕರಣ, ಆರ್ಥಿಕತೆಯ ಪ್ರಾದೇಶಿಕರಣ (Globalise Humanity, Localise Economy)ಎಂಬ ಚಿಂತನೆಗೆ ಬಲ ಬರಲಿದೆ.

**********

Leave a Reply

Back To Top