ಡಾ.ಶಿವಕುಮಾರ್ ಕಂಪ್ಲಿಯವರ ಅನುವಾದ ಕಥೆ-ಕರುಳು ಸಂಬಂಧ

ಅನುವಾದ ಸಂಗಾತಿ

ಕರುಳು ಸಂಬಂಧ

ತೆಲುಗು ಮೂಲ: ವಿರಂಚಿ,
ಕನ್ನಡಕ್ಕೆ :ಡಾ.ಶಿವಕುಮಾರ್ ಕಂಪ್ಲಿ
.

: ನಿರ್ಜನವಾದ ಆ.. ಆಸ್ಪತ್ರೆಯಾಚೆಯ ವಾರ್ಡ ಹೊರಗಿನ ಬೆಂಚ್ ಮೇಲೆ ಕುಳಿತು ರಾಮಾರಾವ್ ಆಲೋಚಿಸುತ್ತಿದ್ದಾನೆ. ಹಳೆಯ ಬೆಂಚ್ ಮೇಲಿಂದ ಎದ್ದು ವರಾಂಡದೊಳಗೆ ನಿರಾಸೆ ಮತ್ತು ಜಿಗುಪ್ಸೆಗಳಿಂದ ಎರಡು ಮೂರು ಬಾರಿ ಆಕಡೆ ಈ ಕಡೆ ಓಡಾಡುತ್ತಿದ್ದಾನೆ. ಆತನ ನಿಸ್ಸಹಾಯಕತೆಯು ಆತನಿಗೇ ಅಸಹ್ಯ ಹುಟ್ಟಿಸುವಂತಿದೆ!. ತನ್ನ ಜೀವನದಲ್ಲಿ ಇಂತಹ ಕಷ್ಟ ಬರುತ್ತದೆಂದು ಆತ ಯಾವತ್ತೂ ಯೋಚಿಸಿರಲಿಲ್ಲ.
   “ ಸಾರ್! ಡಾಕ್ಟರ್ ವಿನಾಯಕ್ ಕರಿತಿದಾರೆ” ಎಂಬ ನಿರ್ಭಾವದ ಸಿಸ್ಟರ್ ಕೂಗು ಆತನನ್ನ ಇಹಲೋಕಕ್ಕೆ ತಂದು ಕೆಡವಿತು.ದುಗುಡತೆಯ ಚುಂಗು ಹಡಿದು ಸಿಸ್ಟರ್’ಳನ್ನೇ ಆತ ಹಿಂಬಾಲಿಸಿದ. ರೂಮಿನೊಳಗೆ ಬಂದವನೇ.. ಡಾಕ್ಟರ್ ಗೆ ನಮಸ್ಕರಿಸಿದ. ಅವರು ಕುಳಿತುಕೋ ಎಂಬಂತೆ ಕಂಗಳಲ್ಲೇ..ಸಂಜ್ಞೆ ಮಾಡಿದರು!
  “ ನೋಡಿ ರಾಮಾರಾವ್; ಪೇಷಂಟ್ ಕಂಡೀಷನ್ ಬಗ್ಗೆ ನಿಮಗೆ ಈಗಾಗಲೇ ತಿಳಿಸಿದ್ದೇನೆ. ಬೇಗನೇ ಕಿಡ್ನಿ ಟ್ರಾನ್ಸಪ್ಲೆಂಟ್ ಮಾಡಬೇಕು.ಫರ‍್ಮಾಲಿಟೀಸ್ ಎಲ್ಲಾ ನಿಮಗೆ ಗೊತ್ತಲ್ವಾ…? ಡಯಾಲಿಸಿಸ್ ಮಾಡಬೇಕು! ಎರಡು.. ಮೂರು… ಡಯಾಲಿಸಿಸ್ ಅಂದ್ರೆ ಅವರ ದೇಹ ತಡಕೋಬೇಕಲ್ಲ? ಮೂತ್ರ ಪಿಂಡದ ರೋಗಲಕ್ಷಣವೂ ಬಹಳ ಏರುತ್ತಿದೆ!.” ಎಂದರು.
  ಧರೆಗಿಳಿದು ಹೋದ ರಾಮಾರಾವ್! ಡಾಕ್ಟರ್ ಮಾತುಗಳಿಗೆ ಯಾಂತ್ರಿಕವಾಗಿಯೇ.. ತಲೆಯಾಡಿಸಿದರು.
‘ಯಾರಾದರೂ ಕಿಡ್ನಿ ದಾನಿಗಳು ಇದ್ದಾರೇನ್ರಿ !?’
ಡಾಕ್ಟರ್ ಪ್ರಶ್ನೆಗೆ ರಾಮಾರಾವ್ ದಾನಿಗಳು ಇರುವಂತೆಯೂ… ಇಲ್ಲಾ ಎಂಬಂತೆಯೂ ತಲೆಯಾಡಿಸಿದ!!
ಆ ಉತ್ತರವನ್ನೇ ಲೆಕ್ಕಿಸದ ಡಾಕ್ಟರ್… “ಅದೇ..ಇಂದ್ರಜಾ ಅವರು ; ನಿಮ್ಮ ಮಗಳು, ದಾನ ಕೊಡ್ತಾಳೆ ಎಂದು ಹೆಳಿದ್ರಲ್ಲಾ!?.. ಕೇಳಿದರು ಡಾಕ್ಟರ್.
“ ಹಾ… ಹೌದು! ಹೌದೌದು… ಆದರೆ.. ವಿಷಾದದಿಂದಲೇ.. ಹೊಯ್ದಾಡಿದರು ರಾಮಾರಾವು.
 “ನೋಡ್ರಿ, ಟಿಷ್ಯೂ ಮ್ಯಾಚಿಂಗ್ ಮೊದಲಾದುವುಗಳನ್ನ ನಾವು ನೋಡಿಕೊಳ್ತೇವೆ. ನೀವು ಬೇಗನೇ ಆ ಕಿಡ್ನಿ ಏರ್ಪಾಡು ಮಾಡ್ರಿ! “ ಓ.ಕೆ.ನಾ…?” ಅಂತ ಹೇಳಿದರು. ಇನ್ನು ಹೊರಡಿ ಎಂಬಂತೆ.
ತಲೆಯಾಡಿಸಿ ಯಾಂತ್ರಿಕವಾಗಿ ಮೇಲಕ್ಕೆದ್ದರು ರಾಮಾರಾವು.
ನಿಜಕ್ಕೂ ರಾಮಾರಾವ್ ಅವರು, ಡಾಕ್ಟರ್ ಕೋಣೆಯೊಳಗಿಂದ ಹೊರಬಂದರೇ ವಿನಃ, ಆಲೋಚನೆಗಳ ಪ್ರವಾಹದೊಳಗಿಂದ ಹೊರಬರಲೇ ಇಲ್ಲ…!
               *   *    *
   ಅವು ಕಾಡುವ ಕಾಲೇಜಿನ ಸುಂದರ ದಿನಗಳು.
 ಜೇನು ತುಂಬಿದ ಹದಿಹರೆಯದ ವಯಸ್ಸು.
ಪ್ರೇಮವೆಂಬ ಹೂ ಮುಡಿದ ಪರ್ವಕಾಲ.
ಆ… ದಿನಗಳಲ್ಲಿ ಆಕೆಯ ಜೀವಕ್ಕೆ ಜೀವವಾಗಿ, ಒಲಿದು, ಪಲಕರಿಸಿ, ಪ್ರೇಮಿಸಿ, ದೊಡ್ಡವರನ್ನ ಎದುರಿಸಿ, ಅವರನ್ನ ಒಪ್ಪಿಸಲು ಹೋರಾಡಿ, ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದನು! ರಾಮಾರಾವ್’ ಗೆ ಜೊತೆಯಾದ ಅದೇ ಇಂದ್ರಜಾಳಿಗೆ… ಈ ದಿನ ಎರಡು ಕಿಡ್ನಿಗಳು ಫೇಲಾಗಿವೆ!
     ತನ್ನ ಜೀವದ ಇಂದ್ರಜಾ ಇಂದು ಬದುಕಲಿಕ್ಕಾಗಿ ಮಾಡುತ್ತಿರುವ ಹೋರಾಟದ ಎದುರು ಕೇವಲ ಮೌನ ಪ್ರೇಕ್ಷಕನಂತೆ ಕುಳಿತು ಬಿಟ್ಟಿದ್ದಾರೆ ರಾಮಾರಾವ್!
    ಎಲ್ಲರ ಕಷ್ಟಗಳಿಗೂ ಬೆನ್ನು ತಿರುಗಿಸದೆ ಆತುಕೊಳ್ಳುತ್ತಿದ್ದ ಐದು ಅಡಿ ಆರು ಅಂಗುಲಗಳ ಆ ಚಂದನದ ಗೊಂಬೆ ಇಂದು ಆಹಾರವಿಲ್ಲದೆ ಕುಗ್ಗಿ ಶುಷ್ಕವಾಗಿ,ನೀರಸವಾಗಿದ್ದಾಳೆ. ಯಾವಾಗಲೂ ಪಾದರಸದಂತಿದ್ದವಳು ಈಗ ಅಸಹಾಯಕಳಾಗಿ ಮಂಚಕ್ಕೇ ಅಂಟಿಕೊಂಡಿದ್ದಾಳೆ.
    ಇಂದ್ರಜಾ ಇಂದು ಬೆಳಿಗ್ಗೆಯೇ…


    ತೀರಾ ಕ್ಷೀಣ ಸ್ವರದಲ್ಲಿ, ಅಸ್ಪಷ್ಟ ತುಟಿಗಳ ಚಲನೆಯಿಂದ “ಏನ್ರೀ!.. ನನಗೆ ಏಕೋ ಬದುಕಬೇಕೆನಿಸಿದೆರೀ…!!”ಎಂದ ಅವಳ ಮಾತುಗಳಂತೂ… ರಾಮಾರಾವ್ ಗುಂಡಿಗೆ ಸೀಳಿಹಾಕಿವೆ. ನೀರ ಸುಳಿಯಲ್ಲಿ ಸಿಕ್ಕು ಮುಳುಗುತ್ತಿರುವ ಅಸಹಾಯಕ ಜೀವಿಯ ಆರ್ತನಾದವನ್ನು ಈಜು ಬಾರದವನು ಕೇಳಿದರೆ? ಹೇಗೆ ಸಂಕಟವಾಗುತ್ತದೋ… ಹಾಗಾಗಿದೆ ರಾಮಾರಾವ್ ಸ್ಥಿತಿ.
   ಜೀವಕ್ಕೆ ಜೀವವಾದ ತನ್ನವಳನ್ನು ರಕ್ಷಿಸಿಕೊಳ್ಳಲು ತನ್ನ ಕಿಡ್ನಿಯನ್ನಾದರೂ ಕೊಟ್ಟು ಉಳಿಸಿಕೊಳ್ಳೋಣವೆಂದರೆ…!
 ಡಾಕ್ಟರ್ “ರಾಮಾರಾವ್ ನಿಮ್ಮ ಟಿಷ್ಯೂ ಮ್ಯಾಚಿಂಗ್ ಆಗದು” ಎಂದುಬಿಡಬೇಕೆ!?
 ಇಬ್ಬರದೂ ಅಂತರ್ಜಾತಿ ವಿವಾಹವಾದ್ದರಿಂದ, ಇಬ್ಬರ ತಂದೆ ತಾಯಿ ಮತ್ತು ಸಹೋದರರು ದ್ವೇಷ ಸಾಧಿಸುತ್ತಾ… ದೂರವಾಗಿಬಿಟ್ಟಿದ್ದಾರೆ!
ಹೆಣ್ಣು ಜೀವ ಇಂದ್ರಜಾಳ ತಾಯಿಯ ಮನಸ್ಸು ಮಾತ್ರ ಒಳಗೊಳಗೇ..ವೇದನೆಯನ್ನ ಅನುಭವಿಸಿದರೂ, ಏನೂ ಮಾಡಲಾರದೆ ನಿಸ್ಸಹಾಯಕಳಾಗಿದ್ದಾಳೆ. ಆದ್ದರಿಂದ ರಾಮಾರಾವ್ ಗೆ ಆ..ಕಡೆಯಿಂದ ಯಾವ ಸಹಾಯವೂ ಇಲ್ಲ!. ಕೋಟೀಶ್ವರರಾದರೂ.. ಮಾವನವರಿಂದ ನಯಾಪೈಸೆ ಸಹಾಯವನ್ನೂ ನರೀಕ್ಷಿಸುವಂತಿಲ್ಲ!
ರಾಮಾರಾವ್ ಅಣ್ಣಂದಿರು? ಈಗ ರಿಟೈರ್ ಆಗಿಬಿಟ್ಟಿದ್ದಾರೆ. ಅವರಿಗೋ.. ಅವರವರದೇ… ಜಬಬ್ದಾರಿಗಳದೇ.. ದೊಡ್ಡ ಚಿಂತೆ!
ಅವರ ಕಡೆಯಿಂದಲೂ… ಯಾವ ಸಹಾಯದ ಆಸೆಯನ್ನೂ.. ನಿರೀಕ್ಷಿಸುವಂತಿಲ್ಲ!
ಡಾಕ್ಟರ್ ಬೇರೆ ಖಚಿತವಾಗಿಯೇ..
“ತಂದೆ ತಾಯಿ ಅಣ್ಣ ತಮ್ಮಂದಿರು,ಮಕ್ಕಳ ಕಿಡ್ನಿ ಆದರೇನೇ ಆಕೆಯ ದೇಹಕ್ಕೆ ಒಗ್ಗುತ್ತದೆಂದೂ…
ಹೊರಗಿನವರ ಕಿಡ್ನಿ ಇಂದ್ರಜಾ ಅವರಿಗೆ ಸೂಟ್ ಆಗಲಾರದೆಂದೂ.. ಹೇಳಿಬಿಟ್ಟಿದ್ದಾರೆ.
    ರಾಮರಾವ್ ಅವರ ಒಬ್ಬಳೇ ಮಗಳು, ಬಿಂದು ಕೂಡಾ.. ಪ್ರೇಮಿಸಿಯೇ ಮದುವೆಯಾಗಿದ್ದಾಳೆ!. ಬೆಂಗಳೂರಲ್ಲಿ ಆಕೆ ಮತ್ತು ಆಕೆಯ ಗಂಡ ಇಬ್ಬರೂ ಸಾಪ್ಟವೇರ್ ಇಂಜಿನಿಯರ್‌ಗಳು.
   ಬಿಂದು’ಗೆ ತನ್ನ ‘ತಾಯಿಯ ಕಿಡ್ನಿ ಫೇಲಾಗಿದೆಯೆಂಬ!’ ಸುದ್ದಿ ತಿಳಿದೊಡನೆಯೇ… ಕುಸಿದು ಹೋದಳು! ತನ್ನ ಗಂಡ ಮಾಧವ್ ಮತ್ತು ಮಗಳು ತುಷಾರಳನ್ನ ಕರೆದುಕೊಂಡು ಆಕೆ ಆಸ್ಪತ್ರೆಗೆ ಓಡೋಡಿ ಬಂದಿದ್ದಳು!
   “ ಅಮ್ಮಾ! ನಿನಗೇನೂ.. ಆಗದು ಭಯಪಡಬೇಡ ನಾನಿದ್ದೇನೆ. ಅಗತ್ಯ ಬಿದ್ದರೆ ನನ್ನ ಕಿಡ್ನಿಯನ್ನಾದರೂ ನೀಡಿ ನಿನ್ನ ಕಾಪಾಡಿ ಕೊಳ್ತೇನೆ” ಅಂತ ತನ್ನ ತಾಯಿಗೆ ದೈರ್ಯ ಹೇಳಿದಳು. ಅವಳ ಗಂಡ ಮಾಧವ್ ಏನೂ ಮಾತಾಡಲಿಲ್ಲ…
   ಮಗಳಿಗೆ ಕಷ್ಟ ನೀಡಲು ಒಪ್ಪದೇ ಇಂದ್ರಜಾಳೇ.. “ಬೇಡ ಮಗಳೇ!, ನನಗಾಗಿ ನಿನ್ನ ಆರೋಗ್ಯ ಕೆಡಿಸಿಕೊಳ್ಳಬೇಡ. ಮಾಧವ್ ಗೂ… ಮಗುವಿಗೂ.. ತೊಂದರೆ ತಂದುಕೊಳ್ಳಬೇಡ. ಭಗವಂತನ ನಿರ್ಣಯ ಹೇಗಿದೆಯೋ… ಹಾಗೆಯೇ ಆಗುತ್ತದೆ.”ಬಿಡು ಎಂದಳು. ಯಾವ ತಾಯಿಯಾದರೂ ತನ್ನ ದೇಹವು ಹಣತೆಯ ಬತ್ತಿಯಂತೆ ಕರಗುತ್ತಿದ್ದರೂ ಆಕೆಯು ತನ್ನ ಮಕ್ಕಳಿಗೆ ಬೆಳಕು ನೀಡಬೇಕೆಂದೇ.. ಪ್ರಯತ್ನಿಸುತ್ತಾಳೆ.
    ಬಿಂದು ಪ್ರೇಮದಿಂದ ತಾಯಿಯ ಕೈಗಳನ್ನ ಹಿಡಿದುಕೊಂಡು ಒತುತ್ತಾ… “ಹಾಗೇನಿಲ್ಲಮ್ಮಾ! ನಂದೂ ಮಾಧವ್ ಅವರದೂ ಒಂದೇ ನಿರ್ಧಾರ!” ಎಂದಳು. ಇಂದ್ರಜಾಳ ಕಣ್ಣೊಳಗಿಂದ ನೀರ ಸೆಲೆ ಉಕ್ಕಿದವು! ಆದ್ರತೆಯಿಂದ ಗಂಟಲು ಕಟ್ಟಿತು. ತಡವರಿಸುವ ನಾಲಿಗೆಯಿಂದಾಗಿ.. ಮಾತು ಬಾರದಾಯಿತು!
    ನಿನ್ನೆ ಮೊನ್ನೆಯ ತನಕ ತಾನು ಕೈತುತ್ತು ಕಲಸಿ ತಿನ್ನಿಸಿದ ತನ್ನ ಮುದ್ದಿನ ಮಗಳು, ಈ ದಿನ ಎಷ್ಟೆತ್ತರ ಬೆಳೆದು.. ಎಲ್ಲಾ ಅರಿತವಳಂತೆ, ತನ್ನ ಬದುಕಿಗೇ.. ಭರವಸೆ ನೀಡುತ್ತಿದ್ದಾಳಲ್ಲ?. ಇಂದ್ರಜಾ..ತನ್ನ ಮಗಳ ಪ್ರೇಮದ ಬೆಳದಿಂಗಳನ್ನು ಸಾವರಿಸಿಕೊಳ್ಳುತ್ತಾ… “ ಯಾರ ಕಿಡ್ನಿಯೂ ಸೂಟ್ ಆಗದಿದ್ದರೆ, ನೀನೇ ನೀಡುವೆಯಂತೆ ಬಿಡು ಮಗಳೇ” ಎಂದಳು ಆಕ್ಕರೆ ತುಂಬಿ.
     ಇಂದ್ರಜಾಗೆ ಐವತ್ತು ವರ್ಷವೂ ..ಆಗಿಲ್ಲ!


 ದೇವರಂತಹ ಗಂಡ.
ತಮ್ಮ ಒಲವಿನ ಬಳ್ಳಿಯೇ ಬಿಟ್ಟ ಮಲ್ಲಿಗೆಯಂತಹ ಮಗಳು.
ಸುಖದ ಸುಪ್ಪತ್ತಿಗೆಯ ಮೇಲಿಟ್ಟುಕೊಂಡು ನೋಡಿಕೊಳ್ಳುವ ಅಳಿಯ.
ಅಸಲಿಗೆ ಇದ್ದರೆ ಹೀಗೇ.. ಇರಬೇಕು ಎನ್ನುವಂತಹ ಮುದ್ದಾದ ಮೊಮ್ಮಗು.
ಅಭಿಮಾನಿಸೋ ಬಂಧು ಮಿತ್ರರು,
  ಪ್ರತಿ ಇಟ್ಟಿಗೆಗಳನ್ನೂ.. ಹತ್ತಿರವಿದ್ದು ಕಟ್ಟಿಸಿದ ಅಂದದ ಮನೆ, ಮನೆಯ ಕಾಂಪೌಂಡ್ ತುಂಬಾ ಬೆಳಸಿದ ಅಪರೂಪದ ಹೂ ಗಿಡಗಳು,ಯಾವುದನ್ನೂ ಆಕೆ ಮಾನಸಿಕವಾಗಿ ಬಿಟ್ಟಿರಲು ಸಿದ್ದಳಿಲ್ಲ. ಇಂತಹ ಸೊಗಸಾದ ಬದುಕನ್ನ ಆಕೆ ಅರ್ಧದೊಳಗೇ… ಮುಗಿಸಬೇಕಲ್ಲ? ಎಂಬ ಆಲೋಚನೆಯನ್ನೇ ಇಂದ್ರಜಾಳಿಗೆ ತಡೆದುಕೊಳ್ಳಲಾಗುತ್ತಿಲ್ಲ.
    ಆಸ್ಪತ್ರೆಗೆ ನಾಲ್ಕು ಜನ ಬಂದು ಮಾತಾಡಿಸಿದಾಗಲೆಲ್ಲಾ… ಮೊದಲು ಧೈರ್ಯವಾಗಿ ಮಾತಾಡಿದರೂ, ನಿಧಾನವಾಗಿ ಆಕೆಯ ಆಂತರ್ಯದೊಳಗಿನಿಂದ ಸಾವೆಂಬ ನೋವಿನ ಕಣ್ಣೀರು ಪ್ರವಾಹದೋಪಾದಿಯಾಗಿ ನುಗ್ಗಿ ಬಿಡುತ್ತವೆ.
   ಎಂದಿಗೂ..ಅರ್ಜೆಂಟಾದ ಕೆಲಸದ ವಿನಃ ಕ್ಷಣವೂ ಬಿಟ್ಟಿರಲಾರದ ಪತಿ ರಾಮಾರಾವ್ ಆಕೆಯನ್ನ ಬಿಟ್ಟು ದೂರ ಹೋದವನೇ ಅಲ್ಲ.ಆತನೀಗ ಶಾರೀರಿಕವಾಗಿ,ಮಾನಸಿಕವಾಗಿ, ಆರ್ಥಿಕವಾಗಿಯೂ ತೀರಾ ಕುಗ್ಗಿ ಹೋಗಿಬಿಟ್ಟಿದ್ದಾನೆ!
  ಇಂದ್ರಜಾ ಗಂಡನ ಕೈಗಳನ್ನ ಗಟ್ಟಿಗೆ ಹಿಡಿದುಕೊಂಡು ತಡವರಿಸುತ್ತಾ…“ ಏನೂಂದ್ರೇ! ನನಗೆ ಬದುಕಬೇಕೆನಿಸಿದೆರೀ..!
 ನಿಮ್ಮನ್ನ,
ನಮ್ಮ ಕುಟುಂಬವನ್ನ ಬಿಟ್ಟು ಹೋಗಲಾರೆ ಕಣ್ರೀ..ಇಂತಹ ಸುಂದರವಾದ ಜೀವನ ನನಗೆ ಮತ್ತೆ ಸಿಗಲಾರದು ಕಣ್ರೀ..!”ಎಂದೆನ್ನುತ್ತಾ..ಕಣ್ಣೀರಿಡತೊಡಗಿದಳು!
   ಇಂದ್ರಜಾಳ ಕಣ್ಣೀರ ಮಾತುಗಳನ್ನ ಭರಿಸಲಾರದೆ ರಾಮಾರಾವ್ ತಡಬಡಿಸಿಬಿಟ್ಟ.
ದಿನವೂ ದೇವರನ್ನ ಪ್ರಾರ್ಥಿಸುವ,
ಕಂಡ ಕಂಡ ದೇವಸ್ಥಾನಕ್ಕೆ ಹೋಗುವ ಆತನಿಗೀಗ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎನಿಸುತ್ತಿದೆ.ಆತನ ಸುತ್ತಲೂ.. ನಿರಾಸೆ ಅಧೈರ್ಯವೇ.. ಆವರಿಸ ಹತ್ತಿದೆ!
    ‘ದೇವರು ಇದ್ದರೆ ನಾನ್ಯಾವ ಪಾಪ ಮಾಡಿದ್ದೇನೆಂದು ನನಗೆ ಇಂತಹ ಕಷ್ಟ ನೀಡಿದ್ದಾನೆ? ದೇವರೇ ನೀನೆಂಬುವನು ಇದ್ದರೆ? ನನ್ನ ಮೊರೆಯನ್ನೇಕೆ ಕೇಳಲಾರೆ!’ ಅಂತ ನಿಂತ ನಿಂತಲ್ಲೇ ಸಾವಿರಸಾರಿ ಕೇಳಲಿಕ್ಕೆ ಶುರು ಮಾಡಿದ್ದಾನೆ.
  ಆಸ್ಪತ್ರೆಯ ಆ ನೀರವತೆಯನ್ನ ಮೀರಿ ಬೆಳಿಗ್ಗೆ ಡಾಕ್ಟರ್ ಹೇಳಿದ ಮಾತುಗಳು ನೆನಪಿಗೆ ಬಂದವು! ತನ್ನ ಮಗಳು ಬಿಂದುವಿಗೆ ಪೋನ್ ಮಾಡಿದ.
ಸ್ವಿಚ್ ಆಫ್!
   ಅಳಿಯ ಮಾಧವ್ ಗೆ ಪೋನ್ ಮಾಡಿದ. ರಿಂಗ್ ಆಗುತ್ತಿದೆ ಆದರೆ ರಿಸೀವ್ ಮಾಡುತ್ತಿಲ್ಲ! ಒಂದು.. ಎರಡು..ಮೂರು ಹೂ..ಹೂಂ ಬಿಡಲಿಲ್ಲ. ಮತ್ತೆ ಪ್ರಯತ್ನಿಸಿದ. ಆಕಡೆ ಮಾಧವ್ ರಿಸೀವ್ ಮಾಡಿದ.!
   “ ಹಲೋ! ಮಾಧವ್” ರಾಮಾರಾವ್’ನ ಗಂಟಲೇ ಕಟ್ಟಿಕೊಂಡು ಕಣ್ಣೀರು ಉಕ್ಕಿ ಹರಿಯತೊಡಗಿತು.
   “ ಹಲೋ! ಮಾವಾ…!ಅತ್ತೆಯವರು ಹೇಗಿದ್ದಾರೆ?” ತೀರಾ..ಸಹಜವಾಗಿಯೇ.. ಕೇಳಿದನು ಮಾಧವ್.
ರಾಮಾರಾವ್ ತನ್ನನ್ನೇ ತಾನು ಸಾವರಿಸಿಕೊಳ್ಳುತ್ತ… “ ಪರಿಸ್ಥಿತಿ ತುಂಬಾ ಸರಿಯಿಲ್ಲ ಕಣಪ್ಪಾ ಎಂದರು. ಎರಡು ಮೂರು ದಿನದೊಳಗೇ.. ಡಯಾಲಿಸಿಸ್ ಶುರು ಮಾಡ್ತಾರಂತೆ!? ಬೇಗನೇ ಕಿಡ್ನಿ ಟ್ರಾನ್ಸಪ್ಲಾಂಟ್’ ಗೆ ಏರ್ಪಾಡು ಮಾಡಿಕೊಳ್ಳಿ ಎಂದಿದ್ದಾರೆ. ” ಎಂದನು ದೀನತೆಯಿಂದ.
   “ ಹೋ! ಹಾಗಾ…? ಯಾರನ್ನಾದರೂ ದಾನಿಗಳನ್ನ ನೋಡಿದ್ದೀರಾ? ದುಡ್ಡಿನ ವಿಚಾರ ವರಿ ಮಾಡ್ಕೋ ಬೇಡಿ. ಡೋನರ್ ಸಿಕ್ಕು, ಟಿಷ್ಯೂ ಮ್ಯಾಚ್ ಆದರೆ ಸಾಲಾ ಗೀಲಾ ಮಾಡಿಸಿಯಾದ್ರೂ ಹೊಂದಿಸೋಣವಂತೆ” ಎಂದನು.
    ರಾಮಾರಾವ್’ ಗೆ ಮುಂದೆ ಮಾತೇ ಹೊರಡಲಿಲ್ಲ.
ಆದರೂ ಮೆಲ್ಲಗೆ ಸಾವರಿಸಿಕೊಂಡು “ಇದೇನಪ್ಪಾ ಹೀಗೆ ಹೇಳ್ತಿದಿ? ಹೊರಗಿನವರ ಕಿಡ್ನಿ ಕೆಲಸಕ್ಕೆ ಬರಲಾರದು ಅಂತ ಅವತ್ತೇ ಬಿಂದುಗೆ ಹೇಳಿದ್ದೆ. ಬಿಂದು ಕೂಡಾ ನಿನ್ನ ಎದುರಿಗೇ ತನ್ನ ಕಿಡ್ನಿ ಡೊನೇಟ್ ಮಾಡ್ತೇನೆ ಅಂದಿದ್ದಳಲ್ಲ?.”ಎನ್ನಲು
  “ ಹಾಗಲ್ಲ ಮಾವ, ಏನೋ… ಆ ದಿನ ಬಿಂದು ಸೆಂಟಿಮೆಂಟ್ ನೊಳಗೆ ಎಗ್ಜೈಟ್ ಆಗಿ ಹಾಗೆ ಹೇಳಿದಳು. ಅವಳಿನ್ನೂ.. ಚಿಕ್ಕ ಹುಡುಗಿ. ಚಿಕ್ಕ ಮಗುವಿದೆ. ನಾಳೆ ಆರೋಗ್ಯ ಕೆಟ್ಟರೆ? ನಿಮಗೂ ನನಗೂ ಅಲ್ವೇ ಸಂಕಟ!” ಎಂದ ವ್ಯವಹಾರಸ್ಥನಂತೆ.
   “ ಹೌದು ಕಣಪ್ಪ, ನೀನು ಹೀಗೆ ಯೋಚಿಸೋದೂ.. ಸರಿ!
   ಬಿಂದುಗೆ ರಿಸ್ಕ ಇದೆ, ಎಂದರೆ ಅಂತಹ ಪರಿಸ್ಥಿತಿ ಮೀರಿ ಡೊನೇಟ್ ಮಾಡು ಅಂತ ನಾನೂ ಕೇಳಲಾರೆ ಬಿಡು.ಆದರೆ ಡಾಕ್ಟರ್ , ಡೋನರ್ ಆರೋಗ್ಯವಾಗಿದ್ದರೆ ಕಿಡ್ನಿ ನೀಡುವುದರಿಂದ ಯಾವ ಸಮಸ್ಯೆಯೂ ಆಗದು ಎಂದರು. ಇಂದ್ರಜಾ ನನ್ನ ಹೆಂಡ್ತಿ, ಬಿಂದು ನನ್ನ ಮಗಳು ಕಣಪ್ಪ, ಅವಳಿಗೆ ತೊಂದ್ರೆ ಆಗುತ್ತೆ ಅಂತ ತಿಳಿದರೂ.. ನಾನು ಹೀಗೆ ಮಾಡ್ತೀನಾ?” ಎಂದರು.          ಅಳಿಯನೇ ತಲೆಮೇಲೊಂದು ಹೂ ಕುಂಡವನ್ನು ಹಾಕುವಷ್ಟು ಖಚಿತವಾಗಿ “ಹಲೋ ಮಾವಯ್ಯ ಹಾಗೆ ಅಂದುಕೊಳ್ಳಲೇ…ಬೇಡಿ! ನಿಮಗೆ ಅತ್ತೆಯವರೆಂದರೆ ಎಷ್ಟು ಪ್ರೇಮವೋ …ನನಗೂ ನನ್ನ ಹೆಂಡತಿ ಅಂದರೆ ಅಷ್ಟೇ…! ಪ್ಲೀಜ್; ಅವಳನ್ನ ಫೋರ್ಸ ಮಾಡಬೇಡಿ!”ಎಂದುಬಿಟ್ಟನು.
   ಈ ಕಡೆಯಿಂದ “ ಮಾಧ್..ವೌ”ಎನ್ನುತ್ತಿದ್ದಂತೆಯೇ ಆ ಕಡೆಯಿಂದ ಪೋನ್ ಡಿಸ್ ಕನೆಕ್ಟ ಆಯಿತು. ರಾಮಾರಾವ್ ನಿಂತ ಜಾಗದಲ್ಲೇ… ಕುಸಿದು ಕುಳಿತರು! ಇಂದ್ರಜಾಳ ಮುಖ ತಮ್ಮ ಎದುರೇ.. ಬಂದಂತಾಗಿ ಕಣ್ಣೀರಿನ ಕಟ್ಟೆಯೇ ಹೊಡೆದು ಹೋಯಿತು.ದಿಕ್ಕು ಕಾಣದ ಅನಾಥರಂತೆ ಜೋರಾಗಿ ಅಳತೊಡಗಿದರು!
   ಈ ಕಣ್ಣೀರಿನ ಸುನಾಮಿ ನನ್ನ ಜೀವನದೊಳಗೆ ಏಕೆ ಬಂತು!?
   ಎಂಬುದಷ್ಟೇ ಅಲ್ಲ, ಆ ಕಣ್ಣೀರಿನ ಅಲೆಗಳೊಳಗೇ.. ಅವರ ಇಪ್ಪತ್ತು ವರ್ಷಗಳ ಒಲವೂ.. ಕಸ ಕಡ್ಡಿಯಂತೆ ಕೊಚ್ಚಿ ಹೋದ ನೆನಪಾಯಿತು. ರಾಮಾರಾವ್ ಎಷ್ಟೋ ಹೊತ್ತಾದ ಮೇಲೆ, ಹಾಗೇ… ಸಾವರಿಸಿಕೊಂಡು, ಮೆಲ್ಲಗೆ ಹೆಜ್ಜೆ ಇಡುತ್ತಾ… ವಾರ್ಡಿನೊಳಗೆ ಬಂದರು.
   ಇಂದ್ರಜಾ ನೀರಸವಾಗಿ ಮಲಗಿದ್ದನ್ನ ಕಂಡು ಮತ್ತೆ ಕಣ್ಣೀರ ಕೋಡಿಹೊಡೆಯಿತು.
   ರಾಮರಾವ್ ತಮಗೆ ಜೀವನದಲ್ಲಿ ಇಂತಹ ಸ್ಥಿತಿ ಬರುತ್ತದೆಂದು ಎಂದಿಗೂ ಊಹಿಸಿರಲಿಲ್ಲ. ಬದುಕಿನೊಳಗೆ ಎಷ್ಟೋ ಕಷ್ಟಗಳು ಬಂದು ಹೋಗಿದ್ದವು. ಆರಂಭ ಕಾಲದ ಆರ್ಥಿಕ ದುಸ್ಥಿತಿ. ಅಪ್ಪ ಮಂಚ ಹಿಡಿದು ಮಲಗಿದ್ದು, ತಾನು ಕೆಲಸದ ನಿಮಿತ್ತ ದೂರದ ಊರಿಗೆ ಹೋದಾಗ ಅಪ್ಪನ ಕೊನೆ ದರ್ಶನವೂ.. ಸಿಗದಂತೆ ಕಳೆದು ಹೋದ ಪ್ರಸಂಗ! ಒಡಲೊಳಗೆ ತುಂಬಾ ವೇದನೆಯನ್ನ ತಂದೊಡ್ಡಿದ್ದವು. ಆದರೂ…ಇಷ್ಟು ಆಘಾತವೆನಿಸಿರಲಿಲ್ಲ.
    ಆಗಾಗಲೇ.. ಅಪ್ಪ ಬದುಕಿನಲ್ಲಿ ತುಂಬಾ ಧಣಿದಿದ್ದರು,
ಇಳಿವಯಸ್ಸಿನ ಪ್ರತಿದಿನವೂ..ಅವರು ದೇವರ ಕರೆಯನ್ನ ನಿರೀಕ್ಷಿಸುತ್ತಿದ್ದರು.
ಆದರೆ ನನ್ನ ಇಂದ್ರಜಾ…
    ಇನ್ನೂ ಉಂಡು ತಿಂದು ಓಡಾಡಿ ನಗುವ ವಯಸ್ಸಿನವಳು.ಆಕೆಗೆ ಮೂಗಿನಲ್ಲಿ ರಕ್ತ ಸೋರಿದ್ದೇ ನೆಪವಾಗಿ ತೋರಿಸಿದರೆ ಬಿ.ಪಿ. ಜಾಸ್ತಿ ಎಂದರು, ಉಪಶಮನವಾದಮೇಲೆ ಇರಲಿ ಎಂದು ಯೂರಿಯಾಜಿಲಸ್ಟರಿಗೆ ತೋರಿಸಿದರೆ ಅವರು ಕಿಡ್ನಿ ಫೇಲ್ಯೂರ್ ಎಂಬ ಬಾಂಬ್ ಹಾಕಿಬಿಟ್ಟರು! ಅಂದಿನಿಂದ ಆಸ್ಪತ್ರೆಗೆ ತಿರುಗುವುದೇ ಕೆಲಸವಾಗಿ ಬಿಟ್ಟಿದೆ.
   ರಾಮಾರಾವ್ ಇಂದ್ರಜಾಳಿಲ್ಲದ ತನ್ನ ಜೀವನವನ್ನ ಊಹಿಸಿಕೊಳ್ಳಲೂ.. ಆಗದೆ ಕಣೀರಿಡುತ್ತಲೇ ಇದ್ದಾನೆ.
ಏನು ಮಾಡಬೇಕು?
 ಮುಂದೇನು ಎನ್ನುತ್ತಾ…
   ಬೆಂಚ್ ಮೇಲೆ ಕುಸಿದು ಕಣ್ಣು ಮುಚ್ಚಿ ಹಿಂದಕ್ಕೆ ಬಾಗಿದ. ಮನಸ್ಸು ಒಂದು ಸಾರಿ ಮಾಧವ್ ಅಪ್ಪನಿಗೆ ಫೋನ್ ಮಾಡಿನೋಡು!? ಎಂದಿತು. ಬುದ್ದಿಯೂ ಅದನ್ನೇ ಅನುಸರಿಸಿತು. ಹೌದು ಆತನೇ ತನ್ನ ಮಗನಿಗೆ ಈ ಸಂಗತಿಯನ್ನ ಸರಿಯಾಗಿ ವಿವರಿಸಬಲ್ಲ ಸಮರ್ಥ ಎನಿಸಿತು.
    ತಕ್ಷಣ ರಾಮಾರಾವ್ ಶಂಕರ್’ಗೆ ಫೋನ್ ಮಾಡಿದರು. “ಹಲೋ ಹೇಗಿದ್ದೀರಿ ರಾಮರಾವ್” ಎಂದರು ಶಂಕರ್.
ಉತ್ತರ ನೀಡುವುದರೊಳಗೇ… “ತಂಗಿ ಹೇಗಿದ್ದಾಳೆ?” ಅಂದರು ಆಪ್ಯಾಯತೆಯಿಂದ.
   ತಮ್ಮ ಕಣ್ಣೊಳಗೆ ನೀರು ತುಂಬಿಕೊಂಡು ರಾಮಾರಾವ್ “ ನಿಮ್ಮ ಈ ಅನುಬಂಧವೇ.. ನನ್ನ ಹೆಂಡತಿಯನ್ನ ಉಳಿಸಬೇಕು ರಾಯರೇ..! ” ಎನ್ನುತ್ತಾ, “ನನಗೆ ಈಗ ನಿಮ್ಮ ಸಹಾಯ ಬೇಕೇಬೇಕಾಗಿದೆ ರಾಯರೇ” ಎಂದರು ರಾಮಾರಾವ್ ದೈನ್ಯದಿಂದ.
 ಪ್ರೀತಿ ತುಂಬಿಕೊಂಡ ಶಂಕರ್ “ಅಯ್ಯೋ ಖಂಡಿತ! ಏನ್ ವಿಷಯ ಹೇಳಿ” ಎಂದರು.
“ ರಾಯರೇ ಇಂದ್ರಜಾಳಿಗೆ ಕಿಡ್ನಿ ಟ್ರಾನ್ಸಪ್ಲೆಂಟ್ ಮಾಡ ಬೇಕಂತೆ! ಹೊರಗಿನವರ ಕಿಡ್ನಿಗಳು ಆಕೆಗೆ ಮ್ಯಾಚ್ ಆಗುತ್ತಿಲ್ಲ, ಮನೆಯವರದೇ ಆಗಬೇಕಂತ ಡಾಕ್ಟರ್ ಹೇಳಿದ್ದಾರೆ. ನನ್ನ ಟಿಷ್ಯೂ ಮ್ಯಾಚ್ ಆಗಲಿಲ್ಲ, ನನಗೀಗ ನನ್ನ ಮಗಳು ಬಿಟ್ಟರೆ ಇಂದ್ರಜಾ ಬದುಕಿಗೆ ಬೇರೆ ದಾರಿಯೇ ಇಲ್ಲ. ನೀವು ದಯಮಾಡಿ ಮಾಧವ್ ಗೆ ಸ್ವಲ್ಪ ಕನ್ವೀನ್ಸ ಮಾಡಬೇಕು” ಎಂದರು ಆದ್ರತೆಯಿಂದ.
  ಆಕಡೆಯಿಂದ ಏಕೋ ಒಂದು ಕ್ಷಣ ಏನೂ… ಉತ್ತರವೇ ಬಾರದಾಯಿತು.
 “ನಿಮ್ಮ ತಂಗಿಗಾಗಿ ಈ ಸಹಾಯ ಮಾಡುವಿರಾ ರಾಯರೇ..” ಎನ್ನಲು
 “ ಇಂತಹ ವಿಷಯಗಳನ್ನ ಅವರಿಗೆ ತಿಳಿಸೋದು ಹೇಗೆ?
ಇದು ಒತ್ತಯ ಹಾಕಿ ಮಾಡುವ ಕೆಲಸವಲ್ಲ.
ಆದರೂ ಪ್ರಯತ್ನಿಸೋಣ.
ಈ ದಿನ ನೀವು ದಾವಣಗೆರೆಯಿಂದ  ಬೆಂಗಳೂರಿಗೆ ಬಂದು ಬಿಡಿ. ನಾನು ಈಗಲೇ ಬಸ್ ಟಿಕೆಟ್ ರಿಜರ್ವ ಮಾಡಿಸುತ್ತೇನೆ. ತುಮಕೂರಿನಲ್ಲಿ ನಾನೂ ಜೊತೆಯಾಗಿ ಬಂದು ಬಿಡುತ್ತೇನೆ. ಆಯ್ತಾ..? ಎಂದರು ಶಂಕರ್ ಪ್ರೀತಿ ತುಂಬಿ.
  “ ಥ್ಯಾಂಕ್ಯೂ ಬೀಗರೇ..!” ಅಂತ ಫೋನ್ ಡಿಸ್ ಕನೆಕ್ಟ ಮಾಡಿದರು ರಾಮಾರಾವ್.
ಇಂದ್ರಜಾಳನ್ನ ನೋಡಿಕೊಳ್ಳಲು ಮಿತ್ರ ಕೇಶವರಾವ್ ದಂಪತಿಗಳಿಗೆ ಒಪ್ಪಿಸಿ ಆ ರಾತ್ರಿ ರಾಮಾರಾವ್ ಬೆಂಗಳೂರ್ ಪ್ರಯಾಣ ಬೆಳಸಿದರು.
   ಬೆಳಿಗ್ಗೆ ಆರುಗಂಟೆಗೆ ಬೆಂಗಳೂರಿಗೆ ಬಂದಿಳಿದರು. ಮಾಧವ್ ಬಿಂದು ಇಬ್ಬರಿಗೂ.. ಇವರಿಬ್ಬರ ಆಕಸ್ಮಿಕ ಆಗಮನ ಕಂಡು ಅಚ್ಚರಿ!
   ಆದರೂ ಇಬ್ಬರ ಬರುವಿಕೆಯ ಹಿನ್ನೆಲೆಯ ಕಾರಣವನ್ನ ಮನದೊಳಗೇ ಊಹಿಸಿದಳು ಬಿಂದು. ತಿಂಡಿಯ ನಂತರ ಇಬ್ಬರಿಗೂ.. ರೆಸ್ಟ ತೆಗೆದು ಕೊಳ್ಳಿರೆಂದು ಹೇಳಿ ಅವರು ಕೆಲಸದಿಂದ ಬಂದೊಡನೇ ಮಾತಾಡೋಣ. ಎಂದು ಮಗಳು ತುಷಾರಳನ್ನ ಆಯಾಳಿಗೆ ಒಪ್ಪಿಸಿ, ತಾನೂ.. ಎಂಟಕ್ಕೆಲ್ಲಾ ತಮ್ಮ ಕಛೇರಿಯ ಕಡೆ ಹೊರಟು ಬಿಟ್ಟಳು.
   ಸಂಜೆ ಇಬ್ಬರೂ ಬರುವುದು ತಡವಾಯಿತು.
 ಬೀಗರಿಬ್ಬರೂ ಆಯಾ ಮಾಡಿದ ಅಡಿಗೆ ತಿಂದು ರಾತ್ರಿ ಮಗ್ಗುಲಾದರು,
 ರಾಮಾರಾವ್ ಮಲಗಿಕೊಂಡರೇ ವಿನಃ ಅವರಿಗೆ ನಿದ್ದೆ ಬರಲಿಲ್ಲ.
  ನಡುರಾತ್ರಿಯೊಳಗೆ ಸ್ವಲ್ಪ ಮಂಪರು ಬಂದು ಎಚ್ಚರ ವಾಗುತ್ತಿದ್ದಂತೆಯೇ ಬೆಡ್ ರೂಮ್ ನಿಂದ ಮಾತುಗಳು ಕೇಳತೊಡಗಿದವು. ರಾಮಾರಾವ್ ಮೆಲ್ಲಗೆ ಆಲಿಸಿದರು.. ಮಾತುಗಳು ಸ್ಪಷ್ಟವಾಗಿ ಕೇಳಿಸತೊಡಗಿದವು…
   “ ಬಿಂದು ಅರ್ಥ ಮಾಡ್ಕೋ..! ಡೊಂಟ್ ..ಬಿ.. ಎ ..ಸೆಂಟಿಮೆಂಟಲ್ ನಾಳೆ ನಿನಗೇನಾದರು ಆದ್ರೆ ನನ್ನ ಪರಿಸ್ಥಿತಿ, ನನ್ನ ಮಗು ಪರಿಸ್ಥಿತಿ ಏನು?”
“ಏನಾಗುತ್ತೆ? ಡೋನರ್’ಗೆ ರಿಸ್ಕ ಏನೂ ಇಲ್ಲ ಕೆಲ ಕಾಲ ಜಾಗ್ರತೆಯಾಗಿರಬೇಕು ಅಷ್ಟೇ”ಅಂತ ಹೇಳಿಲ್ಲವೇ ಡಾಕ್ಟರ್.
“ರಿಸ್ಕ ಇಲ್ಲ ಅನ್ನೋದು ಸುಳ್ಳು ಮಾತು.ಆ..ವಯಸ್ಸಾದವರಿಗಾಗಿ ನೀನಿಂತಹ ತ್ಯಾಗ ಮಾಡೋ ಅಗತ್ಯ ಇಲ್ಲಮ್ಮಾ..”
“ತ್ಯಾಗಾನಾ? ಆ ಮಾತಿಗೆ ಅರ್ಥ ಗೊತ್ತಾ ನಿನಗೆ?
     ಹೆತ್ತ ತಾಯಿ ಸಾವು ಬದುಕಿನೊಳಗೆ ಇದ್ದರೆ ನನ್ನೊಬ್ಬಳಿಂದ ಮಾತ್ರ ಆ ತಾಯಿ ಬದುಕುತ್ತಾಳೆಂದು ತಿಳಿದೂ ಕೂಡಾ ನಾನು ಏನೂ ತಿಳಿಯದವಳಂತೆ ಮೌನವಾಗಿ ಇರಬೇಕಾ?
    ನನಗೆ ಜನ್ಮವನ್ನ,
ಜೀವನವನ್ನ ..
   ಇಂತಹ ಶರೀರವನ್ನ ಕೊಟು,್ಟ ವಿದ್ಯೆಯನ್ನ, ಜ್ಞಾನವನ್ನ ಪ್ರಸಾದಿಸಿದ ನನ್ನ ತಾಯಿಗೆ ನನ್ನದೇ..ಶರೀರದ ಒಂದು ಸಣ್ಣ ಭಾಗವನ್ನ ತೆಗೆದುಕೊಳ್ಳುವ ಹಕ್ಕಿಲ್ಲವಾ? ನನಗೆ ಶರೀರವನ್ನ ಯಾರು ನೀಡಿದರು? ನಾನೇನು ಆಕಾಶದಿಂದ ಉದುರಿ ಬೆದ್ದೆನಾ? ಈ ಶರೀರದ ಮೇಲೆ ಹೆತ್ತ ತಾಯಿಗೆ ಇಲ್ಲದ ಹಕ್ಕು ನನಗೆಲ್ಲಿಯದು? ಹಾಗೆ ನೋಡಿದರೆ ಕಟ್ಟಿಕೊಂಡ ನಿಮಗೂ ಆ ಹಕ್ಕು ಮೊದಲಿಲ್ಲ ಅಲ್ಲವೇ..?
ರೀ.. ಯಾವ ಅಧಿಕಾರದಿಂದ ಕಿಡ್ನಿ ನೀಡಬೇಡ ಅಂತೀರ.., !?
 “ಬಿಂದು ನಾನು ನಿನ್ನ ಗಂಡ.
   ನಿನ್ನನ್ನೆಷ್ಟು ಗಾಢವಾಗಿ ಪ್ರೇಮಿಸಿ ಮದುವೆ ಮಾಡಿಕೊಂಡಿದ್ದೇನೆ.
ನೋಡೇ.. ನಿನ್ನ ಅಪ್ಪ ಅಮ್ಮನಿಗೆ ನೀನು ಎಷ್ಟು ಮುಖ್ಯವೋ ..ನನಗೆ ನೀನು ಅದಕ್ಕಿಂತಲೂ… ಮುಖ್ಯ ಕಣೇ.”
“ಓ.ಕೆ.! ವೆಯಿಟ್,
ಇದೇ ಪರಿಸ್ಥಿತಿ ಅತ್ತೆಯವರಿಗೆ ಬಂದಿದ್ದರೆ?
ನೀನು ಹೀಗೇ ಮಾತನಾಡುತ್ತಿದ್ದೆಯಾ?
ಅಗತ್ಯ ಬಿದ್ದರೆ ನಿನ್ನ ಕಿಡ್ನಿಯನ್ನ ಅವರಿಗೆ ನೀಡಲಾರೆಯಾ?
ನೀಡದಂತೆಯೇ.. ಅವರನ್ನ ಸಾಯಲು ಬಿಟ್ಟು ಬಿಡುತ್ತೀಯಾ!?”
“ಏ ನಾನ್ ಸೆನ್ಸ! ಅವೆಲ್ಲಾ ಅಪ್ರಸ್ತುತ ಮಾತುಗಳು”
“ ಸರಿ, ನಮ್ಮ ಅಮ್ಮ ಯಾರಿಗೆ ಕಿಡ್ನಿ ನೀಡಿದ್ದಾಳೆಂದು ಈ ದಿನ ಕಿಡ್ನಿ ಫೇಲ್ಯೂರ್ ಆಗಿ ನೋವು ಪಡುತ್ತಿದ್ದಾಳೆ? ನಾನು ಕಿಡ್ನಿ ನೀಡದೇ ಹೋದರೆ ನಾಳೆ ನನ್ನ ಕಿಡ್ನಿ ಫೇಲ್ಯೂರ್ ಆಗಲಾರದೆಂಬ ಗ್ಯಾರಂಟಿ ಉಂಟಾ ನಿನಗೆ? ನನಗ್ಯಾವ ರೋಗವೂ ಬರದು,ನೂರು ವರ್ಷ ಪೂರ್ತಿ ಹೀಗೇ..ಬದುಕುತ್ತೀನಿ ಅನ್ನೋ ಭರವಸೆ ಕೊಡ್ತಿಯಾ!? ಒಂದು ವೇಳೆ ತುಷಾರ ದೊಡ್ಡವಳಾದಮೇಲೆ ನಮ್ಮ ಅಮ್ಮನ ಪರಿಸ್ಥಿತಿ ನನಗೇ.. ಬಂದರೆ!? ಆಗ ನಮ್ಮ ಅಪ್ಪನವರಿಗೆ ಹೇಳಿದಂತೆ ತುಷಾರಳಿಗೂ ಹೇಳುತ್ತೀಯಾ? ಅಮ್ಮನ ಬದಲು ನನಗೇ ಆ ಪರಿಸ್ಥಿತಿ ಬಂದಿದ್ದರೆ? ಅಮ್ಮ ಹೀಗೆ ಮೀನಾ ಮೇಷ ಎಣಿಸುತ್ತಿದ್ದಳೇ ! ಹೇಳು?”
“ಬಿಂದು ಅರ್ಥ ಮಾಡಿಕೋ ಪ್ಲೀಜ್..”
“ ಏನು ಅರ್ಥಮಾಡಿಕೊಳ್ಳಲಿ?
ಹಸಿವಾಯಿತೆಂದು ಕೇಳೋ ಮೊದಲೇ.. ಅನ್ನ ನೀಡೋ ಅಮ್ಮ,
ಅಗತ್ಯ ಬಿದ್ದರೆ ತನ್ನ ಕಿಡ್ನಿಯೇ ಅಲ್ಲ ಪ್ರಾಣವನ್ನೂ …ಕೊಡುವ ಅಮ್ಮ.
ಅಮ್ಮನ ರಕ್ತ ಹಂಚಿಕೊಂಡು.
ಹೊಟ್ಟೆ ಸೀಳಿಕೊಂಡು,
ಕರುಳು ಹರಿದುಕೊಂಡು,
ಹುಟ್ಟಿದ ನನಗೆ ಈ ಶರೀರದ ಪ್ರತಿ ಅವಯವವೂ ಅಮ್ಮ ನೀಡಿದ ಬಿಕ್ಷೆ.
   “ ನೊಡ್ರಿ ಮನುಷ್ಯನಿಗೆ ಒಂದು ಕಿಡ್ನಿ ಸಾಕು. ಆದರೂ ದೇವರು ಎರಡು ಕಿಡ್ನಿಗಳನ್ನ ಏಕೆ ನೀಡಿದ್ದಾನೆ ಗೊತ್ತಾ? ಮತ್ತೊಬ್ಬ ಮನುಷ್ಯನನ್ನ ಬದುಕಿಸಬೇಕೆಂದು”
“ಬಿಂದು ದೊಡ್ಡ ಡಾಕ್ಟರ ತರ ಮಾತಾಡ್ ಬೇಡ ಸುಮ್ನಿರೇ!
“ ನೋಡೇ ನನಗೆ ನೀನು ಮುಖ್ಯ.. ನಿನ್ನ ಕ್ಷೇಮ ಮುಖ್ಯ ಅಷ್ಟೇ…”
ನೀನು ಎಂತಹ ಸ್ವರ್ಥಿ ಮಾಧವ್!
ನಿನಗೆ ನಿನ್ನ ಹೆಂಡತಿ ಕ್ಷೇಮವಾಗಿದ್ದರೆ ಸಾಕು.
ಪ್ರಪಂಚ ಏನಾದರೂ ಪರವಾಗಿಲ್ಲ!
ನಿನಗೆ ನಾನೆಂದರೆ ಎಷ್ಟು ಪ್ರೇಮವೋ ನನಗೆ ನನ್ನ ಅಮ್ಮ ಅಂದ್ರೆ ಅಷ್ಟೇ ..ಪ್ರೇಮ.
   ಆಕೆ ಎಷ್ಟೋ ತ್ಯಾಗಗಳನ್ನ ಮಾಡಿ ಪ್ರೀತಿಯಿಂದ ನನ್ನ ಬೆಳಸಿದ್ದರಿಂದಲೇ ನಾನು ಅಂದವಾಗಿ, ಆರೋಗ್ಯವಾಗಿ, ವಿದ್ಯಾವಂತೆಯಾಗಿ ನೌಕರಸ್ತಳಾಗಿ ನಿನಗೆ ಹೀಗೆ ಕಾಣುತ್ತಿರುವುದು.
   ನನ್ನಮ್ಮ ಇದ್ದುದ್ದಕ್ಕೇ.. ನೀನು ನನ್ನನ್ನು ಪ್ರೀತಿಸಿದ್ದು. ಮದುವೆ ಆಗಿದ್ದು.
ಅಮ್ಮ ಅಂದ್ರೆ ಈ ಲೋಕದಲ್ಲಿ ಕಣ್ಣಿಗೆ ಕಾಣಿಸುವ ಜೀವ ಮಾತ್ರ ಅಲ್ಲ. ಆಕೆ ಕಣ್ಣಿಗೆ ಕಾಣದ ಎಷ್ಟೋ ವಿಷಯಗಳಲ್ಲಿ ದೇವರು. “ ತನ್ನ ಹೊಟ್ಟೆ ಕೊಯ್ಯಿಸಿಕೊಂಡು ಮಕ್ಕಳಿಗೆ ಜನ್ಮ ನೀಡುವ ತಾಯಿಯ ಋಣ ಹೇಗೆ ತೀರುತ್ತದೆ ಹೇಳು?”
“ ಅದಕ್ಕೆ ನಿನ್ನ ಕಿಡ್ನಿನೇ ಬೇಕಾ?
ಹೊರಗೆ ಕೊಳ್ಳೋಣ! ಆ ಹಣವನ್ನ ನಾವು ನೀಡೋಣ.”
“ ಈಗ ಬೇರೆಯವರ ಕಿಡ್ನಿ ಮ್ಯಾಚ್ ಆಗುತ್ತಿಲ್ಲವಲ್ಲ ಮಾಧವ್!
    ನವಮಾಸಗಳು ಹೊತ್ತು ಹೆತ್ತು ಎದೆ ಹಾಲು ನೀಡಿ ಬೆಳಸಿದ್ದಕ್ಕೆ ನೀನು ಹಣದ ಬೆಲೆ ಕಟ್ಟುತ್ತೀಯಾ..? ಈಗ ಅಷ್ಟು ಸಮಯ ಇದೆಯಾ…? ತಾಯಿ ಹಾಲೇ ಬತ್ತಿ ಹೋದ ಮೇಲೆ ಯಾವ ಖರೀದಿ ಹೇಳು?”
“ ಬಿಂದು! ಸಿಲ್ಲಿಯಾಗಿ ಮಾತಾಡ ಬೇಡ ಕಣೇ! ನೋಡು ನೀನು ಕಿಡ್ನಿ ನೀಡುವುದು ನನಗೆ ಇಷ್ಟವಿಲ್ಲ ಅಷ್ಟೇ. ದಟ್ಸಾಲ್.”
“ ರೀ, ಈ ವಿಷಯದೊಳಗೆ ಯಾರ ಇಷ್ಟ ಅನಿಷ್ಟಗಳೂ.. ನನಗೆ ಮುಖ್ಯ ಅಲ್ಲ! ನಮ್ಮ ಅಮ್ಮ ಬದುಕ ಬೇಕು.ನಿನ್ನ ಹೆಂಡತಿ ಆಗುವ ಮೊದಲೇ ನಾನು ಅಮ್ಮನ ಮಗಳು. ನಮ್ಮ ಅಮ್ಮ ನನ್ನನ್ನ ಇಪ್ಪತ್ನಾಲ್ಕು ವರ್ಷ ಬೆಳಸಿದ ಮೇಲೆಯೇ ನೀವು ನನ್ನನ್ನ ಪ್ರೇಮಿಸಿದಿರಿ. ತಾಯಿ ಋಣ ತೀರಿಸುವ ಅವಕಾಶ ಈಗ ಬಂದಿದೆ ಸ್ವಲ್ಪ ತಡವಾದರೆ ಅನಾಹುತವಾದೀತು.. ನಾನಂತೂ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಲಾರೆ! ನಾನು ನಮ್ಮ ಅಮ್ಮನಿಗೆ ಕಿಡ್ನಿ ಕೊಡೋದು ಶತ ಸಿದ್ದ! ಗುಡ್ ನೈಟ್?”
“ ಬಿಂದು, ನಾವಿಬ್ಬರೂ ಜೊತೆಗೇ… ಬದುಕ ಬೇಕೆಂದರೆ ನೀನು ನನ್ನ ಮಾತು ಕೇಳಲೇ ಬೇಕು. ದಿಸ್ ಈಸ್ ಮೈ ಆರ್ಡರ್
“ ಹಾಗಾದ್ರೆ ಗುಡ್ ಬೈ! ನನಗೆ ಈ ಜಗತ್ತಿನಲ್ಲಿ ಅಮ್ಮನಿಗಿಂತ ಶೇಷ್ಟವಾದದ್ದು ಯಾವುದೂ ಇಲ್ಲ.”
* *  *
  ಆ ನಂತರ ರಾಮಾರಾವ್ ದಂಪತಿಗಳ ಮಾತುಗಳನ್ನ ಕೇಳಿಸಿಕೊಳ್ಳಲಿಲ್ಲ.
  ಅವರ ರೂಮ್ ನೊಳಗಿನ ಲೈಟ್ ಆರಿತು.
  ತಾಯಿ ಪರಿಸ್ಥಿತಿ ಮತ್ತು ತನ್ನ ಗಂಡನ ವರ್ತನೆಗಳ ನಡುವೆ ನನ್ನ ಬಿಂದು ಎಷ್ಟು ನಲುಗಿ ಹೋಗಿದ್ದಾಳೆ? ಅಂದಾಜಿಸಿಕೊಂಡರು ರಾಮಾರಾವ್.
    ಕಣ್ಣೀರು, ನೋವು, ನಿಟ್ಟುಸಿರ ನಡುವೆ ದೇವತೆಯಂತೆ ಕಾಣುವ ತನ್ನ ಕಂದನ ಸಂಸ್ಕಾರಕ್ಕೆ, ಮಾನವೀಯ ಗುಣಕ್ಕೆ, ಮೇಣದಂತೆ ಕರಗಿ ಹೋದರು! ಆಶಾವಾದದ ಬೆಳಕಿನ ಎಳೆಯು ಅವರನ್ನ ಕ್ಷಣದ ಸಣ್ಣ ನಿದ್ದೆಗೆ ಸೆಳೆಯಿತು. ನಿದ್ರೆಯ ಸುಳಿಯೊಳಗೆ ಇರುವಾಗಲೇ.. ಮಂಪರು ಮಂಪರಾಗಿ.. ಮಾವಯ್ಯ… ಅಪ್ಪಾ..! ಎಂದು ಕೇಳಿಸಿದಂತಾಯಿತು. ತಡಬಡಿಸಿ ಎದ್ದರು ರಾಮಾರಾವ್ ಮತ್ತು ಶಂಕರ್.
    ಆಗಿನ್ನೂ ಸೂರ್ಯ ಹುಟ್ಟಿರಲಿಲ್ಲ.ಬಹುಶಃ ಆಗಿನ್ನೂ.. ಮುಂಜಾನೆ ಮೂರು ಗಂಟೆ ಇರಬೇಕು. ಮನೆತುಂಬಾ ಇನ್ನೂ .. ದೀಪಗಳೂ ಬೆಳಗುತ್ತಿದ್ದವು. ರಸ್ತೆಯಂಚಿನ ಆಟೊ ಹಿಡಿದು ಅಪ್ಪ ಮಗಳು ಹೊರಟರು.
ಬೆಳಗಾಯಿತು.
ಬಿಂದು ಕಾಣಿಸುತ್ತಿಲ್ಲ ..
” ಮಾಧವ್ ಕಂಗಾಲಾಗಿ ಒಂದೇ ಉಸಿರಿನಲ್ಲಿ ಕೂಗಿದ..
ತುಷಾರಳ ಪಕ್ಕದಲ್ಲಿದ್ದ ಮಲಗಿದ ಶಂಕರ್ ಎದ್ದು “ಮಗನೇ..ನೀನೇನು ಕಂಗಾಲು ಪಡುವ ಅಗತ್ಯವಿಲ್ಲ ಕಣಯ್ಯ.
ಆಕೆ ತನಗೆ ಅಗತ್ಯ ಎನಿಸಿದ್ದನ್ನ ಮಾಡಲು ಮುಖ್ಯವಾದ ಸ್ಥಳಕ್ಕೆ ಹೋಗಿದ್ದಾಳೆ.
ರಾತ್ರಿ ನಾನೂ ಕೂಡಾ ನಿಮ್ಮ ಮಾತುಗಳನ್ನ ಕೇಳಿಸಿಕೊಂಡೆನಯ್ಯ.
ನೀನು ಪಕ್ಕಾ ಸ್ವರ್ಥಿಯಂತೆ ವರ್ತಿಸಿಬಿಟ್ಟೆ ಕಣೋ!
ನೋಡು.. ಆಕೆ ಸಂಸ್ಕಾರವಂತೆ. ಸರಿಯಾದ ನಿರ್ಧಾರವನ್ನ ತೆಗೆದುಕೊಂಡಿದ್ದಾಳೆ. ಪತಿ ಪತ್ನಿಯರ ಪ್ರೇಮಕ್ಕಿಂತಲೂ.. ತಾಯಿ ಮಕ್ಕಳ ಕರುಳ ಸಂಬಂಧವೇ ದೊಡ್ಡದೆಂದು ಆಕೆ ನಿರೂಪಿಸಿದ್ದಾಳೆ. ದೇಹವನ್ನ ಹಂಚಿಕೊಂಡ ಗಂಡನಿಗಿಂತಲೂ ಜನ್ಮವನ್ನು ನೀಡಿದ ತಾಯಿ ಜೀವವೇ ಬೆಲೆಯುಳ್ಳದ್ದು. ಎಂದು ಆಕೆ ತೋರಿಸಿಕೊಟ್ಟಿದ್ದಾಳೆ. ಆಕೆ ಹೋಗುವ ಮೊದಲು ನನ್ನನ್ನು ಎಬ್ಬಿಸಿ, ಕಾಲಿಗೆ ಬಿದ್ದು. ನಮಸ್ಕರಿಸಿ “ ನನ್ನನ್ನ ಕ್ಷಮಿಸಿ ಮಾವ ಅಂತ ತುಷಾರಳನ್ನ ನನಗೊಪ್ಪಿಸಿ ಹೋದಳು. ನಾನೂ ಆಶಿರ್ವಾದಿಸಿ, ಜೊತೆಗೇ.. ಹೋಗಿ ಆಟೋ.. ಹತ್ತಿಸಿ ಬಂದೆ. ಬಿಂದುವಿನಂತಹ ಮಾನವೀಯ ಗುಣದವಳು ನಿನಗೆ ಪತ್ನಿಯಾಗಿ ದೊರಕಿರುವುದು ನಿನ್ನ ಪೂರ್ವ ಜನ್ಮದ ಪುಣ್ಯ” ಎಂದರು ಅಭಿಮಾನದಿಂದ.
   ಹಾಗೆಯೇ.. ಶಂಕರ್ ತಮ್ಮ ಮಗನನ್ನ ತಬ್ಬಿ ಪತ್ನಿ ಪ್ರೇಮಿ! ನೀನೇನೂ..ಕಡಿಮೆಯಲ್ಲ ಬಿಡಯ್ಯ..ಎಂದು ಭುಜದ ಮೇಲೆ ಕೈ ಹಾಕಿ.. “ಮಾಧವ್ ದೇವರು ಅಷ್ಟು ಕೆಟ್ಟವನಲ್ಲ ಕಣೋ.. ಒಳ್ಳೆಯದು ಮಾಡಿದವರಿಗೆ ಒಳ್ಳೆಯದನ್ನೇ ಕರುಣಿಸುತ್ತಾನೆ.ಸುಮ್ಮನೇ ಚಿಂತಿಸಬೇಡ”.ಎನ್ನಲು ಮಾಧವ್ ತಲೆ ತಗ್ಗಿಸಿದ.
    ಆತನೊಳಗಿನ ಸ್ವಾರ್ಥದ ಪೊರೆಯೂ ಹರಿದು, “ಹೌದಪ್ಪ, ನಾನೂ ತಪ್ಪು ಮಾಡಿದೆ. ಮೂರ್ಖನಂತೆ ಹಠ ಮಾಡಿದೆ. ಬಿಂದು ನನ್ನ ಕಣ್ಣು ತೆರಸಿದಳು.ಬಾ..ನಾವೂ ಹೋಗೋಣ ಎನ್ನುತ್ತಾ..ರೆಡಿಯಾಗಿ ಹೊರಟರು.
ಆಸ್ಪತ್ರೆಯಲ್ಲಿ ಮೌನವಹಿಸಿ ನಿಂತಿದ್ದ ಮಾವನ ಬಳಿ ಹೋಗಿ.. “ ನನ್ನನ್ನ ಕ್ಷಮಿಸಿ ಮಾವಯ್ಯ” ಎಂದು ರಾಮಾರಾವ್ ಕಾಲಿಗೆ ಬಿದ್ದನು. ರಾಮಾರಾವ್ ಕೂಡಾ ತುಂಬು ಮನಸ್ಸಿನಿಂದ ಅಳಿಯನನ್ನ ಅಪ್ಪಿಕೊಂಡರು.
ಇಬ್ಬರ ನಡುವೆ ಶಂಕರ ಪ್ರವೇಶಿಸಿ “ ಬೀಗರೇ ಅಳುತ್ತ ಕೂರಲಿಕ್ಕೆ ಸಮಯವಿದಲ್ಲ ಮೊದಲು ನಡೀರಿ ನಾವೆಲ್ಲರೂ ಮತ್ತೆ ಹೊರಗೆ ಹೋಗೋಣ.. ತಂಗಿಯನ್ನ ಸೊಸೆಯನ್ನ ಬೇಗನೇ…ಮನೆಗೇ.. ಕರೆದುಕೊಂಡು ಬರೋಣ” ಎಂದು ನಕ್ಕರು .
———————

ತೆಲುಗು ಮೂಲ: ವಿರಂಚಿ,
ಕನ್ನಡಕ್ಕೆ :ಡಾ.ಶಿವಕುಮಾರ್ ಕಂಪ್ಲಿ.

kampli

2 thoughts on “ಡಾ.ಶಿವಕುಮಾರ್ ಕಂಪ್ಲಿಯವರ ಅನುವಾದ ಕಥೆ-ಕರುಳು ಸಂಬಂಧ

  1. ಗಂಡ ಹೆಂಡತಿ, ತಾಯಿ ಮಗಳ ಸಂಬಂಧಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಅದ್ಭುತ ಕತೆ. ತುಂಬಾ ತುಂಬಾ ಚೆನ್ನಾಗಿದೆ, ಹೃತ್ಪೂರ್ವಕ ಅಭಿನಂದನೆಗಳು.

    1. ಥ್ಯಾಂಕ್ಯು ಗೆಳೆಯ ನಿಮ್ಮ ಓದು ನನ್ನ ಸ್ಪೂರ್ತಿ

Leave a Reply

Back To Top