ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ 

ಶ್ರಮಿಕರ ಬೆವರೇ : ಒಡೆಯರ ಖಜಾನೆಯ ಸಂಪತ್ತು..

ಅವನು ಧೂಳು ತುಂಬಿದ ಹಾಗೂ ಮಾಸಿದ ಸಮವಸ್ತ್ರವನ್ನು ಧರಿಸಿ ಲಘು ಬಗ್ಗೆ ಬಗೆಯಿಂದ ಬೇಗ ಬೇಗನೆ ಅತ್ತ ಓಡುತ್ತಾ ಬರುವ ಬಸ್ಸಿಗಾಗಿ ಕಾಯುತ್ತಿದ್ದಾನೆ…

ಇಲ್ಲಿ, ಇನ್ನೊಬ್ಬ ಕಾರ್ಖಾನೆಯಲ್ಲಿ ಸುಡುವ ಕೆಂಬಣ್ಣದ ಬೆಂಕಿಯಲ್ಲಿ ಬೆಂದು ಕಬ್ಬಿಣದ ಅದಿರುಗಳನ್ನು ತೆಗೆಯುವಲ್ಲಿ ತಲೀನನಾಗಿದ್ದಾನೆ…

ಮೊನ್ನೆ ಫ್ಯಾಕ್ಟರಿಯಲ್ಲಿ ನಡೆದ ವಿದ್ಯುತ್ ಅಪಘಾತಕ್ಕೆ ಕಾರ್ಮಿಕನೊಬ್ಬ ತೀರಿಕೊಂಡು ನಂಬಿದ ಕುಟುಂಬವನ್ನು ಅನಾಥನನ್ನಾಗಿ ಮಾಡಿ ಹೋಗಿದ್ದಾನೆ…

ಈ ಮೇಲಿನ ಘಟನೆಗಳು ಅವಲೋಕನ ಮಾಡಿದಾಗ ಕಾರ್ಮಿಕರ ಬದುಕಿನ ನಿತ್ಯದ ಗೊಳಿನ ಸಂಗತಿಗಳು, ಕತೆಗಳು…

ಕಾರ್ಮಿಕ ಎಂದರೆ ಮೇ ಒಂದು ನೆನಪಾಗುತ್ತದೆ.

“ಜಗತ್ತಿನ ಶೋಷಿತ ಕಾರ್ಮಿಕರೆಲ್ಲರೂ ಒಂದಾದಾಗ ಮಾತ್ರ ಬಂಡವಾಳ ಶಾಹಿಯ ಉತ್ಪನ್ನದಲ್ಲಿ ಅರ್ಧ ಪಾಲು ಸಿಗಲು ಸಾಧ್ಯ..” ಎಂದು ಶ್ರೇಷ್ಠ ಕಾರ್ಮಿಕ ಚಳುವಳಿಯ ಚಿಂತಕ ಕಾರ್ಲ್ ಮಾರ್ಕ್ಸ್ ತನ್ನ ಕೃತಿಯಲ್ಲಿ ಕಾರ್ಮಿಕರ ಹೋರಾಟವನ್ನು ಕುರಿತು ಬರೆಯುತ್ತಾರೆ.

ಕಾರ್ಮಿಕರು ಮತ್ತು ಕಾರ್ಮಿಕ ಚಳುವಳಿಗಳು ಹುಟ್ಟುವುದಕ್ಕಿಂತ ಮುಂಚಿತವಾಗಿ ಸಹಜವಾದ ಕೃಷಿ ಪದ್ಧತಿಯಲ್ಲಿ ಜನಜೀವನ ಸಾಗುತ್ತಿತ್ತು. ಹಣವಿಲ್ಲದೆ ವಸ್ತು ವಿನಿಮಯ ರೂಪದಲ್ಲಿ ಬದುಕು ನಡೆಯುತ್ತಿತ್ತು. ಯಾವಾಗ ಮನುಷ್ಯನ ಕರಕುಶಲತೆಯ ವೃತ್ತಿ ಬದುಕಿನಿಂದ ಉದ್ದಿಮೆತ್ತವಾಲಿತೋ ಆಗ ‘ಬಂಡವಾಳಶಾಹಿಗಳು ಮತ್ತು ಕಾರ್ಮಿಕರು’ ಎನ್ನುವ ಎರಡು ವರ್ಗಗಳ ಉದಯಕ್ಕೆ ಕಾರಣವಾಯಿತು.

ಹೀಗೆ ಉದಯವಾದ ಹೊಸ ಆಯಾಮಗಳ ಜಗತ್ತಿನಲ್ಲಿ ಕಾರ್ಮಿಕ ಚಳುವಳಿಗೆ ತಳಹದಿ ಎಂದು ಹೇಳಬಹುದು. 13 ಮತ್ತು 14ನೆಯ ಶತಮಾನದಲ್ಲಿ ಇಂಗ್ಲೆಂಡ್ ದೇಶದಲ್ಲಿ ಉದ್ಯಮೆಯು ಅದರಲ್ಲೂ ಕಾಟನ್ ಜಿನ್ನಿಂಗ್ ಉದ್ದಿಮೆಯು ಉತ್ತುಂಗದಲ್ಲಿದ್ದಾಗ ಕಾರ್ಮಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಲವಾರು ಹೋರಾಟಗಾರರು ಕಾರ್ಮಿಕ ಚಳುವಳಿಗಳಿಗೆ ಬುನಾದಿ ಹಾಕಿದರು. ಅನೇಕ ಚಿಂತಕರು ಕಾರ್ಮಿಕರ ಬದುಕನ್ನು ಕುರಿತು ಚಿಂತಿಸಿದರು. ಅವರ ಬದುಕನ್ನು ಉತ್ತಮಗೊಳಿಸಲು ಆಗಬೇಕಾದ ಅಗತ್ಯ ಕಾರ್ಯಗಳ ಬಗ್ಗೆ ಚಿಂತನ ಮಂಥನ ನಡೆಯಲಾಯಿತು.

ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಕಾರ್ಖಾನೆಯ ಮಾಲೀಕರ ಅಥವಾ ಬಂಡವಾಳಶಾಹಿಗಳ ಮುಂದೆ ಬೇಡಿಕೆಗಳನ್ನು ಇಟ್ಟಾಗ ಅವರು ಸುತಾರಂ ಒಪ್ಪಲಿಲ್ಲ. ಅದು ನಿರೀಕ್ಷಿತವೂ ಹೌದು..!! ಆಗ ಅವರು ಹೋರಾಟದ ಹಾದಿ ತುಳಿಯುವುದು ಅನಿವಾರ್ಯವಾಯಿತು.

ಮನುಷ್ಯನಿಗೆ ಬೇಕಾದ ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು, ವಸತಿ, ಆಹಾರ, ಶಿಕ್ಷಣ, ವೈದ್ಯಕೀಯ ಸೌಲಭ್ಯಗಳು ಈ ಕನಿಷ್ಠ ಸೌಲಭ್ಯಗಳನ್ನು ನೀಡಲಾರದ ಬಂಡವಾಳಶಾಹಿಗಳು ಕಡಿಮೆ ಕೂಲಿಯಲ್ಲಿ ಹೆಚ್ಚು ಸಮಯ ಕೆಲಸ ಮಾಡಿಕೊಳ್ಳುತ್ತಿದ್ದರು.

ಎಂದಿಗೂ ಅವರಿಗೆ ರಜೆ ಎನ್ನುವುದು ಇರುತ್ತಿರಲಿಲ್ಲ. ಕನಿಷ್ಠ ವಾರಕ್ಕೆ ಒಂದು ರಜೆ ಮಂಜೂರು ಮಾಡುತ್ತಿರಲಿಲ್ಲ. ಹಾಗಾಗಿ ಕಾರ್ಮಿಕರು ದೈಹಿಕವಾಗಿ, ಮಾನಸಿಕವಾಗಿ, ಆರೋಗ್ಯದ ದೃಷ್ಟಿಯಿಂದ ಅವರು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಮಕ್ಕಳಿಗೆ ಸರಿಯಾದ ಶಿಕ್ಷಣ ದೊರೆಯದೆ ಕಾರ್ಮಿಕರ ಮಕ್ಕಳು ಮತ್ತೆ ಕಾರ್ಮಿಕರಾಗಿ ಮುಂದುವರಿದು ದುಡಿಯುವ ಅನಿವಾರ್ಯತೆ ಉಂಟಾಯಿತು. ಇದರಿಂದ ಕಾರ್ಮಿಕರು ಬಂಡವಾಳಶಾಹಿಗಳ ಮೇಲೆ ಆಕ್ರೋಶಗೊಂಡರು. ರಷ್ಯಾದ ಲೆನಿನ್, ರೂಸೋ, ಕಾರ್ಲಮಾರ್ಕ್ಸ್, ಮ್ಯಾಕ್ಸಿಮ್‌ ಗಾರ್ಕಿ ಮುಂತಾದ ಮಹಾನ್ ನಾಯಕರು ಕಾರ್ಮಿಕರ ಕುರಿತು ಹಲವಾರು ಕೃತಿಗಳನ್ನು ಬರೆದರು.
ಕಾರ್ಮಿಕರ ಒಗ್ಗಟ್ಟನ್ನು ಕುರಿತು ಎಚ್ಚರಿಕೆಯ ಭಾಷಣಗಳನ್ನು ಮಾಡಿದರು.ಇದರಿಂದಾಗಿ ರಾಜಪ್ರಭುತ್ವವಿದ್ದ ದೇಶಗಳು ಇಂತಹ ಚಿಂತಕರನ್ನು ಶಿಕ್ಷೆಗೆ ಒಳಪಡಿಸಲಾಯಿತು.

ಅಂದಿನ ದಿನಗಳಲ್ಲಿ
ಕಾರ್ಮಿಕರ ಬದುಕು ತುಂಬಾ ಕನಿಷ್ಠ ಮಟ್ಟದ್ದಾಗಿತ್ತು. ಅವರ ಬದುಕು ಹೇಗಿದೆ ಎನ್ನುವುದನ್ನು ‘ಮದರ್’ ಎನ್ನುವ ಮ್ಯಾಕ್ಸಿಮ ಗಾರ್ಕಿಯವರ ಕೃತಿಯು ಅನಾವರಣಗೊಳಿಸುತ್ತದೆ.
“ಕಾರ್ಖಾನೆಯ ಅಂಚಿನಲ್ಲಿರುವ ಕಾರ್ಮಿಕರ ಗುಡಿಸಲಿನಂತಹ ಮನೆಯು ಹಂದಿಗೂಡಿನಂತೆಯೇ ಇದ್ದು, ಅದರ ಮುಂದೆಯೇ ಚರಂಡಿಯ ನೀರು ಹರಿಯುತ್ತಿತ್ತು. ಅಲ್ಲಿಯೇ ಊಟ ಮಾಡುತ್ತಿದ್ದ ಮಕ್ಕಳು ಚರಂಡಿಯ ಗಬ್ಬು ವಾಸನೆಯನ್ನು ಮಕ್ಕಳು, ವೃದ್ಧರು, ಕಾರ್ಮಿಕರು ಎಲ್ಲರೂ ಅನುಭವಿಸುತ್ತಾ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದರು. ಇದರಿಂದ ರೋಷಿ ಹೋಗಿದ್ದ ತಾಯಿಯು ಮಗನ ಆರೋಗ್ಯಕ್ಕಾಗಿ ಮತ್ತು ಉತ್ತಮ ಬದುಕಿಗಾಗಿ ಬಂಡವಾಳಶಾಹಿಗಳ ವಿರುದ್ಧ ವ್ಯವಸ್ಥಿತ ಹೋರಾಟಕ್ಕೆ ಸಿದ್ಧತೆಯನ್ನು ಮಾಡುತ್ತಿದ್ದಳು…”

ಹೀಗೆ ‘ಮದರ್’ ಕೃತಿಯು ಕಾರ್ಮಿಕ ಚಳುವಳಿಯ ಹುಟ್ಟುವ ಮತ್ತು ಕಟ್ಟುವ ಬಗೆಯನ್ನು ವಿಸ್ತಾರವಾಗಿ ತಿಳಿಸುತ್ತಾ ಹೋಗುತ್ತದೆ.

ಹಾಗಾಗಿ ಕಾರ್ಮಿಕ ಚಳುವಳಿಯಲ್ಲಿ ಮ್ಯಾಕ್ಸಿಮಗಾರ್ಕಿಯವರ ಕೊಡುಗೆ ಅನನ್ಯವೆಂದೆ ಹೇಳಬಹುದು.

ಮುಂದೆ ಜಗತ್ತಿನ ವಿವಿಧ ದೇಶಗಳು ಕಾರ್ಮಿಕರು ಒಂದಾಗಿ ಸಂಘಟನೆಯನ್ನು ಬಲಗೊಳಿಸಿದರು. ಬಂಡವಾಳ ಶಾಹಿಗಳ ವಿರುದ್ಧ ಕೂಗನ್ನು ಹಾಕುತ್ತಾ ಹೋರಾಟಕಿಳಿದರು. ಚಳುವಳಿಗಳು ದಟ್ಟವಾದಾಗ ಅನಿವಾರ್ಯವಾಗಿ ಬಂಡವಾಳಶಾಹಿಗಳು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲೇಬೇಕಾಯಿತು.

ವಸತಿ, ವಾಹನ ಸೌಕರ್ಯ, ಕುಡಿಯುವ ನೀರು, ಶಿಕ್ಷಣ, ವೈದ್ಯಕೀಯ ಸೌಲಭ್ಯಗಳು, ವಾರಕ್ಕೊಂದು ರಜೆ, (ಹಾಫ್ ಲಿವ್), ಹೀಗೆ ವಿವಿಧ ಸೌಲಭ್ಯಗಳನ್ನು ಬಂಡವಾಳಶಾಹಿಗಳು ಕಾರ್ಮಿಕರಿಗೆ ಒದಗಿಸುವುದು ಅನಿವಾರ್ಯವಾಯಿತು.

ಮುಂದೆ ಪ್ರಜಾಸತ್ತಾತ್ಮಕ ಸರ್ಕಾರಗಳು ಕಾರ್ಮಿಕರ ಏಳಿಗೆಗಾಗಿ ಅನೇಕ ಸೌಲಭ್ಯಗಳನ್ನು ಜಾರಿಗೆ ತರಲಾಯಿತು. ಕರ್ನಾಟಕ ಸರ್ಕಾರದ ಕಾರ್ಮಿಕ ಕಲ್ಯಾಣ ಇಲಾಖೆಯು ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನೋಂದಣಿ ಮಾಡಿಸಿಕೊಂಡ ಕಾರ್ಮಿಕರಿಗೆ ಅಪಘಾತ ವಿಮೆ, ಆರೋಗ್ಯವೇ ವಿಮೆ, ಕಾರ್ಮಿಕರ ಮಕ್ಕಳಿಗೆ ಶಿಕ್ಷಕ್ಕೆ ಒತ್ತು ಕೊಡುವ ಕಿಟ್ಟ್ ಗಳು, ಕಾರ್ಮಿಕ ಕಾರ್ಡುಗಳು, ವಿವಾಹದ ಖರ್ಚಿನ ಅನುದಾನ, ಇದರೊಂದಿಗೆ ವಿವಿಧ ಕರಕುಶಲತೆಯ ಕಾರ್ಮಿಕರಿಗೆ ಸಲಕರಣೆಗಳನ್ನು ಒದಗಿಸುವುದು, ತಮ್ಮ ವೃತ್ತಿಗೆ ಸಂಬಂಧಿಸಿದ ರಕ್ಷಣಾತ್ಮಕ ಕವಚಗಳನ್ನು ನೀಡುವುದು ಹೀಗೆ ವಿವಿಧ ರೀತಿಯ ಸೌಲಭ್ಯಗಳನ್ನು ಸರ್ಕಾರಗಳು ಒದಗಿಸುತ್ತಿರುವುದು ಹಿಂದಿನ ಹೋರಾಟದ ಬೆವರಿನ ಫಲವೆಂದೆ ಹೇಳಬಹುದು.

ಕಾರ್ಮಿಕರ ಅದರಲ್ಲೂ ಕೂಲಿಕಾರ್ಮಿಕರು, ಕಾರ್ಖಾನೆಯ ಕಾರ್ಮಿಕರು, ಪೌರಕಾರ್ಮಿಕರು, ಸ್ಮಶಾನ ಕಾರ್ಮಿಕರು, ಆರೋಗ್ಯ ಕ್ಷೇತ್ರದ ಕಾರ್ಮಿಕರು, ಕೌಶಲ್ಯ ಆಧಾರಿತ ಕಾರ್ಮಿಕರ…ಬೆವರಿನ ದುಡಿಮೆಯ ಫಲವೇ ಶ್ರೀಮಂತರ ಖಜಾನೆ ತುಂಬಲು ಸಾಧ್ಯ ಎನ್ನುವುದನ್ನು ಕಾರ್ಮಿಕ ಚಳುವಳಿಗಳು ಒತ್ತಿ ಒತ್ತಿ ಹೇಳಿರುವುದರಿಂದ ಅದು ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳು ಜಾರಿಗೆ ಬರಲು ಸಾಧ್ಯವಾಗಿವೆ. “ಬೆವರು ಹರಿಸಿ ದುಡಿಯುವ ವ್ಯಕ್ತಿಗೆ ಸ್ವಾಭಿಮಾನ ಎಷ್ಟು ಮುಖ್ಯವೋ ಅವನ ವಯಕ್ತಿಕ ಬದುಕು ಅಷ್ಟೇ ಮುಖ್ಯ ಹಾಗಾಗಿ ಆತನ ವೈಯಕ್ತಿಕ ಬದುಕಿನಲ್ಲಿ ಮಕ್ಕಳು, ಮಡದಿ ತನ್ನ ಪೋಷಕರನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತ ಕಾರ್ಮಿಕರ ಕಲ್ಯಾಣ ಆಯಾ ಕಾರ್ಖಾನೆಯ ಮಾಲೀಕರು, ವಹಿಸಿಕೊಂಡಾಗ ಮೇ ಒಂದರ ಚಳುವಳಿಯು ಸಾರ್ಥಕ ಪಡೆದುಕೊಳ್ಳುತ್ತದೆ.

ಈ ತಿಂಗಳ ಮೇ ಒಂದರ ಕಾರ್ಮಿಕರ ಹೋರಾಟದ ಇತಿಹಾಸಕ್ಕೆ ಅರ್ಥಪೂರ್ಣವಾಗಬೇಕಾದರೆ ಕಾರ್ಮಿಕರ ಬದುಕು ಹಸನಾಗಬೇಕು. ಕೆಂಪು ಧ್ವಜದ ಹೋರಾಟಕ್ಕಾಗಿ ತ್ಯಾಗ ಬಲಿದಾನ ಮಾಡಿದ ಸಂಗಾತಿಗಳನ್ನು ನೆನಪಿಸುತ್ತಾ, ಕಾರ್ಮಿಕ ಸಂಘಟನೆಗಳು ಚಿರಾಯುವಾಗಲಿ… ನಮ್ಮ ನಿತ್ಯ ಬದುಕಿಗೆ ಬೇಕಾಗಿರುವ ವಸ್ತುಗಳನ್ನು ಉತ್ಪಾದಿಸುವ, ಸೇವೆಯನ್ನು ಮಾಡುವ ಅವರ ಒಲವನ್ನು ಮರೆಯಬಾರದು ನಾವು. ಅವರ ಬದುಕು ಕೂಡ ನಂದನವಾಗಲೆಂದು ಶುಭ ಹಾರೈಸೋಣ…


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ

ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ

ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ
 ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ

Leave a Reply

Back To Top