ಇಂದಿರಾ ಮೋಟೆಬೆನ್ನೂರ ಕವಿತೆ ಎದೆ ಬೆಳಕನರಸುತ್ತ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರು

ಎದೆ ಬೆಳಕನರಸುತ್ತ

ಝಗಮಗಿಸುವ ಹೊಳಪ ಬೆಟ್ಟವನೇ ತೊರೆದು
ಎದೆಯ ಬೆಳಕ ಅರಸಿ ಬಂದವನಲ್ಲವೇ ನೀನು….

ಕಣ್ಣು ಕೋರೈಸುವ ರೂಪ ರಾಶಿಯನೇ ತೊರೆದು
ಹೃದಯ ಸಿರಿಯ ಅರಸಿ ಬಂದವನಲ್ಲವೇ ನೀನು…

ಸಾವಿರ ಸಿರಿಸಂಪದ ತೊರೆದು ಅಂತರಂಗದ
ಅಂತರ್ಗಂಗೆಯ ಅರಸಿ ನಡೆದವನಲ್ಲವೇ ನೀನು…

.

ಚೆಲುವಿನ ಬಲೆಯಲಿ ಒಲವಿಲ್ಲದೇ ಮರಳಿ
ಬೊಗಸೆ ಪ್ರೀತಿಯ ಹಂಬಲಿಸಿ ಬಂದವನಲ್ಲವೇ ನೀನು..

ಹಿಡಿ ಸ್ನೇಹಕಾಗಿ ಕುಡಿ ಬೆಳಕಿಗಾಗಿ ಹುಡಿ ಭಾವಕಾಗಿ
ಜೀವ ಮಿಡಿತ ಅರಸಿ ಬಂದವನಲ್ಲವೇ ನೀನು…

ಮನುಕುಲದ ಮನದ ನೋವ ಬುಗ್ಗೆಯಲಿ
ಶಾಂತಿ ಕಿರಣ ಅರಸಿ ನಿಂದವನಲ್ಲವೇ ನೀನು…

ಸಾವಿಲ್ಲದ ಸಾಸಿವೆಯ ತರಲು ಹೇಳಿ ಬದುಕ
ಸತ್ಯದ ದರ್ಶನ ನೀಡಿದವನಲ್ಲವೇ ನೀನು…

ಭೋರ್ಗರೆವ ಜಲಪಾತದ ಅಬ್ಬರವ ತೊರೆದು
ಶಾಂತ ತೊರೆಯೊಡಲ ಸೇರ ಬಂದವನಲ್ಲವೇ ನೀನು..

ಮುತ್ತಿದ ಕತ್ತಲಲ್ಲಿ ಸಿದ್ಧಾರ್ಥ್ ಬುದ್ಧನಾಗಲು
ಎದ್ದು ಬೆಳಕನರಸುತ ಸಾಗಿದವನಲ್ಲವೇ ನೀನು…


ಇಂದಿರಾ ಮೋಟೆಬೆನ್ನೂರ

2 thoughts on “ಇಂದಿರಾ ಮೋಟೆಬೆನ್ನೂರ ಕವಿತೆ ಎದೆ ಬೆಳಕನರಸುತ್ತ

  1. ಇಂದಿರಾ ಅವರ ಕವಿತೆ ಸುಂದರವಾಗಿ ಮೂಡಿಬಂದಿದೆ. ಎದೆಯ ಬೆಳಕನು, ಜೀವ ಮಿಡಿತದಿ ಅಂತರಂಗದ ಅಂತರ್ಗಂಗೆಯನು, ಹೃದಯ ಸಿರಿಯನು ಅರಸಿ ಬರುವುದೇ ಸಂತೃಪ್ತ ಬದುಕಿನ ಹಾದಿ
    @ ಡಾ. ನಿಂಗು ಸೊಲಗಿ

Leave a Reply

Back To Top