ಮೇ-ದಿನದ ವಿಶೇಷ

ಡಾ.ಪ್ರಿಯಂವದಾ ಮ ಹುಲಗಬಾಳಿ

ಕಾರ್ಮಿಕದಿನಾಚರಣೆ

ಕಾಯಕವೇ ಕೈಲಾಸ ಎಂದು ಸಾರಿದರು ಬಸವಣ್ಣ ಜಗತ್ತಿನ ದಾರ್ಶನಿಕ ಲೋಕದ ಹರಿಕಾರ ಶ್ರಮದ ಮಹತ್ವ ತಿಳಿಸಿದರು. ದುಡಿಮೆಗೆ ಇರುವ ಬೆಲೆ ಜಗತ್ತಿನಲ್ಲಿ ಬೇರಾವುದಕ್ಕೂ ಇಲ್ಲ. ದುಡಿಯುವ ವರ್ಗ ಅಂದರೆ ಶ್ರಮಿಕರು ಇಲ್ಲದಿದ್ದರೆ ಇಂದು ಶ್ರೀಮಂತ ವರ್ಗವೂ ಇರುತ್ತಿರಲಿಲ್ಲ. ಅದನ್ನೆ ನಾವು ಹನ್ನೆರಡನೆಯ ಶತಮಾನದಲ್ಲಿ ಕಾಣುತ್ತೇವೆ. ದುಡಿಯುವ ಸಮುದಾಯವೇ ಅಲ್ಲಿತ್ತು. ಅವರನ್ನೆಲ್ಲ ಅವರ ಕಾಯಕದಿಂದಲೇ ಗುರುತಿಸುತ್ತಿದ್ದರು. ಉದಾ ನೂಲಿಯ ಚಂದಯ್ಯ, ಮಡಿವಾಳ ಮಾಚಯ್ಯ,ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಷ,ಮೇದಾರ ಕೇತಯ್ಯ,ಗಾಳದ ಕಣ್ಣಪ್ಪಯ್ಯ ,ಕುಂಬಾರ ಗುಂಡಯ್ಯ, ಹೀಗೆ  ಸಮಾಜಕ್ಕೆ ಅಗತ್ಯವಿರುವ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿ ಅಲ್ಲಿದ್ದರು.
    ಬಡಿಗತನ,ನೇಕಾರಿಕೆ,ಹುಲ್ಲುಕೊಯ್ಯುವ,ಬಟ್ಟೆ ಒಗೆಯುವ, ದೋಣಿ ನಡೆಸುವ,ಮಣ್ಣಿನ ಪಾತ್ರೆ ಯಾರಿಸುವ,ಕಟ್ಟಡ ಕಟ್ಟುವ,ಬೀದಿ ಸ್ವಚ್ಛ ಮಾಡುವ, ಬಟ್ಟೆ ಹೊಲೆಯುವ,ಕ್ಷೌರ ಮಾಡುವ ಹೀಗೆ ಪ್ರತಿಯೊಂದು ಕೆಲಸಕ್ಕೂ  ಶ್ರಮೀಕವರ್ಗ ಬೇಕೆ ಬೇಕು. ನಾವು ಇಂದು ಮಾನವ ಸಂಪನ್ಮೂಲದ ಬದಲಿಗೆ ಯಂತ್ರಗಳ ಬಳಕೆ ಹೆಚ್ಚಾಗಿದೆ ಎಂದರೂ ಶ್ರಮೀಕರಿಲ್ಲದಿದ್ದರೆ ಯಾವುದೂ ಸೂಸುತ್ರವಾಗಿ ನಡೆಯುವುದಿಲ್ಲ. ಅಂಥ ಎಲ್ಲ ಕಾಯಕ ಜೀವಿಗಳನ್ನು ಗೌರವಿಸುವ ದಿನವೇ ‘ ಕಾರ್ಮಿಕ ದಿನಾಚರಣೆ’. ಅದನ್ನು ಮೇ ಡೆ ಎಂದೂ ಆಚರಿಸುತ್ತೇವೆ.
ಆಚರಣೆಯ ಹಿನ್ನೆಲೆ:
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ ಡೇ). ಮೇ ದಿನ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ.
1886ರ ವರ್ಷದ ಮೇ 4ರಂದು ಚಿಕಾಗೋದ ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಈ ಆಚರಣೆ ಹಿನ್ನೆಲೆಯಾಗಿ ಇಟ್ಟುಕೊಂಡಿವೆ.
ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ ಮೇ 1ರಂದು ಉತ್ಸವಾಚರಣೆ ಮಾಡಬೇಕೆಂದು ರಾಬರ್ಟ್ ಓವೆನ್ ಸೂಚಿಸಿದ್ದ. ಆದರೆ ವಾಸ್ತವವಾಗಿ 1889ಕ್ಕಿಂತ ಮುಂಚೆ ಮೇ ದಿನಾಚರಣೆ ಮಾಡಿದ್ದಕ್ಕೆ ಆಧಾರಗಳು ದೊರಕುವುದಿಲ್ಲ. ಆ ವರ್ಷ ಪ್ಯಾರಿಸಿನಲ್ಲಿ ಸಮಾವೇಶ ಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯದ ಪ್ರಥಮ ಅಧಿವೇಶನದಲ್ಲಿ ಮೇ 1ನೆಯ ದಿನಾಂಕವನ್ನು (ಅದು ವಾರದ ಯಾವ ದಿನವೇ ಬರಲಿ) ವಾರ್ಷಿಕ ಅಂತರ ರಾಷ್ಟ್ರೀಯ ಉತ್ಸವದಿನವೆಂದು ಆಚರಿಸಬೇಕೆಂದು ನಿರ್ಧರಿಸಲಾಯಿತು. ಮೇ 1ರಂದು ಸಾರ್ವಜನಿಕ ರಜಾದಿನವೆಂದು ಘೋಷಿಸಬೇಕೆಂದು ಒತ್ತಾಯಪಡಿಸಲು ನೇರ ಕ್ರಮ ಕೈಗೊಳ್ಳಬೇಕೆಂದೂ ನಿರ್ಣಯಿಸಲಾಯಿತು.ಭಾರತದಲ್ಲಿ ಮೇ ದಿನವೇ ಕಾರ್ಮಿಕ ದಿನ. 20ನೆಯ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ-ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿದಾಗಿನಿಂದ-ಇದರ ಆಚರಣೆ ಆರಂಭವಾಯಿತು. ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿದ್ದ ಭಾರತೀಯ ನಾವಿಕರು. ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆಯನ್ನೊಳಗೊಂಡ ಪ್ರದರ್ಶನಚಿತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವಸಭೆಗೆ ಹೋದರು (1925). ಭಾರತದಲ್ಲಿ 1927 ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ. ಭಾರತದಲ್ಲಿ ಈ ಉತ್ಸವದಲ್ಲಿ ಭಾಗವಹಿಸುವವರು ಕಾರ್ಮಿಕ ಸಂಘಗಳವರು, ಸಮಾಜವಾದಿಗಳು ಮತ್ತು ಕೆಲವು ಬುದ್ಧಿ ಜೀವಿಗಳು ಮಾತ್ರ. 1927ರಲ್ಲಿ ಮುಂಬಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು.
ಕಾರ್ಮಿಕ ವರ್ಗದ ಸುರಕ್ಷತೆ
          ನಮ್ಮ ಕಾರ್ಮಿಕ ಸಂಘಟನೆಗಳೆಲ್ಲ ಸೇರಿ ಈ ದಿನವನ್ನು ಸಂಭ್ರಮದಿಂದ ಆಚರಿಸುತ್ತ ಬಂದಿವೆ. ಶ್ರಮ ಜೀವಿಗಳನ್ನು ಆದರಿಸಿದರೆ ಶ್ರಮವನ್ನು ಗೌರವಿಸಿದಂತೆ. ಭಾರತದಲ್ಲಿ ಬೃಹತ್ ಸಂಖ್ಯೆಯಲ್ಲಿರುವ ಕಾರ್ಮಿಕರು ದೇಶದ ಆಧಾರ ಸ್ತಂಭಗಳಾಗಿದ್ದಾರೆ. ಸಂಘಟಿತ ವಲಯದ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು, ಮಹಿಳಾ ಕಾರ್ಮಿಕರು, ಕೂಲಿಕಾರ್ಮಿಕರು ಹೀಗೆ ಕಾರ್ಮಿಕ ಗುಂಪುಗಳನ್ನು ಕಾಣುತ್ತೇವೆ. ಕಾರ್ಮಿಕ ವಲಯದಲ್ಲಿ ಅಪಾಯಕಾರಿ ವಲಯಗಳು ಉಂಟು. ಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸಫಾಯಿ ಕರ್ಮಚಾರಿ ಕಾರ್ಮಿಕರು ಹೊಲಗದ್ದೆಗಳಲ್ಲಿ ಕೀಟನಾಶಕ ಸಿಂಪಡಿಸುವ ಕಾರ್ಮಿಕರು ಈ ಮುಂತಾದ ಕಾರ್ಮಿಕರು ಸರಿಯಾದ ಸುರಕ್ಷಿತ ಕ್ರಮಗಳನ್ನು ಪಾಲಿಸದಿದ್ದರೆ ಇವರೆಲ್ಲರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಆರೋಗ್ಯವೇ ನಿಜವಾದ ಸಂಪತ್ತು ಹಾಗಿದ್ದ ಮೇಲೆ ಉದ್ಯೋಗ ಸ್ಥಳಗಳಲ್ಲಿ ನೌಕರರ ಆರೋಗ್ಯವನ್ನು ಕಾಪಾಡುವಂತ ಸೂಕ್ತ ಕ್ರಮಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಏನೆಲ್ಲ ಕಷ್ಟ ಬಂದರೂ ಬದುಕ ಬಂಡಿಯನ್ನು ಮುನ್ನಡೆಸುವ ಜವಾಬ್ದಾರಿ ಹೆಗಲ ಮೇಲಿರುವುದರಿಂದ ಪ್ರತಿಯೊಬ್ಬ ಕಾಯಕರ ಜೀವಿಯು ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಜಗ್ಗದೆಯ ಕುಗ್ಗದೆಯ ಹಿಗ್ಗಿ ನಡೆ ಮುಂದೆ ಎಂಬ ಕುವೆಂಪು ಅವರ ಪಾಂಚಜನ್ಯದ ಸಾಲುಗಳಂತೆ ಮುನ್ನಡೆಯುತ್ತಾನೆ.
‘ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು’ ಎಂಬ ಕುವೆಂಪು ಅವರ ಕವನದ ಸಾಲುಗಳನ್ನು ಕಾರ್ಮಿಕರ ಬದುಕಿಗೂ ಅನ್ವಯಿಸುವ ಅವಶ್ಯಕತೆ ಇಲ್ಲ ಶ್ರಮದ ಸಂಘರ್ಷದ ಜೀವನವನ್ನು ನಡೆಸುತ್ತಿರುವ ಕಾರ್ಮಿಕರ ಬದುಕಿಗೆ ಭದ್ರತೆಯ ಅವಶ್ಯಕತೆ ಇದೆ ಮಹಿಳಾ ಕಾರ್ಮಿಕರಿಗೆ ಕೂಲಿಯಲ್ಲಿ ಸಮಾನತೆಯನ್ನು ನೀಡಬೇಕಿದೆ ಕಾರ್ಮಿಕರಿಗೆ ಆರ್ಥಿಕ ಭದ್ರತೆಯ ಜೊತೆಗೆ ಆರೋಗ್ಯದ ಭದ್ರತೆ ಮಕ್ಕಳ ಶಿಕ್ಷಣದ ಭದ್ರತೆ ಇವೆಲ್ಲವುಗಳು ಒದಗಿಸಿ ಕೊಟ್ಟಾಗ ಮಾತ್ರ ನಾವು ಮೇ ದಿನವನ್ನು ಆಚರಿಸಿದ್ದಕ್ಕೆ ಸಾರ್ಥಕವಾಗುತ್ತದೆ.
‘ಕುಡಿವ ನೀರೇ ತೀರ್ಥ ತಿನ್ನುವ ರೊಟ್ಟಿ ಶಿವನ ಪ್ರಸಾದ
ಶ್ರಮದ ಬೆವರಿ ಸ್ನಾನ ದುಡಿತದ ಹಾಡಿ ಮಂತ್ರ ನೀನಾದ’ ಎಂಬ ಕಾವ್ಯಾನಂದರ ಕವನದ ಸಾಲುಗಳನ್ನು ಮನಿಸಿಕೊಂಡರೆ ಕಷ್ಟಪಟ್ಟು ದುಡಿಯುವವರು ಸಾರ್ಥಕ ಬದುಕಿನ ಚಿತ್ರಣ ಕಣ್ಮುಂದೆ ಬರುತ್ತದೆ.
“ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದಡೂ ಮರೆಯಬೇಕು
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೆ ಕೈಲಾಸವಾದ ಕಾರಣ
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.”
ಎಂಬ ವಚನದಂತೆ ದುಡಿತವೇ ದುಡ್ಡಿನ ತಾಯಿ ಆಳಾಗಿ ದುಡಿ ಅರಸನಾಗಿ ಉಣ್ಣು ಎಂಬ ಮಾತುಗಳನ್ನ ಮೈಗೂಡಿಸಿಕೊಂಡು ದುಡಿಯುವ ಕಾರ್ಮಿಕರನ್ನು ನಾವೆಲ್ಲ ಗೌರವಿಸೋಣ. ನಿಮ್ಮ ಮನೆಗೆ ಕೆಲಸಕ್ಕೆ ಬರುವ ಮನೆಗೆಲಸದವರನ್ನು ನಿಮ್ಮ ಬೀದಿ ಹಚ್ಚಗೊಳಿಸುವ ಸಫಾಯಿ ಕರ್ಮಚಾರಿಗಳನ್ನು ನೀವು ಉದ್ಯೋಗ ಮಾಡುವ ಸ್ಥಳದಲ್ಲಿರುವ ಕೂಲಿ ಕಾರ್ಮಿಕರನ್ನು ಅವರ ಕೆಲಸವನ್ನು ಗೌರವಿಸಿ ಅವರ ನೋವಿನಲ್ಲಿ ಸಾಂತ್ವಾನದ ನಾಲ್ಕು ಮಾತು ಹೇಳಿ ಅಂದಾಗ ಈ ದಿನದ ಆಚರಣೆ ಸಾರ್ಥಕವಾಗುತ್ತದೆ. ‘ಸಕಾರಾತ್ಮಕ ಸುರಕ್ಷತೆ ಮತ್ತು ಆರೋಗ್ಯ ಸಂಸ್ಕೃತಿಯನ್ನು ನಿರ್ಮಿಸಲು ಒಟ್ಟಾಗಿ ಕಾರ್ಯನಿರ್ವಹಿಸಿ’ ಇದು 2022ರ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಧ್ಯೇಯ ವಾಕ್ಯವಾಗಿತ್ತು . ಈ ವಾಕ್ಯವನ್ನು ಪಾಲಿಸಿ ಕಾರ್ಮಿಕರ ಹಿತ ಕಾಪಾಡೋಣ.

——————


      ಡಾ.ಪ್ರಿಯಂವದಾ ಮ ಹುಲಗಬಾಳಿ

Leave a Reply

Back To Top