ಬಸವ ಜಯಂತಿ ವಿಶೇಷ

ಪ್ರೊ ರಾಜನಂದಾ ಘಾರ್ಗಿ

ಸುವರ್ಣ ಯುಗ

ನಿಜವಾಗಿಯೂ 12ನೇ ಶತಮಾನ ಮಹಿಳೆಯರ ಪಾಲಿಗೆ ಸುವರ್ಣಯುಗವಾಗಿತ್ತು. ವಿಶ್ವಮಾನವ ಬಸವಣ್ಣನವರು ಸ್ತ್ರೀಯರಿಗೆ ಧ್ವನಿಯನ್ನು ಕೊಟ್ಟರು, ಅಕ್ಷರ ಕಲಿಸಿ ವಾಕ್ ಸ್ವಾತಂತ್ರ್ಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟರು. ಉಚ್ಚ ಕುಲದವರ ಜೊತೆಗೆ ಶೂದ್ರ ದಲಿತ ವರ್ಗದವರು ಕೂಡ ಓದು-ಬರಹ ಕಲಿತು ಅನುಭವ ಮಂಟಪದ ಶಿವಾನುಭವ ಚರ್ಚೆಗಳಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ವಚನಗಳ ರೂಪದಲ್ಲಿ ಶರಣ ರೊಂದಿಗೆ ಹಂಚಿಕೊಂಡರು. ಬಸವ ಯುಗದಲ್ಲಿ ಈ ಅಕ್ಷರಕ್ರಾಂತಿ ವಿಶೇಷವಾದದ್ದು. ಅವಕಾಶ ಸಿಕ್ಕರೆ ಸ್ತ್ರೀಯರು ಎಂತಹ ಉತ್ಕೃಷ್ಟವಾದ ಸಾಹಿತ್ಯವನ್ನು ಸೃಷ್ಟಿಸಬಲ್ಲರು ಎಂಬುದನ್ನು ಶರಣೆಯರು ತೋರಿಸಿಕೊಟ್ಟರು. ವಿಶೇಷತೆಯೆಂದರೆ ಈ ವಚನಕಾರ್ತಿಯರಲ್ಲಿ ದಲಿತ ವರ್ಗಕ್ಕೆ ಸೇರಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಕ್ರಾಂತಿಯ ಫಲವಾಗಿ ಅನೇಕ ಶರಣೆಯರು ಕಲಿತು ಅನುಭವ ಸಂಪನ್ನರಾಗಿ ತಮ್ಮ ಶಿವಾನುಭವ ಗಳನ್ನು ಸೈದ್ಧಾಂತಿಕ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ವಚನಗಳನ್ನು ರಚಿಸಿ ಆಧ್ಯಾತ್ಮಿಕ ಸಾಧನೆಯನ್ನು ತೋರಿದ್ದಾರೆ. ಈ ವಚನಕಾರ್ತಿಯರು ಧಾರ್ಮಿಕ ಸಾಮಾಜಿಕ ಕ್ರಾಂತಿಗಳಲ್ಲಿ ಶರಣರ ಸಮನಾಗಿ ಪಾಲ್ಗೊಂಡಿದ್ದಾರೆ. ವಚನಕಾರ್ತಿಯರಲ್ಲಿ ಬಹಳಷ್ಟು ಶರಣೆಯರು ಸಂಸಾರಿಗಳಾಗಿದ್ದರು. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂಬಂತೆ ದಾಂಪತ್ಯ ಧರ್ಮವನ್ನು ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ. ಬದುಕನ್ನು ಅಪಾರವಾಗಿ ಪ್ರೀತಿಸಿದ ಅವರು ಪ್ರಾಪಂಚಿಕ ಸುಖದಲ್ಲಿಯೇ ಪರಮಾರ್ಥವನ್ನು ಕಂಡುಂಡು ಇತರರಿಗೆ ಮಾರ್ಗದರ್ಶನ ಮಾಡಿದ್ದಾರೆ. ಶರಣೆಯರ ಜೀವನವು ಧರ್ಮದ ತಳಹದಿಯ ಮೇಲೆ ನಿಂತಿದೆ. ಧರ್ಮ ಹಾಗೂ ದಾಂಪತ್ಯ ಧರ್ಮ ಎರಡರ ಸಮನ್ವಯವೇ ಪರಿಪೂರ್ಣ ಜೀವನ ಎಂದು ಅರಿತು ಅವರು ಲೌಕಿಕ ಮತ್ತು ಅಲೌಕಿಕ ಎರಡರಲ್ಲಿಯೂ ಸಿದ್ಧಿಯನ್ನು ಪಡೆದವರಾಗಿದ್ದರು. ಶರಣರು ಕೊಟ್ಟ ಸ್ವಾತಂತ್ರ್ಯ-ಸಮಾನತೆ ಗಳನ್ನು ಅರ್ಥಪೂರ್ಣವಾಗಿ ಅನುಭವಿಸಿದ ಶರಣೆಯರು ಮನೆ ಸಂಸಾರ ಗೃಹಕೃತ್ಯದ ನಿರ್ವಹಣೆಯ ಜೊತೆಗೆ ಅನೇಕ ಅನುಭವಪೂರ್ಣವಾದ ವಚನಗಳನ್ನು ಕೂಡ ರಚಿಸಿದ್ದಾರೆ. ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು ತಾ ಮಾಡಿದ ಹೆಣ್ಣು ತನ್ನ ನಾರಾಯಣನ ಎದೆಯನೇರಿತ್ತು ಅದು ಕಾರಣ ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ಇದು ಶರಣರು ಹೆಣ್ಣನ್ನು ಕಂಡು ಗೌರವಿಸಿದ ರೀತಿಯಾಗಿತ್ತು


Leave a Reply

Back To Top