ಬಸವ ಜಯಂತಿ ವಿಶೇಷ

ಡಾ ಡೋ.ನಾ.ವೆಂಕಟೇಶ

ನಿನ್ನ ವಚನ ಭ್ರಷ್ಟರು

ಕಳ ಬೇಡ ಕೊಲ ಬೇಡ ಹುಸಿಯ ನುಡಿಯಲು ಬೇಡ ತನ್ನ ಬಣ್ಣಿಸ ಬೇಡ ಇದಿರ ಹಳಿಯಲು ಬೇಡ ಮುನಿಯ ಬೇಡ ಅನ್ಯರಿಗೆ ಅಸಹ್ಯ ಪಡ ಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ

ಅಯ್ಯಾ
ಈಗೀಗ ಈ ಮಾತು
ಮುತ್ತು ಆಗದಂತಹ ಮಾತು
ಈಗೀಗ ಈ ಮಾತು
ಮಾಣಿಕ್ಯವೇ ಅಲ್ಲದಂತಹ ಮಾತು!
ಅಂತರಂಗ ಶುದ್ಧಿ ಇಲ್ಲ
ಬಹಿರಂಗ ಶುದ್ಧಿ ಮೊದಲೇ ಇಲ್ಲ .

ಬೆಳಗಿಸಿ ಸುಜ್ಞಾನ ದೀಪ
ಬೋಧಿಸಿದಿರಿ ನಮಗೆ
ಸಾಮಾನ್ಯರಿಗೆ

ನಾನೇನ ಮಾಡಲಿ ಬಡವ ನಾ!
ನನ್ನ
ಕಾಲೇ ಕಂಭ
ದೇಹ ದೇಗುಲ
ಶಿರ ಹೊನ್ನ ಕಳಶ
ಸ್ಥಾವರಕ್ಕಳಿವುಂಟು
ಜಂಗಮಕ್ಕಳಿವಿಲ್ಲ !

ಹೇಳಿದಿರಿ ಅಜ್ಞಾನಿಗಳಿಗೆ
ಮೋಚಿ ತಳವಾರ ಇವ
ನಮ್ಮವನಯ್ಯ!
ಇವ ಪಂಡಿತ
ಇವ ಪ್ರಕಾಂಡ ಇವನೂ ನಮ್ಮವನೇ!
ಇವ ಬೇಡ, ಇವ ಜಂಗಮ
ಇವನೂ ನಮ್ಮವನಯ್ಯ!

ಆದರಾಗಲಿಲ್ಲ ಇವರೆಲ್ಲ
ನಿಜ ಜಂಗಮರು
ನಿಜ ಮನುಜರು!
ಬಡಿದಾಡಿದರು ಬರಿದೆ
ಸ್ಥಾವರಕ್ಕಾಗಿ
ಬರಿದೆ ಸ್ಥಾನಕ್ಕಾಗಿ

“ಕಳ ಬೇಡ
ಕೊಲ ಬೇಡ ಹುಸಿಯ
ನುಡಿಯಲು ಬೇಡ”

ಅಣ್ಣಾ ಬಸವಣ್ಣ-
ಅಂತರಂಗ ಶುದ್ಧಿ ಎಲ್ಲಿ
ಎಲ್ಲಿಯ ಬಹಿರಂಗ ಶುದ್ಧಿ!!

ವಚನಗಳ ಭ್ರಷ್ಟರು ಇಲ್ಲಿ-
ಕ್ಷಮಿಸು
ಕೂಡಲಸಂಗಮ ದೇವ


Leave a Reply

Back To Top