ಲಹರಿ ಸಂಗಾತಿ
ಶಾರದಜೈರಾಂ.ಬಿ
“ಹೇಳಿಬಿಡು ಕಾರಣ”

“ತೆಪ್ಪರ್ ಶುಂಠಿ”ನಿನಗೆ ಹೀಗೆ ರೇಗಿಸುತ್ತಿದ್ದೇನಲ್ಲವೇ?ಆಗ ನೀನು ಮುಖ ಊದಿಸಿಕೊಂಡು ನೋಡುವ ನೋಟಕ್ಕೆ ಹಾಗೇ ಸರಿದು ಕೆನ್ನೆಗೊಂದು ಮುದ್ರೆ ಒತ್ತಿಬಿಡಲೇ ಅನ್ನಿಸುವಷ್ಟು.
ಈಗ ಬದುಕಿನಲ್ಲಿ ಎಲ್ಲವೂ ಇದೆ ಆದರೆ ನೀನಿಲ್ಲದ ಕೊರಗೊಂದಿದೆ ನೋಡು ಬದುಕಿನಲ್ಲಿ ಬಯಸಿದ್ದೇಲ್ಲಾ ಸಿಕ್ಕಿಬಿಟ್ಟರೆ ಸುಖಕ್ಕೆ ಎಲ್ಲಿ ಬೆಲೆ.ಇನ್ನಾಗದೂ ನನ್ನಿಂದ ನನ್ನೆದೆಯಲ್ಲಿ ಹೂತಿಟ್ಟ ಭಾವಗಳು ಉಸಿರುಗಟ್ಟಿ ಹೊರಬರಲು ಹವಣಿಸುತ್ತಿವೆ.ಮನದ ತಕರಾರಿಗೆ ಈ ಪತ್ರ..
ಅಂದು ನಿನ್ನೋಂದಿಗೆ ಕಳೆದ ಪ್ರತಿಕ್ಷಣವೂ ಕಾಪಿಟ್ಟಿದ್ದೇನೆ ಎದೆಯಲ್ಲಿ, ಚಕೋರಂಗೆ ಚಂದ್ರಮನ ಕಾಯುವಂತೆ ನೀ ಮತ್ತೋಮ್ಮೆ ಬರುವೆಯಾ ಆ ಕ್ಷಣಕ್ಕಾಗಿ ಕಾತರದಿ ಕಾದು ಕಾದು ಕಾಲನ ದೂಷಿಸುತ್ತಿರುವೆ
ನೀನೋ ಮಾತಿಗಿಳಿದರೆ ಪಿಕ ಉಲಿವ ಸವಿನುಡಿಗಳ ಸುಧೆಯಂತೆ ಕೇಳುತ್ತಾ ಗಂಧವ೯ಲೋಕದಲ್ಲಿ ವಿಹರಿಸುತ್ತಾ ನೇಸರ ನಭದಂಚಿಗೆ ಜಾರಿ ಮಬ್ಬು ಆವರಿಸಿದಾಗ ಇಹದ ಪರಿವೆಯಾಗುತ್ತಿದ್ದಿದ್ದು.ದಿನದಿನವು ನಿನ್ನ ನಗೆವದನ ಹೊಸತೇ ನೀ ನಕ್ಕರೆ ನವಿಲ ನರ್ತನ ಈ ಹೃದಯದಲ್ಲಿ, ಸಾಂಗತ್ಯ ಸಾವಿನವರೆಗೂ ಇರಲಿ ಎಂಬ ಸ್ವಾರ್ಥ ನನಗೆ ಆಗಿದ್ದೂ ಸುಳಿವೇ ನೀಡದೇ ಮರೆಯಾದೆಯಲ್ಲಾ ಏಕೆ?
ನಾವಿಬ್ಬರೂ ನಡೆದ ಹಾದಿಯಲ್ಲಿ ಸಾಗುವಾಗ ಹಾದಿಯು ನಿನ್ನ ಕೇಳುವಂತೆ ಭಾಸವಾಗಿ ತಟ್ಟನೇ ಹೊಸ ಹಾದಿಗೆ ಹೊರಳುವೆ.ಒಂದೊಳ್ಳೆ ಪುಸ್ತಕ ಓದಿದಾಗ ಮನದ ಭಾವಗಳನ್ನೆಲ್ಲಾ ಹಂಚಿಕೊಳ್ಳಲು ಮನ ಮಿಡುಕಿ ಮರುಗುವುದು.ಸಂಗೀತವಾದರೂ ಕೇಳೋಣ ಎಂದು ಕಿವಿಯಾದರೆ ತೇಲಿ ಬರುವ ರಾಗವು ಈ ಹಾಡು ಕೇಳು ಎಂದು ಕಾಡಿಸಿ ಪೀಡಿಸಿದ ಪರಿ ನೆನಪಾಗಿ ಖುಷಿಯುಕ್ಕಿ ಕಣ್ಣೀರು ಕೆನ್ನೆ ತೋಯಿಸುವುದು.ಬರೆವ ಕವನದ ಸಾಲುಗಳಲ್ಲಿ ಅರಿಯದೇ ಇಣುಕಿಬಿಡುವೆ ನೀನು ನನ್ನನ್ನೇಷ್ಟು ಆವರಿಸಿದ್ದೀಯಾ ಎಂದು ಬೆರಗಾಗುವಂತೆ,ನೀನೇ ಬೇಕೆಂಬ ಹಠವೇಕೆ ಮನಕೆ, ನೀನಿಲ್ಲದೆ ಇರಲಾರೆನೇ ಇರಬಲ್ಲೇ ಅದೇ ಆಲಸ್ಯದ ದಿನಗಳು,ಲಾಸ್ಯವಿರದ ನಡಿಗೆ,ವಿರಾಗಿಯ ಬದುಕಂತೆ ಸಾಗುತ್ತಿದೆ ಜೀವನ..ಈ ಬದುಕಿಗೆ ಉತ್ತರವಾಗುವೆಯಾ ಪ್ರಶ್ನೆಯಾಗಿ ಉಳಿದು ಕಾಡುವೆಯಾ ಹೇಳಿಬಿಡು ಕಾಯುತ್ತಿರುವ ನಾನು ನೋವುಂಡರು ನಿನ್ನ ತಪ್ಪಿಲ್ಲ ಎಂದು ನಿನ್ನ ಪರ ವಹಿಸುವ ಈ ಹೃದಯಕ್ಕಾದರೂ ಹೇಳಿ ಬಿಡು ಕಾರಣ…!!!
———-
ಶಾರದಜೈರಾಂ.ಬಿ

Super
ಧನ್ಯವಾದಗಳು
ಸೊಗಸಾಗಿದೆ ಮನದ ನಿವೇದನೆ
ಧನ್ಯವಾದಗಳು