ಟೊಮ್ಯಾಟೊ ಕೆಚಪ್
ಡಾ.ಅಜಿತ್ ಹರೀಶಿ
ಹಲೋ ಸನಾ,
ನಾನ್ಯಾರು ಗೊತ್ತಾಯ್ತಾ? ಒಂದು ವಾರದಿಂದ ವಾಟ್ಸ್ ಆಪ್ ಮಾಡದೆ, ನಿನ್ನ ಸಂದೇಶಕ್ಕೆ ಉತ್ತರ ಕೊಡದೆ ಸುಮ್ಮನಿದ್ದನಲ್ಲ… ಜಯ್.. ನಾನು ಜಯ್ ಅಲ್ಲ. ನನ್ನ ಹೆಸರು ಸುಹಾನ್. ನಾನೀಗ ಮೇಲ್ ಮಾಡಿದ್ದು ನಿನಗೆ ಸತ್ಯ ಹೇಳಲಿಕ್ಕೆ…
ಸನಾ, ಅಡಿಗೇನೆ ಬರದ ನೀನು, ಮೆಟ್ರಿಮೋನಿಯಲ್ ನ ಪ್ರೊಫೈಲ್ ನಲ್ಲಿ ನನಗೆ ಒಪ್ಪಿಗೆ ಆದಾಗ್ಯೂ, ವಧು ಪರೀಕ್ಷೆ ಮಾಡೋದಿಕ್ಕೆ ಅಂತ ನಾನೊಂದು ವೇಷ ಹಾಕಿದೆ. ಜಯ್, ಕಂಪ್ಯೂಟರ್ ಇಂಜಿನಿಯರ್ ಅಂತ.
ನಿಂಗೆ ಟೊಮ್ಯಾಟೊ ಕೆಚಪ್ ಇಷ್ಟ ಅಲ್ವ.. ಅದೂ ಟಿ.ಕೆ ರೆಸ್ಟೋ ದು. ಹೌದು ಕಣೇ.. ಆ ರೆಸ್ಟೋರೆಂಟ್ ಮಾಲಿಕ ನಾನು.
ನಿಂಗೊತ್ತಾ, ಕೆಚಪ್ ಪಕ್ವ ಟೊಮ್ಯಾಟೊಗಳ ಹೂರಣ. ಪಕ್ವತೆಯ ಪರೀಕ್ಷೆಗೊಳಪಟ್ಟ ಆಯ್ದ ಹಣ್ಣುಗಳಿಂದ ತಯಾರಾಗೋ ಗೊಜ್ಜು. ತಾಜಾತನದ ಖುಷಿಗೆ, ಹೋಟೆಲಿನಲ್ಲೇ ಸಿದ್ಧ ಪಡಿಸುವ ಕಲ್ಪನೆಯೊಂದಿಗೆ, ಹೋಟೆಲ್ ಹೆಸರನ್ನೂ ಅದೇ ಇಟ್ಟು ನಾನು ಉದ್ಯಮ ಪ್ರಾರಂಭಿಸಿದ್ದು. ನಮ್ಮಪ್ಪ ಗೌತಮ್ ಗೋರ್ ನನ್ನ ಬೆನ್ನಿಗೆ ನಿಂತರು. ನಮಗೆ ಕೆಲವು ಪ್ರಾರಂಭಿಕ ಸವಾಲುಗಳಲ್ಲಿ ಉತ್ತಮ ಚೆಫ್ ಅಗತ್ಯವೂ ಒಂದಾಗಿತ್ತು. ಟಿ.ಕೆ ಹೋಟೆಲ್ ನ ಅಡುಗೆಮನೆಗೆ ವಿಶಿಷ್ಟ ರುಚಿಗಳ ಸಮಮಿಳಿತಗಳ ಹೆಗ್ಗಳಿಕೆ ಇರುವ ಚೆಫ್ ಸಮೀರ್ ವಿಜೇತನ ಪ್ರವೇಶವಾದ ನಂತರ, ಹೋಟೆಲ್ ನ ಮೆನುಕಾರ್ಡ್ ಗೆ ಒಂದು ಹೊಸ ಆಯಾಮ ದೊರೆತು, ಉದ್ಯಮ ಬೆಳೆಯತೊಡಗಿತು. ಕೆಚಪ್ ನ ರುಚಿಯ ಚಟ ಹತ್ತಿದವರ ತಿನ್ನುವ ಖಾಯಂ ಅಡ್ಡಾ ಅನ್ನುವಂತಾಯಿತು. ಟಿ.ಕೆ. ಹೋಟೆಲ್ ಹೋಗಿ ರೆಸ್ಟೋರೆಂಟ್ ಆಗಿ, ಕಟ್ಟಡವೂ ಸ್ಥಾನಪಲ್ಲಟ, ನವೀಕರಣಗಳೊಂದಿಗೆ ಬೆಳೆಯುವ ಹೊತ್ತಿಗೆ ಚೆಫ್ ಸಮೀರನ ರುಚಿ ಟಿ.ಕೆ. ರೆಸ್ಟೋಗೆ ಏಕತನದ ಗುರುತಾಯಿತು. ವ್ಯಾಪಾರದ ಕುರುಹಾಯಿತು. ದಿವಸವೂ ಕೆಚಪ್ ಗಾಗಿಯೇ ಅಡುಗೆಮನೆಯ ಒಂದು ಭಾಗ ಮತ್ತು ತಂಡ ಬೇಕು ಅನ್ನುವಷ್ಟು. ದುಡ್ಡುಳ್ಳ ದೊಡ್ಡಜನರ ಖಾಸಗೀ ಸಮಾರಂಭಗಳಿಗೂ, ಭೋಜನಾತಿಥ್ಯದ ಗುತ್ತಿಗೆ ಸಿಗುವಷ್ಟು ಬೆಳೆದು ಕೆಚಪ್ ಒಂದು ನಿತ್ಯ ತಯಾರಾಗಲೇ ಬೇಕಾಯಿತು. ಹೀಗೆ ನಮ್ಮ ಉದ್ಯೋಗ ಉತ್ತುಂಗದಲ್ಲಿದ್ದಾಗಲೇ ನಮ್ಮಪ್ಪ ಅಮ್ಮ ನನಗೆ ಮದುವೆ ಮಾಡ್ಕೋ ಅಂತ ಒತ್ತಾಯ ಹೇರಿದ್ರು. ಬರೀ ಉದ್ಯೋಗದಲ್ಲೇ ಮುಳುಗಿ ಹೋಗಿದ್ದ ನನಗೆ ನಿನ್ನ ಮೆಟ್ರಿಮೋನಿಯಲ್ ಪ್ರಪೋಸಲ್ ಬಂದ ನಂತರ ಸ್ವಲ್ಪ ಮನಸ್ಸು ಸಂಸಾರದ ಕಡೆ ವಾಲಿದೆ.
ನಿನಗೆ ನೆನಪಿದೆಯಾ… ಕಳೆದ ಭಾನುವಾರ ಅತೀ ಸಂದಣಿಯಿರುವ ಸಂಜೆಯಲ್ಲಿ ಫಾಮಿಲಿ ರೂಮಿನ ಎರಡು ಜನರ ಖಾಲಿ ಟೇಬಲ್ ನ್ನು ಅರಸಿ ನಾನು ಮತ್ತು ನೀನು ಟಿ.ಕೆ.ರೆಸ್ಟೋದಲ್ಲಿ ಕುಳಿತಿದ್ದು. ಅದು ನಮ್ಮ ಮೂರನೆಯ ಭೇಟಿ ಆಗಿತ್ತಲ್ವ. ಮಾಟ್ರಿಮೊನಿಯಲ್ ನ ವಧು -ವರರ ಪಟ್ಟಿಗಳಲ್ಲಿ ನಾವೇ ಆಯ್ದಕೊಂಡು, ಅಂತೂ ಮಾತನಾಡುವುದು ಅಂತ ಆಗಿ, ಮೊದಲನೇ ಭೇಟಿಯು ಎರಡನೆಯದಕ್ಕೂ, ಮುಂದೆ ಮೂರನೆಯದಕ್ಕೂ ಸಾಗಿ, ಸಾಕಷ್ಟು ಮೆಸೆಂಜರ್, ವಾಟ್ಸಪ್ ಸಂದೇಶಗಳು ಹರಟೆಗೆ ತಿರುಗಿ, ಅಪರಿಚತೆಯು ಪರಿಚಿತ ಅನ್ನುವಷ್ಟಾಗಿ ಇಂದು ಸಲುಗೆ ಎನ್ನುವ ಮಟ್ಟಿಗೆ ಒಡನಾಟ ಬೆಳೆದಿದ್ದು. ಈ ಸಂದೇಶ, ಪುರಾಣಗಳಲ್ಲಿ ಒಂದೂ ಹೇಳಿಕೊಳ್ಳುವಂತಹ, ನಾನಿಲ್ಲಿ ನಮೂದಿಸಬೇಕಾದಂತಹದ್ದೇನೂ ಇಲ್ಲವಾಗಿ ನನಗೆ ಅದೊಂದು ಶೀತಲ ಮಾತುಕತೆ ಎಂದಷ್ಟೇ ಹೇಳಬಲ್ಲೆ.
ಆದರೆ, ಸನಾ… ನನಗೆ ನಿನ್ನ ಆಂತರ್ಯ ಅರಿಯಬೇಕಾಗಿತ್ತು. ನೀನು ಚೆಂದದಿಂದ ನನ್ನ ಮನಸ್ಸು ಗೆದ್ದಿದ್ದರೂ….
ಆ ಮೂಲೆಯ ಟೇಬಲ್ ಆಯ್ಕೆ ನಿನ್ನ ಇಚ್ಛೆಗೆ ವಿರುದ್ಧವಾಗಿ ನಡೆದದ್ದು. ನಿನಗೆ ಮೂಲೆ ಜಾಗ ಇಷ್ಟವಿಲ್ಲ ಅಂತ ಆವತ್ತೇ ಗೊತ್ತಾಗಿದ್ದು ನನಗೆ. ಅಷ್ಟು ಕಿಕ್ಕಿರಿದ ಹೋಟೆಲ್ ನಲ್ಲಿ ಮತ್ತೆಲ್ಲೂ ಅವಕಾಶವಿರದ ಕಾರಣ ಅನಿವಾರ್ಯವಾಗಿ ಕುಳಿತೆ ಅಲ್ವಾ.. ಇಲ್ಲಿಂದಲೇ ಆರಂಭ.. ನಿನ್ನ ಆಂತರಿಕ ಕಿರಿಕಿರಿ, ನನ್ಮುಂದೆ ಹೇಳಿಯೇ ಬಿಟ್ಟೆ ಅದನ್ನೂ…
ನಾನೇನೋ ನಿನ್ಜೊತೆ ಕೂತಿದ್ದೆ. ಆದರೆ ಆವತ್ತು ಅಡುಗೆಮನೆಯ ಕೆಚಪ್ ವಿಭಾಗದಲ್ಲಿ ಒಂದು ಸಂಗತಿ ನಡೆದಿತ್ತು ಗೊತ್ತಾ… ಸಿದ್ಧ ಕೆಚಪ್ ನ ಸಂಗ್ರಹವು ಕೊನೆಯಾಗುವ ಹಂತದಲ್ಲಿ… ಆದರೆ ನೈಸರ್ಗಿಕವಾಗಿ ಕಳಿತ ಹಣ್ಣುಗಳ ಸರಬರಾಜು, ಅಂದು ಆಕಸ್ಮಿಕವಾಗಿ ನಮ್ಮ ರೆಸ್ಟೋರೆಂಟ್ ಗೆ ಇಲ್ಲದಂತಾಗಿ, ಟೇಬಲ್ ನ ಆರ್ಡರ್ ಗಳಿಗೆ ಯಥೇಚ್ಛವಾಗಿ ಸೇವೆಯಾಗುತ್ತಿದ್ದ ಕೆಚಪ್ ಗೆ ಕತ್ತರಿ ಬಿತ್ತು. ಮತ್ತೊಮ್ಮೆ ಕೇಳಿದವರಿಗೆ ಮಾತ್ರ ಕೆಚಪ್ ಅನ್ನು ಬಡಿಸುವ ಆದೇಶ ನಾನೇ ಕೊಟ್ಟಿದ್ದೆ. ನಿನ್ನನ್ನ ಪಾರಲೆಲ್ ರೋಡಿನಿಂದ ಪಿಕ್ ಅಪ್ ಮಾಡಿದ್ನಲ್ಲ, ಅಲ್ಲಿಗೆ ಬರೋ ಮುಂಚೇನೆ ಎಲ್ಲ ವೇಟರ್ ಗಳಿಗೂ, ಚೆಫ್ ಗೂ ಹೀಗೆ ಹೇಳಿದ್ದೆ.
ನೀನು ಬಂದು ಕುಳಿತಾಗ, ನಾನು ಎಲ್ಲರಂತೆ ಗಿರಾಕಿ ಅನ್ನೋ ಹಾಗೆ ನಡೆಸಿಕೊಳ್ಳಲು ಮೊದಲೇ ಎಲ್ಲರಿಗೂ ಹೇಳಿಯೇ ಇದ್ದೆ.
ಅದಾಗಲೇ ನಾನು, ಮೆನು ಕಾರ್ಡ್ ಒಮ್ಮೆ ಕಣ್ಣಾಡಿಸಿ ಪನೀರ್ ಮಂಚೂರಿಯನ್ ತಿನ್ನುವುದು, ನಿನ್ನನ್ನು ಕೇಳಿ, ನಿನಗೂ ಇಷ್ಟವಾದರೆ ಆರ್ಡರ್ ಕೊಡುವುದೆಂದು… ಅಂದು ಕೊಂಡಿದ್ದೆ. ಆದರೆ ನೀನು ಅಮೇರಿಕನ್ ಕ್ರಿಸ್ಪಿ ನೂಡಲ್ಸ್ ಗೆ ಆರ್ಡರ್ ಕೂಡ ಕೊಟ್ಟಾಗಿತ್ತು… ನೀನೇ ಮೊದಲು ಹೇಳಿದ್ದರಿಂದ, ಈಗ ವಿಧಿಗಳೇನೂ ಇಲ್ಲವಾಗಿ ನನಗಾಗಿ ಆರ್ಡರ್ ಇತ್ತೆ. ಟೇಬಲ್ ನ ಆಯ್ಕೆ, ಇಬ್ಬರ ಬೇರೆ ಬೇರೆ ರುಚಿಗಳು ನನ್ನ ಗಮನಕ್ಕೆ ಬಂದಿತ್ತು ಆವತ್ತೇ. ಒಂದು ತಾಸು ಕುಳಿತು, ಎದ್ದು ಹೋಗಬಹುದಾದ ಜಾಗ, ಚಾಟ್ ವಿಷಯದಲ್ಲೇ ವೈರುಧ್ಯ. ಇನ್ನೂ ಏನೇನು ಭೇದವಿದೆಯೋ ಎಂಬ ಕುತೂಹಲ ಥಟ್ಟನೆ ಕೆರಳಿತ್ತು ನನಗೆ.
ಸನಾ, ಅದಾಗಲೇ ನೀನು ಸೆಲ್ಫೀ ಮೋಡ್ ಅನ್ನೇ ಕನ್ನಡಿಯಾಗಿಸಿ ಮೋರೆಯನ್ನು ನೋಡಿ, ಓರೆ ಕೋರೆಗಳಲ್ಲಿ ಮುಳುಗಿದ್ದೆ. ಇನ್ನು ಖಾಲಿ ಟೇಬಲ್, ತಿನ್ನಲು ಏನೂ ಇಲ್ಲ. ಸುಮ್ಮನೆ ಕೂರುವ ಬದಲು ಮಾತಿಗೆಳೆಯಲಾ? ಹೀಗೇ ಇಂದಿನ ಭೇಟಿ, ಹಿಂದಿನ ಎರಡೂ ಭೇಟಿಗಳೂ ನೀನೇ ಮೊದಲು ಕೇಳಿಯೇ ಆಗಿದ್ದು. ನಾನು ಒಪ್ಪಿ ಬಂದಿದ್ದೆ ಅಷ್ಟೇ. ದುಡ್ಡು ಮಾತ್ರ ನಾನೇ ಕೊಟ್ಟಿದ್ದೆ. ಗಂಡಸಿನ ಸಾರ್ವಕಾಲಿಕ ಕರ್ತವ್ಯ. ಹೆಣ್ಣಿಗಾಗಿ ತೆರು, ಹೆಣ್ಣಿನ ಭಾರ ಹೊರು, ಹೆಣ್ಣಿನಿಂದಲೇ ಶುರು, ಅಂತೆಲ್ಲಾ ನಾನೇ ಮನಸ್ಸಲ್ಲೇ ಅಳೆದು ತೆಗೆದು, ಕೊನೆಗೆ ನಾನು ಪ್ರಶ್ನೆ ಕೇಳಿದ್ದೆ ‘ನೀನು ತಿಂಗಳಲ್ಲಿ ಎಷ್ಟು ಖರ್ಚು ಮಾಡ್ತೀಯಾ?’ ಅಂತ. ನಿನ್ನ ನಿರ್ವಹಣೆ ನನ್ನಿಂದ ಸಾಧ್ಯವೇ ಎಂಬ ವ್ಯಾವಹಾರಿಕ ಮತ್ತು ಅತ್ಯಂತ ಪ್ರಾಯೋಗಿಕವಾಗಿ ನಿನ್ನ ಬಗ್ಗೆ ಅರಿಯಲು. ಈ ಪ್ರಶ್ನೆ, ಹಿಂದೆಂದೂ ನಾನು ನಿನಗೆ ಕೇಳಿದ್ದಿಲ್ಲ. ಉತ್ತರ ಸಿದ್ಧವೂ ಇರಲಿಲ್ಲ ನಿನ್ನಲ್ಲಿ ಅಲ್ವಾ? ಯಾವತ್ತಾದರೂ ಖರ್ಚುವೆಚ್ಚಗಳ ದಾಖಲಿಸಿಟ್ಟಿರ್ತೀಯಾ ಅಂತ? ನೀನೆಷ್ಟು ಗಲಿಬಿಲಿಯಾಗಿದ್ದೆ ಗೊತ್ತಾ? ನನಗೆ ಇನ್ನೊಂದು ಅಸಮತೆ ಗುರುತು ಹತ್ತಿತು. ‘ಇರಲಿ ಬಿಡು, ನೀನೆಷ್ಟು ದುಬಾರಿ ನನಗೆ ಅಂತ ತಿಳಿಯಲು ಕೇಳಿದೆ’ ಅಂದು ಮಾತು ಬದಲಿಸಿದ್ದೆ.
ಆದರೆ ಸನಾ, ನಿನ್ನ ಉತ್ತರ ನನಗೆ ಸ್ವಲ್ಪ ಜಾಸ್ತಿನೇ ಶಾಕ್ ಕೊಟ್ಟಿತು. ‘ನಂದೇ ದುಡ್ಡು. ನಾನೇ ಖರ್ಚು ಮಾಡೋದು. ನಿನಗ್ಯಾಕೆ ಲೆಕ್ಕ ಕೊಡ್ಬೇಕು? ನಾನು ಇಂಡಿಪೆಂಡೆಂಟ್’ ಅಂದೆ. ಮತ್ತೆ ಮೊಬೈಲ್ ನ ಜೊತೆ ಚಕ್ಕಂದ ಆಡ್ತಾ ಕುಳಿತೆ. ನೀನು ಇಷ್ಟು ಹೇಳಿದ್ರಿಂದ ನನಗೆ ಇನ್ನೊಂದು ಅಂಶ ಕಂಡುಕೊಂಡಂತೆ ಆಯಿತು. ಇಂಡಿಪೆಂಡೆಂಟ್ ಆಗಿ ಬದುಕೋದಾದ್ರೆ, ನಮ್ಮಿಚ್ಛೆಯಂತೆಯೇ ನಡ್ಕೊಳೋದಾದ್ರೆ ಮದುವೆ ಯಾಕಾಗ್ಬೇಕು? ಒಂಚೂರು ಒಟ್ಟೊಟ್ಟಿಗೆ ಹೊಂದಿಕೊಂಡು ಹೋಗ್ಲಿಕ್ಕೆ ಮದುವೆ ಅಲ್ವ? ಒಂಟಿ ಬದುಕಬಹುದು.. ಹಕ್ಕಿ ಹಾಗೇ ಸ್ವತಂತ್ರವಾಗಿ. ಆದರೆ ಜೊತೆಗೆ ಇನ್ನೊಂದು ಜೀವ ಒಟ್ಟಿಗೇ ಹೆಜ್ಜೆ ಇಡೋದಿದ್ರೆ ಜೀವನದ ದಾರಿ ಬೇಸರವಾಗದಂತೆ ಸವೆದು ಹೋಗುತ್ತೆ ಅಲ್ವಾ?
ಅಷ್ಟು ಹೊತ್ತಿಗೆ ನಮ್ಮಿಬ್ಬರ ಮುಂದೂ ತಿಂಡಿಯು ಬಂದು, ವೇಟರ್ ಬಡಿಸಿ ಹೋದ. ನೂಡಲ್ಸ್ ಕ್ರಿಸ್ಪಿ ಇದ್ದರೂ ಅದನ್ನು ಅದ್ದಿ ತೆಗೆದು ಬಾಯಿಗಿಡುವ ಮುನ್ನ ನೀನು ಚಿಲ್ಲಿ ಸಾಸ್ ಮತ್ತು ಟೊಮ್ಯಾಟೋ ಕೆಚಪ ಅನ್ನು ನಿನ್ನದೇ ಆದ ಹದದಲ್ಲಿ ಬೆರೆಸಿ ತಿನ್ನುವವಳು ಅಂತ ಆವತ್ತು ಗೊತ್ತಾಯ್ತು. ಕೆಚಪ್ ಪುಟ್ಟದೇ ಕಪ್ ನಲ್ಲಿ ಮಿತಿಯಲ್ಲಿ ತಂದಿಟ್ಟಿದ್ದು, ನಿನಗೆ ಇನ್ನೊಂದಿಷ್ಟು ಬೇಕು ಅನಿಸ್ತು. ಸಾಸ್ ಗಿಂತ ಕೆಚಪ್ ಅನ್ನು ಜಾಸ್ತಿ ಬೆರೆಸಿಕೊಳ್ಳುವ ನೀನು, ನಿನ್ನ ಪ್ಲೇಟ್ ಅನ್ನು ನಿನ್ನ ರುಚಿಗೆ ತಕ್ಕಂತೆ ಪರಿವರ್ತಿಸುವ ಕ್ರಿಯೆಯಲ್ಲಿ ತಲ್ಲೀನಳಾಗಿದ್ದೆ. ಇದನ್ನೆಲ್ಲಾ ಗಮನಿಸ್ತಾ, ಅದಾಗಲೇ ಪನೀರ್ ಮಂಚೂರಿಯನ್ ರುಚಿಯ ಹಿಡಿದು ಆಸ್ವಾದದಲ್ಲಿ ತೊಡಗಿದ್ದೆ ನಾನು. ಸರಳ ಲೆಕ್ಕದ ನನಗೆ ಎಲ್ಲವೂ ಹದದಲ್ಲೇ ಇದೆ ಎನಿಸಿತ್ತು. ನೀನು ಕೆಚಪ್ ನ ಆರ್ಡರ್ ಮಾಡಲು ವೇಟರ್ ನ್ನು ಕೂಗಿ, ಆದೇಶವಿತ್ತೆ. ಅವನು ಹೋದವನು ಮತ್ತೆ ಬರಲಿಲ್ಲ.. ಯಾಕೆ ಬರಲಿಲ್ಲ ನಿಂಗೆನಾದರೂ ಗೊತ್ತಾಯ್ತಾ?
ಇದೇ ಸಮಯ, ಸನಾ …. ಅಡಗೆಮನೆ ಒಳಗೆ ಏನು ಆಗ್ತಾ ಇತ್ತು ಗೊತ್ತಾ? ಗಳಿತ ಕೆಂಪು ಹಣ್ಣುಗಳ ಹಿಸುಕಿದರೆ ಮಾತ್ರ ಕೆಚಪ್ ಸಿದ್ಧವಾಗೋದು ಕಣೇ. ಕೆಚಪ್ ಗೆ ಅಚ್ಚ ಕೆಂಪು ಹೊಳಪಿನ ಬಣ್ಣ ಬರಬೇಕಾದರೆ, ಕಳಿತ ಹಣ್ಣುಗಳನ್ನು ಆಯ್ದು, ಹವೆಯಲ್ಲಿ ಬಣ್ಣ ಬದಲಾಗದಂತೆ, ಸಿಪ್ಪೆ ಮಾತ್ರ ಬೇರೆಯಾಗುವಂತೆ ಬೇಯಿಸಿಕೊಳ್ಳುವುದು ಕ್ರಮ. ಹವೆಯೊಳಗೇ ಬೇಯುವ ಕ್ರಿಯೆಯಲ್ಲಿ ಸಿಪ್ಪೆ ಬೇರೆ, ಗುಳ ಬೇರೆಯಾಗಿ, ಹಣ್ಣಿಗೆ ಹಣ್ಣೇ ಹೊರಗಿನ ತೆಳುವಾದ ಆದರೆ ಪ್ಲಾಸ್ಟಿಕ್ ನಂತಹ ಪದರದಿಂದ ಬೇರ್ಪಡುವುದು. ಇದು ಹಿಸುಕುವ ಕ್ರಿಯೆಗೆ ಪೂರ್ವ ತಯಾರಿ. ಆವತ್ತು ಕೆಚಪ್ ಗೆ ತಕ್ಕ ಹಣ್ಣುಗಳು ಹೋಲ್ ಸೇಲ್ ಸಪ್ಲೈ ಮಾಡುತ್ತಿದ್ದ ತರಕಾರಿ ಮಾರುಕಟ್ಟೆಯಿಂದ ಆಗದೆ, ಅರೆಬರೆ ಹಂಪು, ಹಣ್ಣಾಗುತ್ತಿರುವ ಟೊಮ್ಯಾಟೊ ಗಳ ರಾಶಿ ಬಂದು ಬಿದ್ದಿತ್ತು. ಇಂತಹ ಅಪಕ್ವ ಟೊಮ್ಯಾಟೊ ಬೇಯಿಸಿದರೂ ಸರಿಯಾಗಿ ಸಿಪ್ಪೆಯಿಂದ ಬೇರ್ಪಡದು, ಕೆಚಪ್ ಗೆ ಬಣ್ಣವೂ ಬರದು. ಸಿದ್ಧಗೊಳಿಸಬೇಕಾಗಿದ್ದ ಪ್ರಮಾಣದಲ್ಲಿ ಗಣನೀಯ ಕಡಿತ ಮಾಡುವಂತಾಯಿತು. ರಾಶಿಯಿಂದ ಆಯ್ದು, ಮುಂದಿನ ಕ್ರಿಯೆಗೆ ತೊಡಗಿದ ತಂಡಕ್ಕೆ ಕೆಚಪ್ ನ ಬಣ್ಣ, ತಿಳಿಯಾಗಿದ್ದು ಅವರ ಮನಸ್ಸಿನಲ್ಲಿ ಇರಿಸುಮುರಿಸು ತಂದಿತ್ತು. ಬಣ್ಣಕ್ಕೆಂದು ಬೇರೆ ಯಾವುದನ್ನು ಸೇರಿಸಿದರೂ ರುಚಿ ಹೋಗುವುದು. ಚೆಫ್ ಸಮೀರನ ತಲೆಯಲ್ಲಿ ಇದೇ ಸಮಯದಲ್ಲಿ ಬರೀ ಯೋಚನೆಗಳು. ಒಂದನ್ನೂ ಪ್ರಯೋಗಕ್ಕಾಗಿ ಕಾರ್ಯಗತಗೊಳಿಸಲು ಆಗುತ್ತಿಲ್ಲ. ತಂಡಕ್ಕೆ ಮಾಡಬೇಕಾದ ಬದಲೀ ಕೆಲಸ ಹೇಳಲಾಗುತ್ತಿಲ್ಲ.
ಆಗಲೇ ನಾನು ಎದ್ದು ಹೋಗಿದ್ದು. ನಿನಗೆ ನೆನಪಿದೆಯಾ? ಫ್ರೆಷ್ ಆಗಲು ಹೋಗಿಬರುವ ನೆಪದಲ್ಲಿ, ನಮ್ಮ ಕಿಚನ್ ಗೆ ಹೋಗಿ ಬಂದೆ. ಗಳಿತ ಹುಣಸೇಹಣ್ಣಿನ ಕಲ್ಕವನ್ನು ರುಚಿಗೆ ಮತ್ತು ಬಣ್ಣ ಬದಲಾವಣೆಗೆ ಬೆರೆಸಿ ಉಪ್ಪು, ಸಕ್ಕರೆ, ವಿನೆಗರ್ ನ ಹದವನ್ನು ರುಚಿ ನೋಡುತ್ತಾ ಬೆರೆಸಲು ಖುದ್ದು ಜವಾಬ್ದಾರಿ ಹೊರಲು, ಸಮೀರ್ ಗೆ ಹೇಳಿ ಬಂದೆ.
ಕೆಚಪ್ ನ ಸಂಗ್ರಹ ಮುಗಿದೇ ಹೋಯಿತು ಅನ್ನುವಾಗ ನೀನು ಇಟ್ಟಿದ್ದ ಆರ್ಡರ್ ಟೇಬಲ್ ಗೆ ತಲುಪದೇ, ನಿನಗೆ ಅಸಮಾಧಾನ ಹೆಚ್ಚಾಗಿ, ಟೇಬಲ್ ನ ಸಪ್ಲೈರ್ ಗೆ, ಹೋಟೆಲ್ ನ ಸಿಬ್ಬಂದಿಗೆ ಹರಿಹಾಯ್ದು, ರಂಪಾಟವಾಗಿ, ನೆನಪಿದೆ ಅಲ್ವಾ…. ನಿನ್ನನ್ನು ಸಮಾಧಾನ ಮಾಡಲು ಸಾಧ್ಯವಿಲ್ಲ ಎನಿಸಿತ್ತು ಆ ಹೊತ್ತಿಗೆ. ಮೊದಲು ಹೊರಗೆ ಹೋಗಬೇಕೆನ್ನುವಷ್ಟು ವಿಚಿತ್ರ ಹಿಂಸೆ ನನಗೆ. ಕೋಪ, ಅಸಹನೆ, ಆಹಾರದ ಬಗ್ಗೆ, ಬೇರೆಯವರ ಬಗ್ಗೆ ಅಗೌರವ…. ನೀನು ನಡೆದುಕೊಂಡ ರೀತಿ ಯಾವುದನ್ನೂ ಅನುಭವಿಸಲಾಗದೆ ನನ್ನ ಮನಸ್ಸಿಗೇ ರೇಜಿಗೆ ಹುಟ್ಟಿತ್ತು ಆ ಸಂಜೆಯ ಬಗ್ಗೆ, ನಿನ್ನ ವರ್ತನೆಯ ಬಗ್ಗೆ. ಹೋಟೆಲ್ ನ ಆಂತರಿಕ ವಿಷಯವನ್ನು ಖುದ್ದು ಮ್ಯಾನೇಜರ್ ಬಂದು ನಿನ್ನಲ್ಲಿ ವಿನಯವಾಗಿ, ವಾಸ್ತವವಾಗಿ ನಡೆದದ್ದನ್ನು ವಿವರಿಸದ ಮೇಲೂ ನಿನ್ನ ಮನಸ್ಸಿಗೆ ಇಳಿಯಲೇ ಇಲ್ಲ.. ಗಯ್ಯಾಳಿ ಹಾಗಿತ್ತು… ನಿನ್ನ ವರ್ತನೆ ನನ್ನನ್ನು ಇನ್ನಷ್ಟು ದೂರ ನೂಕಿತ್ತು.. ಈ ಮಾಟ್ರಿಮೋನಿಯಲ್ ಮುಲಾಕಾತ್ ಬಗ್ಗೆ. ಒಂದೂ ಮಾತನಾಡದೆ, ಸಿಬ್ಬಂದಿಗಳಿಗೆ, ಕ್ಷಮಿಸಿ ಅಂದಷ್ಟೇ ಹೇಳಿ ಹೊರಡುವವನಿದ್ದೆ…. ಆದರೆ,.. ಅರ್ಧದಲ್ಲಿ ಬಿಟ್ಟು ಹೋಗುವುದು ಸಭ್ಯತನವಲ್ಲವಲ್ಲ… ಅದೂ ಮದುವೆಯ ಉದ್ದೇಶ ಹೊತ್ತು ಮಾತುಕತೆಗೆಂದು ಬಂದ ಹೆಣ್ಣೊಬ್ಬಳನ್ನು..
ಸನಾ, ನಾನೂ ನಿನ್ನಂತೆ ಮನುಷ್ಯ. ಇನ್ನೂ ಎಳಸುತನವಿರುವ ನಿನ್ನ ಬಗ್ಗೆ ಮದುವೆಯ ಬಂಧದಲ್ಲಿ ಸೇರುವ ಮೊದಲು ನಡೆದ ಈ ಘಟನೆಗಳು ನನ್ನನ್ನು ಈ ಒಂದು ವಾರ ಯೋಚನೆಗೀಡು ಮಾಡಿತ್ತು…. ನಿನ್ನನ್ನು ತಿರಸ್ಕರಿಸಲು.. ಆದರೆ,…
ಸನಾ, ಆವತ್ತು ನಂತರ ನಡೆದ ಘಟನೆಗಳಿಂದ ಒಂದು ಸಾಧ್ಯತೆಯ ಬಗ್ಗೆ ಯೋಚನೆ ಬಂತು. ನಾನಿತ್ತ ಸಲಹೆಯಂತೆ, ಅಪಕ್ವ ಹಣ್ಣುಗಳ ಕಲ್ಕಕ್ಕೆ ಸರಿಸಮವಾಗಿ ಬೆರೆಸಿದ ಇತರ ರಸಗಳ ಸಮ್ಮಿಶ್ರಣದಿಂದಾಗಿ ಟೊಮ್ಯಾಟೊ ಕೆಚಪ್ ನ ರೂಪಾಂತರ ಸಿದ್ಧವಾಯಿತು ಬಡಿಸಲು. ಕಚ್ಚಾ ತೆಂಗಿನೆಣ್ಣೆಯ ಘಮ, ವೈಟ್ ವಿನೆಗರ್ ನ ಕಟು ಗಂಧ ಬದಲಿಸಿ ಆಪಲ್ ಸಿಡರ್ ವಿನೆಗರ್ ನ ಮೃದು ಪರಿಮಳ ಸೇರಿಸಿ ತಯಾರಿಸಿಲಾಗಿತ್ತು. ಆ ಬದಲೀ ಕೆಚಪ್ ಟೇಬಲ್ ಗೆ ಎಲ್ಲರಿಗೂ ಬಡಿಸಲು ಸಿದ್ಧಮಾಡಿದರು. ಆ ಹುಣಸೇಹಣ್ಣಿನ ಟ್ವಿಸ್ಟ್ ಇರುವ ಟೊಮ್ಯಾಟೊ ಕೆಚಪ್ ನ ಸ್ವೀಕೃತಿಯ ಬಗ್ಗೆ ಚೆಫ್ ಮತ್ತು ಎಲ್ಲಾ ಸಿಬ್ಬಂದಿಗಳಲ್ಲೂ ಕುತೂಹಲ, ಹೆದರಿಕೆಯನ್ನು ಮೂಡಿಸಿತ್ತು.
ನೀನು ಇನ್ನೂ ಅಸಮಾಧಾನದಲ್ಲಿಯೇ ಇದ್ದೆ. ನಾನು ಎದುರಿಗೆ ತಣ್ಣಗೆ ಅಂತರ್ಮುಖಿಯಾಗಿ ಕುಳಿತಿದ್ದೆ..
ಆವತ್ತು ಅಗತ್ಯವಿರುವ, ಇನ್ನೂ ಬೇಕೆಂಬ ಬೇಡಿಕೆ ಇತ್ತ ಎಲ್ಲಾ ಟೇಬಲ್ ಗೂ ಆ ಬದಲಾವಣೆಯ ಹೊಸರುಚಿಯ ತಿರುಚಿದ ಕೆಚಪ್ ಅನ್ನೇ ಬಡಿಸಲಾಗಿತ್ತು. ನಮ್ಮ ಟೇಬಲ್ ಗೆ ಒಂದು ಕಪ್ ನಲ್ಲಿ ಹೊಸ ಕೆಚಪ್ ತಂದ ವೇಟರ್ ‘ಮೇಡಂ, ಇದು ಇವತ್ತಿನ ಹೊಸರುಚಿ ಟೊಮ್ಯಾಟೊ ಕೆಚಪ್, ಟೇಸ್ಟ್ ಮಾಡಿ, ನಿಮಗೆ ಇಷ್ಟವಾಗಲೂಬಹುದು’ ಅಂದು ಹೊರಟು ಹೋದ. ನಿನ್ನ ಮನಸ್ಸು ಒಂದು ತರಹದ ಖಾಲಿತನಕ್ಕೆ ಒಳಪಟ್ಟಿದ್ದರಿಂದಲೋ ಏನೋ…, ಒಂದು ಚಮಚೆಯ ತುದಿಯಲ್ಲಿ ನೆಕ್ಕಿ ನೋಡಿದ್ದೆ. ನಾಲಿಗೆಯ ಮೇಲೆ ಸ್ಪರ್ಶ ಮಾತ್ರದಿಂದ ನಿನ್ನ ರಸನೇಂದ್ರಿಯವು ಎಲ್ಲಾ ಇಂದ್ರಿಯಗಳ ಜೊತೆಗೆ ಮನಸ್ಸನ್ನೂ ಪ್ರಚೋದಿಸಿ ‘ವಾವ್,!!’ ಉದ್ಗಾರ ಹೊರಡಿಸಿತ್ತು ಅನಿಸುತ್ತೆ… ಅಂತೂ ನಿನಗೆ ಇಷ್ಟವಾಗಿತ್ತು ರುಚಿ.. ಮುಖ ಪ್ರಸನ್ನ ಮುದ್ರೆಗೆ ತೆರಳಿ, ಆಟಿಕೆ ಸಿಕ್ಕ ಮಗುವಿನಂತೆ ಕುಣಿದೆ ಅಲ್ವಾ?… ಅಷ್ಟೊತ್ತು ಕೆಟ್ಟು ಕುಲಗೆಟ್ಟು ಹೋಗಿದ್ದ ನಿನ್ನ ಮನಸ್ಸು ಮತ್ತೆ ಸ್ವಸ್ಥತೆಗೆ ಮರಳಿತು ಅಂದುಕೊಂಡೆ…
ಸನಾ, ಕೊನೆಯದಾಗಿ ನಿನಗೊಂದು ಮಾತು… ಆವತ್ತಿನ ಘಟನೆಯ ನಂತರ ನನಗೆ ನಿನ್ನ ಜೊತೆ ಮತ್ತೆ ಮಾತನಾಡಲು, ಮದುವೆಯ ಪ್ರಸ್ತಾವನೆ ಮಾಡಲು ಮನಸ್ಸು ಹಿಂದೇಟು ಹಾಕುತ್ತಿತ್ತು.. ಆದ್ದರಿಂದ ನಿನ್ನ ಸಂದೇಶಗಳಿಗೆ ಉತ್ತರಿಸಲಿಲ್ಲ. ದಿನಗಳೆದಂತೆ, ಮನಸ್ಸು ತಿಳಿಯಾದಂತೆ ಅನಿಸತೊಡಗಿತು…
ಯಾರೊಬ್ಬರೂ ಪರಿಪೂರ್ಣರಲ್ಲ ಅಲ್ವಾ? ತಪ್ಪು ನಡೆದು ಹೋಗುತ್ತೆ.. ಸರಿಪಡಿಸಿಕೊಂಡು ಮುಂದೆ ಜೊತೆಗೆ ಹೋಗಬಹುದಲ್ವಾ … ಕೆಚಪ್ ಬಹುಕಾಲ ಬಾಳಲು ಅದಕ್ಕೊಂದು ಸಂಸ್ಕಾರ ಬೇಕು, ಸನಾ… ಸಾಮಗ್ರಿಗಳನ್ನೆಲ್ಲ ಒಂದು ಮಿಶ್ರಣದಲ್ಲಿ ಕಾಯಿಸಿ ಪಾಕಮಾಡಿದಾಗ ಮಾತ್ರ… ನೀನು ಆವತ್ತು ತುದಿ ಬೆರಳಲ್ಲಿ ಮತ್ತೆ ಮತ್ತೆ ಚಪ್ಪರಿಸಿ ಬಾಯಲ್ಲಿ ನೀರೂರಿಸಿ ನೆಕ್ಕುತ್ತಿದ್ದ ಟೊಮ್ಯಾಟೊ ಕೆಚಪ್ ಆ ಹದ ಪಾಕಗೊಂಡ ಗೊಜ್ಜು…. ಜೀವನವೂ ಹಾಗೇ ಅನಿಸುತ್ತೆ. ಮತ್ತೆ ಮತ್ತೆ ತಪ್ಪಿನಿಂದ ಪಾಕ ಆಗ್ತಾ ಬಹುಕಾಲ ಕೆಡದೆ, ಹಳಸದೆ ಬಾಳೋದು.. ವ್ಯಕ್ಯಿತ್ವ ರುಚಿಸುವಂತೆ, ಬೇರೆಯವರಿಗೂ ಇಷ್ಟವಾಗುವಂತೆ…. ಸಂದರ್ಭದ ಅಗತ್ಯಕ್ಕೆ ತಕ್ಕ ಹೊಂದಾಣಿಕೆ, ಬದುಕಿನ ರಸಗಳೊಡನೆ ಸಮ್ಮಿಲನ ಆಗಿ, ಎಲ್ಲರಿಗೂ ಒಪ್ಪಿಗೆ ಆಗೋದಾದ್ರೆ ರುಚಿ ಅಲ್ವಾ?…ಸನಾ…
ನೀನು ಇದನ್ನು ಒಪ್ಪೋದಾದ್ರೆ ನನ್ನನ್ನ ಮದುವೆಯಾಗ್ತೀಯಾ? ಉತ್ತರಕ್ಕೆ ಕಾಯ್ತೀನಿ….
ಜಯ್ ಅಲ್ಲ, ಕ್ಷಮಿಸು
ಸುಹಾನ್
**
ಹಲೋ ಜಯ್,
ನೀನು ಹೀಗೇ ನನ್ನ ಮನಸ್ಸಿನಲ್ಲಿ ಹೆಸರು ಒತ್ತಿದ್ದೀಯಾ… ಅದಕೆ ನಿನ್ನ ನಾನು ಕರೆಯೋದು ಜಯ್ ಅಂತಲೇ ಮುಂದೇನೂ…. ಕ್ಷಮಿಸಿ ಬಿಡು, ಆವತ್ತು ಸಂಜೆಯ ಭೇಟಿಯು ನನ್ನಿಂದ ಹಾಳಾಯ್ತು ಅಂತ ಹೇಳ್ಲಿಕ್ಕೆ ಸಂದೇಶ ಹಾಕಿದ್ದೆ.. ಆದರೆ, ನಿನ್ನ ಮೇಲ್ ಓದಿದ ಮೇಲೆ, ಖಾತ್ರಿ ಆಯ್ತು ಕಣೋ.… ಹಾ, ನಿನ್ನ ಮೇಲ್ ಗೆ ಒಂದು ವಾರದ ನಂತರ ಉತ್ತರ ಕೊಟ್ತಾ ಇದೀನಿ…ಯಾಕೆ ಗೊತ್ತಾ, ನಾನು ಅಡುಗೆ ಕಲೀತಾ ಇದೀನಿ… ಸುಮಾರಾಗಿ ಮಾಡ್ತೀನಿ… ಇನ್ನೂ ಸುಧಾರಿಸುತ್ತೆ… ನೀನು ಹೇಳಿದ್ದು ಸರೀನೇ ಇದೆ… ಮದುವೆಗೆ ಟ್ವಿಸ್ಟ್ ಆಗಿರೋ ಟೊಮ್ಯಾಟೊ ಕೆಚಪ್ ಇದ್ರೆ ನಂಗೆ ಮದುವೆ ಒಪ್ಪಿಗೆ….
ಮತ್ತೆ ಕ್ಷಮೆ ಕೇಳುವ ಪ್ರಸಂಗ ಬರದು,
– ಸನಾ
– ಡಾ. ಅಜಿತ್ ಹರೀಶಿ
ಕಥೆಗಾರರ ಪರಿಚಯ:
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿಯಲ್ಲಿ ಖಾಸಗಿ ವೈದ್ಯ ವೃತ್ತಿ ಮಾಡುತ್ತಿರುವ ಅಜಿತ್ ಅವರಿಗೆ ಬರವಣಿಗೆ ಪ್ರವೃತ್ತಿಯಾಗಿದೆ. ಬಿಳಿಮಲ್ಲಿಗೆಯ ಬಾವುಟ ( ಕಾವ್ಯ ಮಾಣಿಕ್ಯ ಪ್ರಶಸ್ತಿ ), ಸೂರು ಸೆರೆಹಿಡಿಯದ ಹನಿಗಳು ಪ್ರಕಟಿತ ಕವನ ಸಂಕಲನಗಳು.