ಕಥಾಗುಚ್ಛ

ಮುಡಿಯೇರಿದ ಹೂವು!

ಸಂತೇಬೆನ್ನೂರು ಫೈಜ್ನಾಟ್ರಾಜ್

ಹುಡ್ಗಿ ಮನೆ ಪಕ್ಕಾನೇ ಇದ್ ಬಿಟ್ರೆ ಪ್ರೀತಿ ಹುಟ್ ಬಿಡುತ್ತಾ ? ಹುಡುಗೀರೂ ಥಕ್ ಅಂತ ತೆಕ್ಕೆಗೆ ಬಿದ್ ಬಿಡ್ತಾರಾ ? ಅದೆಲ್ಲಾ ನಮ್ಮಂಥಾ ಹುಚ್ ಹುಡುಗರ ಬೆಚ್ ಕಲ್ಪನೆಗಳು ! ಈಗ ಈ ರೇಷ್ಮಾ ನಮ್ಮ ಪಕ್ಕದ್ಮನೇಲೇ ಇರೋದು ; ಆಕೆ ಬಂದು ಸರಿ ಸುಮಾರು ವರ್ಷ ಆಗ್ತಾ ಬಂತು. ತಲೆ ಮೇಲಿನ ದಾವಣಿ ಸರೀಲಿಲ್ಲ. ತಲೆ ಎತ್ತಿ‍ ಯಾರನ್ನೂ ನೋಡ್ಲಿಲ್ಲ. ತಾನು, ತನ್ನ ಕೆಲ್ಸ ಅಂತ ಸದಾ ಮೌನದ ಮೂಟೆಯಾಗ ಇರತಿದ್ಲು !

          ನಾನೇ ಅಲ್ವೆ ಹಳೇ ಸಿನೆಮಾದ ವಹಿದಾ ರೆಹಮಾನ್, ಜೀನತ್ ಅಮಾನ್, ಮಮ್ತಾಜ್ ಮುಂತಾದವರ ಹೋಲಿಕೆ ಕೊಟ್-ಕೊಟ್ ಮಾತಿಗಿಳ್ಸಿದ್ದು, ಅದೂ ಹ್ಞಾಂಜಿ, ಹ್ಞೂಂಜಿ, ಬೋಲೋಜಿ ಅಷ್ಟೆ! ಪಾಪ ಅವಳೇನ್ ಇಲ್ಲೇ ಪರ್ಮನೆಂಟಾಗಿ ಇರ್ತಾಳೆಯೇ? ಈಗ್ಲೋ ಆಗ್ಲೋ ತನ್ನೂರಿಗೆ ಹೋಗ್ತಾಳೆ; ಚಿಕ್ಕಮ್ಮ ಕಾಯಿಲೆ ಅಂತ ಸಹಾಯಕ್ಕೆ ಬಂದಿರೋದಲ್ವೆ ? ಬಂದಾಗ್ಲಿಂದಾಕೆಗೆ ಕಣ್ಣಲ್ಲಿ ಕಣ್ ಕೂಡ್ಸಕ್ ಪ್ರಯತ್ನ ಪಟ್ಟು ಪಟ್ಟು ಕಣ್ ಕರಗಿದ್ವೇ ಹೊರತು. ರೇಷ್ಮಾಳ ನೆರಳೂ ನನ್ ಮೇಲೆ ಬಿದ್ದಿರಲಿಲ್ಲ. ನನ್ನ ಈ ಪ್ರೀತಿ ಪ್ರಯತ್ನ ಪಾಪ ಅವಳಿಗೂ ಗೊತ್ತಿತ್ತು; ನಾನು ಹಳೇ ಹಾಡು ಹೇಳೋದು, ಹಿಂದಿ ರಾಜ್‌ಕುಮಾರ್‌ನ ಶಾಯರಿ ಬಿಸಾಕೋದು, ನಮ್ ತಂಗಿ ಮೇಲೆ ಹಾಕಿ ಮಾತಾಡೋದು ಎಲ್ಲಾ ತಿಳಿದೂ  ಮೂಕಿ ಹಾಗೆ ಇದ್ದ ಕಾರಣ ತಿಳೀತಾನೆ ಇರ್ಲಿಲ್ಲ. ಮೊನ್ನೆ ಅವಳಾಗಿ ಜುಮ್ಮಾ ನಮಾಜ್ ವೇಳೆ ಯಾರೂ ಇಲ್ಲದ ಸಮಯಕ್ಕೆ ಮಾತಾಡಲು ಹಿತ್ತಲ ಹುಣಸೇಮರದ ಎದುರಿನ ಗೋರಂಟಿ ಬಳ್ಳಿ ನೆರಳಿಗೆ ಕರೆಯುವರೆಗೂ !

          ಎದೆಯಲ್ಲಿ ಹೂವರಳಿ ಘಂಗುಡ್ತಿದ್ವು; ಮನಸ್ಸು ಪಾರಿವಾಳವಾಗಿ ಹೋಗಿತ್ತು. ನಾ ಹೋದ ಅರ್ಧ ನಿಮಿಷಕ್ಕೆ ರೇಷ್ಮಾ ರಕ್ತ ಬಣ್ಣದ ನೈಟಿಯಲ್ಲಿ ಬಂದೇ ಬಿಟ್ಟಳು. ನನಗೋ ನೀರು ಎಲ್ಲೆಂದರಲ್ಲಿ ಒಸರುತ್ತಿತ್ತು. ‘ನೋಡಿ ಸಾಬ್ ನಾನು ನೀವಂದ್ ಕೊಂಡಂತೆ ಇಲ್ಲ. ನಿಮ್ಮ ಪ್ರೀತಿ, ಪ್ರೇಮ ಎಲ್ಲಾ ನಿಮ್ ತಂಗಿಯಿಂದ ಮಾಲೂಮ್ ಹೈ, ಮಗರ್ ನಾ ಅದಕ್ಕೆ ಅರ್ಹಳಲ್ಲ;  ನನ್ನಿಂದ ನೀವೇನೂ ಬಯಸದಿದ್ದರೆ ಒಳ್ಳೆಯದು -ಎಂದು ಮೌನವಾದಳು ಕಣ್ಣಲ್ಲಿ ನೀರು ಕವಿತೆ ಹಾಡುತ್ತಿದ್ದವು! ಅಲ್ಲಾ ರೇಷ್ಮಾ ಮೈ ತುಮ್‌ಸೆ ಪ್ಯಾರ್ ಕರ್ತಾ ಹುಂ -ಶಾದಿ ಕೆ ಲಿಯೇ ಭಿ ತಯಾರ್ .. .. ನಾ ನಿವೇದಿಸಿಕೊಂಡೆ.

          ಆಕೆ ದುಃಖಿತಳಾಗಿ ನುಡಿದಳು; ನೋಡಿ ಸಾಬ್, ನಾನೂ ಜೀವನದ ಬಗ್ಗೆ ಬಹುತ್ ಬಹೂತ್ ಆಸೆ ಇಟ್ಕೊಂಡಿದ್ದವಳು. ಬಾಳನ್ನು ಬೆಲ್ಲದಂತೆ ಸವಿಯ ಬೇಕೆಂದುಕೊಂಡಿದ್ದವಳು, ಈ ನಸೀಬ್ ಹಾಳಾದ್ದು! ನನ್ನ ಒಳ್ಳೆತನಾನೇ ನನ್ನ ಹೀಗ್ ಮಾಡ್ತು ನಾ ಯಾರ್ಯಾರನ್ನ ಗೆಳೆಯರು ಅಂತ ನಮ್ಮೂರಲ್ಲಿ ನಂಬ್ಕೊಂಡಿದ್ನೊ ಅವ್ರೆ ಪಿಕ್ನಿಕ್ ನೆಪದಲ್ಲಿ ಕರೆದುಕೊಂಡು ಹೋಗಿ ಸಾಮೂಹಿಕ ಬಲತ್ಕ್ಕಾರದಿ ನರಬಾದ್ ಮಾಡಿದ್ರು. ಅದರ ನೋವು ಮರೆಯೋಕೆ ಇಲ್ಲಿಗೆ ಚಿಕ್ಕಮ್ಮನ ನೆಪಕ್ಕೆ ಬಂದೆ. ನಿಮ್ಮ ಪ್ರಾಮಾಣಿಕ ಪ್ರೀತಿ, ನಡೆ-ನುಡಿ ವರ್ಷದಿಂದ ನೋಡಿ, ಕೇಳಿ ಗೊತ್ತಿದೆ, ನಿಮ್ಮಂಥವರಿಗೆ ನಾ ತಕ್ಕವಳಲ್ಲ ಅಂತಲೇ ನಾ ಪ್ರೀತಿಯ ಹಾತ್ ನೀಡಲಿಲ್ಲ. ಈಗ ಹೇಳಿ ಈಗ್ಲೂ ಮೊದಲಿನಂತೆ ಪ್ರೀತಿ, ಪ್ರೇಮದ ಮಾತಾಡ್ತೀರಾ ? ಮದ್ವೆ ಯಾಗ್ತೀರಾ? ಎಂದಳು ರೇಷ್ಮಾ ಒಂದೇ ಉಸಿರಿಗೆ !

          ನಾನು ದಿಜ್ಞೂಡನಾಗಿದ್ದೆ! ಎದೆಲಿ ಏನೋ ಇರಿದಂಗ್ ಅನುಭವ ! ರೇಷ್ಮಾ ಕಣ್ಣು ಹೊಳೆಯಾಗಿದ್ದವು ; ನೀರು ಧಾರಾಕಾರ ಸುರೀತಿದ್ವು ! ನಾ ಎರಡೂವರೆ ನಿಮಿಷದ ದೀರ್ಘ ಮೌನ ಚಿಂತನೆಯ ನಂತರ ದೊಡ್ ಉಸಿರ್ ಬಿಟ್ಟು ಹೇಳಿದೆ -’ರೇಷ್ಮಾ ಮೈ ತುಂಸೆ ಹಿ ಶಾದಿಕರೂಂಗ ..”

          ಆಕೆ ಈಗ ತಲೆ ಎತ್ತಿ ಕಣ್ಕೂಡಿಸಿ, ಕಣ್ಣರಳಿಸಿ ನೋಡಿದಳು: ನೀರಲ್ ತೇಲೋ ನಕ್ಷತ್ರದಂತೆ ಕಣ್ ಕಂಡವು ! ಮಾತಾಡದೆ ಆಕೆ ಬರೀ ನನ್ನೇ, ನನ್ನ ಬೆಕ್ಕಿನ ಕಣ್‌ಗಳನ್ನೆ ನೋಡ್ತಾ ನಿಂತ್ ಬಿಟ್ಲು ! ನಾ ನಕ್ಕೆ…. ಅವಳು ನಗಲಿಲ್ಲ

ಅಡಿಯ ಹೂ ಮುಡಿಗೇರಿತ್ತು !

ಸಂತೇಬೆನ್ನೂರು ಫೈಜ್ನಾಟ್ರಾಜ್

ಕಥೆಗಾರರ  ಪರಿಚಯ:

ಕನ್ನಡ ಅಧ್ಯಾಪಕರು,.ನಾಡಿನೆಲ್ಲಾ ಪತ್ರಿಕೆ ಗಳಲ್ಲಿ ಕತೆ ಕವನ,ಪ್ರಬಂಧ, ಲೇಖನ, ಹನಿಗವನ ಪ್ರಕಟಗೊಂಡಿವೆ.ಈಗಾಗಲೇ ಎರಡು ಕವನ ಸಂಕಲನ,ಒಂದು ಮಕ್ಕಳ ಕಥಾ ಸಂಕಲನ,ಒಂದು ಮಕ್ಕಳ ಕವನ ಸಂಕಲನ,ಒಂದು ಕಥಾ ಸಂಕಲನ ಒಟ್ಟು ಐದು ಕೃತಿ ಬಿಡುಗಡೆ ಆಗಿವೆ,ಸ್ನೇಹ ಶ್ರೀ ಪ್ರಶಸ್ತಿ,ಸಂಚಯ ಕಾವ್ಯ ಪುರಸ್ಕಾರಹಾಮಾನಾ ಕಥಾ ಪ್ರಶಸ್ತಿಪಡೆದಿದ್ದಾರೆ…

Leave a Reply

Back To Top