ಮೂರು ಅನುವಾದಿತ ಗಜಲುಗಳು.
ಉತ್ತಮ ಯಲಿಗಾರ
ಗಜಲ್-ಒಂದು
ಹೆಜ್ಜೆ ಶಬ್ದವೊಂದು ಕೇಳಿಸಿದರೆ ಅನಿಸುವದು ನೀನೆಂದು
ನೆರಳೊಂದು ಬಳಿ ಸುಳಿದರೆ ಅನಿಸುವದು ನೀನೆಂದು
ಹೂದೋಟದಲಿ ರೆಂಬೆಯೊಂದನು ಮುಟ್ಟಲು
ನಾಚಿ ನಲಿದಾಡಿದರೆ ಅನಿಸುವದು ನೀನೆಂದು
ಚಂದನದಿ ಸುವಾಸಿತ ಮದಭರಿತ ಗಾಳಿಯು
ಅನಂದದಿ ಮೈಸೋಕಲು ಅನಿಸುವದು ನೀನೆಂದು
ತಾರೆಗಳ ಮಿನುಗುವ ಹೊದಿಕೆ ಹೊದ್ದುಕೊಂಡು
ನದಿಯೊಂದು ಹರಿದಾಡಿದರೆ ಅನಿಸುವದು ನೀನೆಂದು
ಸರಿರಾತ್ರಿಯಲಿ ಬಂದು ಒಂದು ಹೊನ್ನ ರಶ್ಮಿ
ನನ್ನೊಂದಿಗೆ ಉರುಳಾಡಿದರೆ ಅನಿಸುವದು ನೀನೆಂದು.
ಮೂಲ: ಜಾನ್ ನಿಸ್ಸಾರ್ ಅಖತರ್ (ಉರ್ದು)
==============================
ಗಜಲ್ -2
ದ್ವೇಷವೇ ಇರಲಿ, ಮನ ನೋಯಿಸಲಾದರೂ ಬಾ
ಬಾ ಮತ್ತೆ ನನ್ನ ತೊರೆದು ಹೋಗಲಾದರೂ ಬಾ
ಇರಲಿ ಚೂರು ಭರವಸೆ ನನ್ನ ಹೆಮ್ಮೆಯ ಒಲವ ಮೇಲೆ
ನನ್ನ ಮನವೊಲಿಸಲು ನೀ ಒಮ್ಮೆಯಾದರೂ ಬಾ
ಮೊದಲಿನಂತಿಲ್ಲ ನಿಜ ನನ್ನ ನಿನ್ನ ಬಾಂಧವ್ಯ
ಜಗದ ನಿಯಮವನ್ನೇ ಪಾಲಿಸಲಾದರೂ ಬಾ
ವರ್ಷಗಳಿಂದ ವಂಚಿತ ನಾನು ಅಳುವಿನ ಆಹ್ಲಾದದಿಂದ
ನನ್ನನು ಈ ಹೊತ್ತು ಅಳಿಸಲಾದರೂ ಬಾ
ಯಾರ್ಯಾರಿಗೆ ವಿವರಿಸಲಿ ನೀ ಹೋದ ಕಾರಣ
ನನ್ನ ಮೇಲೆ ಕೋಪವಿರಲು ಜಗಕಾಗಿಯಾದರೂ ಬಾ
ಈ ಹುಚ್ಚು ಮನಸಿಗಿದೆ ಇನ್ನೂ ನಿನ್ನಿಂದ ಆಕಾಂಕ್ಷೆ
ಆ ಅಂತಿಮ ಆಶಾದೀಪವನ್ನು ನಂದಿಸಲಾದರೂ ಬಾ.
ಮೂಲ: ಅಹ್ಮದ್ ಫರಾಜ್ (ಉರ್ದು)
=========================================
ಗಜಲ್ -3
ನೋವುಗಳೆಲ್ಲ ಹೀಗೆ ಒಳಗೊಳಗೇ ಚುಚ್ಚುವದಿಲ್ಲ
ಹೃದಯದ ನೋವು ಇದು, ವ್ಯರ್ಥವಾಗುವದಿಲ್ಲ
ಯಾವ ಸ್ನೇಹಿತನೂ ಇಲ್ಲ, ರಹಸ್ಯ ಹಂಚಿಕೊಂಡವನಿಲ್ಲ
ಹೃದಯವೊಂದಿತ್ತು ನನ್ನದು, ಅದೂ ದಯೆ ತೋರುವದಿಲ್ಲ
ನನ್ನ ಆತ್ಮದ ನಿಜಾಂಶ , ನನ್ನ ಅಶ್ರುಗಳನು ಕೇಳು
ನನ್ನ ತೋರಿಕೆಯ ನಗು, ನನ್ನ ನಿಜಾನುವಾದವಲ್ಲ
ಆ ಕೂದಲನ್ನು ಕೂಗು , ಆ ನಯನವನ್ನು ಕೋರು
ತುಂಬಾ ಬಿಸಿಲು ಇಲ್ಲಿ, ಯಾವ ಸೂರು ಇಲ್ಲ
ಈ ಕಲ್ಲುಗಳ ಮೇಲೆ ನಡೆದು ಬರುವದಾದರೆ ಹೊರಡು
ನನ್ನ ಮನೆಯ ದಾರಿಯಲ್ಲಿ ಅಕಾಶಗಂಗೆ ಇಲ್ಲ
ಮೂಲ : ಮುಸ್ತಫಾ ಜೈದಿ
==================================
ಕವಿ ಪರಿಚಯ:
ಉತ್ತಮ ಯಲಿಗಾರ ಬೆಳಗಾವಿಯಲ್ಲಿ ಹುಟ್ಟಿ ಅಲ್ಲೇ ಎಂಜಿನಿಯರಿಂಗ್ ವರೆಗೆ ಶಿಕ್ಷಣ ಪಡೆದು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿ BSNL ನಲ್ಲಿ ಉಪಮಂಡಲ ಅಭಿಯಾತರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಕನ್ನಡ, ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಹವ್ಯಾಸಿಯಾಗಿ ಕೆಲಸ ಮಾಡುತ್ತಿದ್ದು ಮೂರೂ ಭಾಷೆಯಲ್ಲಿ ಕವನ ಸಂಕಲನ ಹೊರತರುವ ಕನಸು ಹೊತ್ತಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕವನ ಹಂಚಿಕೊಳ್ಳುವ ಇವರಿಗೆ ಉರ್ದುವಿನ ಪ್ರಸಿದ್ಧ ಗಜಲ್ ಗಳನ್ನು ಕನ್ನಡಕ್ಕೆ ತರುವ ಹಂಬಲ. ವಿವಿಧ ವೇದಿಕೆಗಳಲ್ಲಿ (ಕಹಳೆ, ಯುವರಕೋಟ್, ರಾಸ್ಯಮ್ ಇತ್ಯಾದಿ) ವಿಭಿನ್ನ ಶೈಲಿಯಲ್ಲಿ ಕವನವಾಚನ ಮಾಡುವದು ಇವರ ಹವ್ಯಾಸ.
ಚೆಂದ ಭಾವದ ಗಜ಼ಲ್ಗಳು..
ಧನ್ಯವಾದಗಳು