ಅಂಕಣ ಸಂಗಾತಿ

ಸಕಾಲ

ಶಿವಲೀಲಾ ಹುಣಸಗಿ

ವೃದ್ಧಾಪ್ಯದ ನಂಟು ತಪ್ಪಿದ್ದಲ್ಲ ಎಲ್ಲರಿಗೂ

ಯಾರಾದರೂ ನಮ್ಮನ್ನು ವಯಸ್ಸಾಯಿತೆಂದು ತಮಾಷೆ ಮಾಡಿದರೂ ಮನಸ್ಸಿಗೆ ಏನೋ ಕಸಿವಿಸಿ.ಕನ್ನಡಿಯನ್ಬು ಹತ್ತಾರುಬಾರಿ ನೋಡಿಕೊಳ್ಳುವ ನಾವುಗಳು ವೃದ್ದರಾಗಲೂ ಇಷ್ಟಪಡುವುದಿಲ್ಲ. ಯಾವಾಗಲೂ ಚಿರಯವ್ವನ ಹೊಂದುವ ಸಲುವಾಗಿ ನೂರೆಂಟು ಪ್ರಯೋಗಗಳನ್ನು ಮಾಡುತ್ತಾ ಸದಾ ಲವಲವಿಕೆಯಿಂದ ಇರಲು ಹರಸಾಹಸ ಮಾಡುವ ನಮ್ಮ ಮನಸ್ಸು ವೃದ್ಧಾಪ್ಯದ ಲಕ್ಷಣಗಳನ್ನು ಎದುರಿಸಲಾಗದೇ ಖಿನ್ನತೆಗೆ ಜಾರುವುದುಂಟು.ಆದರೂ ವಯಸ್ಸು ಯಾರಿಗೂ ಕಾಯಲ್ಲ,ಬದಲಾಗಿ ಆಯಾ ಸಮಯದಲ್ಲಿ ಅದು ತನ್ನ ಇರುವಿಕೆಯನ್ನು ತೊರಿಸಿ ಬಿಡುತ್ತದೆ.ಅಕ್ಟೋಬರ್ ೧ ನೇ ತಾರೀಖು ”ಅಂತರ ರಾಷ್ಟೀಯ ವೃದ್ಧರ ದಿನಾಚರಣೆ’’ ಯೆಂದು ಗುರುತಿಸಲಾಗಿದೆ. ಪ್ರಪಂಚದಾದ್ಯಂತ ವಯಸ್ಸಾದವರ ಸಂಖ್ಯೆ ಅತಿ ವೇಗದಲ್ಲಿ ಬೆಳೆಯುತ್ತಿದೆ. ವೃದ್ಧಾಪ್ಯ ಯಾರಿಗೂ ತಪ್ಪಿದ್ದಲ್ಲ. ಜೀವನದ ಈ ಹ೦ತವನ್ನು ಎದುರಿಸುವ ರೀತಿ ಒ೦ದೇ ರೀತಿಯಾಗಿಲ್ಲ. ಇದು ವಯಸ್ಸಾದವರ ಬಗ್ಗೆ ನಮಗಿರುವ ಅಭಿಪ್ರಾಯ, ಸಮಾಜ, ಮತ್ತು ಸ೦ಸ್ಖೃತಿಯನ್ನು ಅವಲಂಬಿಸಿದ. ಹಿರಿಯರನ್ನು ದೇಶದ ಹಿರಿಮೆಯೆಂದು ಗುರುತಿಸಿ,ಗೌರವಿಸುವ ಮನೋಭಾವ ನಮ್ಮಲ್ಲಿ ಮೂಡಬೇಕಾದ ಅಗತ್ಯವಿದೆ.

ವೃದ್ದಾಪ್ಯ ಮನುಷ್ಯನ ನಾಲ್ಕು ವಿಧದ ಅವಸ್ಠೆಗಳಲ್ಲಿ ಒಂದು. ಬಾಲ್ಯ, ಯೌವ್ವನ, ಗೃಹಸ್ಥ ಉಳಿದವುಗಳು.೧) ಬ್ರಹ್ಮಚರ್ಯ,೨) ಗೃಹಸ್ಥ,೩) ವಾನಪ್ರಸ್ಥ, ೪)ಸಂನ್ಯಾಸ.ಜೀವಿಯ ದೇಹವು ಬೆಳವಣಿಗೆಯ ಕೊನೆಯ ಹಂತದಲ್ಲಿರುವ ಅವಸ್ಥೆಯನ್ನು  ವೃದ್ದಾಪ್ಯ ಎನ್ನುವರು. ಮನುಷ್ಯನ ಜೀವಿತದಲ್ಲಿ ಸುಮಾರು ೩೦ ರಿಂದ ೪೦ ವರ್ಷಗಳ ಪ್ರಾಯದಲ್ಲಿ ಇದರ ಲಕ್ಷಣ ಗೋಚರಿಸಲು ಪ್ರಾರಂಭವಾಗುತ್ತದೆ. ಮೊದಲಿಗೆ ಕೂದಲು ಬಿಳುಪಾಗುವುದು,ಕಣ್ಣಿನ ಸುತ್ತ ಕಪ್ಪನೆಯ ಉಂಗುರದಂತ ರಚನೆ ಬೆಳೆಯುವುದು,ಇಂದ್ರಿಯಗಳ ಸಾಮರ್ಥ್ಯ ಕ್ಷೀಣಿಸುವುದು ಇದರ ಪ್ರಮುಖ ಭಾಗವಾಗಿರುತ್ತದೆ.ಹಾಗಂತ ೭೦,೮೦ ವಯೋಮಾನದ ವೃದ್ದರು ಈಗಲೂ ಸ್ಪಷ್ಟವಾಗಿ ನೋಡುತ್ತಾರೆ, ಓದುತ್ತಾರೆ,ನಡೆಯುತ್ತಾರೆ. ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಒಂದು ಅವಲೋಕನ ನಮಗೆ ಕಂಡಂತೆ ಹಲವು ದಶಕಗಳಿಂದ ಸಮಾಜದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿದೆ.ಇಂದು ನಮ್ಮ ಹಿರಿಯರು ಹಿಂದಿಗಿಂತ ಹೆಚ್ಚು ಆರೋಗ್ಯವಂತರಾಗಿ ಧೀರ್ಘ ಆಯುಷ್ಯವನ್ನು ಪಡೆದವರಾಗಿದ್ದಾರೆ. ವೈದ್ಯಕೀಯ ಸೌಲಭ್ಯ ಉತ್ತಮವಾದ ಆಹಾರ, ವ್ಯಾಯಾಮದ ಕಡೆ ಗಮನ ಇವುಗಳಿಂದ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಅವಕಾಶವಿದೆ.ಜಾಗತೀಕರಣ, ಕಂಪ್ಯೂಟರ್ ಗಳ ಬಳಕೆ, ಅಂತರ್ಜಾಲ ನಮ್ಮ ಬದುಕನ್ನು ಸರಳಗೊಳಿಸಿವೆ. ಈ ತೀಕ್ಷ್ಣ ಹಾಗೂ ಕ್ಷಿಪ್ರ ಬದಲಾವಣೆಗಳ ಜೊತೆಗೆ ಹೊಂದಿಕೊಂಡು ಹೊಸ ತಂತ್ರ ಜ್ಞಾನವನ್ನು ಕಲಿಯುತ್ತ ತಮ್ಮ ಬದುಕನ್ನು ಅಳವಡಿಸಿಕೊಳ್ಳುತ್ತಾ ಸಾಗುವುದು ಇವತ್ತಿನ ಹಿರಿಯರಿಗೆ ಒಂದು ಕಷ್ಟವಾದ ಕೆಲಸ. ಈ ತಾಂತ್ರಿಕ ಬೆಳವಣಿಗೆ ಹಿರಿಯರ ಪಾಲಿಗೆ ಒಂದು ದೊಡ್ಡ ಸವಾಲು.

ವೃದ್ಧರು ಎಂದರೆ ಯಾರು? ವೃದ್ಧರು ಎಂಬ ಅರ್ಥ ಹಿರಿಯರು, ಮುದುಕರು, ಇಳಿವಯಸ್ಸಿನವರು ಹೀಗೆ ಹಲಾವರು ಹೆಸರುಗಳನ್ನು ಹಾಗೂ ಅದರೊಡನೆ ಮನದಲ್ಲಿ ಮೂಡುವ ಚಿತ್ರಗಳನ್ನು ಸ್ಮರಿಸಬಹುದು. ವೃದ್ಧರು ಎಂದರೆ ಯಾರು? ಎಂಬ ಪ್ರಶ್ನೆಗೆ ಬಹಳ ಸರಳವಾದ ಒಂದು ಅರ್ಥವನ್ನು ಒಬ್ಬ ವ್ಯಕ್ತಿಯ ವಯಸ್ಸಿನ ಮೂಲಕ ಕಾಣಬಹುದು. ಸಾಮಾನ್ಯವಾಗಿ 60 ವರ್ಷ ಮೀರಿದವರನ್ನು ಈ ಗುಂಪಿಗೆ ಸೇರಿಸುವುದು ಸಾಮಾನ್ಯ. ಹಿಂದೆ ಒಂದು ದೇಶದಲ್ಲಿನ ಗಂಡು ಹೆಣ್ಣುಗಳ ಜೀವಮಾನ ಆಧಾರಧ ಮೇಲೆ 60 ಮೀರಿದವರನ್ನು ಹಿರಿಯರು ಎಂದು ಕರೆದು ಸರ್ಕಾರ ಒಂದು ನಿವೃತ್ತಿಯ ಗಾಡಿಯನ್ನು ಹಾಕಿರುವುದುಂಟು. ಆದರೆ ಈಗ ಅದೇ ಜೀವಮಾನ ಮೇಲೆ ತಿಳಿಸಿದ ಕಾರಣಗಳಿಂದ ಹಿಗ್ಗಿದೆ. ಪಾಶ್ಚಿಮಾತ್ಯ  ದೇಶಗಳಲ್ಲಿ  ಇಂದು ನಿವೃತ್ತಿಯ ಗಾಡಿಯನ್ನು 65-70 ಕ್ಕೆ ವಿಸ್ತರಿಸಲಾಗಿದೆ. ಹಾಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಒಬ್ಬ ವ್ಯಕ್ತಿ  65-70 ವರ್ಷದಾಟುವ ವರೆಗೆ ಅವರನ್ನು ವೃದ್ಧರು ಎಂದು ಪರಿಗಣಿಸುವ ಸಾಧ್ಯತೆ ಕಡಿಮೆ.ವೃದ್ಧಾಪ್ಯ ವೆಂಬುದು ಒಂದು ಮನಸ್ಥಿತಿಯೇ ಅಥವಾ ದೈಹಿಕ ಸ್ಥಿತಿಯೇ ಎಂಬ ಪ್ರಶ್ನೆ ಹಲವರಿಗೆ ಮೂಡಬಹುದು. ಪಾಶ್ಚಿಮಾತ್ಯ ದೇಶದಲ್ಲಿ 60-70 ವರ್ಷಗಳನ್ನು ಮೀರಿದವರು ದೇಹವನ್ನು ಅತಿಯಾಗಿ ದಂಡಿಸಿ ಹತ್ತು ಇಪ್ಪತ್ತು ಮೈಲಿಗಳ ಮ್ಯಾರಥಾನ್ ರೇಸ್ ಗಳಲ್ಲಿ ಭಾಗವಹಿಸುವುದು ಸಾಮಾನ್ಯ.

ಸಾಮಾನ್ಯರಲ್ಲಿ ಅದೂ ಭಾರತದಲ್ಲಿ ವೃದ್ಧರು ಎಂದ ಕೂಡಲೇ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರವೆಂದರೆ ನೆರತು ಉದುರುವ ಕೂದಲು, ನಡುಗುವ ಕೈಗಳು, ಮಬ್ಬಾದ ಕಣ್ಣುಗಳು, ಅಸಹಾಯಕತೆ ಮತ್ತು ಇತರರ ಮೇಲೆ ಅವಲಂಬನೆ.ಇದು ನಮ್ಮ ಕಲ್ಪನೆ ಇದನ್ನು ಗಮನಿಸಿದಾಗೆ ಇದರಲ್ಲಿ ನಕಾರಾತ್ಮಕ ಹೆಚ್ಚಾಗಿ ಮೂಡಿ ಬರುತ್ತದ್ದೆ. ಇಂಗ್ಲೆಂಡಿನಲ್ಲಿ ಆಸ್ಪತ್ರೆಗೆ ಬರುವ ಅಥವಾ ಬಹಿರಂಗ ಸ್ಥಳಗಳಲ್ಲಿ ಕಾಣುವ ವೃದ್ಧರು ಒಳ್ಳೆ ಸೂಟು, ಬೂಟು ಟೈ ಗಳನ್ನು  ಧರಿಸಿ, ಬಹಳ ಸ್ವತಂತ್ರರಾಗಿ ತಲೆಯೆತ್ತಿ ನಡೆಯುತ್ತಾ ಎಲ್ಲರನ್ನು ವಿಚಾರಿಸಿಕೊಳ್ಳುತ್ತ ಒಂದು ಘನತೆಯ ಚಿತ್ರವನ್ನು ನೆನಪಿಗೆ ತರುತ್ತಾರೆ.  ಮುಂದುವರಿದ ದೇಶಗಳಲ್ಲಿ ಹಿರಿಯರು ಒಂದು ದೇಶದ ಸಿರಿಸಂಪತ್ತು ಎಂದು ಪರಿಗಣಿಸಿದರೆ ಇನ್ನು ಕೆಲವು ದೇಶಗಳಲ್ಲಿ ವೃದ್ಧರು ಸಮಾಜಕ್ಕೆ ಹೊರೆ ಎಂಬ ಮನೋಭಾವ ಇರಬಹುದು. ನಮ್ಮ ದೇಶದಲ್ಲಿ ಹಿರಿಯರ ಬಗ್ಗೆ ಒಂದು ಮಾತಿದೆ: ‘ಕಾಡು ಬಾ ಅನ್ನುತ್ತೆ, ನಾಡು ಹೋಗು ಅನ್ನುತ್ತೆ.’ ಬಹುಶಃ ಇದು ಪುರಾತನ ಕಾಲದಲ್ಲಿ ವಯಸ್ಸಾದವರು ನಾಡನ್ನು ತೊರೆದು ವನಗಳಲ್ಲಿ ನೆಲಸುತ್ತಿದ್ದ ಒಂದು ಹಿನ್ನೆಲೆಯಲ್ಲಿ ಮೂಡಿ ಬಂದಿರಬಹುದು. ವಯಸ್ಸಿಗೆ ಅನುಗುಣವಾಗಿ ನಡೆದುಕೊಳ್ಳುವುದರಲ್ಲಿ ಅರ್ಥವಿದೆ ಆದರೆ ಬದುಕನ್ನು ಪ್ರೀತಿಸಲು ಯಾವ ವಯಸ್ಸಿನ ಮಿತಿ ಇಲ್ಲ.

ಹಲವು ದಶಕಗಳ ಹಿಂದೆ ನಮ್ಮ ಜಾಯಿಂಟ್ ಫ್ಯಾಮಿಲಿ ಕುಟುಂಬ ವ್ಯವಸ್ಥೆಯಿಂದಾಗಿ ವೃದ್ಧರು ತಮ್ಮ ಮಕ್ಕಳು ಮೊಮ್ಮಕ್ಕಳೊಡನೆ ನೆಮ್ಮದಿಯಾಗಿ ಅವರ ಆಶ್ರಯದಲ್ಲಿ ಬದುಕಬಹುದಿತ್ತು. ಹಲವಾರು ಅಣ್ಣ, ತಮ್ಮ, ಅಕ್ಕ ತೆಂಗಿಯರು ತಂದೆತಾಯಿಗಳನ್ನು ಸರದಿಯಲ್ಲಿ ನೋಡಿಕೊಳ್ಳುವ ಒಂದು ವ್ಯವ್ಯಸ್ಥೆ ಇದ್ದು ಎಲ್ಲ ಹೊಂದಿಕೊಂಡು ನಡೆಯುತ್ತಿದ್ದ ಪರಿಸ್ಥಿತಿ ಇತ್ತು. ಈಗ ಸಣ್ಣ ಕುಟುಂಬ ವ್ಯವಸ್ಥೆ ಬಹಳ ಮಟ್ಟಿಗೆ ಪ್ರಚಲಿತಸ್ಥಿತಿಯಲ್ಲಿದೆ. ಮೇಲಾಗಿ ಗಂಡ ಹೆಂಡತಿಯರು ವೃತ್ತಿಯಲ್ಲಿ ತೊಡಗಿ  ವೃದ್ಧರಿಗೆ ಬೆಂಬಲ ಸಹಾಯ ಮಾಡುವ ಅವಕಾಶ ಕುಗ್ಗಿದೆ. ಅದಲ್ಲದೆ ವೃದ್ಧ ತಂದೆ ತಾಯಿಗಳಿಗೆ ಮೂಮ್ಮಕ್ಕಳನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಹೊರಲಾಗಿದೆ. ಒಂದು ಕುಟುಂಬದ ಆರ್ಥಿಕ ಪರಿಸ್ಥಿತಿಯ ಒತ್ತಡ ಹಾಗೂ ಹಲವಾರು ತೊಂದರೆಗಳಲ್ಲಿ ವೃದ್ಧ ತಂದೆ ತಾಯಿಯಾರು ಅನಿವಾರ್ಯವಾಗಿ ಸಿಕ್ಕಿಕೊಂಡು ಹೊರಬರುವುದು ಕಷ್ಟವಾಗಿದೆ. ಇನ್ನು ಕೆಲವು ಕುಟುಂಬಗಳಲ್ಲಿ ಮಕ್ಕಳು ವೃತ್ತಿಯ ಬದ್ದತೆಗಳಿಂದಾಗಿ ಹೊರನಾಡಿಗೆ ಅಥವಾ ಹೊರದೇಶಕ್ಕೆ ವಲಸೆ ಹೋಗಲು ನಿರ್ಧರಿಸಿದಾಗ ಇನ್ನು ಹೆಚ್ಚಿನ ಒಡ್ಡುತ್ತದೆ. ಇದರ ಜೊತೆಗೆ ಹಿರಿಯ ದಂಪತಿಗಳಲ್ಲಿ ಒಬ್ಬರ ಅನಾರೋಗ್ಯ ಅಥವಾ ಅಕಾಲ ಮರಣ ಇನ್ನು ಹೆಚ್ಚಿನ ಸಮಸ್ಯೆಗಳನ್ನು ತೆರೆದಿಡುತ್ತದೆ. ಇದರ ಒಟ್ಟಾರೆ ಪರಿಣಾಮ ಒಂಟಿತನ ಹಾಗೂ ಇಳಿವಯಸ್ಸಿನಲ್ಲಿ ಬದುಕನ್ನು ಒಬ್ಬರೇ ಎದುರಿಸುವ ಪರಿಸ್ಥಿತಿ ಉಂಟಾಗುತ್ತದೆ.

60 ವರ್ಷಗಳು ಮೀರಿದಂತೆ ದೇಹಶಕ್ತಿ ಕುಗ್ಗುತ್ತಿರುವಾಗ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಕ್ಯಾನ್ಸರ್, ಸ್ಟ್ರೋಕ್, ಕಣ್ಣಿನಲ್ಲಿ ಪೊರೆ , ಗಂಡಸರಲ್ಲಿ ಪ್ರಾಸ್ಟೇಟ್ ತೊಂದರೆ, ಮೂಳೆಗಳು ಸವಿದು ಮಂಡಿ ಮತ್ತು ಸೊಂಟಗಳಲ್ಲಿ ನೋವು, ಸಕ್ಕರೆ ಖಾಯಿಲೆ, ರಕ್ತ ಒತ್ತಡ ಹಾಗು ಮುಖ್ಯವಾಗಿ ಮಾನಸಿಕ ತೊಂದರೆಗಳು ಹಿರಿಯರನ್ನು ಬಾಧಿಸುತ್ತವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಆಲ್ಜಿಮೆರ್ಸ ಖಾಯಿಲೆ. ಒಂದು ಭಯಂಕರ ಸಮಸ್ಯೆಯಾಗಿದೆ. ಹಿಂದೊಮ್ಮೆ ಅರವತ್ತರ ಅರುಳು ಮರುಳು ಎಂದು ಪರಿಗಣಿಸಲ್ಪಟ್ಟ ಈ ಖಾಯಿಲೆ ಅಷ್ಟು ಸರಳವಲ್ಲ.ವೃದ್ಧಾಪ್ಯದ ನಂಟು ಎಲ್ಲರಿಗೂ ತಪ್ಪಿದ್ದಲ್ಲ.

ವೃದ್ಧಾಪ್ಯದಲ್ಲಿ ಎಲ್ಲರನ್ನು ಹೆಚ್ಚು ಭಾದಿಸುವ ಸಮಸ್ಯೆ ಎಂದರೆ ಒಂಟಿತನ ಮತ್ತು ಬೇಸರ. ಹಲವು ತಿಂಗಳ ಹಿಂದೆ  ಬಿ ಬಿ ಸಿ ವಾರ್ತೆಯಲ್ಲಿ ಇಲ್ಲಿ ಸ್ಥಳೀಯ ಹಿರಿಯ ವ್ಯಕ್ತಿ, ಸುಮಾರು 89 ವರ್ಷದ ಜೋ ಬಾರ್ಟ್ಲಿ, ಮನೆಯಲ್ಲಿ ಒಬ್ಬಂಟಿಗನಾಗಿ ಕುಳಿತು ಬೇಸರವಾಗಿ ಕೆಲಸಕ್ಕೆ ಅರ್ಜಿ ಹಾಕಿದ್ದು ಒಂದು ದೊಡ್ಡ ಸುದ್ದಿಯಾಗಿ ಎಲ್ಲ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರಗೊಂಡಿತು. ಕೊನೆಗೆ ಆತನಿಗೆ ಒಂದು ಸಣ್ಣ ಹೋಟೆಲಿನಲ್ಲಿ ಕೆಲಸ ದೊರಕಿತು. ಜೋ ಈಗ ಕೆಲಸಕ್ಕೆ ಮರಳಿದ್ದಾನೆ!  ಅವನಿಗೆ ಎಲ್ಲಿಲ್ಲದ ಹುರುಪು ಉತ್ಸಾಹ !  ಆದರೆ ನಾನು ಆಲೋಚಿಸುವುದು ಜೋ ತರಹದ ವ್ಯಕ್ತಿಗಳಿಗೆ ಬದುಕಿನಲ್ಲಿ ಯಾವ ಹವ್ಯಾಸ ಇರಲಿಲ್ಲವೇ?
ನಾವು ಬದುಕಿನಲ್ಲಿ ಸಂಗೀತ, ಸಾಹಿತ್ಯ, ಕಲೆ, ವ್ಯಾಯಾಮ ಮುಂತಾದ ಹವ್ಯಾಸಗಳನ್ನು ಬೆಳಸಿಕೊಂಡು ಅದನ್ನು ಪೋಷಿಸುತ್ತ ಬದುಕುವುದನ್ನು ಕಲಿತರೆ ಇಳಿವಯಸ್ಸಿನಲ್ಲಿ ಒಂಟಿತನ ಮತ್ತು ಬೇಸರಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಸೋಶಿಯಲ್ ಕ್ಲಬ್ ಗಳ ಸದಸ್ಯರಾಗಿ ಸ್ನೇಹಿತರನ್ನು ಗಳಿಸಿದವರಿಗೆ ಹೃದ್ರೋಗ ಕಡಿಮೆಯಾಗಿರುವುದರ ಬಗ್ಗೆ ವೈದ್ಯಕೀಯ ಸಂಶೋಧನೆ ಮಾಹಿತಿಗಳಿವೆ.

ಇನ್ನು ಇಳಿವಯಸ್ಸಿನಲ್ಲಿ ಆರ್ಥಿಕ ಸುಭದ್ರತೆ ಬಹಳ ಮುಖ್ಯ. ಇಂಗ್ಲಿಷ್ ಸಂಸ್ಕೃತಿಯಲ್ಲಿ ಒಂದು ನಾಣ್ನುಡಿ ಇದೆ; ‘Save for a rainy day’ ದುಡಿಯುವ ಶಕ್ತಿ ಇರುವಾಗ ಮುಂಬರುವ ಕಷ್ಟಗಳ ದಿನಕ್ಕಾಗಿ ಕೂಡಿಡುವ ಆಲೋಚನೆಯನ್ನು ಕಿರಿಯರು ಪರಿಗಣಿಸಬೇಕು. ಇಂಗ್ಲೆಂಡಿನ ಹಿರಿಯರು ನರ್ಸಿಂಗ್ ಹೋಂಗಳಲ್ಲಿ  ಸೇರಬೇಕಾದರೆ ಬಹಳಷ್ಟು ಹಣ ಬೇಕಾಗುತ್ತದೆ. ಪೆಂಶನ್ (Pension)  ಹಣ ಸಾಕಾಗದೆ ಹಲವಾರು ಹಿರಿಯರು ತಮ್ಮ ಮನೆಗಳನ್ನು ಅಡವಿಟ್ಟು ಅಥವಾ ಮಾರಿ ನರ್ಸಿಂಗ್ ಹೋಂ ಸೇರಿಕೊಂಡಿರುವ ಬಗ್ಗೆ ಕೇಳುತ್ತೇವೆ.

ಮಧ್ಯ ವಯಸ್ಕರು ಅದರಲ್ಲೂ ಸಕ್ಕರೆ ಹಾಗೂ ರಕ್ತ ಒತ್ತಡ ಖಾಯಿಲೆ ಇರುವವರು ಆಹಾರ ಮತ್ತು ವ್ಯಾಯಾಮಗಳ ಕಡೆ ಗಮನ ಕೊಡದಿದ್ದಲ್ಲಿ ಇಳಿವಯಸ್ಸಿನಲ್ಲಿ  ಈ ಖಾಯಿಲೆಗಳ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.  ಒಬ್ಬ ವ್ಯಕ್ತಿ 50 ರ ಕೊನೆಯಲ್ಲಿ ಅಥವಾ ಅರವತ್ತರಲ್ಲಿ  ಇರುವಾಗ  ಗಂಡ ಅಥವಾ ಹೆಂಡತಿಯ ಅಕಾಲ ಮರಣದಿಂದ ಉದ್ಭವಿಸುವ ಒಂಟಿತನವನ್ನು ಎದುರಿಸುವುದು ಬಹಳ ಕಷ್ಟ. ಮಾನಸಿಕವಾಗಿ ಈ ಅಘಾತದಿಂದ ಚೇತರಿಸಿಕೊಳ್ಳುವುದು ಕಠಿಣ. ಹಿರಿಯ ವಯಸ್ಸಿನಲ್ಲಿ ಕಾಮಾದಿ ಬಯಕೆಗಳನ್ನು ಮೀರಿ ಸಾಂಗತ್ಯಕ್ಕೆಂದು ಮರು ಮದುವೆಯಾಗುವುದು ಅಥವಾ ಮದುವೆಯಾಗದೆ ಗಂಡು ಹೆಣ್ಣುಗಳು ಒಟ್ಟಿಗೆ ಇರುವುದು ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾನ್ಯ. ವೃದ್ಧರ ಏಳಿಗೆ, ಅನುಕೂಲ, ಆರೋಗ್ಯ ಮತ್ತು ಕಲ್ಯಾಣ ಇವುಗಳ ಬಗ್ಗೆ ಸಮಾಜ, ಸರ್ಕಾರ ಹಾಗೂ ಚಾರಿಟಿ ಸಂಘಗಳು ಗಮನ ಹರಿಸಬೇಕು. ಯೋಜನೆಗಳನ್ನು ಹಾಕಿಕೊಳ್ಳಬೇಕು. ವೃದ್ಧರು ಸಮಾಜದ ಆಸ್ತಿ , ಅವರು  ಸಮಾಜಕ್ಕೆ  ಹೊರೆ ಅಲ್ಲ ಎಂಬ ಆರೋಗ್ಯಕರವಾದ ಚಿಂತನೆಯನ್ನು  ಕಿರಿಯರು ಬೆಳಸಿಕೊಳ್ಳಬೇಕು. ವೃದ್ಧರಿಗೆ ಹಲವು ರೀತಿ ಆರ್ಥಿಕ ರಿಯಾಯಿತಿ ಹಾಗೂ ಆರೋಗ್ಯ ವಿಮೆ ದೊರಕುವಂತಾಗಬೇಕು. ಇನ್ನು ಹೆಚ್ಚಿನ ಹಾಗೂ ವಿವಿಧ ಹಂತಗಳ ವೃದ್ಧಾಶ್ರಮ ಹಾಗೂ ಸಾಮೂಹಿಕ ವಸತಿಗಳ ಸೌಕರ್ಯಗಳನ್ನೂ ಕಲ್ಪಿಸಬೇಕಾಗಿದೆ.

ವೃದ್ಧಾಪ್ಯದ ಸಮಸ್ಯೆಗಳು ನಾವು ಎದುರಿಸಬೇಕಾದ ಬಹಳ ದೊಡ್ಡ ಸವಾಲು. ಇದು ಗಡಿ, ದೇಶ ಹಾಗೂ ಸಂಸ್ಕೃತಿಗಳನ್ನು ಮೀರಿದ್ದು ಮಾನವ ಕುಲದ ಒಂದು ಸಮಸ್ಯೆ. ಒಂದಲ್ಲ ಒಂದು ದಿನ ಎಲ್ಲರು ಎದುರಿಸಬೇಕಾದ ಪರಿಸ್ಥಿತಿ. ಈ ಅನಿವಾರ್ಯತೆಯನ್ನು ಒಪ್ಪಿಕೊಂಡು ಇಳಿವಯಸ್ಸಿನಲ್ಲಿ ಧೈರ್ಯ ಹಾಗೂ ಆತ್ಮ ವಿಶ್ವಾಸಗಳೊಂದಿಗೆ ನೆಮ್ಮದಿಯಾಗಿ ಬದುಕಿನ ಸಂಜೆಯನ್ನು ಕಡಲಂಚಿನಲ್ಲಿ ಕಾಣುವ ಸೂರ್ಯಾಸ್ತದ ಪ್ರಶಾಂತತೆಯಷ್ಟೇ ಹಿತಕರವಾಗಿ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.ಅದೊಂದು ಗಳಿಗೆ ವೃದ್ದರು ನಮ್ಮ ಆಸ್ತಿಯೆಂಬ ಸತ್ಯವನ್ನು ಮರೆಯಬಾರದು.ಬದುಕಿನ ನೂರೆಂಟು ಜಂಜಾಟಗಳಲ್ಲಿ ಹಿರಿಯರು ಸವೆಸಿದ ಹಾದಿಯನ್ನು ಒಮ್ಮೆ ಹಿಂತಿರುಗಿ ನೋಡಬೇಕು. ಅಂದಾಗ‌ ಬದುಕಿನ ನೈಜ ಸತ್ಯಗಳು ಎದುರಾಗುವವು.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

5 thoughts on “

    1. ಅರ್ಥಪೂರ್ಣ ಬರಹ, ಬದುಕಿನ ಅನುಭವದ ಸಾರವನ್ನೆಲ್ಲ ಸೊಗಸಾದ ಬರಹ ರೂಪದಲ್ಲಿ ಪೋಣಿಸಿದ್ದೀರಿ… ಚೆನ್ನಾಗಿದೆ

  1. ವೃದ್ಧಾಪ್ಯದ ಕುರಿತು ಬರೆಹ ಉತ್ತಮವಾಗಿ ಮೂಡಿಬಂದಿದೆ.ಅಭಿನಂದನೆಗಳು.

  2. ತುಂಬಾ ಸೊಗಸಾಗಿ ಮೂಡಿ ಬಂದಿದೆ ಬರಹ ಮೇಡಂ ಹೀಗೆ ಮುಂದು ವರೆಯಲಿ ದೇವರು ಒಳ್ಳೆಯದು ಮಾಡಲಿ ನಿಮಗೆ …

    1. ಇಳಿ ವಯಸ್ಸಿನ ಚಿತ್ರಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗೆಳತಿ

Leave a Reply

Back To Top