ಕಾವ್ಯ ಸಂಗಾತಿ
ಅಭಿಷೇಕ ಬಳೆ ಮಸರಕಲ್
ಗಜಲ್.
ಬಯಲ ಬಜಾರಿನಲ್ಲಿ ಬುದ್ಧನ ಕಕ್ಕುಲಾತಿಯ ಹಾಡುವ ಮಣ್ಣಿನ ಕೂಸುಗಳು ನಾವು
ಜೀವ ಕಾರುಣ್ಯದ ಪ್ರೀತಿಯ ಚೆಲ್ಲುವ ಶರೀಫನ ಮನೆಯಂಗಳದ ಹೂಗಳು ನಾವು
ಬದುಕ ಜೋಳಿಗೆಯಲ್ಲಿನ ಎದೆಗೂಡಿನ ಹಾಡಿಗೆ ತಲೆದೂಗುವವರು ನಾವೇ
ಕತ್ತಲು ತುಂಬಿದ ಬದುಕಿನಲ್ಲಿ ಬೆಳದಿಂಗಳು ಚೆಲ್ಲುವ ದೀಪಗಳು ನಾವು
ಬೀದಿಯ ತುಂಬೆಲ್ಲ ನೋವುಂಡ ಜೀವಗಳ ದುಃಖದ ಕಣ್ಣೀರು ಹರಿದಿದೆ
ಸೋತ ಬದುಕಿಗೆ ಭೀಮಬಲ ತುಂಬುವ ಮಾನವತೆಯ ಕೈಗಳು ನಾವು
ಜಾತಿ ಧರ್ಮದ ಬೇಲಿಗೆ ಸಿಲುಕಿ ನಲುಗುತಿದೆ ಗಾಯಗೊಂಡ ಮನುಷ್ಯತ್ವ
ದಯವೇ ಧರ್ಮದ ಮೂಲವೆಂದ ಅಣ್ಣನ ಕ್ರಾಂತಿಯ ವಚನಗಳು ನಾವು
ಚೋಮನ ದುಡಿಯ ಸದ್ದಿನಲ್ಲಿ ಮಾರ್ದನಿಸಿದ್ದೊಂದೆ ಮನುಷ್ಯರೊಂದೆ
ಮನುಷ್ಯ ಪ್ರೀತಿಯ ಕಟ್ಟುವ ಸೌಹಾರ್ದತೆಯ ಸೇತುವೆಗಳು ನಾವು