ಅಂಕಣ ಸಂಗಾತಿ

ಆತ್ಮ ಸಖಿ

ಭಾರತಿ ಅಶೋಕ್ ಅವರು ಸಂಗಾತಿಯಲ್ಲಿ ಆತ್ಮಸಖಿ ಅಂಕಣವನ್ನು ಪ್ರತಿ ಸೋಮವಾರ ಬರೆಯಲಿದ್ದಾರೆ

ಮೌನ : ಸಮ್ಮತಿಯೂ….ಪ್ರತಿರೋಧವು

ಮೌನಂ ಸಮ್ಮತಿ ಲಕ್ಷಣಂ, ಎನ್ನುವ ಜನಪ್ರಿಯವಾದ ಮಾತನ್ನು ಅನೇಕ ಸಂದರ್ಭದಲ್ಲಿ ಕೇಳುತ್ತೇವೆ. ಇದು ಸಂಪೂರ್ಣ ನಿಜವೇ ಎಂದು ಯೋಚಿಸಿದರೆ, ಬಹುತೇಕ ಸಂದರ್ಭದಲ್ಲಿ ಅಸಮ್ಮತಿ ಅಥವಾ ಪ್ರತಿರೋಧದ ಲಕ್ಷಣವೇ ಆಗಿರುತ್ತದೆ. ಏಕೆಂದರೆ, ಸಮ್ಮತಿಸಿದರೆ ಸಂತೋಷವಾಗಿ ಸಮ್ಮತಿಯನ್ನು ವ್ಯಕ್ತ ಪಡಿಸುತ್ತಾರೆ. ತಕರಾರು ಅಥವಾ ಪ್ರತಿರೋಧ ಇದ್ದಾಗಲೆ ಅದನ್ನು ವ್ಯಕ್ತಪಡಿಸಲಾಗದ ಅಸಾಯಕತೆಯಿಂದಾಗಿ ಮೌನಕ್ಕೆ ಜಾರುತ್ತಾರೆ.
ಎಷ್ಟೋ ಸಂದರ್ಭಗಳಲ್ಲಿ ತಮ್ಮ ಇಚ್ಚೆಯ ಅಥವಾ ಪ್ರತಿರೋಧದ ವಿಚಾರಗಳಿಗೆ ತಮ್ಮ ಅಭಿಪ್ರಾಯ ಕೇಳುವವರು ವಾಸ್ತವವಾಗಿ ಸಮ್ಮತಿ ಅಥವಾ ವಿರೋಧವನ್ನು ಅಥವಾ ಅಸಮ್ಮತಿಯನ್ನು ಕೇಳಿರುತ್ತಾರೆಯೇ ಹೊರತು ಅಭಿಪ್ರಾಯವನ್ನಲ್ಲ. ಕೆಲವೊಮ್ಮೆ ಮಾತ್ರ ಅವರು ಇನ್ನೊಬ್ಬರ ಸಮ್ಮತಿಯನ್ನು ನಿರೀಕ್ಷಿಸುತ್ತಿದ್ದಾರೆಯೋ ಅಥವಾ ಅಸಮ್ಮತಿಯನ್ನು ನಿರೀಕ್ಷಿಸುತ್ತಿದ್ದಾರೆಯೋ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ನಮಗೆ ಬೇಕಾದವರ ಬಳಿ ನಾವೂ ಸಹ ಅವರ ಧಾಟಿಯನ್ನೇ ಗಮನಿಸಿ ಪ್ರತಿಸ್ಪಂದಿಸುತ್ತೇವೆ.
ಒಂದೊಮ್ಮೆ ಅವರ ನಿರೀಕ್ಷೆಯಂತೆ ನಾವು ಸ್ಪಂದಿಸಿದರೆ ‘ನನಗೆ ಗೊತ್ತಿತ್ತು ನೀವು ಒಪ್ಪುತ್ತೀರಿ’ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ. ಅವರಿಗೆ ಬೇಡವಾದ ವಿಷಯವಾಗಿದ್ದು, ಅಸಮ್ಮತಿ ಸೂಚಿಸಿದಲ್ಲಿ ‘ನನಗೆ ಗೊತ್ತಿತ್ತು, ನೀವು ಒಪ್ಪೋದಿಲ್ಲ ಅಂತ,ಇವ್ರು ನಾನ್ಹೇಳಿದ್ರೆ ಕೇಳಲಿಲ್ಲ’ಎಂದೂ ಸಮರ್ಥನೆಗೆ ಇಳಿಯತ್ತಾರೆ. ಇದು ಸಾಮಾನ್ಯ ವಿಷಯಗಳಿಗೆ ಅನ್ವಯಿಸುವಂತಹದ್ದು.
ನಿಜವಾದ ಸವಾಲು ಇರುವುದು ಸಾರ್ವಜನಿಕ ಜೀವನಕ್ಕೆ ಸಂಬಂಧ ಪಟ್ಟಿದ್ದು. ನಮ್ಮ ಸಮಾಜದಲ್ಲಿ ನಡೆಯುವ ಎಷ್ಟೋ ಸಾಮಾಜಿಕ, ರಾಜಕೀಯ, ಧಾರ್ಮಿಕ ವಿಧ್ಯಾಮಾನಗಳ ಕುರಿತು ದಿನ ಬೆಳಗಾದರೆ ಪರ ವಿರೋಧ ಚರ್ಚೆ ಸಂವಾದ ನಡೆಯುತ್ತದೆ. ಅವು ತಾರಕಕ್ಕೆ ಹೋಗಿ, ಜಗಳ, ಜುಗಲ್ಬಂದಿಯೂ ನಡೆಯುತ್ತದೆ.ಇದು ಕೇವಲ ಬೆರಳೆಣಿಕೆಯಷ್ಟು ಜನರ ನಡುವೆ ನಡೆಯಬಹುದು, ಮಿಕ್ಕವರದ್ದು?
ಇನ್ನು ಹೆಣ್ಣು ಮಕ್ಕಳ ವಿಷಯಕ್ಕೆ ಬಂದರೆ, ಕುಟುಂಬ, ಸಮಾಜ ಅವಳನ್ನು ಸದಾ ಮೌನಿಯಾಗಿರಬೇಕು. ಹೇಳಿದ್ದಕ್ಕೆಲ್ಲಾ ತಲೆ ತಗ್ಗಿಸಿಕೊಂಡು ಕತ್ತು ಅಲ್ಲಾಡಿಸುತ್ತಿರಬೇಕು ಎಂದು ನಿರೀಕ್ಷಿಸುತ್ತದೆ. ಅದು ಅವಳಿಗೆ ಇಷ್ಟ ಇರಲಿ, ಇಲ್ಲದಿರಲಿ ಅದಕ್ಕೆ ಅವಳು ಪ್ರತಿಯಾಗಿ ಮಾತನಾಡಬಾರದು ಎಂದೂ ಸಹ ಸಮಾಜ, ಕುಟುಂಬದ ಗಂಡಸಿನ ನಿರೀಕ್ಷೆ ಆಗಿರುತ್ತದೆ.. ಅವಳು ತಾಯಿಯಾದರೂ ಸರಿ, ಹೆಂಡತಿ,ಒಡ ಹುಟ್ಟಿದವಳು,ಗೆಳತಿಯಾದರೂ ಸರಿಯೇ ಗಂಡಸಿನ ಮಾತನ್ನು ಅವಳು ಒಪ್ಪಿಕೊಳ್ಳಲೇಬೇಕು. ಒಂದು ಬೇಳೆ ಅವಳಿಗೆ ಆ ವಿಷಯ, ವಸ್ತು ಸಂದರ್ಭ ಇಷ್ಟ ಇರಲಿ ಇಲ್ಲದಿರಲಿ ಅವಳು ಅದಕ್ಕೆ ಮೌನವಾಗಿ ಸಮ್ಮತಿಸುತ್ತಿರಬೇಕು.ಎನ್ನುವುದು ನಮ್ಮ ಕುಟುಂಬ ಅಥವಾ ಸಮಾಜದ ಅಂಬೋಣ.
ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಕುಟುಂಬದ ಒಳಿತಿಗಾಗಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಹೆಣ್ಣು ಮಕ್ಕಳಿಗೆ ಅಧಿಕಾರವಿಲ್ಲ ಅಲ್ಲಿ ಅವಳು ಗೈರು.. ಮನೆ ಕಟ್ಟುವುದರಿಂದ ಹಿಡಿದು ಮಕ್ಕಳನ್ನು ಹೆರುವವರೆಗೂ ಅವಳನ್ನು ಕಡೆಗಣಿಸಲಾಗುತ್ತದೆ. ಆದರೆ ಮನೆಯನ್ನು ಒಪ್ಪವಾಗಿ ನೋಡಿಕೊಳ್ಳುವವಳು ಹೆಣ್ಣು, ಮಕ್ಕಳನ್ನು ಹೆರುವವಳು ಹೆಣ್ಣು ಆದರೂ ಅಂತಹ ಯಾವುದೇ ನಿರ್ಧಾರವೂ ಅವಳ ಅನುಪಸ್ಥಿತಿಯಲ್ಲಿಯೇ ನಡೆಯುತ್ತದೆ ಎಂದರೆ ಅವಳು ಮನೆಯ ಗಂಡಸಿನ ನಿರ್ಧಾರಕ್ಕೆ ಬದ್ಧವಾಗಿರಬೇಕು ಅನ್ನುವುದಷ್ಟೇ ಮುಖ್ಯ. ಇಂತಹ ನೇರ ಸಂಬಂಧ ಹೊಂದಿರುವ ವಿಷಯಗಳಲ್ಲೂ ಅವಲನ್ನು ಹೊರಗಿಟ್ಟಿರುವುದು ಒಂದು ರೀತಿಯ ಕಟುಂಬ ರಾಜಕಾರಣ. ಆದರೆ ಇದೆಲ್ಲದರಿಂದ ಅವಳನ್ನು ದೂರವಿರಿಸಿದ್ದರ ಬಗ್ಗೆ ಅವಳು ತಲೆ ಕೆಡಿಸಿಕೊಳ್ಳುವುದಿಲ್ಲ, ಹಾಗೆ ಪರಂಪರೆ ಅವಳನ್ನು ನಿರೂಪಿಸಿದೆ. ಮೌನವಾಗಿ ಎಲ್ಲವನ್ನು ಸ್ವೀಕರಿಸುವ ಗುಣವನ್ನು ತಾಯಿಯಿಂದ ಎರವಲು ಪಡೆದಿದ್ದಾಳೆ ಅವಳು. ಹಾಗೋಂದು ವೇಳೆ ಅವಳು ಮೌನ ಮುರಿದಳೆಂದರೆ ಅವಳನ್ನು ಸುಮ್ಮನಾಗಿಸುವ ಪುರುಷ ಪ್ರಣಿತವಾದ ಅಸ್ತ್ರವೂ ಸಿದ್ಧವಾಗಿರುತ್ತವೆ. ‘ಗಂಡುಬೀರಿ, ಬಜಾರಿ, ನಾಚಿಕೆ ಬಿಟ್ಟೋಳು ಹೀಗೆ ವಿವಿದ ಪದಗಳಿಂದ ನಿಂದಿಸುವ ಮೂಲಕ ಅವಳನ್ನು ಬಾಯಿ ಮುಚ್ಚಿಸುವುದು ಅವರಿಗೆ ಗೊತ್ತಿದೆ. ಇಂತಹ ನಿಂದನೆಗೆ ಅವಳು ಹೆದರಿ ಅವಳು ತಗರಿವಿಲ್ಲದೆ ಮೌನವಾಗಿ ಇದ್ದು ಬಿಡುವಳು.

ಪ್ರತಿಭಟನೆಯ ಸ್ವರೂಪ

ಆದರೆ ಅತೀ ಸೂಕ್ಷ್ಮಗ್ರಹಿಯಾದ ಹೆಣ್ಣು ಎಲ್ಲವನ್ನು ಒಪ್ಪಿಕೊಳ್ಳುಲು ಆಗದೇ ಕೂಗಾಡಿ ಹಾರಾಡಿ ಪ್ರತಿಭಟಿಸಲು ಆಗದೇ ಮೌನವಾಗಿ ಪ್ರತಿಭಟನೆಗೆ ಇಳಿಯುವುದು ಇದೆ. ಅವಳ ಪ್ರತಿಭಟನೆಯ ಅಸ್ತ್ರವೆಂದರೆ ಮೌನ. ಎದುರಾಳಿಯ ಮಾತನ್ನು ಅನುಮೋದಿಸಲು ಆಗದಿದ್ದಾಗ, ಮಾತು ಆಡುತ್ತಲೇ ಮೌನವಾಗುವುದು, ಅದು ಅವಳ ಮೊದಲ ಅಸ್ತ್ರ ಅದು ಪುರುಷ,ಗಂಡ,ಅಣ್ಣ,ಅಪ್ಪ,
ಗೆಳೆಯ ಯಾರ ಮಾತುಗಳು ಇನ್ನೂ ವಿಪರೀತ ಎನ್ನಿಸಿ ಅಸಹನೀಯವಾದರೆ ಅವಳ ಪ್ರತಿಭಟನೆಯ ತೀವ್ರತೆ ಹೆಚ್ಚುತ್ತದೆ. ಕಣ್ ಎವೆ ಇಕ್ಕದೇ ನೋಡುವುದು, ಮಾತನಾಡುವವರಿಂದ ಗಮನ ಬೇರೆಡೆ ತಿರುಗಿಸುವುದು ಮಾತನಾಡುವವರನ್ನು ನಖಶಿಖಾಂತ ನೋಡುವುದು, ಲಘುವಾದ ಮುಗುಳ್ನಗುವುದು, ತಣ್ಣಗೆ ಕುಳಿತು ಬಿಡುವುದು, ಮೌನವಾಗಿ ಅಲ್ಲಿಂದ ಕಾಲ್ತೆಗೆಯುವುದು. ಇವು ಹೆಣ್ಣಿನ ಪ್ರತಿಭಟನೆಯ ವಿವಿಧ ಸ್ವರೂಪಗಳು. ಇವುಗಳನ್ನು ಅವಳು ಬೇಕೆಂದು ಮಾಡಿದುದಲ್ಲ. ಅವಳ ಆಂತರ್ಯದ ನೋವು, ಸಂಕಟಗಳು ಅವಳಿಗರಿವಿಲ್ಲದೇ ಈ ರೀತಿಯ ಪ್ರತಿಕ್ರಿಯೆಗೆ ಕಾರಣವಾಗುತ್ತವೆ. ಇಷ್ಟು ಮಾತ್ರವಲ್ಲ ಅವಳು ಇಂಥಹ ತುಮುಲಗಳಲ್ಲಿ ಮುಳುಗಿದಾಗ ಅವಳಿಗೇ ಅರಿವಿಲ್ಲದೇ ಇನ್ನು ಏನೆಲ್ಲಾ ಆಗುತ್ತದೆ. ಮಾಡುವ ಕೆಲಸದಲ್ಲಿ ಏಕಾಗ್ರತೆ ಇಲ್ಲದಂತಾಗುವುದು. ಮನಸ್ಸಿನ ತೋಳಲಾಟದಲ್ಲಿ ಅಡುಗೆ, ಮನೆ ಕೆಲಸ ಯಾವುದು ಸರಿಯಾಗಿ ಆಗದೇ ಅದಕ್ಕೂ ಅವಳು ತನ್ನನ್ನು ತಾನು ನಿಂದಿಸಿಕೊಳ್ಳುವುದು ಇದೆ. ಇದು ನಮ್ಮ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತದೆ. ಇದಕ್ಕೆ ಅವರ ಅಸಹಾಕತೆಯೇ ಕಾರಣವಾಗಿರುತ್ತದೆ. ಕೆಲವೊಮ್ಮೆ ಇದನ್ನು ಮೀರಿ ಪ್ರತಿಭಟನೆಯ ದಿಟ್ಟತನವೂ ಆಗಿರುತ್ತದೆ. ಆದರೆ, ಕೆಲವು ಹೆಣ್ಣು ಮಕ್ಕಳು ಸುಶಿಕ್ಷಿತರು, ಪ್ರಜ್ಞಾಪೂರ್ವಕವಾಗಿಯೂ ಹೀಗೆ ವರ್ತಿಸುತ್ತಾರೆ. ಅವರು ಗಲಾಟೆ ಸಹಿಸರು, ಹಾಗಂತ ಗಂಡಸರು ಹೇಳಿದ್ದೆಲ್ಲವನ್ನು ಮೌನವಾಗಿ ಸಹಿಸಲು ಆಗದು, ಹೀಗಿರುವಾಗ ಮಾತಾಡದೇ ಪ್ರತಿಭಟಿಸುವುದನ್ನು ರೂಢಿಸಿಕೊಂಡಿದ್ದಾರೆ.ಆದರೆ ಇದು ಅಸಹಾಯಕತೆಯಲ್ಲ. ಸ್ವಯಂ ಪ್ರೇರೆಣೆಯಿಂದ ಅವರು ದಿಟ್ಟತನದ ಹೆಜ್ಜೆ ಇಟ್ಟಿರುತ್ತಾರೆ. ಆದರೆ ಇದು ಹೊರಗೆ ಪುರುಷನ ಸಮನಾಗಿ ದುಡಿಯುವ ಅವಳು ಮಾಸಿಕ, ದೈಹಿಕ ದಣಿವಿನ ನಡುವೆ ಅವಳು ಸ್ವಾತಂತ್ರ್ಯವನ್ನು ಕಳೆದುಕೊಂಡು ಬದುಕಲಾರಳು.ಎಲ್ಲವನ್ನೂ ದಿಟ್ಟತನದಿಂದ ಎದುರಿಸುವಳು(ಇದು ಎಲ್ಲಾ ಸಿಶಿಕ್ಷಿತ,ಹೊರಗೆ ದುಡಿಯುವ ಹೆಣ್ಣು ಮಕ್ಕಳಿಗೆ ಅನ್ವಯಿಸುವುದಿಲ್ಲ,ಅಸಹಾಯಕತೆಯೇ ಆಗಿರುತ್ತದೆ) ಇದು ದಿನ ನಿತ್ಯ ನಡೆಯುವ ಬದುಕಿನ ಒಂದು ನೋಟವಾದರೆ ಮುಂದಿನದು ಸಾಹಿತ್ಯಿಕ ಒಳನೋಟಗಳಲ್ಲಿ ಅವಳ ಮೌನ ಪ್ರತಿರೋದವನ್ನು ನೋಡುವುದು.
ಹಳ್ಳಿಗಳಿಂದ ಕೂಡಿದ ಭಾರತದಲ್ಲಿ ಆಧುನಿಕತೆ ಹಾಗೂ ನಗರೀಕರಣಗಳು ಜೊತೆ ಜೊತೆಯಾಗಿ ಬೆಳೆದು ನವ ಮಧ್ಯಮ ವರ್ಗದ ಉದಯವಾಗುತ್ತದೆ. ಗಂಡ-ಹೆಂಡತಿ- ಮಕ್ಕಳು ಹೀಗೆ ಪುಟ್ಟ ಸಂಸಾರಗಳು ನೆಲೆಗೊಳ್ಳತೊಡಗಿದವು. ಇಂತಹ ಈ ಕಾಲಘಟ್ಟದಲ್ಲಿ ಇಂಥಹದ್ದೊಂದು ರಚನೆ ಆಕಸ್ಮಿಕವೇನಲ್ಲ. ಒಂದು ಆದರ್ಶದ ಕುಟುಂಬದ ಹುಡುಕಾಟದಲ್ಲಿದ್ದ ಆಧುನಿಕ ಹಂತದಲ್ಲಿ ಆಗ ತಾನೆ ಹುಟ್ಟಿದ ಪುಟ್ಟ ಕುಟುಂಬಗಳು ಒಂದು ಸಣ್ಣ ಮಟ್ಟದಲ್ಲಾದರೂ ಸ್ವಾತಂತ್ರ್ಯದ ಸಂಕೇತವಾಗಿತ್ತು. ಇದು ಪರಂಪರೆಯಿಂದ ತನ್ನುನ್ನು ತಾನು ದೂರ ಸರಿಸಿಕೊಂಡೂ, ದೂರ ಸರಿಯಬಾರದು ಎಂಬುದನ್ನು ನೆನಪಿಸುತ್ತಾ ಇದ್ದ ಸಂಕ್ರಮಣ ಕಾಲವಾಗಿತ್ತು. ಕೂಡು ಕುಟುಂಬದ, ಹಳ್ಳಿಯ ಕಟ್ಟುಪಾಡುಗಳ ಆಚೆಗೆ ಗಂಡ ಹೆಂಡಿರ ಏಕಾಂತಕ್ಕೆ ಅವಕಾಶ ಮಾಡಿಕೊಟ್ಟಂತಹ ಈ ರಚೆನೆಯೊಳಗೆ ಸ್ವಯಂ ನಿರ್ಬಂಧಗಳನ್ನು ಹಾಕಿಕೊಂಡು ಯಶಸ್ವಿ ಜೀವನ ನಡೆಸುವ ಜವಾಬ್ಧಾರಿಯೊಂದನ್ನು ಮಧ್ಯಮ ವರ್ಗದ ಗಂಡು ತನಗೆ ತಾನೆ ವಿಧಿಸಿಕೊಂಡಿದ್ದ. ಇಲ್ಲಿದ್ದ ಗುಪ್ತ ಭಯವೆಂದರೆ ಹೊಸ ಅವಕಾಶದಲ್ಲಿ ಹೆಣ್ಣು ಹದ್ದು ಮೀರದಂತೆ ನೋಡಿಕೊಳ್ಳುವುದು!
ಮೇಲೆ ಹೇಳಿದ ಅವ್ಯಕ್ತ ಭಯವೆ ಆ ಕಾಲಘಟ್ಟದ ಮಾಧ್ಯಮಗಳಿಂದ ಹಿಡಿದು ಮನರಂಜನೆಯ ಎಲ್ಲಾ ರಂಗಗಳಲ್ಲಿ, ಸಾಹಿತ್ಯದಲ್ಲಿ ‘ಹೆಣ್ಣಿನ ನಿರೂಪಿತ ಚಿತ್ರ’ವೊಂದನ್ನು ಮರಳಿ ಮರಳಿ ಕಟ್ಟಿ ಕೊಡಲಾಗುತ್ತದೆ. ಅದನ್ನು ‘ಆದರ್ಶ’ ಎಂದು ಬಿಂಬಿಸಲಾಯಿತು. ಇದು ಹೆಣ್ಣನ್ನು ಆರಾಧಿಸುತ್ತಿದ್ದೇವೆ ಎನ್ನುವ ಭ್ರಮೆಗೆ ತಳ್ಳುವ ಪ್ರತಿಮೆಗಳು ಅವಳನ್ನು ಕಟ್ಟಿ ಹಾಕುವ ಕೆಲಸಕ್ಕೆ ಧಣಿವರಿಯದೇ ದುಡಿಯಿತು. ಜಿ ಎಸ್ ಎಸ್ ರ ‘ಸ್ತ್ರೀ’ ಎನ್ನುವ ಕವಿತೆ ಇದಕ್ಕೊಂದು ಉದಾಹರಣೆ. ಆ ಕವಿತೆ ನಿರೀಕ್ಷಿಸುವುದಾದರೂ ಏನನ್ನು? ಅದು ಪುದುಷ ಸ್ತ್ರೀಯಿಂದ ಏನನ್ನು ಬಯಸುತ್ತಾನೋ ಅದೆಲ್ಲವನ್ನು. ಮತ್ತು ಅದನ್ನು ಅವಳಿಗೆ ಒಪ್ಪಿಸಲು ಸಮರ್ಥವಾಗಿದೆ. ಮೇಲ್ನೋಟಕ್ಕೆ ಅದು ಅವಳ ತಾಯ್ತನಕ್ಕೆ ಕೃತಜ್ಞತೆಯನ್ನು ಅರ್ಪಿಸುತ್ತಿರುವಂತಿದೆ. ಮತ್ತವಳ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಕ್ಕೆ ಸಂಪನ್ನಗೊಂಡಂತಿದೆ. ಆದರೆ ಇದು ಹೆಣ್ಣಿನ ದ್ವನಿಯಲ್ಲ. ಅವಳ ಪೊರೆಯುವ ಗುಣವನ್ನು ಪ್ರಕೃತಿಯೊಂದಿಗೆ ಸಮೀಕರಿಸುವುದು ತಪ್ಪಲ್ಲದಿದ್ದರೂ ಅವಳನ್ನು ನಿರ್ಧಿಷ್ಟ ಗುಣಕ್ಕೆ ಕಟ್ಟಿ ಹಾಕುವುದಿದೆಯಲ್ಲ ಅದು ಗಂಡಿನ ನಿರೀಕ್ಷೆಯ ಮಾತುಗಳೆ ಆಗಿವೆ.
ಸಾಹಿತ್ಯದಲ್ಲಿ ಎಲ್ಲಾ(ಕೆಲವು ಸಂದರ್ಭಳನ್ನು ಹೊರತುಪಡಿಸಿ) ಸಮದರ್ಭಗಳಲ್ಲೂ ಗಂಡೇ ಮಾತನಾಡುತ್ತಾನೆ. ಪುರುಷ ತನ್ನೊಂದಿಗೆ ಪ್ರತಿ ಕೆಲಸದಲ್ಲಿ ಕೈ ಜೋಡಿಸುವ, ತನ್ನೊಂದಿಗೆ ಸಂವಾದಿಸುವ ಸಾಹಿತ್ಯವು ಅದರಲ್ಲೂ ಹೆಣ್ಣೆ ಬರೆದ ಸಾಹಿತ್ಯವೂ (ಅಕ್ಕನನ್ನು ಹೊರತುಪಡಿಸಿ) ನಮಗೆ ಸಿಗದಿರುವುದು ವಿಪರ್ಯಾಸ..“ತಾಜಮಹಲಿನಂತಯೇ ಮೌನ ಧರಿಸಿದ ಮಮತಾಜಳು ಯಾಕೋ ಕುಟುಕುತ್ತಾಳೆ” ಅವಳ ನೆನಪಿನ ಪ್ರೇಮ ಮಹಲು ಮಾರ್ದನಿಸುವುದು. ಅವಳ ಪ್ರೇಮ ಸಲ್ಲಾಪದ ಪಿಸು ಮಾತುಗಳನ್ನಲ್ಲ ಬದಲಿಗೆ ಅವಳು ಬದುಕಿನುದ್ದಕ್ಕೂ ಚೆಲ್ಲಿದ ನಿಟ್ಟುಸಿರನ್ನು! ಅವಳೇನು ಷಹಜಹಾನನ ಮೊದಲ ಅಥವಾ ಒಬ್ಬಳೇ ರಾಣಿಯೇನು, ಅವನಿಗೆ ಇವಳು ಅವನ ನಾಲ್ಕನೇ ಹೆಂಡತಿ, (ಇವಳಂತೆಯೇ ನೂರಾರು ಹೆಂಗಳೆಯರು ಅವನ ಕಾಮದ ಹಸಿವಿಗೆ ಎರವಾಗಿದ್ದು) ಅವಳು ಮರಣಿಸಿದ್ದಾದರೂ ಹದಿಮೂರು ಮಕ್ಕಳನ್ನು ಹೆತ್ತು, ಹದಿನಾಲ್ಕನೇ ಹೆರಿಗೆಯಲ್ಲಿ! ಇದನ್ನು ಅವಳು ಮೌನವಾಗಿ ಸಹಿಸಿಕೊಂಡದ್ದಾದರೂ ಹೇಗೆ, ಇದನ್ನು ಷಹಜಹಾನನ ಮಮತಾಜಳ ಮೇಲಿನ ಪ್ರೀತಿ ಎನ್ನಲಾದೀತೆ? ಅವಳು ಮೌನವಾಗಿ ತನ್ನ ಸಾವನ್ನು ಪ್ರಾರ್ಥಿಸುತ್ತಿದ್ದಳು, ಎಂದರೆ ಹೆಣ್ಣಿನ ಮೌನ ಪ್ರತಿರೋಧವಾಗಿತ್ತು.ಬದುಕು ಅವಳನ್ನು ಅದೆಷ್ಟು ಕ್ರೂರವಾಗಿಸಿತ್ತು? ಹೀಗೆ ಚರಿತ್ರೆಯುದ್ದಕ್ಕೂ ಚೆಲ್ಲಿದ ಹೆಣ್ಣಿನ ಮೌನದ ಬಿಸಿಯುಸಿರು ಅನುರಣಿಸುತ್ತಿದೆ. ಚರಿತ್ರೆ ಮಮತಾಜ’ಳಂಥವರ ಬಿಸಿಯುಸಿರಿನ ಬುನಾದಿ ಮೇಲೆ ಮೌನ ಕಟ್ಟಡಗಳು ಅವಳ ಮೌನದಂತೆಯೇ ಕುಟುಕುತ್ತಿವೆ ಈಗಲೂ.

(ಡಾ.ಸಬಿತಾ ಬನ್ನಾಡಿ ಅವರ ‘ಹೊಸ್ತಿಲಾಚೆ ಈಚೆ ‘ ಕೃತಿಗೆ ಋಣಿ)


ಭಾರತಿ ಅಶೋಕ್

ಅವಿಭಜಿತ ಬಳ್ಳಾರಿ( ಈಗ ವಿಜಯನಗರ) ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಸೋಗಿ ಗ್ರಾಮದಲ್ಲಿ (ಜುಲೈ1ರಂದು )ಜನಿಸಿದ ಇವರು, ಪ್ರಸ್ತುತ ಹೊಸಪೇಟೆಯಲ್ಲಿ ವಾಗಿರುವ ಇವರು ಕನ್ನಡ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು , ಅಲ್ಲಿಯೇ “ಕನ್ನಡ ಹಾಸ್ಯ ಸಾಹಿತ್ಯದಲ್ಲಿ ವಿಡಂಬನೆಯ ತಾತ್ವಿಕ ನೆಲೆಗಳು” ಎನ್ನುವ ವಿಷಯದ ಮೇಲೆ ಸಂಶೋಧನೆಯನ್ನು ಕೈಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಸ್ಥಳೀಯ ಖಾಸಗೀ ಹೈಸ್ಕೂಲಿನಲ್ಲಿ ಮುಖ್ಯ ಶಿಕ್ಷಕಿಯಾಗಿ ಮಕ್ಕಳ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿದರು, ಪದವಿಪೂರ್ವ ನಂತರ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಾ ತನ್ನಿಷ್ಟದ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಕಾವ್ಯದ ವಸ್ತುವೆಂದರೆ ಹೆಣ್ಣಿನ ಬದುಕನ್ನು ತಲ್ಲಣಗೊಳಿಸುವ, ಸಮಾಜಕ್ಕೆ ಮಾರಕ ಎನ್ನುವ ಸೂಕ್ಷ್ಮ ವಿಷಯಗಳು, ಹೆಣ್ತನಕ್ಕಾಗಿ ಕೃತಜ್ಞತೆ ಹೊಂದಿರುವ ಈಕೆ ಅದನ್ನು ಅದ್ಬುತವಾಗಿ ಅನುಭವಿಸುವ ಸಂವೇದನಾಶೀಲೆ.

One thought on “

  1. Very Nice, ಹೌದು ಇದನ್ನು ಓದಿದ ಮೇಲೆ ನನಗೆ ಅನಿಸಿದ್ದು ಓದಲು ನಿಮ್ಮ ಸಮ್ಮತಿ ಇತ್ತಾ?

Leave a Reply

Back To Top