ಜಿ.ಎಸ್.ಹೆಗಡೆಯವರ ಲೇಖನ /ಉಪನ್ಯಾಸ

ಕಾವ್ಯ ಸಂಗಾತಿ

ಜಿ.ಎಸ್.ಹೆಗಡೆ

ಉಪನ್ಯಾಸ

[9:44 pm, 19/03/2023] SHAEGADE G: ಹಿಂದೆ ಸಾರ್ವಜನಿಕ ಸಮಾರಂಭವೆಂದರೆ ಒಂದಿಷ್ಟು ವಿಚಾರಗಳ ಕುರಿತು ಉಪನ್ಯಾಸ, ಸಂವಾದ, ಚರ್ಚೆಗಳು ನಡೆಯುತ್ತಿದ್ದವು. ಮರುದಿನದ ಪತ್ರಿಕೆಗಳಲ್ಲಿ ಅಲ್ಲಿ ನಡೆದ ವಿಷಯ ವಸ್ತುಗಳ‌ ಮೇಲೆ ಒಂದಿಷ್ಟು ವಿಶ್ಲೇಷಣೆ ಗಳು ನಡೆದು ಅದೊಂದು ದಾಖಲೆಯಾಗಿ ಸೇರ್ಪಡೆಗೊಳ್ಳುತ್ತಿತ್ತು. ಅಪರೂಪಕ್ಕೆಲ್ಲೋ ಒಂದೊಂದು ಕಡೆ ಸಮ್ಮಾನ, ಪುರಸ್ಕಾರಗಳು ನಡೆಯುತ್ತಿದ್ದವು. ಅಂತಹ ಸನ್ಮಾನಕ್ಕೊಳಗಾಗುವವರು ಅಷ್ಟೇ ಗಟ್ಟಿತನದ ವ್ಯಕ್ತಿತ್ವ ಹೊಂದಿದವರಾಗಿದ್ದರು.
ಯಾವ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ರೂಪ ಕಳೆದುಕೊಂಡವೇನೋ ತಿಳಿಯದು. ಸಾರ್ವಜನಿಕ ಸಮಾರಂಭದಲ್ಲಿ ವಿಷಯಾಧಾರಿತ ಭಾಷಣಗಳೇ ಗೌಣವಾದವು. ಅದರ ಬದಲು ವಿವಾದಾತ್ಮಕ ಹೇಳಿಕೆಗಳೇ ವೇದಿಕೆಯಲ್ಲಿ ಉದುರಿ ಪ್ರತಿಭಟನೆ, ಪ್ರತಿಕೃತಿ ದಹನಗಳೇ ಹೆಚ್ಚಾದವು. ಕೇಳುಗರಾದರೋ ಇವತ್ತೊಬ್ಬ ಭಾಷಣಕಾರ ಬಂದಿದ್ದಾನೆ ಆತ ಏನೋ ಹೊಸವಿಚಾರ ಹೇಳ ಬಹುದೆನ್ನುವ ಕುತೂಹಲದಲ್ಲಿ ಸಮಾರಂಭಕ್ಕೆ ಬರುವವರು ಬೆರಳೆಣಿಕೆಯಷ್ಟೆ. ಇನ್ನು ಜನ ಸೇರಿದರೂ ಮುಖ ಬಿಡಿಯಕ್ಕೆ ಖುರ್ಚಿ ತುಂಬಿಸಲು, ಜನರು ಹೆಚ್ಚಾದಂತೆ ತೋರಿಸಲು ಸೇರುವುದು ಸಾಮಾನ್ಯವಾಗಿದೆ. ರಾಜಕೀಯ ಕಾರ್ಯಕ್ರಮಕ್ಕಂತೂ ಒಂದು ದಿನದ ಪಗಾರಾಯಿತು ಎಂದೆಣಿಸಿ ಜನಸೇರುವರು. ಹಣ ಕೊಟ್ಟರೆ ಜನ ಬರುತ್ತಾರೆ ಎನ್ನುವಂತಹ ಪರಿಪಾಠವನ್ನು ರಾಜಕಾರಣಿಗಳೇ ಪ್ರಾರಂಭಿಸಿದ್ದಾರೆ. ಇದು ಪಕ್ಷಾತೀತವಾಗಿದೆ.
ಹಿಂದೊಮ್ಮೆ ಕಾಲೇಜಿನ ದಿನಗಳಲ್ಲಿ ಉಪನ್ಯಾಸ ಕೇಳಲು ಐದಾರು ಕಿ.ಮೀ ದೂರ‌ ನಡೆದುಕೊಂಡು ಹೋದದ್ದಿದೆ. ಈಗ ಅಂತಹ ಮೌಲ್ಯಯುತವಾದ ವ್ಯಕ್ತಿಗಳ‌ ಕೊರತೆಯೋ ಅಥವಾ ಸಮೂಹ ಮಾಧ್ಯಮದ ಪ್ರಭಾವವೋ ಅಂತಹ ಕಾರ್ಯಕ್ರಮವೂ‌ ನಡೆಯುತ್ತಿಲ್ಲ. ನಡೆದರೂ ಜನರು ಸೇರುತ್ತಿಲ್ಲ. ಆ ಕಾರ್ಯಕ್ರಮಕ್ಕೆ ಬರುವ ಉಪನ್ಯಾಸಕ ಏನು ಹೇಳಿಯಾನು?ಎಂದು ಮೊದಲೇ ನಿರ್ಧರಿಸುವ ಮಟ್ಟಿಗೆ ಜನರು ಜಾಣರಾಗಿದ್ದಾರೆ.
ಒಮ್ಮೆ ಒಂದು ಉಪನ್ಯಾಸಕರ ಉಪನ್ಯಾಸ ಕೇಳಲು ಹೋಗಿದ್ದೆ. ಬಹಳ ಚಂದವಾದ ಉಪನ್ಯಾಸವದು. ಪದಗಳ ಜೋಡಣೆಯೂ ಅಷ್ಟೇ ಕ್ರಮಬದ್ದ. ಇನ್ನೂ ಕೇಳಬೇಕೆನ್ನುವ ತವಕ. ಅಂದಿನ ಉಪನ್ಯಾಸವನ್ನು ಮೈಯೆಲ್ಲಾ ಕಿವಿಯಾಗಿ ಕೇಳಿದೆ. ನನಗರಿವಿಲ್ಲದಂತೆ ಅವರ ಮೇಲೆ ಅಭಿಮಾನವೂ ಮೂಡಿತು. ಮತ್ತೆ ತಿಂಗಳ ಬಳಿಕ ಇನ್ನೊಂದು ಕಾರ್ಯಕ್ರಮಕ್ಕೆ ಅವರೇ ಉಪನ್ಯಾಸಕರು. ಸ್ಥಳ ಬೇರೆ,ಸಂಘಟಕರು ಬೇರೆ. ಮತ್ತೊಮ್ಮೆ ಅವರ ಉಪನ್ಯಾಸ ಕೇಳಬೇಕೆನ್ನುವ ಕಾತುರತೆಯಿಂದ ಹೋದೆ. ಅಂದಿನ ಉಪನ್ಯಾಸದ ವಿಷಯ ಮತ್ತು ಇಂದಿನ ಉಪನ್ಯಾಸದ ವಿಷಯಗಳೂ ಬೇರೆ ಬೇರೆ. ಉಪನ್ಯಾಸಕರು ಉಪನ್ಯಾಸ ಮಾಡುತ್ತಿದ್ದಂತೆ ಇದನ್ನೆಲ್ಲೋ ಕೇಳಿದ್ದೆನಲ್ಲ ಎಂದು ಭಾಸವಾಗುತ್ತಿತ್ತು. ನೆನಪಿಗೆ ಬರುತ್ತಿರುವ ವಿಷಯಗಳೆಲ್ಲ ಇದೆ ಉಪನ್ಯಾಸಕರು ಹೇಳಿದ್ದು ಎಂದು ನೆನಪಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಆದರೂ ಅವರ ಮೇಲೆ ಬೆಳೆಸಿಕೊಂಡ ಅಭಿಮಾನ ಅವರ ಬಾಯಿಂದ ಹೊಸ ವಿಷಯಗಳು ಬರಲಿ ಎಂದು ಆಶಿಸುತ್ತಿದ್ದವು. ಆದರೆ ಉಪನ್ಯಾಸ ಮುಗಿಯಿತು. ಅಂದು ಕೇಳಿದ ಉಪನ್ಯಾಸವೇ ಮರುಪ್ರಸಾರವಾದಂತಿತ್ತು. ನನ್ನನು ಹೊರತುಪಡಿಸಿ ಉಳಿದವರು ಚಪ್ಪಾಳೆ ತಟ್ಟಿದರು. ಮನಸ್ಸಿನಲ್ಲಿ ಏನೋ ಗೊಂದಲಗಳು. ನನ್ನ ಅಭಿಮಾನದ ಉಪನ್ಯಾಸಕರು ಹೊಸ ವಿಷಯ ಹೇಳಲಿಲ್ಲ ಎಂದು ಮನಸ್ಸಿನಲ್ಲೇ ಅಂದುಕೊಂಡು ಹಿಂತಿರುಗಿದೆ. ಉಳಿದ ಜನರು ‘ಸರ್ ಎಷ್ಟು ಚೆನ್ನಾಗಿ ಮಾತನಾಡಿದ್ರಿ’ ಎಂದು ಅಭಿನಂದಿಸುತ್ತಿದ್ದರು. ನಾನು ದೂರದಲ್ಲೇ ನಿಂತು ಹಾಗೆಯೇ ವಾಪಸ್ ಬಂದೆ.
ಆಗ ಆ ಉಪನ್ಯಾಸಕರ ಮೇಲೆ ನನಗೆ ಅಭಿಮಾನ ನನಗರಿವಿಲ್ಲದೇ ಅರ್ಧದಷ್ಟಾಗಿತ್ತು. ದಿನ ಕಳೆಯಿತು. ಮತ್ತೆ ನಾಲ್ಕಾರು ತಿಂಗಳು ಕಳೆದವು. ಪಕ್ಕದ ಊರಿನ ಕಾಲೇಜಿನ ಕಾರ್ಯಕ್ರಮದಲ್ಲಿ‌ ಮತ್ತೆ ಇದೇ ಉಪನ್ಯಾಸಕರಿಂದ ಉಪನ್ಯಾಸ ಕಾರ್ಯಕ್ರಮ ಎನ್ನುವುದು ತಿಳಿಯಿತು.ಮಿತ್ರನೊಬ್ಬ ಕೇಳಿದ ‘ಉಪನ್ಯಾಸ ಕೇಳಲು ಬರುತ್ತಿಯೇನೋ?’ ಎಂದು. ಅಂದ್ಯಾಕೋ‌ ಹೋಗಬೇಕೆಂದಿನಸಲಿಲ್ಲ. ಇವರು ಉಪನ್ಯಾಸ ಚೆಂದ ಮಾಡುತ್ತಾರೆ. ಅವರು ಹೇಳುವ ಉಪನ್ಯಾಸದ ಸಾಲುಗಳನ್ನು ಅದೇ ಶೈಲಿಯಲ್ಲಿ ಹೇಳಿ ‘ಹೀಗೆ ಹೇಳುತ್ತಾರೆ ನೋಡು’ ಎಂದೆ. ಮೊದಲು ಅವರ ಉಪನ್ಯಾಸ ಕೇಳುತ್ತಿರುವ ನಿನಗೆ ಕಿವಿಗೆ ಇಂಪಾಗುತ್ತದೆ ಎಂದು ಹೇಳಿ ಕಳುಹಿಸಿದೆ. ಸಂಜೆ ಬಂದವನೇ ಭೇಟಿಯಾಗಿ ದೂರದಿಂದಲೇ ‘ಏ! ಉಪನ್ಯಾಸದ ವಿಷಯ ನೀನೇ ಬರೆದು ಕೊಟ್ಟಿದ್ದೆಯೇನೋ? ನೀ ಹೇಳಿದ ಎಲ್ಲಾ ವಿಷಯಗಳನ್ನು ನೀ ಹೇಳಿದ ಶೈಲಿಯಲ್ಲೇ ಹೇಳಿದರು’ ಎಂದ. ಆಗ ‘ಅಲ್ಲಾ ಮಾರಾಯ ನಾನು ಅವರ ಅಭಿಮಾನಿಯಾಗಿದ್ದೆ. ಅವರ ಉಪನ್ಯಾಸ ಕೇಳಲು ಎಲ್ಲರಿಗಿಂತ ಮೊದಲೇ ಹೋಗುತ್ತಿದ್ದೆ. ಯಾವಾಗ ಅವರದ್ದು ರೆಡಿಮೇಡ್ ಉಪನ್ಯಾಸ ಎಂದು ತಿಳಿಯಿತೋ ಅಂದಿನಿಂದ ಅವರ ಮೇಲಿನ ಅಭಿಮಾನವೂ ಹೋಯ್ತು. ಮತ್ತೆ ನಾನು ಬರೆದು ಕೊಟ್ಟದ್ದಲ್ಲ. ಅವರು ಮಾಡುವ ಉಪನ್ಯಾಸ ಮರುಪ್ರಸಾರವೇ ಹೊರತು ಹೊಸ ವಿಷಯವಲ್ಲ’ ಎಂದೆ. ಆಗ ಆತನಿಗೂ ಅವರ ಮೇಲಿನ ಅಭಿಮಾನ ಅರ್ಧದಷ್ಟಾಯಿತು.
ಮಾತುಗಾರಿಕೆ ಅದೊಂದು ಕಲೆ ಹೌದು. ಪ್ರತೀ ಸಂದರ್ಭದಲ್ಲೂ ಹೊಸ ವಿಷಯವನ್ನು ಸಮಯ, ಸಂದರ್ಭಕ್ಕೆ ತಕ್ಕ ಹಾಗೆ ಮಾತನಾಡಿದರೆ ಅವರನ್ನು ಮಾತುಗಾರ ಎನ್ನಬಹುದು. ಇಂತಹ ಮಾತುಗಾರಿಕೆ ಯಕ್ಷಗಾನ ತಾಳಮದ್ದಳೆಯಲ್ಲಿ ನುರಿತ ಅರ್ಥಧಾರಿಗಳಿಂದ ನಿರೀಕ್ಷಿಸಬಹುದೇ ವಿನಃ ಒಂದಿಷ್ಟು ಓದಿ ಅದನ್ನೇ ಕಲಾತ್ಮಕವಾಗಿ ಪೋಣಿಸಿ ಎಲ್ಲಾ ಕಡೆಯೂ ಅದನ್ನೇ ಉಸುರಿಸುವುದು ಎಂದರೆ ಆತ ಹೇಗೆ ಉಪಾನ್ಯಾಸಕನಾಗುವನು? ಉಪನ್ಯಾಸ ನೀಡುವವನು ಸದಾ ಓದುತ್ತಿರಬೇಕು. ಹೊಸ ವಿಚಾರ ಸೃಜಿಸಬೇಕು.
ಇಂದು ಉಪನ್ಯಾಸ ನೀಡುವವರನ್ನು ನಾವು ಆದರ್ಶರು ಎಂದು ಭಾವಿಸುತ್ತೇವೆ. ಅವರು ಹೇಳುವ ವಿಷಯಗಳು ಜೀವನದಲ್ಲಿ ಅಳವಡಿಸಿಕೊಳ್ಳುವಂತಹದ್ದೇ ಆಗಿರುತ್ತವೆ. ಇಂತಹ ಉಪನ್ಯಾಸ ನೀಡುವವರು ತಾವು ಹೇಳುವ ವಿಷಯಗಳನ್ನು ಪಾಲಿಸುತ್ತಿದ್ದೇವೆ ಎಂದೇ ಭಾವಿಸಿ ಅವರ ಮೇಲೆ ಗೌರವ ಹೊಂದುತ್ತೇವೆ. ಆದರೆ ಹಿಂದಿರುವ ಸತ್ಯವೇ ಬೇರೆ ಅವರಾಡುವ ವಿಷಯಕ್ಕೂ ಅವರ ಜೀವನಕ್ಕೂ ತಾಳೆಯೇ ಆಗದು. ಕುಟುಂಬವೆಂದರೆ ಹೇಗಿರಬೇಕು ಎಂದು ಉಪನ್ಯಾಸ ನೀಡುವವನ ಕುಟುಂಬದಲ್ಲಿ ಒಂದೇ‌ ಮನೆಯಲ್ಲಿ ಎರಡು ಅಡುಗೆ ಕೋಣೆಗಳನ್ನು ಹೊಂದಿದ್ದರೆ ಹೇಗೆ?
ಕನ್ನಡದ ಬಗ್ಗೆ ಪುಂಖಾನುಪುಂಖವಾಗಿ ಮಾತುದುರಿಸುವವನ ಮನೆಯ ಟೇಬಲ್ ಮೇಲೆ ಇಂಗ್ಲೀಷ್ ಪತ್ರಿಕೆಗಳೇ ಕಾರುಬಾರು ಮಾಡುತ್ತಿದ್ದರೆ ಹೇಗೆ?
ಕೆಲವು ದಿನಗಳ ಹಿಂದೆ ಒಂದು ಉಪನ್ಯಾಸ ಕೇಳುವ ಸಂದರ್ಭ ಬಂದೊದಗಿತು. ಈಗ ಆಧುನಿಕ ಕಾಲ ಹೊಸ ವಿಷಯ ಸಂಗ್ರಹಕ್ಕೆ ಹಲವಾರು ದಾರಿಗಳಿವೆ. ಆ ಪುಣ್ಯಾತ್ಮರು ಇಲ್ಲಿ ಸೇರಿರುವ ಕೇಳುಗರಿಗೆ ಗೂಗಲ್ ಪರಿಚಯ ಇಲ್ಲ ಎನ್ನುವ ಭಂಡ ಧೈರ್ಯದೊಂದಿಗೆ ಉಪನ್ಯಾಸ ಪ್ರಾರಂಭಿಸಿದರು. ಅವೆಲ್ಲವೂ ಗೂಗಲ್ ನಲ್ಲಿ ದೊರಕುವ ವಿಚಾರಗಳೇ ಆಗಿದ್ದವೆ ವಿನಃ ಹೊಸ ವಿಷಯವಲ್ಲ.
ಇನ್ನು ಕೆಲವು ಕಡೆ ವಿಚಾರ ಮಂಥನ , ಚರ್ಚೆ ಎನ್ನುವ ಬ್ಯಾನರ್ ಅಡಿಯಲ್ಲಿ ನಡೆಸುವ ಕಾರ್ಯಕ್ರಮಗಳುಂಟು. ಇಂದಿನ ದಿನದಲ್ಲಿ ಈ ಅಲ್ಪ ಸ್ವಲ್ಪ ವಿಚಾರ ಹೊಂದಿರುವವರೂ ಸಹ ಎಡ, ಬಲಗಳಾಗಿ ಗುರುತಿಸಿಕೊಳ್ಳುವವರು ಇದ್ದಾರೆ. ಉಪನ್ಯಾಸದ ವಿಷಯ ಏನೇ ಇರಲಿ ಉಪನ್ಯಾಸಕರು ಎಡಪಂಥದವರೋ, ಬಲಪಂಥದವರೋ ಎಂದು ತಿಳಿದುಕೊಂಡು ಎಡಪಂಥದವನಾದರೆ ಉಪನ್ಯಾಸಕ ಹೀಗೆ ಹಳಿಯುತ್ತಾನೆ. ಬಲ ಪಂಥದವನಾದರೆ ಹೀಗೆ ಹೇಳುತ್ತಾನೆ ಎಂದು ದೂರದಲ್ಲೇ ಕುಳಿತು ನಿರ್ಧರಿಸುವಷ್ಟರ ಮಟ್ಟಿಗೆ ಉಪನ್ಯಾಸಕರ ವ್ಯಕ್ತಿತ್ವ ನಿರ್ಣಯವಾಗುತ್ತಿದೆ. ಇವರೆಲ್ಲದರ ಮಧ್ಯೆಯೂ ಕೆಲವು ಗಟ್ಟಿಕಾಳುಗಳು ದೊರಕುತ್ತವೆ. ಅವರು ದೇಶ ವಿದೇಶಗಳಲ್ಲೂ‌ ಮಾನ್ಯರಾಗುತ್ತಾರೆ.ಪ್ರತ್ಯೇಕ ಉಪನ್ಯಾಸ ಕಾರ್ಯಕ್ರಮದಲ್ಲಿ‌ ನೀಡಿರುವ ವಿಷಯ ಒಂದೇ ಆದರೂ ಉಪನ್ಯಾಸ ಮಾತ್ರ ಮರುಪ್ರಸಾರದಂತಿರದೆ ಭಿನ್ನವಾಗಿರುತ್ತವೆ. ಅಂತವರೇ ಗೆಲ್ಲುತ್ತಾರೆ. ಆದರ್ಶಪ್ರಾಯರಾಗುತ್ತಾರೆ. ಉಳಿದವರು ಚಲಾವಣೆಗೊಳ್ಳದ ನಾಣ್ಯವಾಗುತ್ತಾರೆ.
ಇಂದಿನ ದಿನದಲ್ಲಿ ಉಪನ್ಯಾಸ ನೀಡುವುದು ಬಹು ಸವಾಲಿನ ಕೆಲಸ. ಪ್ರತೀ ಸಂದರ್ಭದಲ್ಲೂ ಉದ್ದೇಶಪೂರ್ವಕವಾಗಿಯಾದರೂ ವಿಶ್ಲೇಷಣೆಗೆ ಒಳಪಡಿಸುತ್ತಾರೆ. ನಿರಂತರವಾದ ಅಧ್ಯಯನ ಮತ್ತು ಸಂಶೋಧನಾ ಪ್ರವೃತ್ತಿಯವ ಮತ್ತು ಸ್ವತಃ ಅನುಸರಿಸಿದ ಪ್ರಯೋಗಕರ್ತ ಮಾತ್ರ ಈ ಕ್ಷೇತ್ರದಲ್ಲಿ ಗೆಲ್ಲುತ್ತಾನೆ. ಇದನ್ನು ಅನುಸರಿಸದವ ಮರೆಯಾಗುತ್ತಾನೆ.


ಜಿ.ಎಸ್.ಹೆಗಡೆ

Leave a Reply

Back To Top