ಎಲ್ಲಿ ಹೋದವು ಈ ಗುಬ್ಬಚ್ಚಿಗಳು..!
ಕೆ.ಶಿವು ಲಕ್ಕಣ್ಣವರ
ಎಲ್ಲಿ ಹೋದವು ಈ ಗುಬ್ಬಚ್ಚಿಗಳು..!
ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನ. ಅದಕ್ಕಾಗಿ ಆ ನೆಪದಲ್ಲಿ ಈ ಗುಬ್ಬಚ್ಚಿಗಳ ಕುರಿತಾದ ಈ ಲೇಖನ…
ಒಂದು ಕಾಲದಲ್ಲಿ ಬಹುತೇಕ ಹಳ್ಳಿಮನೆಗಳಲ್ಲಿ ಬೆಳಗ್ಗಿನ ಅಲಾರ್ಮ್ ಎಂದರೆ ಗುಬ್ಬಚ್ಚಿಗಳ ಚಿಲಿಪಿಲಿಯೇ…
ಈಗಲೂ ಬೇರೆ ಊರು ಇರಲಿ, ನಮ್ಮ ಊರಿನಲ್ಲಿ ಅಲ್ಲಲ್ಲಿ ಮನೆಗಳಲ್ಲಿ ಗುಬ್ಬಚ್ಚಿಗಳು ಗೋಡು ಕಟ್ಟುತ್ತಿವೆ. ವಾಸಿಸುತ್ತಿವೆ. ಅಷ್ಟಿಷ್ಟು ಇರುವ ಈ ಗುಬ್ಬಚ್ಚಿಗಳು ಹಾಗೋ-ಹೀಗೋ ಹೇಗೋ ವಾಸಿಸುತ್ತವೆ…
ಒಂದಿಷ್ಟು ದಿನಗಳ ವರೆಗೆ ಕಣ್ಮರೆಯಾಗಿದ್ದ ಈ ಗುಬ್ಬಚ್ಚಿಗಳು ಈಗ ಒಂದಿಷ್ಟು ನೋಡಲು ಸಿಗುತ್ತಿವೆ. ಅದೇ ಪುಣ್ಯ.
ಈ ಗುಬ್ಬಚ್ಚಿಗಳು ಮಣ್ಣಿನ ಮನೆಗಳ ಜಂತಿಯ ಬಿರುಕುಗಳಲ್ಲಿ ಅಥವಾ ಅಲ್ಲಲ್ಲಿ ಮನೆಗಳ ಸಂದಿ-ಗೊಂದಿಗಳಲ್ಲಿ ಗೂಡು ಕಟ್ಟಿಕೊಂಡು ವಾಸಿಸುತ್ತವೆ. ಈ ಗುಬ್ಬಚ್ಚಿಗಳು ವಾಸಿಸುವ ಜಂತಿಯ ಬಿರುಕುಗಳು ಅಥವಾ ಸಂದಿ-ಗೊಂದಿಗಳಲ್ಲೇ ತಮ್ಮ ವಂಶೋದ್ಧಾರದ ಪಡಿಪಾಟಲನ್ನು ತೀರಿಸಿಕೊಳ್ಳುತ್ತಿವೆ.
ವಂಶೋದ್ಧಾರವೆಂದರೆ ಅದೇ ಗೂಡುಗಳಲ್ಲಿ ತತ್ತಿ(ಮೊಟ್ಟೆ) ಇಡುವುದು, ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವುದು, ಆ ಮರಿ ತುಸು ರಕ್ಕೆ:ಪುಕ್ಕ ಮೂಡಿದೊಡನೆ ಹಾರುವುದು. ಹೀಗೆ ವಂಶೋದ್ಧಾರದ ಸಂಸ್ಕಾರದಲ್ಲಿ ಗುಬ್ಬಚ್ಚಿಗಳು ಅಷ್ಟಿಷ್ಟಾಗಿ ಒಂದಿಷ್ಟು ಜೀವನ ಕಾಣುತ್ತಿವೆ
…
ಸಾಂದರ್ಭಿಕವಾಗಿ ಹೇಳುತ್ತೇನೆ, ಗುಬ್ಬಚ್ಚಿಗಳಂತೆ ನಮ್ಮ ಹಳ್ಳಿಯಲ್ಲಿ ಕಾಗೆ, ಗೂಬೆಗಳು, ಅಲ್ಲಲ್ಲಿ ಅಪರೂಪಕ್ಕೊಮ್ಮೆ ಕಾಣಸಿಗುವ ರತ್ನ ಪಕ್ಷಿ (ಹಳ್ಳಗಳಲ್ಲಿ ಈ ರತ್ನ ಪಕ್ಷಿಗೆ ಸಾಂಬಾರಗಾಗಿ ಅಂತಲೂ ಕರೆಯುತ್ತಾರೆ)ಗಳು, ಗೊರವಂಕಗಳು ಇತ್ಯಾದಿ ಪಕ್ಷಿಗಳು ಅಪರೂಪದ ಅತಿಥಿಯಂತೆ ಕಾಣಸಿಗುತ್ತವೆ…
ಹೊಲ-ಗದ್ದೆ, ತೋಟಗಳಲ್ಲೂ ಗಣನೀಯವಾದ ಅಪರೂಪದ ಅತಿಥಿಯಾದರೂ ಇವೆ ಇವು.
ಆದರೆ ಇವುಗಳ ಸಂಖ್ಯೆ ತೀರಾ ಗಣನೀಯವಾಗಿ ಇಳಿಮುವಾಗಿದೆ. ಅಂದರೆ ಈ ಪಕ್ಷಿಗಳೆಲ್ಲ ಮುಂದೊಂದು ದಿನ ಕನಸಿನಂತೆ ಆಗಬಹುದು. ಇವುಗಳೆಲ್ಲವೂ ಸರ್ವನಾಶವಾಗಲೂಬಹುದು…
ಇದೆಲ್ಲ ಈಗ ಯಾಕೆ ಮಾತು ಬಂತಂದರೆ ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನವಾದ್ದರಿಂದ ಇದೆಲ್ಲ ನೆನಪಾಯಿತು…
ಒಂದು ಮುಖ್ಯ ವಿಷಯವೆಂದರೆ ಈ ಗುಬ್ಬಚ್ಚಿಗಳು, ಕಾಗೆ, ಗೂಬೆಗಳೆಲ್ಲ ಕಾಂಕ್ರೀಟ್ ಕಾಡುಗಳಾದ ಪಟ್ಟಣ, ನಗರ, ಮಹಾನಗರಗಳಲ್ಲಿ ಕಾಣಸಿಗುವುದೇ ಇಲ್ಲ. ಅಂದರೆ ನಾಶವಾಗಿವೆ. ಮನುಷ್ಯ ತನ್ನ ಮಿತಿಮೀರಿದ ತೀವ್ರ ಸ್ವಾರ್ಥದಲ್ಲಿ ಈ ಉಳಿದ ಪ್ರಕೃತಿ ಸಹಜ ಪ್ರಾಣಿ-ಪಕ್ಷಿಗಳಿಗೆ ಜಾಗವೇ ಇಲ್ಲದಂತೆ ಮಾಡಿದ್ದಾನೆ..!
ಇರಲಿ, ಮುಖ್ಯ ವಿಷಯಕ್ಕೆ ಬರುತ್ತೇನೆ ಈಗ. ಅದೇ ಗುಬ್ಬಚ್ಚಿಗಳ ವಿಷಯ…
ಈ ಗುಬ್ಬಚ್ಚಿಗಳು ಸಂಗ್ರಹಿಸಿಟ್ಟ ಭತ್ತದ ಒಣಹುಲ್ಲುಗಳ ತೆನೆಯಲ್ಲಿ ಅಲ್ಲಲ್ಲಿ ಸಿಗುವ ಭತ್ತಗಳನ್ನು ಹುಡುಕುತ್ತ ಸಂಸಾರ ಸಮೇತ ಸುಪ್ರಭಾತ ಹಾಡುವುದು ಗುಬ್ಬಚ್ಚಿಗಳ ದಿನಚರಿಯ ಮೊಟ್ಟ ಮೊದಲ ಕೆಲಸ..!
ಹೆಣ್ಣು ಗುಬ್ಬಿಯ ಗರ್ಭದಲ್ಲಿ ಪುಟ್ಟದೊಂದು ಗುಬ್ಬಚ್ಚಿ ಮೊಳೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಅವುಗಳ ತಯಾರಿ ಶುರು. ಗಂಡು ಗುಬ್ಬಿಗಂತೂ ಆಗ ಎಲ್ಲಿಲ್ಲದ ಕೆಲಸ. ಒಂದೊಂದೇ ಹುಲ್ಲುಕಡ್ಡಿಗಳನ್ನು ಆರಿಸಿ ತಂದು ಗೂಡನ್ನು ಕಟ್ಟಿ ಜೋಪಾನ ಮಾಡುವುದೇನು.
ಕಾಳು ಕಡಿ ಸಂಗ್ರಹಿಸುವುದೇನು. ಆ ಸಂಭ್ರಮ ಅವಕ್ಕೇ ಗೊತ್ತು..! ಮೊಟ್ಟೆಗೆ ಸರದಿಯಂತೆ ಕಾವುಕೊಡುವ ಜೋಡಿ! ಮನೆಯೊಡತಿ ಅಕ್ಕರೆಯಿಂದ ಹಾಕಿದ ಅಕ್ಕಿ ಕಾಳುಗಳನ್ನೆಲ್ಲ ತನ್ನ ಪುಟ್ಟ ಕೊಕ್ಕಲ್ಲಿ ಆರಿಸಿಕೊಂಡು, ಗೂಡಲ್ಲಿ ರಚ್ಚೆಹಿಡಿದ ಮರಿಗಳ ಬಾಯಿಗೆ ಗುಟುಕಿಡುವ ಪರಿ. ಆಹಾ ಅದನ್ನು ನೋಡಿಯೇ ಆನಂದಿಸಬೇಕು…
ಆದರೆ. ಆ ಮಧುರ ಕ್ಷಣಗಳು ಇನ್ನು ಮರೀಚಿಕೆ ಮಾತ್ರವಾ…? ಮನುಷ್ಯನ ಸಹವಾಸದಲ್ಲೇ ಬದುಕುತ್ತಿದ್ದ ಮನೆಗುಬ್ಬಿಗಳು ‘ಈ ಮನುಷ್ಯರ ಸಹವಾಸವೇ ಸಾಕು’ ಎಂದು ಹಳ್ಳಿಮನೆ ಬಿಟ್ಟು ಪಟ್ಟಣ ಸೇರಿದ್ದೇವೆಯೇ..? ಹಾಗೇನೂ ಇಲ್ಲ ಎಂದಾದರೆ ಇದ್ದ ಗುಬ್ಬಿಗಳೆಲ್ಲ ಎಲ್ಲಿ ಹೋದವು? ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲೂ ಏನಿಲ್ಲವೆಂದರೆ ಕನಿಷ್ಠ 10-15 ಸಂಖ್ಯೆಯಲ್ಲಿರುತ್ತಿದ್ದ ಗುಬ್ಬಚ್ಚಿ ಮಾಯವಾಗಿದ್ದೇಕೆ..?
ಅಳಿವಿನಂಚಿಗೆ ಸರಿಯುತ್ತಿರುವ ‘ಮನೆಗುಬ್ಬಿ’ಗಳನ್ನು ರಕ್ಷಸಿ ಎಂದು ಕೂಗಿ ಹೇಳುವುದಕ್ಕಾಗಿ ಇಂದು ‘ವಿಶ್ವ ಮನೆ ಗುಬ್ಬಿಗಳ ದಿನ’ವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಮಾ.20 ರಂದು ಆಚರಣೆಗೊಳ್ಳುವ ಈ ದಿನದಂದು ಗುಬ್ಬಿಗಳ ಸಂತತಿಯನ್ನು ರಕ್ಷಿಸುವುದಕ್ಕೆ ಪಣತೊಡಲಾಗುತ್ತದೆ…
ಮನುಷ್ಯನ ಸ್ನೇಹಿತರಾದ ಈ ಗುಬ್ಬಿಗಳು ಚಿಂವ್ ಚಿಂವ್ ಎನ್ನುತ್ತ ಮನೆತುಂಬ ಓಡಾಡುತ್ತಿದ್ದರೇನೇ ಶೋಭೆ. ಆದರೆ ಕಾರಣಾಂತರಗಳಿಂದ ಅವುಗಳ ಸಂತತಿ ಕಡಿಮೆಯಾಗುತ್ತಿರುವುದು ಆತಂಕ ಮೂಡಿಸಿದೆ…
ಎಲ್ಲಿ ಹೋದವು ಮುದ್ದು ಗುಬ್ಬಚ್ಚಿಗಳು..?–
ಮನುಷ್ಯನ ಸಾಂಗತ್ಯದಲ್ಲೇ ಬದುಕಲು ಬಯಸುತ್ತಿದ್ದ ಗುಬ್ಬಿಗಳು ಗೂಡು ಕಟ್ಟುತ್ತಿದ್ದಿದ್ದೇ ಮನೆಯ ಮಾಡಿನ ಸಂದಿ-ಗೊಂದಿಗಳಲ್ಲಿ. ಸದಾ ಮನೆಯಲ್ಲೇ ಕೂತು, ಹೊರಗೆಲ್ಲೂ ಸುತ್ತದವರಿಗೆ ‘ಮನೆಗುಬ್ಬಿ’ ಎಂಬ ಉಪಮೇಯ ಈಗಲೂ ಚಾಲ್ತಿಯಲ್ಲಿದೆ. ಅಂದರೆ ಅಷ್ಟರ ಮಟ್ಟಿಗೆ ಗುಬ್ಬಚ್ಚಿಗಳು ಮನೆಯ ಸದಸ್ಯರೇ ಆಗಿ ಮನೆಯಲ್ಲುಳಿಯುತ್ತಿದ್ದವು. ಆದರೆ ಇತ್ತೀಚೆಗೆ ಹಳ್ಳಿ ಮನೆಗಳೂ ಥಾರಸಿಯಾಗಿ ಬದಲಾಗಿದ್ದು, ಮೊಬೈಲ್ ತರಂಗಗಳು ಗುಬ್ಬಚ್ಚಿಯ ಜೀವಕ್ಕೇ ಸಂಚಕಾರ ಎಂಬ ಆತಂಕ ಮುಂತಾದವೆಲ್ಲ ಸೇರಿ ಮುದ್ದು ಗುಬ್ಬಚ್ಚಿಗಳು ಕಣ್ಣಿಗೇ ಕಾಣದಂತೆ ಮಾಯವಾಗಿವೆ…
ವಿಶ್ವವನ್ನು ಸುಂದರವಾಗಿಸಿದ ಗುಬ್ಬಚ್ಚಿಗಳು
ವಿಶ್ವ ಗುಬ್ಬಿಗಳ ದಿನದಂದು ಈ ಪುಟ್ಟ ಪ್ರಭೇದವನ್ನು ರಕ್ಷಿಸಲು ಕೈಜೋಡಿಸೋಣ. ಅವುಗಳ ಚಿಲಿಪಿಲಿ ಸದ್ದು ಈ ವಿಶ್ವವನ್ನು ಮತ್ತಷ್ಟು ಸುಂದರವಾಗಿಸಿದೆ. ಅವುಗಳಿಗೆ ನೀರು, ಆಹಾರ, ನೆರಳು ನೀಡಿ ಸಲಹೋಣ…
ಈ ಸುಂದರ ಗುಬ್ಬಿಗಳನ್ನು ರಕ್ಷಿಸೋಣ. ಇಲ್ಲವೆಂದರೆ ನಮ್ಮ ಮುಂದಿನ ತಲೆಮಾರಿಗೆ ಇವುಗಳ ಚಿತ್ರವನ್ನಷ್ಟೇ ತೋರಿಸಬೇಕಾದೀತು…
ರಕ್ಷಣೆಯ ಕುರಿತು ಅರಿವು ಮೂಡಿಸೋಣ–
ನಿಸರ್ಗದ ಸಣ್ಣಪುಟ್ಟ ಜೀವಿಗಳೂ ನಮ್ಮ ಬದುಕನ್ನು ಸುಂದರವಾಗಿಸಿವೆ. ನಿಸರ್ಗದ ಪ್ರತಿ ವಸ್ತುವನ್ನೂ, ಜೀವಿಯನ್ನೂ ರಕ್ಷಿಸುವುದು ನಮ್ಮ ಕರ್ತವ್ಯ. ವಿಶ್ವ ಗುಬ್ಬಿ ದಿನದಂದು ಈ ಪಕ್ಷಿಗಳ ರಕ್ಷಣೆಯ ಕುರಿತು ಅರಿವು ಮೂಡಿಸೋಣ…
ಗುಬ್ಬಿಗಳ ಚಿಲಿಪಿಲಿ ಸದ್ದಿನಿಂದಲೇ ಈ ಜಗತ್ತು ಸುಂದರವಾಗಿದೆ. ಎಂದು ನನಗೆ ಹಲವು ಬಾರಿ ಅನ್ನಿಸುತ್ತದೆ. ಅವುಗಳಿಗೆ ನಮ್ಮ ಮನೆಯ ಒಂದು ಮಾಡಿನಲ್ಲಿ ಕೊಂಚ ಜಾಗ ಮಾಡಿಕೊಡೋಣ. ಅವುಗಳಿಗೆ ನೀರು, ಆಹಾರ ಒದಗಿಸೋಣ. ಈ ಬೇಸಿಗೆಯಲ್ಲಿ ಅವುಗಳ ರಕ್ಷಣೆ ನಮ್ಮ ಹೊಣೆ..!
ಈ ಸಮತೋಲನದ ಗುಬ್ಬಚ್ಚಿಗಳು ಈಗ ಬೇಕಾಗಿದೆ..!
ಇಂತಿಷ್ಟು ಹೇಳಿ ನನ್ನ ಮಾತು ಮುಗಿಸುತ್ತೇನೆ..!