ಕವಿತೆಯ ದಿನಕ್ಕೊಂದು ಕವಿತೆ
ನನ್ನೊಳಗೊಂದು ನಾನು
ಅಂಜನಾ ಹೆಗಡೆ
ನಾ ಹುಟ್ಟುವಾಗಲೇ
ನನ್ನೊಂದಿಗೆ ಹುಟ್ಟಿದ
ಕವಿತೆಯೊಂದು
ಇದ್ದಕ್ಕಿದ್ದಂತೆ
ಎದುರಿಗೆ ಬಂದು ನಿಂತಿತು
ಥೇಟು ನನ್ನಂತೆಯೇ ಕಾಣುವ
ಅದಕ್ಕೊಂದು
ಉದ್ದನೆಯ ಬಾಲ….
ನಾ ಹೋದಲ್ಲೆಲ್ಲ
ನನ್ನದೇ ವೇಗದಲ್ಲಿ
ಹಿಂದೆಮುಂದೆ ಸುತ್ತುತ್ತಿತ್ತು
ಬಾಲದ ಸಮೇತ
ಉದ್ದಜಡೆಯ ಹೆಣ್ಣೊಂದು
ಹೆಗಲೇರಿದ ಭಾರ
ಅಯ್ಯೋ!!
ಹೆಣ್ಣುಕವಿತೆಯೇ ಹೌದು….
ಸುಲಿದ ಬೆಳ್ಳುಳ್ಳಿಗಳನ್ನೆಲ್ಲ
ಪ್ಲಾಸ್ಟಿಕ್ಕಿನ ಮೇಲಿಟ್ಟು
ಜೋರಾಗಿ ಜಜ್ಜಿದೆ
ಬಾಲವೂ ಅಲ್ಲಾಡಿತು
ಯಾವ ಕೋಪಕ್ಕೆ ಬೆಳ್ಳುಳ್ಳಿ ಬಲಿ!!
ಬಾಲ ನಕ್ಕಂತೆ ಭಾಸವಾಗಿ
ಸಣ್ಣದೊಂದು ಅವಮಾನ
ಈರುಳ್ಳಿಗೆ ಕರಗಿದ ಕಣ್ಣೀರು
ಬಾಲದ ತುದಿಗೆ ಅಂಟಿಕೊಂಡಿತು
ಅಲ್ಲಾಡುತ್ತಿಲ್ಲ….
ಕೊಂಚ ಕರಗಿದೆ
ಯಾವ ತಾಪ ಯಾರ ಎದೆಯ ಮೇಲೋ
ಒಗ್ಗರಣೆಯ ಬಿಸಿ
ಕುಕ್ಕರಿನ ಕೂಗು
ಯಾವುದಕ್ಕೂ ಜಗ್ಗದ ಗಟ್ಟಿ ಬಾಲವಿದು….
ಈಗ
ಸಣ್ಣದೊಂದು ಬಾಂಧವ್ಯ
ಬಾಲದೊಂದಿಗೆ….
ತುಳಿಯದಂತೆ ನಿಭಾಯಿಸಬೇಕು!!
ನನ್ನದಲ್ಲದ ಚಲನೆಯೊಂದು
ಬೆನ್ನಿಗಂಟಿ ಜೀವಂತ
ಸದಾ ಅಂಟಿಕೊಂಡಿರಲಿ
ಹೆಣ್ಣಾಗಿ ಕವಿತೆ
ಚಲನೆಯಾಗಿ…. ನಾನಾಗಿ
********
Excellent
ಕವಿತೆ ತುಂಬಾ ಚೆನ್ನಾಗಿದೆ …
Shimoga da mannina sogadinanthe ninna kavithe….
Kaada kathaleya Mouna mathugalu anno Book nalle nange gothaithu….. Ninna mukadanthe ninna kavetheyu chanda….