ಪ್ರಪಂಚ ತೊರೆದ ಪಾಪು
ನಾಡೋಜ, ಟಿಎಸ್ಆರ್ ಪ್ರಶಸ್ತಿ ಪುರಸ್ಕೃತ, ಡಾ.ಪಾಟೀಲ ಪುಟ್ಟಪ್ಪ ಅಸ್ತಂಗತ..!
ಹಿರಿಯ ಪತ್ರಕರ್ತ, ರಾಜ್ಯಸಭೆ ಮಾಜಿ ಸದಸ್ಯ ನಾಡೋಜ ಡಾ.ಪಾಟೀಲ ಪುಟ್ಟಪ್ಪ (102) ಅವರು ವಿಧಿವಶರಾಗಿದ್ದಾರೆ…
ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಕಳೆದ ಫೆ.10 ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದಾರೆ…
ನಿನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪಾಪು ಅವರ ಆರೋಗ್ಯ ವಿಚಾರಿಸಿದ್ದರು. ಬಳಿಕ ಮಾತನಾಡಿದ್ದ ಸಿಎಂ, ರಾಷ್ಟ್ರೀಯ ಬಸವ ಪುರಸ್ಕಾರದೊಂದಿಗೆ ಹತ್ತು ಲಕ್ಷ ರೂ. ನಗದು ನೀಡಲಾಗುವುದು. ಅಲ್ಲದೇ ಡಾ.ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದರು…
ನಾಡೋಜ ಪಾಪು ಅವರು, ವಿಪರೀತ ಜ್ವರ, ಉಸಿರಾಟ ತೊಂದರೆ ಹಾಗೂ ಆಯತಪ್ಪಿ ಬಿದ್ದ ಪರಿಣಾಮ ತಲೆಗೆ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ ದೀರ್ಘಕಾಲದ ಪುಪ್ಪಸ ತೊಂದರೆ ಹಾಗೂ ತಲೆಯಲ್ಲಿ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆ ಮಾಡಲಾಗಿತ್ತು. ಕಿಡ್ನಿ ತೊಂದರೆ, ರಕ್ತ ಹೀನತೆ ಹಾಗೂ ಸೋಂಕು ಕಂಡು ಬಂದಿದ್ದು, ಈ ಎಲ್ಲಾ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗಿತ್ತು…
ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ ಶಸ್ತ್ರಚಿಕಿತ್ಸೆ ನಂತರ ಆರೋಗ್ಯ ಗಂಭೀರವಾಗಿತ್ತು. ಬಳಿಕ ಕೃತಕ ಉಸಿರಾಟ ಯಂತ್ರ (ವೆಂಟಿಲೇಟರ್) ಅಳವಡಿಸಲಾಗಿತ್ತು. ದೀರ್ಘಕಾಲ ಹಾಸಿಗೆ ಹಿಡಿದ ಪರಿಣಾಮ ಪಲ್ಮನರಿ ಥ್ರಂಬೋ ಎಂಬೋಲಿಸಂ ಆಗಿದೆ ಎಂದು ತಜ್ಞ ವೈದ್ಯ ಪ್ರೊ.ಡಿ.ಎಂ.ಕಬಾಡಿ ತಿಳಿಸಿದ್ದರು…
ಹೀಗೆಯೇ ಕೊನೆಗೂ ಅಸ್ತಂಗತರಾದರೂ ಡಾ. ಪಾಟೀಲ ಪುಟ್ಟಪ್ಪನವರು..!
ಡಾ.ಪಾಟೀಲ ಪುಟ್ಟಪ್ಪನವರ ‘ಪ್ರಪಂಚ’..!–
ಕನ್ನಡ ನಾಡಿಗೆ ಕೀರ್ತಿ ತಂದವರು ಪುಟ್ಟಪ್ಪದ್ವಯರು. ಸಾಹಿತ್ಯ ಲೋಕಕ್ಕೆ ಕುವೆಂಪು. ಪರ್ತಕರ್ತರಾಗಿ ಪ್ರಪಂಚ ಖ್ಯಾತಿಯ ಪಾಟೀಲ ಪುಟ್ಟಪ್ಪ ಅಥವಾ ಪಾ.ಪುರವರು.
ಡಾ.ಪಾಪು ಹುಟ್ಟಿದ್ದು ಹಾವೇರಿ ತಾಲ್ಲೂಕಿನ ಕುರುಬಗೊಂಡ ಹಳ್ಳಿಯಲ್ಲಿ. ತಂದೆ ಸಿದ್ಧಲಿಂಗಪ್ಪ, ತಾಯಿ ಮಲ್ಲಮ್ಮ…
ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದ ಊರು ಮತ್ತು ಹಾವೇರಿಯಲ್ಲಿ ಮುಗಿಸಿದರು. ಲಿಂಗರಾಜ ಕಾಲೇಜ ಸೇರಿ ಕಾನೂನು ಪದವಿ ಗಳಿಸಿದರು. ಬಿಜಾಪುರದಲ್ಲಿ ವಕೀಲ ವೃತ್ತಿ ಆರಂಭ ಮಾಡಿದರು. ಕಕ್ಷಿಗಾರರಿಲ್ಲದೇ ಸಂಪಾದನೆ ಖೋತವಾಯಿತು.
ಊಟಕ್ಕೂ ತತ್ವಾರ. ಉದ್ಯೋಗಕ್ಕಾಗಿ ಮುಂಬೈಗೆ ಪಯಣ ಬೆಳೆಸಿದರು. ಅವರು ಕೋರ್ಟಿಗಿಂತ ಪತ್ರಿಕಾ ಕಚೇರಿಗಳಿಗೆ ಹೋದದ್ದೇ ಹೆಚ್ಚು. ಫ್ರೀ ಪ್ರೆಸ್ ಜರ್ನಲ್‌ದ ಸದಾನಂದ, ಬಾಂಬೆ ಕ್ರಾನಿಕಲ್ ಪತ್ರಿಕೆಯು ಸೈಯದ್ ಅಬ್ದುಲ್ಲಾ ಮತ್ತು ಎ.ಜಿ.ತೆಂಡೂಲ್ಕರ್ ಸ್ನೇಹ, ಪತ್ರಿಕೋದ್ಯಮದ ಹುಚ್ಚು ಹಿಡಿಸಿತು…
ಕ್ಯಾಲಿಫೋರ್ನಿಯಾಗೆ ತೆರಳಿ ಪತ್ರಿಕೋದ್ಯಮದ ಎಂ.ಎಸ್‌ಸಿ. ಗಳಿಸಿ ಹಿಂದಿರುಗಿ ಬಂದು ಪತ್ರಿಕಾರಂಗ ಪ್ರವೇಶ ಮಾಡಿದರು…
೧೯೪೭ರಲ್ಲಿ ವಿಶಾಲ ಕರ್ನಾಟಕ, ೧೯೫೨ರಲ್ಲಿ ನವಯುಗ, ೧೯೫೪ರಲ್ಲಿ ಪ್ರಪಂಚ ಸಾಪ್ತಾಹಿಕ, ೧೯೫೬ರಲ್ಲಿ ಸಂಗಮ ಮಾಸಿಕ, ೧೯೫೯ರಲ್ಲಿ ವಿಶ್ವವಾಣಿ ದೈನಿಕ, ೧೯೬೧ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, ೧೯೬೪ರಲ್ಲಿ ಸ್ತ್ರೀ ಮಾಸಿಕ ಮುಂತಾದ ಹಲವಾರು ಪತ್ರಿಕೆಗಳ ಸಂಪಾದಕತ್ವ ವಹಿಸಿದ್ದರು…
ಮೊನಚಿನ ಬರಹಕ್ಕೆ ಬೆರಗಾಗಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಪದವಿ ಪಡೆದರು. ಯಾವುದೇ ಕಚೇರಿ ನೇರಪ್ರವೇಶ, ಕನ್ನಡ ಬಳಕೆಗೆ ಆಗ್ರಹ. ಕನ್ನಡ ದುರವಸ್ಥೆ ಕಂಡು ಖಂಡನೆ ಇತ್ಯಾದಿ ಇದ್ದೇ ಇತ್ತು…
ಅಧಿಕಾರಿಗಳಿಗೆ ಚಾಟಿ ಪ್ರಹಾರವೂ ನಡದೇ ಇತ್ತು. ಇವರು ಕನ್ನಡಕ್ಕೆ ಗಳಿಸಿಕೊಟ್ಟ ಸ್ಥಾನಮಾನ ಅಪಾರ. ಚರಿತ್ರಾರ್ಹ ಕಾರ‍್ಯ ಸಾಧನೆಯಾಗಿತ್ತು…
ಹಲವಾರು ಸಾಹಿತ್ಯ ಕೃತಿಗಳ ರಚನೆಯೂ ನಡೆದೇ ಇತ್ತು. ಸಾವಿನ ಮೇಜುವಾನಿ, ಗವಾಕ್ಷ ತೆರೆಯಿತು, ಶಿಲಾಬಾಲಿಕೆ ನುಡಿಗಳು-ಕಥಾಸಂಕಲನಗಳು ; ಸರ್ ಸಿದ್ದಪ್ಪ ಕಂಬಳಿ, ಹೊಸಮನಿ ಸಿದ್ದಪ್ಪನವರು- ಜೀವನ ಚರಿತ್ರೆ ; ನನ್ನೂರು ಈ ನಾಡು, ಹೊಸದನ್ನ ಕಟ್ಟೋಣ, ಬದುಕುವ ಮಾತು-ಪ್ರಬಂಧ ಸಂಕಲನಗಳು ಮುಖ್ಯವಾದ ಅವರ ಕೃತಿಗಳು…
ಡಾ.ಪಾಟೀಲ ಪುಟ್ಟಪ್ಪನವರನ್ನು ಅರಸಿಬಂದ ಪ್ರಶಸ್ತಿಗಳು ಹಲವಾರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ರಾಜ್ಯಸಭಾ ಸದಸ್ಯತ್ವ, ೨೦೦೩ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಸವಶ್ರೀ ಪ್ರಶಸ್ತಿ, ಟಿ.ಎಸ್.ಆರ್. ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದುವುಗಳು.
ಅಭಿಮಾನಿಗಳು ಅರ್ಪಿಸಿದ ಗೌರವಗ್ರಂಥ ‘ಪ್ರಪಂಚದ ಪಾಪು’ ಮತ್ತು ‘ನಾನು ಪಾಟೀಲ ಪುಟ್ಟಪ್ಪ.’ ಮುಂತಾದವುಗಳು..!
ಇಷ್ಟು ಹೇಳಿ ಡಾ.ಪಾಟೀಲ ಪುಟ್ಟಪ್ಪನವರ ಬಗೆಗೆ ಮಾತು ಮುಗಿಸುತ್ತೇನೆ…
— ಕೆ.ಶಿವು.ಲಕ್ಕಣ್ಣವರ