ಕಾವ್ಯ ಸಂಗಾ಼ತಿ
ಮಧುರಾ ಮೂರ್ತಿ
ವೃದ್ಧಾಶ್ರಮ
ವೃದ್ಧಾಶ್ರಮಗಳು ಇತ್ತೀಚೆಗೆ ಜಾಸ್ತಿ ಆಗುತ್ತಿರುವುದು ವಿಷಾದನೀಯ ಸಂಗತಿ. ಮಕ್ಕಳನ್ನು ಕಷ್ಟ ಪಟ್ಟು ಬೆಳೆಸಿ ಸ್ವಂತ ಜೀವನ ಸಾಗಿಸುವಂತಹ ಸಾಮರ್ಥ್ಯ ತಂದುಕೊಟ್ಟಂತಹ ಹಿರಿಯ ಪೋಷಕರು ನಿರ್ಗತಿಕರಂತೆ ವೃದ್ಧಾಶ್ರಮದಲ್ಲಿ ಬದುಕುತ್ತಿರುವುದನ್ನು ಯೋಚಿಸಿದರೆ ಮೈ ಕಂಪಿಸುತ್ತದೆ. ತಮ್ಮ ಮಕ್ಕಳ ಹೊರತಾಗಿ ಯಾರೋ ಒಬ್ಬ ಹೊರಗಿನ ವ್ಯಕ್ತಿಗೆ ಸಾವಿರದಲ್ಲಿ ಹತ್ತರಷ್ಟು ಸಹಾಯ ಮಾಡಿದರೂ ಅವರ ಕಷ್ಟದ ಕಾಲದಲ್ಲಿ ಬಂದು ನೆರವಾಗುತ್ತಾನೆ. ಆದರೆ ತಮ್ಮ ಇಡೀ ಜೀವನದ ಸುಖವನ್ನೇ ಮಕ್ಕಳಿಗಾಗಿ ತ್ಯಾಗ ಮಾಡಿ ಮಕ್ಕಳು ಬಾಲ್ಯದಿಂದ ಯೌವನಕ್ಕೆ ಕಾಲಿಡುವ ತನಕ ವಿದ್ಯೆ ಕಲಿಸಿ, ಬರುವೆಲ್ಲ ಕಷ್ಟಗಳನ್ನು ಸಹಿಸಿ ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಿ, ಸಂಪಾದನೆ ಮಾಡುವಂತಹ ಹಂತಕ್ಕೆ ಬೆಳೆಸಿ, ಮದುವೆ ಮಾಡಿಸಿ ಅವರ ಅಭ್ಯುದಯವನ್ನು ಸದಾ ಬಯಸುವ ತಂದೆ-ತಾಯಿಗಳು ತಮ್ಮ ಇಳಿ ವಯಸ್ಸಿನಲ್ಲಿ ವೃದ್ಧಾಶ್ರಮವನ್ನು ಸೇರುವಂತಾಗುವುದು ಒಂದು ಹೀನಾಯ ಸ್ಥಿತಿ ಅಂತಲೇ ಹೇಳಬಹುದು. ಇದು ತುಂಬಾ ವಿಷಾದನೀಯವಾದ ಸಂಗತಿ.
ತನ್ನ ಮಗುವನ್ನು ಗರ್ಭದಲ್ಲಿ ಧರಿಸಿದಾಗ ಪಡುವಂತಹ ಕಷ್ಟದಲ್ಲಿ ಮುಂದೆ ಜನಿಸಲಿರುವ ಮಗುವನ್ನು ಕಲ್ಪಿಸಿಕೊಳ್ಳುತ್ತ ಮಗುವಿನ ಬಗ್ಗೆ ನೂರಾರು ಕನಸುಗಳನ್ನು ಹೆಣೆದು ಆ ನೋವನ್ನೂ ಖುಷಿಯನ್ನಾಗಿ ಸ್ವೀಕರಿಸುವಂತಹವಳು ತಾಯಿ. ಪ್ರಸವ ವೇದನೆಯನ್ನು ಸಹಿಸಿಕೊಂಡು ಮಗುವಿನ ಮುಖವನ್ನು ನೋಡಿ ಸಂತೋಷ ಪಡುವಂತಹವಳು ತಾಯಿ. ಕೆಲವು ಸಮಯ ಅತಿಯಾದ ದೈಹಿಕ, ಮಾನಸಿಕ ಯಾತನೆಯನ್ನು ಏನೂ ಅಲ್ಲವೆಂಬಂತೆ ಸಂತೋಷದಿಂದ ಅನುಭವಿಸಿ ಮಗುವನ್ನು ಪಡೆದು ಮುದ್ದಿಸುವಂತಹವಳು ತಾಯಿ.
ಮಕ್ಕಳ ಸಂತೋಷವನ್ನು ಬಯಸಿ ತಾನು ಅನುಭವಿಸುವ ದೈಹಿಕ ಶ್ರಮವನ್ನು, ಮಾನಸಿಕ ತೊಳಲಾಟಗಳನ್ನು ಲೆಕ್ಕಿಸದೆ ಅದೆಷ್ಟೇ ಕಷ್ಟವಿದ್ದರೂ ದುಡಿದು ಅವರಿಗೆ ಬೇಕಾದದ್ದನ್ನು ಪೂರೈಸುವಂತಹವನು ತಂದೆ. ತಮ್ಮ ಸ್ವಂತಕ್ಕೆ ಬೇಕಾದದ್ದನ್ನೂ ಬದಿಗಿರಿಸಿ, ಮಕ್ಕಳ ಅಗತ್ಯಗಳನ್ನು ಪೂರೈಸಿ ಅವರ ಸಂತೋಷವನ್ನು ನೋಡಿ ಖುಷಿ ಪಡುವಂತಹವರು ತಂದೆ ತಾಯಿಗಳು. ಅವರ ಅರ್ಧ ಆಯುಷ್ಯವನ್ನೇ ಮಕ್ಕಳ ಸಲುವಾಗಿ ಧಾರೆಯೆರೆಯುತ್ತಾರೆ. ಅಂತಹ ತಂದೆ ತಾಯಿಗಳು ತಮ್ಮ ಜೀವನದ ಕೊನೆಯ ಹಂತದಲ್ಲಿ ನಿಶ್ಯಕ್ತರಾಗಿರುವಾಗ, ಮಕ್ಕಳು ಅವರ ಸೇವೆಯನ್ನು ಮಾಡದೆ, ಬಹಳ ನಿಕೃಷ್ಟವಾಗಿ ಕಂಡು ಕಡೆಗಣಿಸಿ, ಅವರನ್ನು ವೃದ್ಧಾಶ್ರಮಕ್ಕೆ ಕಳಿಸುತ್ತಾರೆ. ಇಂತಹ ಮಕ್ಕಳನ್ನು ಅವರು ಸಾಕಿ ಬೆಳೆಸಿ ಮುನ್ನಡೆಸಿದ್ದಕ್ಕೆ ಸಿಗುವ ಪ್ರತಿಫಲ ಇದೇನೇನಾ?
ಮಕ್ಕಳನ್ನು ಕಷ್ಟದಿಂದ ಪೋಷಿಸುತ್ತ ಮಕ್ಕಳ ನಗುವನ್ನು ನೋಡಿ ಕಷ್ಟದಲ್ಲೂ ಸುಖವನ್ನು ಕಾಣುತ್ತ ಅವರಿಗೆ ವಿದ್ಯೆಯನ್ನು ಕಲಿಸಿ ಬೆಳೆಸಿ ಮದುವೆ ಮಾಡಿದ ನಂತರ ಅವರಷ್ಟಕ್ಕೆ ಅವರು ಸ್ವಾರ್ಥದಿಂದ ತಮ್ಮ ಸುಖವನ್ನು ನೋಡಿಕೊಂಡು ತಂದೆ ತಾಯಿಯನ್ನೇ ತೊರೆದರೆ ಅಂತಹ ಮಕ್ಕಳ ಸಾಕಿ ಸಲುಹಿರುವುದಕ್ಕೆ ಅರ್ಥವೇನಿದೆ..? ಚಿಕ್ಕವರಿರುವಾಗ ಮಕ್ಕಳನ್ನು ತಂದೆ ತಾಯಿಗಳು ಪೋಷಿಸುವಂತೆ ಮಕ್ಕಳು ಬೆಳೆದು ದೊಡ್ಡವರಾದಾಗ ತಂದೆ ತಾಯಿ ಅನಾರೋಗ್ಯ ಪೀಡಿತರಾದರೆ ಅಥವಾ ಮುಪ್ಪಿನಾವಸ್ಥೆಯಲ್ಲಿ ಮಕ್ಕಳು ಅವರನ್ನು ನೋಡುವಂತಹದ್ದು ಭಾರತೀಯ ಕುಟುಂಬ ಧರ್ಮವಾಗಿದೆ. ಹೀಗಿರದಿದ್ದರೆ ಪ್ರಾಣಿಗಳಂತೆ ಬದುಕಿದಂತಾಗುತ್ತದೆ. ಪ್ರಾಣಿಗಳಿಗಾದರೂ ಒಂದು ನಿಯತ್ತು, ಬದ್ಧತೆ ಇರುತ್ತದೆ ಎಂದರೆ ತಪ್ಪಿಲ್ಲ. ಬುದ್ದಿಜೀವಿಯಾದ ಮನುಷ್ಯನಿಗೆ ಮೂಕ ಪ್ರಾಣಿಗಳಿಗಿರುವ ಕಿಂಚಿತ್ ಅಂತಃಕರಣವೂ ಇಲ್ಲವಾಗಿ ಹೋಯಿತೆ?.
ಇಡೀ ಪ್ರಪಂಚದಲ್ಲಿ ಮಕ್ಕಳಿಗಾಗಿ ತಮ್ಮ ಸುಖವನ್ನು ಮರೆತು ತ್ಯಾಗ ಮಾಡುವಂತಹವರು ಅಂದ್ರೆ ತಂದೆ ತಾಯಿಗಳು ಮಾತ್ರ. ಅಂತಹ ತಂದೆ ತಾಯಿಯನ್ನೇ ಗೌರವದಿಂದ ನೋಡಲು ಸಾಧ್ಯವಿಲ್ಲದವರು ಮಕ್ಕಳ ಸ್ಥಾನಕ್ಕೆ ಅಯೋಗ್ಯರಾಗಿರುತ್ತಾರೆ ಎನ್ನಬಹುದು. ಮಕ್ಕಳು ಅದೆಂತಹ ತಪ್ಪನ್ನೇ ಮಾಡಿದರೂ ಮನ್ನಿಸಿ ಪುನಃ ಮುದ್ದಿಸುತ್ತ ಪ್ರೀತಿಸುವಂತಹ ತಂದೆ ತಾಯಿಗಳು, ಮುಂದೆ ಸಣ್ಣ ತಪ್ಪನ್ನು ಮಾಡಿದಾಗ, ಅದನ್ನು ದೊಡ್ಡ ಅಪರಾಧವೆಂಬಂತೆ ಮಕ್ಕಳು ಪರಿಗಣಿಸಿದರೆ ತಂದೆ ತಾಯಿಗೆ ಆಗುವಂತಹ ನೋವು ಎಷ್ಟಿರಬಹುದು..? ಇದರ ಅರಿವಿಲ್ಲದೆಯೇ ಬದುಕುತ್ತಿರುವ ಮಕ್ಕಳನ್ನು ಸಾಕಿದ್ದಕ್ಕೆ ಸಾರ್ಥಕತೆ ಏನಿದೆ..?
ಮಗುವು ಜನಿಸಿದ ಮೇಲೆ ಬೆಳೆದು ಪ್ರಬುದ್ಧನಾಗಿ ಗೃಹಸ್ಥಾಶ್ರಮವನ್ನು ಸೇರುತ್ತಾನೆ. ಆ ಸಮಯದಲ್ಲಿ ತಂದೆ ತಾಯಿಯರಿಗೆ ಮುಪ್ಪು ಆವರಿಸಿದ್ದನ್ನು ನೋಡಿ ವೃದ್ಧಾಶ್ರಮವನ್ನು ಸೃಷ್ಟಿ ಮಾಡುತ್ತಿದ್ದಾರೆ ಇಂದಿನ ಜನರು. ವೃದ್ಧಾಶ್ರಮ ಅಂತ ಬೇರೆ ಇರಲಿಲ್ಲ ಮೊದಲು. ಗೃಹಸ್ಥನಾದ ನಂತರ ಪ್ರಬುದ್ಧನಾಗಿ ತಂದೆ ತಾಯಿಯ ಯೋಗ ಕ್ಷೇಮ ನೋಡಿಕೊಳ್ಳುತ್ತ ಮನೆಯನ್ನೇ ವೃದ್ಧಾಶ್ರಮ ಮಾಡಬೇಕೇ ಹೊರತು ಬೇರೆಯ ಸ್ಥಳದಲ್ಲಿ ತಂದೆ ತಾಯಿಯರನ್ನಿಟ್ಟು ತಾವು ಸುಖಿಸುವ ಮನಃಸ್ಥಿತಿ ಬರಬಾರದು.
ಹಿಂದಿನ ಕಾಲದಲ್ಲಿ ವಾನಪ್ರಸ್ಥಾಶ್ರಮ ಅಂತ ಇರ್ತಿತ್ತು. ತಮ್ಮ ಮುಪ್ಪಿನಾವಸ್ಥೆಯನ್ನು ಕಾಡಿನಲ್ಲಿ ಕಳೆಯುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ತಂದೆ ತಾಯಿಗಳು ಮನೆಯಲ್ಲೇ ವಾನಪ್ರಸ್ಥಾಶ್ರಮ ಅವಸ್ಥೆಯನ್ನು ಕಳೆಯುವಂತಾಗಬೇಕು. ಹೀಗೆ ಕಳೆಯುವಾಗ ಅವರ ಸೇವೆ ಹಾಗೂ ಯೋಗ ಕ್ಷೇಮವನ್ನು ಮಕ್ಕಳು ನೋಡಿಕೊಳ್ಳಬೇಕು. ಇದು ನಮ್ಮ ನೆಲದ ಸಂಸ್ಕಾರ. ಇಂದಿನ ದಿನಗಳಲ್ಲಿ ಆ ಸೇವೆಯನ್ನು ಮಾಡಲು ಹಿಂಜರಿಯುತ್ತ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ಕಳವಳಕಾರಿಯಾದ ಬೆಳವಣಿಗೆ.
ಮಕ್ಕಳು ದೊಡ್ಡವರಾದ ನಂತರ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳಿಸುವಂತಹ ಪರಿಪಾಠ ನಿಲ್ಲಬೇಕು. ತಂದೆ ತಾಯಿಯರನ್ನು ನೋಡಿಕೊಳ್ಳುವವರೇ ಮಕ್ಕಳಾದ್ದರಿಂದ ಮಕ್ಕಳಿರುವ ಜಾಗವೇ ತಂದೆ-ತಾಯಿಯರಿಗೆ ವೃದ್ಧಾಶ್ರಮವಾಗಬೇಕು. ಪ್ರತ್ಯೇಕ ವೃದ್ಧಾಶ್ರಮಗಳು ಹೆಚ್ಚುತ್ತಿರುವುದನ್ನು ನೋಡಿದರೆ, ಜನರು ತಮ್ಮ ಜವಾಬ್ಧಾರಿ, ಸಂಸ್ಕ್ರತಿ ಹಾಗೂ ನೈತಿಕತೆಯಿಂದ ದೂರ ಸರಿಯುತ್ತಿದ್ದಾರೆ ಎನಿಸುತ್ತಿದೆ.
ಇನ್ನಾದರೂ ಬೆಳೆದ ಮಕ್ಕಳ ಮನಸ್ಥಿತಿ ಬದಲಾಗಿ, ತಮ್ಮ ತಾಯಿತಂದೆಯರನ್ನು ತಾವುಗಳೇ ಆರೈಕೆ ಮಾಡುವಂತಾಗಲಿ, ಪ್ರತ್ಯೇಕ ವೃದ್ಧಾಶ್ರಮಗಳು ಕಾಣದಂತಾಗಲಿ. ತಂದೆ ತಾಯಿಯಿಯರಿಗೆ ಮನೆಯೇ ವೃದ್ಧಾಶ್ರಮವಾಗಿ ಮಕ್ಕಳು, ಮೊಮ್ಮಕ್ಕಳ ಜೊತೆ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಆಶಿಸೋಣ.
ವೃದ್ಧಾಶ್ರಮ ಹೆಚ್ಚುತ್ತಿರುವುದಕ್ಕೆ ಕಾರಣಗಳು :-
- ಆಧುನಿಕ ಜೀವನ ಶೈಲಿಯಿಂದ ಮಕ್ಕಳು ಮತ್ತು ಪಾಲಕರಲ್ಲಿ ಹೆಚ್ಚುತ್ತಿರುವ ಅಂತರ.
- ಸಂಸ್ಕೃತಿ, ಸಂಪ್ರದಾಯ, ನೈತಿಕತೆಯೆಂದರೆ ತಾತ್ಸಾರ ಮನೋಭಾವ
- ಮಕ್ಕಳಲ್ಲಿ ಗುರು ಹಿರಿಯರ ಮೇಲೆ ಭಯ, ಭಕ್ತಿ ಕಡಿಮೆಯಾಗುತ್ತಿರುವುದು.
- ಹಿರಿಯರು ತಿಳಿಸಿದ ಸಂಸ್ಕಾರವನ್ನು ಹಾಗೂ ಹಿತ ನುಡಿಗಳನ್ನು ನಿರ್ಲಕ್ಷಿಸುವುದು.
- ಅತ್ತೆ ಸೊಸೆಯ ನಡುವಿನ ಅಂತರ
- ಸೇವಾ ಮನೋಭಾವದ ಕೊರತೆ
- ಬದಲಾಗುತ್ತಿರುವ ದೃಷ್ಟಿಕೋನ ಮತ್ತು ಸಮಯದ ಅಭಾವದಿಂದ ಸಂಬಂಧಗಳಲ್ಲಿ ಬಿರುಕು.
- ಹೆಚ್ಚುತ್ತಿರುವ ಸ್ವಾರ್ಥ ಮನೋಭಾವ ಹಾಗೂ ಅತಿಯಾದ ಹಣದ ವ್ಯಾಮೋಹ
- ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆ ಹಾಗೂ ಸುಖದ ವ್ಯಾಮೋಹ
- ಉದ್ಯಮವಾಗಿ ಬೆಳೆಯುತ್ತಿರುವ ವೃದ್ಧಾಶ್ರಮಗಳ ಅತಿಯಾದ ಹೆಚ್ಚಳ.
ಇದಕ್ಕೆ ಪರಿಹಾರೋಪಾಯಗಳು :-
- ಇಂದಿನ ಪೀಳಿಗೆಯವರ ಮನಃಸ್ಥಿತಿ ಬದಲಾಗಿರುವುದರಿಂದ ಆಧುನಿಕ ಜೀವನ ಶೈಲಿಯನ್ನು ಬಯಸುತ್ತಿದ್ದಾರೆ. ಹಿರಿಯರು ಇಂದಿನವರ ಆದುನಿಕ ಜೀವನ ಶೈಲಿಗೆ ತಮ್ಮಿಂದ ಹೊಂದಿಕೊಳ್ಳಲಾಗದಿದ್ದರೂ ಸಾಧ್ಯವಾದಷ್ಟು ಕೆಲವು ಸಲಹೆ ಹೇಳಿ ಬದಲಿಸಲಾಗದಿದ್ದಾಗ ಸುಮ್ಮನಿರುವುದೋ ಅಥವಾ ಅದರಲ್ಲೂ ಖುಷಿಯನ್ನು ಕಾಣುವಂತಹ ಮನಃಸ್ಥಿತಿ ಬೆಳೆಸಿಕೊಳ್ಳಬೇಕು.
- ಪ್ರಾಥಮಿಕ ಹಂತದಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರದ ಶಿಕ್ಷಣ ಇರುವಂತಹ ವಿದ್ಯಾಲಯಕ್ಕೆ ಸೇರಿಸುವುದರಿಂದ ಚಿಕ್ಕವರಿರುವಾಗಲೇ ಸಂಸ್ಕ್ರತಿ, ಸಂಸ್ಕಾರ ನೈತಿಕತೆಯ ಅರಿವು ಮಕ್ಕಳಲ್ಲಿ ಮೂಡುತ್ತದೆ.
- ಈ ರೀತಿಯ ಶಿಕ್ಷಣವನ್ನು ಬಾಲ್ಯದಲ್ಲೇ ನೀಡುವುದರಿಂದ ಮಕ್ಕಳಲ್ಲಿ ಗುರು ಹಿರಿಯರನ್ನು ಗೌರವಿಸುವುದು ಹಾಗೂ ಹಿರಿಯರನ್ನು ಅನುಸರಿಸುವ ಮನೋಭಾವ ಬೆಳೆಯುತ್ತದೆ ಜೊತೆಗೆ ಹಿರಿಯರನ್ನು ಗೌರವಿಸುವ ತಿಳುವಳಿಕೆಯೊಂದಿಗೆ ಸೇವಾ ಮನೋಭಾವವೂ ಬೆಳೆಯುತ್ತದೆ.
- ತಪ್ಪು ಯಾರು ಮಾಡಲ್ಲ. ನಮ್ಮ ಮಕ್ಕಳು ತಪ್ಪು ಮಾಡಿದಾಗ ಮನ್ನಿಸಿ ಮುದ್ದಿಸ್ತೇವೆ ಹಾಗೆಯೇ ಸೊಸೆ ಸಹ ತನ್ನ ಹುಟ್ಟಿದ ಮನೆಯನ್ನು ಬಿಟ್ಟು ಗಂಡನ ಮನೆಗೆ ಕಾಲಿಟ್ಟಾಗ ತಾವು ಹೇಳಿದಂತೆ ಕೇಳಿಕೊಂಡು ಇರಬೇಕು ಎಂದು ಬಯಸಿದ್ರೆ ಅವಳೂ ತಿರುಗಿ ನಿಲ್ಲುತ್ತಾಳೆ ಅದರ ಬದಲು ಸೊಸೆ ಮನೆಯನ್ನು ಪ್ರವೇಶಿಸಿದಾಗ ಅವಳ ಮೇಲೆ ಅಧಿಕಾರ ಚಲಾಯಿಸದೇ ಮಗಳೆಂದು ಭಾವಿಸಿ ಅತಿಯಾದ ಪ್ರೀತಿ ತೋರುತ್ತ ತನ್ನ ಮನೆಯ ಸಂಪ್ರದಾಯಕ್ಕೆ ಬದಲಿಸಿಕೊಳ್ಳುವುದು ಜಾಣ್ಮೆ. ಬದಲಿಸಿಕೊಳ್ಳಲು ಸಾಧ್ಯವಿಲ್ಲದಾಗ ಕೆಲವಷ್ಟಕ್ಕೆ ಅತ್ತೆಯೇ ಹೊಂದಿಕೊಳ್ಳಬೇಕಾಗಬಹುದು. ಹಾಗೆಯೇ ಸೊಸೆ ಸಹ ಅತ್ತೆಯನ್ನು ತನ್ನ ತಾಯಿಯೆಂದು ಭಾವಿಸಿ ಹೊಂದಿಕೆಯ ಗುಣವನ್ನು ಬೆಳೆಸಿಕೊಳ್ಳಬೇಕು. ತನ್ನ ಅಮ್ಮ ಹೇಳಿದ ಸಲಹೆ ಇಷ್ಟವಾಗದಿದ್ದರೂ ಅಮ್ಮನನ್ನು ಬಿಡದೇ ಪುನಃ ಪ್ರೀತಿಸುವಂತೆ ಅತ್ತೆಯನ್ನೂ ಪ್ರೀತಿಸಬೇಕು. ಹೊಂದಿಕೊಳ್ಳಲು ಸಾಧ್ಯವಿಲ್ಲದಾಗ ತಾತ್ಸಾರ ಮಾಡದೇ ಹಿರಿಯರೆಂಬ ಗೌರವದಿಂದಾದರೂ ಮೌನದಿಂದ ಹೊಂದಿಕೊಳ್ಳುವ ಮನೋಭಾವ ಹೆಚ್ಚಬೇಕು. ಆಗ ಅತ್ತೆ ಸೊಸೆಯ ನಡುವೆ ಅಮ್ಮ ಮಗಳ ಬಾಂಧವ್ಯ ಹುಟ್ಟುತ್ತದೆ.
- ಮಕ್ಕಳು ಬಾಲ್ಯದಲ್ಲಿರುವಾಗ ಅವರನ್ನು ಸಾಧ್ಯವಾದಷ್ಟು ಒಂಟಿಯಾಗಿರಲು ಬಿಡದೆ ಅವರಿಗೆ ಕೆಲವು ಸಮಯ ಮೀಸಲಿಟ್ಟು ಎಲ್ಲರೊಂದಿಗೆ ಬೆರೆಯುವಂತೆ ಹಾಗೂ ಕೆಲವು ಸಮಾಜ ಸೇವೆಗಳನ್ನು ಅವರಿಂದ ಮಾಡಿಸಬೇಕು. ಹಂಚಿ ತಿನ್ನುವ ಮನೋಭಾವವನ್ನು ಕಲಿಸಬೇಕು. ಇದರಿಂದ ಸ್ವಾರ್ಥದ ಭಾವನೆ ಕಡಿಮೆಯಾಗಿ ಹಣದ ವ್ಯಾಮೋಹವೂ ಕಡಿಮೆಯಾಗುತ್ತದೆ. ಸಂಬಂಧಗಳಿಗೆ ಹೆಚ್ಚಿನ ಮಹತ್ವ ಕೊಡುವಂತೆ ಮನವನ್ನು ಪರಿವರ್ತಿಸಬೇಕು.
- ನಮ್ಮ ನೆಲದ ಸಂಸ್ಕ್ರತಿ, ಸಂಸ್ಕಾರದ ಬಗ್ಗೆ ಅಭಿಮಾನದಿಂದ ಅನುಸರಿಸುತ್ತ ಬೆಳೆಯುವಂತೆ ಚಿಕ್ಕವರಿರುವಾಗಲೇ ಅರಿವು ಮೂಡಿಸಿದರೆ ಪಾಶ್ಚಿಮಾತ್ಯ ಸಂಸ್ಕ್ರತಿಯ ವ್ಯಾಮೋಹ ಕಡಿಮೆಯಾಗುತ್ತದೆ.
- ಉದ್ಯಮವಾಗಿ ಬೆಳೆಯುತ್ತಿರುವ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಗೊಳಿಸಬೇಕು. ವೃದ್ಧಾಶ್ರಮಕ್ಕೆ ಸೇರ ಬಯಸಿದವರಿಗೆ ಮಕ್ಕಳಿಲ್ಲದಿದ್ದರೆ ಮಾತ್ರ ಸೇರಿಸಿಕೊಳ್ಳುವುದೆಂಬ ಕಾನೂನನ್ನು ತರಬೇಕು. ಹೀಗೆ ಮಾಡುವುದರಿಂದ ಮಕ್ಕಳಿದ್ದೂ ಅನಾಥರಂತೆ ವೃದ್ಧಾಶ್ರಮ ಸೇರುವುದನ್ನು ನಿಲ್ಲಿಸಬಹುದು
- ——————————————————
- ಮಧುರಾ ಮೂರ್ತಿ
✍️