ಕಥಾ ಸಂಗಾತಿ
ಪ್ರೀತಿಯಿಂದ
ಅಮು ಭಾವಜೀವಿ ಮುಸ್ಟೂರು
ನೆನಪುಗಳು ನೂರು ಕಾಡಿದರು ಮುಗಿಯದ ಪ್ರೀತಿಯ ಸೆಳೆತ ನಿನ್ನದು ಕಣೆ. ಬದುಕಿನ ಏಕತಾನತೆಯಲ್ಲಿ ನನ್ನನ್ನು ಹೊರಗೆ ಕರೆದುಕೊಂಡು ಬಂದು ಜೀವನದಲ್ಲಿ ಇಷ್ಟೊಂದು ಅಗಾಧವಾದ ಸಂತೋಷ, ಸಂಭ್ರಮಗಳಿವೆ ಎಂದು ತೋರಿಸಿ ಕೊಟ್ಟವಳು ನೀನೇ ಕಣೇ. ಹೌದು ಜೀವನದಲ್ಲಿ ಎಂದು ನಾನೇ ನಾನಾಗಿ ಇನ್ನೊಬ್ಬರನ್ನು ಮಾತನಾಡಿಸಿದವನಲ್ಲ. ಯಾರೊಂದಿಗೂ ಹೇಳಿಕೊಳ್ಳುವಂತಹ ಆತ್ಮೀಯವಾದ ಸಂಬಂಧವನ್ನೇನು ನಾನು ಹೊಂದಿದ್ದಿಲ್ಲ .
ನನ್ನವರು, ಸ್ನೇಹಿತರು ಎನ್ನುವವರು ಯಾರು ಇರಲಿಲ್ಲ. ಅಕ್ಷರಶಃ ನಾನು ಒಬ್ಬಂಟಿಯಾಗಿದ್ದೆ. ನನ್ನ ಮುಜುಗರದ ಸ್ವಭಾವದಿಂದಾಗಿ ಎಲ್ಲರಿಂದಲೂ ದೂರವಾಗಿ ಒಂಟಿಯಾಗಿಬಿಟ್ಟಿದ್ದೆ. ಬಾಲ್ಯದಿಂದಲೂ ನಾನು ಹೀಗೆ ಬದುಕಿಕೊಂಡು ಬಂದೆ. ಕಾಲೇಜು ಓದಲೆಂದು ನಾನು ನಗರಕ್ಕೆ ಬಂದಾಗಲೇ ನಿಜಕ್ಕೂ ನೀರಿನಿಂದ ಆಚೆ ತೆಗೆದ ಮೀನಿನಂತೆ ಒದ್ದಾಡಿ ಹೋಗಿದ್ದೆ. ನನ್ನಿಂದ ಓದು ಮುಂದುವರಿಸಲು ಸಾಧ್ಯವೇ ಇಲ್ಲವೆಂದು ನನ್ನ ಹಳ್ಳಿಗೆ ಹಿಂತಿರುಗಿ ಹೋಗುವ ಮನಸ್ಸು ಮಾಡಿದ್ದ ನನಗೆ ನೀನು ತುಂಬಿದ ಧೈರ್ಯ ವಿಶ್ವಾಸ ನನ್ನಲ್ಲಿ ಹೊಸ ಭರವಸೆಗಳನ್ನು ಹುಟ್ಟು ಹಾಕಿದ್ದು ಸತ್ಯ.
ಈ ಕಾಲೇಜು ಜೀವನದ ಅಗಾಧ ಸಾಗರ ನನ್ನನ್ನು ವಿಚಲಿತನನ್ನಾಗಿಸಿತ್ತು. ಇಲ್ಲಿನ ಹುಡುಗ ಹುಡುಗಿಯರ ಮಾತು, ತುಂಟಾಟ ,ಒಡನಾಟ ,ರಂಪಾಟ, ರಾದ್ಧಾಂತಗಳನ್ನು ನೋಡಿ ಮನಸು ಘಾಸಿಗೊಂಡಿತ್ತು. ಅಂದು ಅನಂತ ಮತ್ತು ಅವನ ಗುಂಪು ನನ್ನ ಮೇಲೆ ರಾಗಿಂಗ್ ಮಾಡಿದಾಗ ನನಗೆ ಆನೆಬಲ ತುಂಬಿ ಅವರನ್ನು ಹೆದರಿಸುವ ಶಕ್ತಿಯನು ಕೊಟ್ಟೆ. ಅಂದೇ ಜಗತ್ತಿನಲ್ಲಿ ಮೃದು ಮಾತಿಗಿಂತಲೂ ಎದೆಗೊಟ್ಟು ಎದುರಿಸುವ ಛಾತಿ ನಮಗೆ ಇದ್ದರೆ ಮಾತ್ರ ನಾವಿಲ್ಲಿ ಬದುಕಬಹುದೆಂದು ತೋರಿಸಿ ಕೊಟ್ಟೆ. ಅದಾದ ಮೇಲೆ ದಿನಾಲು ನೀನು ನನಗೆ ಕಷ್ಟವಾದ ವಿಷಯಗಳನ್ನು ತುಂಬಾ ಪ್ರೀತಿಯಿಂದ ಅರ್ಥವಾಗುವಂತೆ ಹೇಳಿಕೊಡುತ್ತಿದ್ದ ರೀತಿ, ನಗರ ಜೀವನದ ಓರೆ ಕೋರೆಗಳನ್ನು ತಿಳಿಸಿಕೊಡುತ್ತಾ ನನ್ನನ್ನು ಹೊಸ ಮನುಷ್ಯನನ್ನಾಗಿ ರೂಪಿಸಿದೆ. ನೀನು ನಿಮ್ಮ ಮನೆಯಿಂದ ಆಗಾಗ ತಂದುಕೊಡುತ್ತಿದ್ದ ತಿಂಡಿ ತಿನಿಸುಗಳ ರುಚಿ ಈಗಲೂ ನನ್ನ ಬಾಯಲ್ಲಿ ನೀರೂರಿಸುತ್ತಿದೆ. ನನ್ನ ನಿನ್ನ ನಡುವೆ ಅದಾವ ಬಂಧ ಬೆಳೆದಿತ್ತೋ ಕಾಣೆ ನೀನು ನನ್ನನ್ನು ಕಾಳಜಿ ಮಾಡುತ್ತಿದ್ದ ರೀತಿಗೆ ನಾನು ಸಂಪೂರ್ಣ ನಿನಗೆ ವಶವಾಗಿ ಹೋಗಿದ್ದೆ.
ಅಂದು ಕಾಲೇಜಿನ ಕೊನೆಯ ದಿನ ಎಲ್ಲರೂ ಸಂಭ್ರಮದಿಂದ ಓಡಾಡುತ್ತಿದ್ದಾಗ ನೀನು ಅದೇಕೋ ಮಂಕಾಗಿದ್ದೆ. ಅದನ್ನು ಗಮನಿಸಿ ನಾನು ನಿನ್ನತ್ರ ಬರುವುದನ್ನು ಕಂಡು ನೀನು ನಿನ್ನ ಒಳಗಿನ ನೋವನ್ನು ಮರೆಮಾಚಿ ನನ್ನ ನೋಡಿ ಮುಗುಳ್ನಕ್ಕೆ. ಏನಾಯ್ತು ಎಂದು ನಾನು ಕೇಳಲು ಏನು ಇಲ್ಲ ಎಂದೆ. ನಿನ್ನೊಳಗೆ ಪ್ರೀತಿ ಯಾವಾಗ ಮೂಡಿತು ಕಾಣೆ. ಆದರೆ ನೀನು ಅದನ್ನು ಹೇಳಿಕೊಳ್ಳದೆ ಮುಚ್ಚಿಟ್ಟೆ. ಎಷ್ಟೋ ದಿನಗಳು ಕಳೆದಾದ ಮೇಲೆ ನಿನ್ನ ಗೆಳತಿ ಉಷಾ ನನಗೆ ಸಿಕ್ಕಾಗ ನಿನ್ನ ವಿಷಯ ಹೇಳಿದಳು. ಆಗ ನನಗೆ ಎಷ್ಟು ಖುಷಿಯಾಗಿತ್ತು ಗೊತ್ತಾ. ಆ ವಿಷಯ ಕೇಳಿ ನಿನ್ನನ್ನು ಹುಡುಕಲು ಪ್ರಯತ್ನಿಸಿದರೂ ನೀನು ಸಿಗಲೇ ಇಲ್ಲ. ಅದುವರೆಗೂ ನನಗೆ ಆ ಭಾವನೆಯೇ ಇರಲಿಲ್ಲ. ನೀನೆ ನನ್ನ ಇಷ್ಟ ಪಡುತ್ತಿ ರುವಾಗ ನಾನು ನಿನ್ನ ಪ್ರೀತಿಸದಿದ್ದರೆ ತಪ್ಪಾಗುತ್ತದೆ ಎಂದುಕೊಂಡು ನಿನ್ನ ನೆನಪುಗಳಲ್ಲಿ ಕಾಲ ದೂಡುತ್ತಿದ್ದೇನೆ. ಎಲ್ಲಿರುವೆ ಬೇಗ ಬಂದು ಬಿಡು ನಿನಗಾಗಿ ನನ್ನ ಜೀವ ಸದಾ ಕಾಯುತ್ತಿರುತ್ತದೆ. ಎಂಥ ಸ್ಥಿತಿಯಲ್ಲಿ ಇದ್ದರು ನನ್ನ ನಿನಗಾಗಿ ಹೃದಯದಲ್ಲಿ ಜಾಗ ಕಾಯಂಗೊಳಿಸಿರುವೆ.
ಹರೆಯದ ಸಮಯದಲ್ಲಿ ಹಾದಿ ತಪ್ಪದಂತೆ ನನ್ನನ್ನು ಮಾರ್ಗದರ್ಶಿಸಿದ ನೀನು ನನಗೆ ಬೇಕೇ ಬೇಕು ಕಣೆ. ಇನ್ನು ನನ್ನ ಮುಂದಿನ ಜೀವನವನ್ನು ನೀನೆ ಮುನ್ನಡೆಸಿಕೊಂಡು ಹೋಗಬೇಕು. ಗೆಳತಿ ನೀನು ಎಲ್ಲಿದ್ದರೂ ತಡಮಾಡದೆ ಬಂದುಬಿಡು. ಈ ಪ್ರೇಮಿಯ ಬರಿದಾದ ಬದುಕನ್ನು ನಿನ್ನೊಲವಿನ ಒರತೆಯಿಂದ ತುಂಬಿಸು ಬಾ. ನೀ ಕಂಡ ಕನಸುಗಳನ್ನು ನನಸಾಗಿಸು ಬಾ. ನೀ ಬರುವ ದಾರಿಯ ಕಾಯುತ್ತಲೇ ಇರುವ ಇಂತಿ ನಿನ್ನವ
ಪ್ರೀತಿಯಿಂದ…………………..
ಹೀಗೆ ಸುಮ್ಮನೆ,,,,,,,,,,,,,,,,
ಅಮು ಭಾವಜೀವಿ ಮುಸ್ಟೂರು