ಕಾವ್ಯ ಸಂಗಾತಿ
ವಿನಯಚಂದ್ರ ಎರಡು ಕವಿತೆಗಳು
ಒಗಟು
ಬಗೆದು ತೆಗೆದರಷ್ಟೆ ಅದು ನಿಧಿ
ಮೇಲ್ಮೈಯಲ್ಲೆ ಸಿಗುವುದು ಕಾಗೆ ಬಂಗಾರ
ಹೇಗೆ ತೆಗೆದರೂ ಪುಕ್ಕ ರೆಕ್ಕೆ ಕೊಕ್ಕು
ಕಾದು ಕುಳಿತರಷ್ಟೆ ಹಕ್ಕಿಯ ಕಣ್ಣು
ಹೆಣ್ಣು
ಛದ್ಮವೇಷದ ಠಕ್ಕರೇ ಊರ ತುಂಬ
ವೇಷ ತೊಡದವರು ದಕ್ಕುವುದು ದುರ್ಲಭ
ಸುರಳೀತರೂ ಹೊಂದಬೇಕು ತಮ್ಮದಲ್ಲದ ಮುಖವ
ಎಳೆಯೆಳೆಯಾಗಿ ಬಿಚ್ಚಿ ಬರುವವು ಪೊರೆ ತ್ಯಜಿಸಿದ
ಉರಗ
ಗಟ್ಟಿ ಸರಪಳಿಗೂ ಒಂದಿರುವುದು
ಪೊಳ್ಳು ಬೆಸುಗೆಯ ಕೊಂಡಿ, ಎಷ್ಟು ಶಕ್ತವೋ ಅಷ್ಟೆ
ಸರಪಳಿಯ ಶಕ್ತಿ, ಬಲ ಹೆಚ್ಚಿಸೆ
ಉದುರಿ ಬೀಳ್ವುದು ಹಿಡಿದುದೆಲ್ಲವ ಬಿಟ್ಟು
ತುಂಡುತುಂಡಾಗಿ
ಕನಸುಗಳೆಲ್ಲವ ಕಟ್ಟಿ ಬಿಗಿದ ಎಚ್ಚರದ ರಾತ್ರಿ
ಹೆಚ್ಚೇನು ಬೇಕಿಲ್ಲ, ಬಗೆಹರಿಸುವ ಯುಕ್ತಿ!
****
ಒಂಬೈನೂರೈವತ್ತು ಚದುರಡಿಯ
ಎರಡು ಕೋಣೆಯ ಖಾಲೀ ಮನೆಯಲ್ಲಿ
ಒಂದೇ ಒಂದು ದಪ್ಪನೆ ಹಲ್ಲಿ
ನಾಲ್ಕು ಸಣ್ಣನೆಯ ಜಿರಲೆ
ಇಲಿಯ ಒಂದೇ ಒಂದು ಹಿಕ್ಕೆ
ನಾಲ್ಕು ಉದ್ದ ಕಾಲಿನ ಜೇಡ ಸಾಕು
ನಿಮ್ಮ ಜೀವನ ನರಕ ಮಾಡಲು
ಅಥವಾ ಒಂದೇ ಒಂದು
ಹೆಣ್ಣ ನೆರಳು
-ವಿನಯಚಂದ್ರ