ಮಮತಾ ಶಂಕರ್

ವ್ಯಾಲಂಟೈನ್ ವಿಶೇಷ

ಮಮತಾ ಶಂಕರ್

ಹೂ ತೇರು

ನಿನ್ನ ನೆನಪಾದಾಗಲೆಲ್ಲ ಹಳೆಯ ಪುಸ್ತಕದ ಹಾಳೆ ತಿರುವಿ ಹಾಕುತ್ತೇನೆ…

ಮೊದಲ ಪ್ರೇಮ ನಿವೇದನೆಯಲ್ಲಿ ನೀ ಕೊಟ್ಟ ಕಡುಗೆಂಪು ಗುಲಾಬಿಯ ಪಕಳೆಗಳು ಒಣಗಿದೆ
ಆದರೂ ಕಂಪು ಮಾಸಿಲ್ಲ ಹಾಗೇ ಇದೆ….

ಪ್ರೀತಿಯ ಕುರುಹಾಗಿ ನೀಡಿದ್ದ ನವಿಲುಗರಿ ಎರಡು ಹಾಳೆಗಳ ನಡುವೆ ಮರಿ ಏನೂ ಹಾಕಿಲ್ಲ ಆದರೂ ನಯವಾದ ಕಣ್ಬಣ್ಣಗಳು ಹಾಗೇ ಇದೆ….

ಬಾಜಿ ಕಟ್ಟಿಗೆದ್ದ ನೂರರ ತಿಳಿ ನೀಲಿ ಕಾಗದದಂಚಿನಲ್ಲಿ ಮಾಡಿದ ಸಹಿಯ ಗುರುತು ಹೋಗಿಲ್ಲ
ಆ ನೋಟು ಗುಟ್ಟು ಹೊರ ಹಾಕದೆ ಹಾಗೇ ಇದೆ….

ಎಷ್ಟೊಂದು ಪುಟಗಳಲಿ ನಡುನಡುವೆ ನೀ ಬರೆದ ಹೃದಯ ಹಾಸಿ ಹೊರಬಂದ ಕೆಂಪಿಂಕಲಿ ಬರೆದ ಬಾಣಗಳ ಚಿತ್ರ
ಹೃದಯ ಒಡೆಯದೆ ಹಾಗೇ ಇದೆ….

ನೆತ್ತರಲ್ಲಿ ನೀ ಬರೆದ ಒಲುಮೆಯ ಪತ್ರ
ಹಸಿ ವಾಸನೆ ತೊರೆದು ಒಣಗಿದ್ದರೂ
ಕಥೆ ಮಾತ್ರ ಹಚ್ಚಗೆ ಹಾಗೇ ಇದೆ..

ಮೊದಲ ಭೇಟಿಯ ಆ ಜಾತ್ರೆ ದಿನ,
ಕಣ್ಣೋಟ ಬೆರೆತ ಆ ಘಳಿಗೆ… ಮೊದಲ ಮುತ್ತಿನ ಕ್ಷಣ…
ಆ ಮೊದಲ ಅಪ್ಪುಗೆ…
ಬೆವೆತ ಘಳಿಗೆಗಳೆಲ್ಲಾ
ಸಮಯ ದಿನಾಂಕಗಳ ಸಹಿತ ದಾಖಲಾಗಿದ್ದು ಹಾಗೇ ಇದೆ…

ಆಗಾಗ ಪುಟ ತೆರೆಯಲೇ ಬೇಕೆಂದೇನೂ ಇಲ್ಲ
ಒಮ್ಮೊಮ್ಮೆ ತೆರೆದರೆ ಹೃದಯ ಬರೀ ಇದೇ ಸಂತೆಯಲ್ಲಿ ಬಿಕರಿಯಾಗದ ಸರಕುಗಳಂತೆ ಏಕೋ ಹಾಗೇ ಇದೆ….

ಮರೆವು ಕೈ ಚಾಚಿ ಅಪ್ಪಿಕೊಳ್ಳುವ ತನಕ
ಈ ಹೃದಯವೇ ನೆನಪಿನ ದಸ್ತಾವೇಜು
ಬದಲಾಗದೆ ಹಾಗೇ ಇದೆ…

ಈಗ
ಅಗೋ ಅಲ್ಲಿ ಆ ಪಾರ್ಕಿನಲ್ಲಿ ನನ್ನ ನಿನ್ನ ಮಕ್ಕಳ ಮುಖಾಮುಖಿ….
ಗೊಂಬೆಗಳ ಆಟ….

ದಿಕ್ಕುಗಳು ಬದಲಾದರೂ
ಒಲವ ಹೂ ತೇರು ಬಂದ
ಆ ಹಾದಿ ಮಾತ್ರ
ಅದೇ ಕಂಪು….
ಅದೇ ನಯ…
ಅದೇ ಕೆಂಪು…
ಅದೇ ಭಯ…
ಅದೇ ನವಿರು…
ಅದೇ ಅಮಲು ಹೊತ್ತು
ಹಾಗೇ ಇದೆ….


19 thoughts on “ಮಮತಾ ಶಂಕರ್

  1. ನೆನಪುಗಳ ಹೂ ತೇರಿನ ಮೆರವಣಿಗೆ ಹೀಗೇ ಸಾಗಲಿ….. ಶಂಮೂ

Leave a Reply

Back To Top