ನಾನೇಕೆ ಲಂಕೇಶರನ್ನು ಓದುತ್ತೇನೆ
ಬ
ಬಸವರಾಜ ಕಹಳೆ
ನೀಲವ್ವ ಓದಿದಷ್ಟು ವಿಸ್ತಾರ
ಜನಸಾಮಾನ್ಯನ
ಮೂಕ ಅಳಲಿನಲ್ಲಿ
ಸಾಮ್ರಾಜ್ಯಗಳ ಬೀಳಿಸುವ
ತಪಃಶಕ್ತಿ ಇದೆ
ತಿಣುಕಾಡಿ ಬರೆದ ಕಗ್ಗಾವ್ಯಗಳ ಮಧ್ಯೆ ಮುದ್ದೆ ಮುರಿದಷ್ಟು ಸಲೀಸಾಗಿ ಓದಿಸಿಕೊಂಡು, ಕೆಲ ಕ್ಷಣಗಳಲ್ಲೇ ಮಿಂಚುವ ಮಿಂಚು ಹುಳುವಿನಂತಹ ಜೀವನದ ಹೊಳವುಗಳಿಗಾಗಿ ರಾವಣ ಪ್ರತಿಭೆಯನ್ನು ಓದಬೇಕು.
ಈ ನೀಲಿ ಒಮ್ಮೊಮ್ಮೆ ಹುಳಿಮಾವಿನಮರದಂತೆಯೇ ಬಯಕೆ ಹುಟ್ಟಿಸುವ ಪ್ರೇಯಸಿ. ಆಲದಮರದಂತೆಯೇ ದಾರಿ ತೋರುವ ಗೆಳತಿ. ಥಟ್ಟನೆ ಇಷ್ಟವಾಗಿಬಿಡಬಲ್ಲ ಪಕ್ಕದ ಮನೆ ಹುಡುಗಿ. ಬದುಕುವ ಆಸೆಯಿಲ್ಲದವನಿಗೆ ಜೀವನೋತ್ಸಾಹವನ್ನು ತುಂಬುವಂತವಳು.
ಆಗಸದ ಕೆನ್ನೆಯನ್ನು ರಮ್ಯತೆಯಿಂದ ಚಿವುಟಿದ ಸಿಹಿ ಗುರುತಿನಂತೆ ಕಾಣುವ ನೀಲಿ ಸಾಲು. ಆದಿ ಅನಂತವನ್ನೂ ಹೇಳುವ ನೀಲು ಕಾಳಿ ಮಾರಿ ಮಸಣಿಯಂತೆಯೂ ಕಾಣುತ್ತಾಳೆ. ಈ ಬನದ ಕರಡಿ ಭಗವದ್ಗೀತೆಯನ್ನೂ ಹೇಳುತ್ತಾಳೆ. ಅವುಡುಗಚ್ಚಿದ ಸಾವಿತ್ರಿ, ಜಾನಕಿ, ಊರ್ಮಿಳೆ ಮಂಡೋದರಿ, ಪಂಚಾಲಿಯ ಅರೆಗನಸ್ಸನ್ನೂ ಗಟ್ಟಿಯಾಗಿ ಹೇಳುತ್ತಾಳೆ. ಇವಳ ಆತ್ಮವಿಶ್ವಾಸ ಸೃಷ್ಟಿಸಿದ ಬ್ರಹ್ಮನಿಗೂ ಇತ್ತೋ ಇಲ್ಲವೋ?
ಅವ್ವ ಕವನದ ಸುಟ್ಟಷ್ಟು ಕಸುವು ಅನ್ನೋ ಸಾಲಿನ ಹಾಗೆ ನೀಲು ಪದ್ಯ ಓದಿದಷ್ಟು ವಿಸ್ತಾರವಾಗಿ ಕಾಣುತ್ತದೆ.
ನನ್ನ ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ
ಈ ಸಾಲಿನಲ್ಲಿ ಬಹುಪಾಲು ಹಳ್ಳಿಗ ಮಕ್ಕಳು ತಮ್ಮ ತಾಯಂದಿರನ್ನು ಕಾಣುತ್ತಾರೆ. ನನ್ನವ್ವ ಫಲವತ್ತಾದ ಕಪ್ಪು ನೆಲ ಅನ್ನೋ ಸಾಲು, ನನ್ನ ಪಾಲಿಗೆ ಲಂಕೇಶರೇ ಜಗದ್ಗುರುವನ್ನಾಗಿ ಮಾಡಿದೆ.
ಕಲಿಸಿದ ಗುರುವನ್ನೂ ಝಾಡಿಸೋ ಮನುಷ್ಯ ನಿಂತ ನೀರಲ್ಲ ಅನ್ನೋದು ರುಜುವಾತು ನೀಡುತ್ತದೆ.
ಕವಿ ಅಡಿಗರ ಅರ್ಥ
ಭೂತದಲ್ಲಿ ಅಡಗಿ
ತಿಳಿಯದೆ ತೊಡೆಯ ನಡುವೆ
ನಗುತ್ತಿದ್ದಳು ಹುಡುಗಿ
ಒಂದು ವೈಜ್ಞಾನಿಕ ಸತ್ಯದಷ್ಟೇ ಖಚಿತವಾಗಿ ನಿಜವನ್ನು ಹೇಳದಿದ್ದರೆ ಕವಿ ಬರೆಯುವುದನ್ನು ನಿಲ್ಲಿಸಬೇಕು ಅನ್ನುವಂತಹ ವಾದ ಕವಿಯಾಗಿ ಗುರು ಲಂಕೇಶರಲ್ಲಿತ್ತು. ಒಬ್ಬ ಓದುಗನನ್ನು ಬೆಚ್ಚಿ ಬೀಳಿಸದ ಬರಹ ಬರಹವೇ ಅಲ್ಲ ಅಂತ್ಲೂ ನಂಬಿದ್ದರು ಮೇಷ್ಟ್ರು. ಹಾಗಾಗಿಯೇ ಮೇಷ್ಟ್ರು ಇಷ್ಟವಾಗುತ್ತಾರೆ.
ಹೊಗಳಿಕೆಯ ಹೊನ್ನಶೂಲಕ್ಕೇರುತ್ತಿದ್ದ ಮಲ್ಲಿಗೆ ಜುಟ್ಟಿಡಿದು ಎಳೆದಿದ್ದು ನನಗೆ ರಾವಣ ತೃಪ್ತಿಯಷ್ಟೇ ಖುಷಿಯನ್ನು ಈ ಕ್ಷಣಕ್ಕೂ ನನಗೆ ನೀಡುತ್ತದೆ.
ನನ್ನ ಹಸಿದ ಹಲ್ಲಿಗೆ
ಇವಳ ಮೈಸೂರು ಮಲ್ಲಿಗೆ
ಇದು ನನಗೆ ಅಣಕದಂತೆ ಕಾಣೋದಿಲ್ಲ. ಇದೂ ಸಹ ಪಂಪನೊಣಗಿಸದಷ್ಟೇ..
ಹಾಳೆ ಪವಿತ್ರವಲ್ಲ.. ಅಕ್ಷರ ಪವಿತ್ರ
ಕೃಷ್ಣ, ಕೃಷ್ಣೆಯರಂತೆ ಕರಿಯ, ಕಾಳಿಯರತ್ತ ನಮ್ಮ ಗಮನ, ನಮ್ಮ ಶ್ರದ್ಧೆ ಹರಿಯಬೇಕಾಗಿದೆ. ಇದನ್ನು ಹಟದಿಂದ ಮತ್ತು ಪ್ರೀತಿಯಿಂದ, ಧೈರ್ಯದಿಂದ ಮತ್ತು ವಿನಯದಿಂದ ಸಾಧಿಸಬೇಕಾಗಿದೆ. ಈ ಸಂಕೇತ ಮತ್ತು ವಾಸ್ತವತೆಯ ಸಂದರ್ಭದಲ್ಲೇ ನಮ್ಮ `ಪಾಂಚಾಲಿ ಮತ್ತು `ಒಕ್ಕೂಟದ ಅಸ್ತಿತ್ವ ಇದೆ.
46 ವರ್ಷಗಳ ಹಿಂದೆ ಪಾಂಚಾಲಿ ವಿಶೇಷಾಂಕ ಸಂಚಿಕೆಯ ಮುನ್ನಡಿಯಲ್ಲಿ ಬರೆದ ಸಾಲುಗಳಿವು.
46 ವರ್ಷಗಳ ಹಿಂದಿನ ಸಾಲಿನಲ್ಲೂ ದೇಶದ ಸದ್ಯದ ಸ್ಥಿತಿಯ ಭ್ರೂಣವೊಂದು ಇನ್ನೂ ಅಲುಗಾಡುತ್ತಿದೆಯೇನೋ ಅನಿಸುತ್ತದೆ. ಈ ಕ್ಷಣಕ್ಕೂ ಅವರ ಅಕ್ಷರಗಳು ಪಾವಿತ್ರ್ಯತೆಯಿಂದ ಉಳಿದಿವೆ ಅಂದ್ರೆ ಅದಕ್ಕೆ ಕಾರಣ ಲಂಕೇಶ್ ಅನ್ನೋ ನೈತಿಕ ಎಚ್ಚರ ಹಾಗೂ ಸಾಕ್ಷಿ ಪ್ರಜ್ಞೆ. ಇನ್ನೂ ಇನ್ನೂ ಹಲವು ತಲೆಮಾರುಗಳನ್ನ ನಿರಂತರ ಕಾಡುವ ತಳಮಳ. ಕನ್ನಡದ ಎಲ್ಲ ಆಯಾಮಗಳಿಗೆ ಹೊಸತನದ ಹಿಗ್ಗು ತಂದ ಸಂಕ್ರಾಂತಿ. ಸಾಹಿತ್ಯದಿಂದ ರಾಜಕೀಯದವರೆಗೆ ಎಲ್ಲವುಗಳಲ್ಲೂ ವಿಜೃಂಭಿಸಿದ ರಾವಣ ಪ್ರತಿಭೆ.
ಹುಳಿಮಾವಿನ ಮರವಲ್ಲ.. ಆಲದಮರ
ವಿಶಿಷ್ಟ ಬರಹಗಾರ
ಭ್ರಷ್ಟನಲ್ಲದ ರಾಜಕಾರಣಿ
ಅತಿಸಹಜ ನಟ
ನೆನಪಿನಲ್ಲುಳಿವ ನಾಟಕಕಾರ
ಹರಿತ ಮಾತಿನ ವಿಮರ್ಶಕ
ವಿಭಿನ್ನ ನಿರ್ದೇಶಕ
ಮುಲಾಜಿಗೆ ಒಳಗಾಗದ ಪತ್ರಕರ್ತ
ಧರ್ಮದ ಸೋಂಕಿಲ್ಲದ ದಾರ್ಶನಿಕ
ಇಷ್ಟು ವಿಭಿನ್ನ ಆಯಾಮಗಳನ್ನ ಹೊಂದಿರುವ ದೊಡ್ಡ ಆಲದ ಮರ ಪಿ. ಲಂಕೇಶ್. ಆದ್ರೆ ತಮ್ಮನ್ನವ್ರು ಕರೆದುಕೊಂಡಿದ್ದು ಹುಳಿಮಾವಿನ ಮರ ಅಂತ. ಯಾಕಂದ್ರೆ ಅವ್ರೊಂಥರಾ ಹುಳಿ, ಸಿಹಿ, ಒಗರಿನ ಮಿಶ್ರಣ. ಅದು ನಿಜಕ್ಕೂ ಇಷ್ಟವಾಗುತ್ತದೆ. ಯಾಕಂದ್ರೆ ಅವರ ಕಾವ್ಯ, ಕಥೆ, ಕಾದಂಬರಿ, ನಾಟಕ, ವಿಮರ್ಶೆ ಯಾವುದೇ ಆಗಿರಲಿ ಅಲ್ಲಿ ಕಾಣಿಸೋದು ತುಂಬು ಜೀವನಪ್ರೀತಿ ಮತ್ತು ಮನುಷ್ಯ ಸಹಜ ಭಾವಗಳು.
ಸೃಜನಶೀಲನೊಬ್ಬನ ಬರೆಯಲೇಬೇಕಾದ ಒತ್ತಡದಲ್ಲಿ ಹುಟ್ಟಿದ ಕನಸಿನ (ಅಸಲಿ) ಕೂಸು ಇವತ್ತಿಗೂ ಖುಷಿಯಿಂದ ಓದಿಸಿಕೊಳ್ಳುತ್ತದೆ.
ಲಂಕೇಶ್ ಪತ್ರಿಕೆ ಅನ್ನೋ ಆಲದ ಮರದ ಕೆಳಗೆ ಓದಿದ ಜಾಣೆಯರ ಸಾಲಿನಲ್ಲಿ ನಾನು ಇದ್ದೀನಿ ಅನ್ನೋದು ಸಂತಸದ ಸಂಗತಿ. ಇದೇ ಪತ್ರಿಕೆಯ ಆಲದ ಮರಲ್ಲಿ ಅದೆಷ್ಟೋ ಹಕ್ಕಿಗಳು ಗೂಡು ಕಟ್ಟಿವೆ. ಅದೆಷ್ಟೋ ಮಂದಿ ತಮ್ಮ ವ್ಯಕ್ತಿತ್ವಗಳನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಅದೆಷ್ಟೋ ಆಶಯಗಳಿಗೆ, ಬರಹಗಾರರಿಗೆ ವೇದಿಕೆಯಾಗಿದೆ. ಹೋರಾಟಗಳ ಪ್ರಣಾಳಿಕೆಯಾಗಿದೆ. ಈ ಪೈಕಿ ನನ್ನಲ್ಲೂ ಓದುವ ತುಡಿತವನ್ನು ಮೇಷ್ಟ್ರ ಬರಹ ತಾಯಿ ಎದೆಹಾಲಿನಂತೆಯೇ ಆಕರ್ಷಿಸುತ್ತದೆ.
ಲಂಕೇಶ್ ಮೇಷ್ಟ್ರು ಯಾಕಿಷ್ಟವಾಗುತ್ತಾರೆ ಅಂತ ಹೇಳುತ್ತಾ ಹೋದ್ರೆ ಇದೊಂದು ಎಂದಿಗೂ ಮುಗಿಯದ ಕವಿತೆಯಂತದ್ದು. ಅವರು ಅವರ ಬರಹ ಸಮಸ್ತರನ್ನೂ ಸರ್ವಕಾಲಕ್ಕೂ ನಿರಂತರ ಕಾಡುವ ನೆನಪು. ನನಗೆ ಮೇಷ್ಟ್ರು ಎಷ್ಟು ಇಷ್ಟ ಅಂದ್ರೆ ನನ್ನ ಬ್ಲಾಗ್ ಹೆಸರೇ ಗುರು ಲಂಕೇಶ್.
********