ಷರಾ ಬರೆಯದ ಕವಿತೆ
ಡಾ.ಗೋವಿಂದ ಹೆಗಡೆ
ಇಂದು ಅವ ತೀರಿದನಂತೆ
ತುಂಬ ದಿನಗಳಿಂದ
ಅವ
ಬದುಕಿದ್ದೇ ಗೊತ್ತಿರಲಿಲ್ಲ
ಒಂದು ಕಾಲದಲ್ಲಿ
ನೆಲ ನಡುಗಿಸುವ ಹೆಜ್ಜೆಯ ಭಾರಿ
ಮೀಸೆಯ ಹುಲಿ ಕಣ್ಣುಗಳ
ಅವ ನಡೆಯುತ್ತಿದ್ದರೆ
ನನಗೆ
ಮಂಚದ ಕೆಳಗೆ ಅವಿತು
ಕೊಳ್ಳುವುದನ್ನು ಬಿಟ್ಟು ಬೇರೆ
ದಾರಿಯಿರಲಿಲ್ಲ
ಆಗ ಕವಿತೆ ಕನಸಲ್ಲೂ ಸುಳಿಯುತ್ತಿರಲಿಲ್ಲ
ಮತ್ತೆ ಯಾವಾಗಲೋ
“ಅವನಾ? ತುಂಬಾ ಕುಡೀತಾನೆ
ರೈಲಿನ ಎಂಜಿನ್ ಹಾಗೆ
ಸದಾ ಹೊಗೆ ಬಿಡ್ತಾನೆ”
ಹೊಟ್ಟೆ ಊದಿ ಕಣ್ಣು ಹಳದಿಗೆ ತಿರುಗಿ
ಲಿವರ್ ಫೇಲ್ಯೂರ್ ನ ದಯನೀಯ
ಪ್ರತಿಮೆ
ಆಗಲೂ ಹೆಂಡತಿಗೆ ಹೊಡೆಯುತ್ತಿದ್ದ
ಭೂಪ
ಅವನ ಸೇವೆಗೆಂದೇ ಹುಟ್ಟಿದಂತಿದ್ದ
ಅವಳ ಕಣ್ಣುಗಳಲ್ಲಿ ಸದಾ
ಉರಿಯುತ್ತಿದ್ದ ಶೂನ್ಯ
ಅವು ನಗುತ್ತಲೇ ಇರಲಿಲ್ಲ
ಮನುಷ್ಯ ಯಾವಾಗ ಸಾಯಲು
ಆರಂಭಿಸ್ತಾನೆ
ಕವಿತೆ ಹೇಳುವುದಿಲ್ಲ
ಇಂದು ಬರೆಯಹೊರಟರೆ
ಬರೀ ಅಡ್ಡ ಉದ್ದ ಗೀಟು
ಗೋಜಲು
ಷರಾ ಬರೆದರೆ ಬದುಕಿಗೆ
ಕವಿತೆಯಾಗುವುದಿಲ್ಲ
ಸಾವು ಉಳಿಸುವ ಖಾಲಿತನ
ಯಾವ ಷರಾಕ್ಕೂ
ದಕ್ಕುವುದಿಲ್ಲ
*****************
ಅರ್ಥಪೂರ್ಣ ಸಾಲುಗಳು!ಅಭಿನಂದನೆ!
ನಿಜ, ಎಷ್ಟೋ ಜನ ಬದುಕಿದ್ದೇ ಅರಿವಿನಲ್ಲಿರುವುದಿಲ್ಲ, ಸತ್ತ ಮೇಲೂ ಖಾಲಿತನ ಕಾಡುವುದಿಲ್ಲ…
ಮೊದಲ ಸಾಲುಗಳೇ ಪೂರ್ತಿ ಕವಿತೆಯನ್ನು ಹಿಡಿದಿಟ್ಟಿದೆ..
ಚಂದದ ಕವಿತೆ. ಮೊದಲ ಮತ್ತು ಕೊನೆಯ ಸಾಲುಗಳು ಕಾಡುವಂತಿವೆ. ಅಭಿನಂದನೆಗಳು ಸರ್