ಅನುವಾದ ಸಂಗಾತಿ

ಎರಡನೆಯ ಅವತಾರ

ಮೂಲ:ವಿಲಿಯಂ ಬಟ್ಲರ್ ಯೇಟ್ಸ್(ಇಗ್ಲೀಷ್)

Image may contain: 1 person, close-up

ಕನ್ನಡಕ್ಕೆ: ಕಮಲಾಕರ ಕಡವೆ

ಎರಡನೆಯ ಅವತಾರ

ತಿರುತಿರು ತಿರುಗುತ್ತ ವೃದ್ಧಿಸುವ ವರ್ತುಲಗಳಲ್ಲಿ ಭ್ರಮಿಸುತ್ತ
ಡೇಗೆಗಾರನ ಕರೆಯ ಕೇಳಲಾರದು ಡೇಗೆ
ಎಲ್ಲವೂ ಕುಸಿಯುತಿರಲು, ಕೇಂದ್ರಕಿಲ್ಲವೊ ಅಂಕೆ
ಬರಿಯೆ ಅರಾಜಕತೆ ಆವರಿಸಿದೆ ಜಗದಗಲ
ಮಸುಕುರಕ್ತದ ಉಬ್ಬರದಬ್ಬರ ಹಬ್ಬಲು, ಎಲ್ಲೆಡೆ
ಮುಗ್ಧ ವೃತಾಚರಣೆ ಮುಳುಗಿ ಮರೆಯಾಗಿದೆ;
ದಕ್ಷರೊಳಗಿಲ್ಲ ಒಂದಿನಿತೂ ನಂಬಿಕೆ, ಅದಕ್ಷರಲೋ
ಉತ್ಕಟ ಉದ್ರೇಕವೇ ತುಂಬಿಕೊಂಡಿದೆ

ದಿವ್ಯದರ್ಶನವೊಂದೇನೋ ಖಂಡಿತ ಬಳಿಸಾರಿದೆ
ಎರಡನೆಯ ಅವತಾರ ಖಂಡಿತ ಬಳಿಸಾರಿದೆ
ಎರಡನೆಯ ಅವತಾರವೆಂದೊಡನೆಯೇ
ವಿಶ್ವಚೇತನವೊಂದರ ವಿಶಾಲ ಆಕಾರ
ಕಾಡುವುದು ನನ್ನ ದೃಷ್ಟಿಯನ್ನು: ಬೀಳು ಬೆಂಗಾಡು;
ಸುಡುಸೂರ್ಯನ ನಿಷ್ಕರುಣ ಮತ್ತು ಬೋಳು ನೋಟ
ಹೊತ್ತ ನರಸಿಂಹ ರೂಪವೊಂದು
ಹಗುರ ಹೆಜ್ಜೆ ಹಾಕಿದೆ, ಅದರ ಸುತ್ತಲೂ ನೆರೆದಿವೆ
ಮರುಭೂಮಿಯ ಕುಪಿತ ಪಕ್ಷಿಗಳ ನೆರಳುಗಳು.

ಕತ್ತಲು ಕವಿಯುತ್ತಿದೆ ಮತ್ತೆ, ಆದರೂ ನಾ ಬಲ್ಲೆ
ಇಪ್ಪತ್ತು ಶತಮಾನಗಳ ಕಲ್ಲಿನಂತ ನಿದ್ದೆ
ಕದಲಿದೆ ದುಃಸ್ವಪ್ನವಾಗಿ ತೊಟ್ಟಿಲು ತೂಗಿದಂತೆ,
ಯಾವ ಒರಟು ಪಶು ತನ್ನ ಕಾಲ ಸನ್ನಿಹಿತವಾದಂತೆ
ಬೆಥ್ಲೆಹೆಮ್ಮಿನೆಡೆ ಮರುಹುಟ್ಟಿಗಾಗಿ ಹೆಜ್ಜೆ ಹಾಕಿದೆ?

********

Leave a Reply

Back To Top