ಕನ್ನಡಸಾಹಿತ್ಯಕ್ಕೆ ಹೊಸ ಜಗತ್ತನ್ನು ಪರಿಚಯಿಸಿದಬಿ.ಜಿ.ಎಲ್.ಸ್ವಾಮಿಯವರ ಜನ್ಮದಿನ

ನೆನಪು

ಕನ್ನಡಸಾಹಿತ್ಯಕ್ಕೆ ಹೊಸ ಜಗತ್ತನ್ನು ಪರಿಚಯಿಸಿದ

ಬಿ.ಜಿ.ಎಲ್.ಸ್ವಾಮಿಯವರ ಜನ್ಮದಿನ

ಇಂದು ಜನ್ಮದಿನ

ಕನ್ನಡಸಾಹಿತ್ಯಕ್ಕೆ ಹೊಸ ಜಗತ್ತನ್ನು ಪರಿಚಯಿಸಿದ
ಬಿ. ಜಿ. ಎಲ್. ಸ್ವಾಮಿ
ಸಾಹಿತಿ ತಂದೆ- ಮಕ್ಕಳ ವಿಷಯ ಬಂದಾಗ ಕುವೆಂಪು- ಪೂಚಂತೇ ಹೆಸರು ನೆನಪಾಗುವಂತೆ ಡಿ. ವಿ. ಗುಂಡಪ್ಪ- ಬಿ. ಜಿ. ಎಲ್ ಸ್ವಾಮಿ ಅವರ ಹೆಸರೂ ನೆನಪಾಗದಿರದು. ಇಲ್ಲಿಯೂ ಇನ್ನೊಂದು ಸಾಮ್ಯ ನಮಗೆ ಕಂಡುಬರುತ್ತದೆ. ಪೂಚಂತೇ ತಮ್ಮ ತಂದೆಗಿಂತ ಭಿನ್ನವಾಗಿ ಕಾಡಿನ ಪಶುಪಕ್ಷಿಗಳ ಹೊಸ ಪ್ರಪಂಚವನ್ನು ತೆರೆದಿಟ್ಟರೆ ಬಿಜಿಎಲ್ ಸ್ವಾಮಿ ಡಿವಿಜಿಯವರಿಗಿಂತ ಭಿನ್ನವಾಗಿ ಸಸ್ಯಜಗತ್ತಿನ ವಿಶಿಷ್ಟ ಸಂಗತಿಗಳನ್ನು ತಮ್ಮ ಸಾಹಿತ್ಯದ ಮೂಲಕ ತೋರಿಸಿದರು.
‌‌‌‌‌ ಮಂಕುತಿಮ್ಮನ ಕಗ್ಗದ ಖ್ಯಾತಿಯ, ಘನ ವಿದ್ವತ್ತಿನ ಡಿವಿಜಿಯಂಥವರ ಮಗನಾಗಿ ಅವರ ನೆರಳಿನಿಂದ ಹೊರಬಂದು ಲಕ್ಷ್ಮೀನಾರಾಯಣಸ್ವಾಮಿ ತಮ್ಮದೇ ಆದ ದಾರಿಯನ್ನು ನಿರ್ಮಿಸಿಕೊಂಡು ಖ್ಯಾತರಾದರು. ೧೯೧೬ ರ ಫೆಬ್ರವರಿ ೫ ರಂದು ಜನಿಸಿದ ಬೆಂಗಳೂರು ಗುಂಡಪ್ಪ ( ನವರ ಮಗ) ಲಕ್ಷ್ಮೀನಾರಾಯಣಸ್ವಾಮಿ( ಬಿಜಿಎಲ್) ಸಸ್ಯಶಾಸ್ರದಲ್ಲಿ (ಬಾಟನಿ) ಬಿಎ. ಮುಗಿಸಿ ಮುಂದೆ ಎಂಬ್ರ್ಯೋಲಾಜಿ ಆಫ್ ಆರ್ಚಿಡ್ ಎಂಬ ಅಪರೂಪದ ವಿಷಯದಲ್ಲಿ ಆಸಕ್ತಿ ತಳೆದು ಶಿಕ್ಷಣ ಮುಂದುವರಿಸಿ ಮೈಸೂರು ವಿವಿ ಯಲ್ಲಿ ಪಿಎಚ್ ಡಿ ಮಾಡಿ , ಸ್ವಲ್ಪ ಕಾಲ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಖ್ಯಾತ ವಿಜ್ಞಾನಿ ಇರ್ವಿಂಗ್ ವಿಡ್ಮರ್ ಬೇಲಿ ಅವರ ಮಾರ್ಗದರ್ಶನ ಪಡೆದು ಮರಳಿ ಬಂದು ಚೆನ್ನೈ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ೧೯೫೩ ರಿಂದ ಬಾಟನಿ ಪ್ರಾಧ್ಯಾಪಕರಾಗಿ, ೧೯೭೯-೮೦ ರಲ್ಲಿ ಮೈಸೂರು ವಿವಿ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು.
ಬಿಜಿಎಲ್ ಅವರ ಸಾಹಿತ್ಯವೆಲ್ಲ ಅವರು ಕಲಿತ ಮತ್ತು ಬೋಧಿಸಿದ ವಿಷಯದ ಸುತ್ತಲೇ ರಚನೆಯಾದದ್ದು. ಆದರೆ ಕನ್ನಡ ಓದುಗರಿಗೆ ಅದು
ಹೊಸ ಲೋಕವನ್ನೇ ತೆರೆದು ತೋರಿಸಿತು. ಅವರ ಹಸಿರು ಹೊನ್ನು , ನಮ್ಮದೇ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ, ಸಸ್ಯಪುರಾಣ, ಬೃಹದಾರಣ್ಯಕ, ದೌರ್ಗಂಧಿಕಾಪಹರಣ, ಮೀನಾಕ್ಷಿಯ ಸೌಗಂಧ, ಹೂವಿನಿಂದ ಕಾಯಿಗೆ ಫಲಶ್ರುತಿ, ಬೆಳದಿಂಗಳಲ್ಲಿ ಅರಳಿದ ಮೊಲ್ಲೆ, ಜ್ಞಾನ ರಥ ಮೊದಲಾದ ಕೃತಿಗಳಲ್ಲದೇ ಕಾಲೇಜುರಂಗ ( ಸಿನಿಮಾ ಆಯಿತು) , ಅಮೆರಿಕದಲ್ಲಿ ನಾನು, ಕಾಲೇಜು ತರಂಗ, ಪ್ರಾಧ್ಯಾಪಕನ ಪೀಠದಲ್ಲಿ, ಪಂಚಕಲಶ ಗೋಪುರ ,ಮೊದಲಾದವು ಬಹಳ ಜನಪ್ರಿಯತೆ ಪಡೆದುಕೊಂಡವು.


ಬಿಜಿಎಲ್ ಅವರು ೩೦೦ ಕ್ಕೂ ಹೆಚ್ಚು ವಿದ್ವತ್ಪೂರ್ಣ ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದು ಅವು ಇಂಗ್ಲಿಷ್, ಸ್ಪೇನಿಶ್, ಜರ್ಮನ್, ಲ್ಯಾಟಿನ್ ಫ್ರೆಂಚ್ ಭಾಷೆಗಳಲ್ಲಿ ಪ್ರಕಟಗೊಂಡಿವೆ. ಪ್ರಾಯೋಗಿಕವಾಗಿಯೂ ಅವರು ಹಲವು ಹೊಸ ಸಸ್ಯತಳಿಗಳನ್ನು ಸಂಶೋಧಿಸಿದ್ದಾರೆ. ಹಸಿರು ಹೊನ್ನಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ‌ ಪಡೆದಾಗ ಈ ಪ್ರಶಸ್ತಿ ಪಡೆದ ಮೊದಲ ತಂದೆ- ಮಗ ಎನಿಸಿದರು.( ಡಿವಿಜಿಯವರೂ ಪಡೆದಿದ್ದರು.)
೧೯೭೬ ರಲ್ಲಿ ಭಾರತ ಸರಕಾರದಿಂದ ಪ್ರತಿಷ್ಠಿತ ಬೀರಬಲ್ ಸಾಹ್ನಿ ಚಿನ್ನದ ಪದಕ ಪಡೆದರು. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಉಮಾಶಂಕರಜೋಶಿ ಅವರು ಇವರನ್ನು ” ಫೇಮಸ್ ಸನ್ ಆಫ್ ಫೇಮಸ್ ಫಾದರ್” ಎಂದು ಬಣ್ಣಿಸಿದ್ದರು. ಅವರು ಇತಿಹಾಸತಜ್ಞರೂ ಆಗಿದ್ದರು.
೧೯೮೦ ನವೆಂಬರ್ ೨ ರಂದು ಬಿಜಿಎಲ್ ನಿಧನ ಹೊಂದಿದರು.

———————————————–
ಎಲ್. ಎಸ್. ಶಾಸ್ತ್ರಿ

Leave a Reply

Back To Top