ಕಾವ್ಯ ಸಂಗಾತಿ
ಗಜಲ್
ಇಂದಿರಾ ಮೋಟೆಬೆನ್ನೂರ
ಮುಗಿಲಲಿ ಸಾವಿರಾರು ನಕ್ಷತ್ರಗಳ ಬೆಳಕಿಹುದು ಸಾಗುತಿರು ಮುಂದೆ
ನೆಲದಲಿ ನಗುವಳುವ ಅಲೆಗಳ ಹೊಳಪಿಹುದು ಸಾಗುತಿರು ಮುಂದೆ
ಬದುಕೆಂದರೆ ಬರಿದೆ ಭೋರ್ಗರೆವ ಸಡಗರದ ಸಾಗರವಲ್ಲ
ತೇಲುವ ತೆರೆಗಳ ಏಳುಬೀಳಿನ ಸೆಳಕಿಹುದು ಸಾಗುತಿರು ಮುಂದೆ
ಮುಸ್ಸಂಜೆ ಮುಸುಕಲಿ ಮುರುಟಿ ಮಲಗಿರುವ ಜಗವಿಹುದು
ದೂರ ದಿಬ್ಬದಲಿ ಕೆಂಪು ಓಕುಳಿಯ ಥಳುಕಿಹುದು ಸಾಗುತಿರು ಮುಂದೆ
ಹಚ್ಚ ಹಸಿರ ಹೊಲದ ಬದುವಲಿ ಒಣಗಿ ಮರ ನಿಂದಿಹುದು
ಅಂಬು ಹಬ್ಬುತ ಹೂ ಸುರಿಸಿ ಬಳುಕಿಹುದು ಸಾಗುತಿರು ಮುಂದೆ
ಕಾವಳದ ಕರಿಚಾದರ ಹಾಸಿ ಕತ್ತಲೆಯ ಸಾಮ್ರಾಜ್ಯ ತನ್ನಧಿಪತ್ಯ
ನಡೆಸಿಹುದು
ಮಂಜು ಕರಗಿ ರವಿ ಮೂಡಿ ಬೆಳಕು ತುಳುಕಿಹುದು ಸಾಗುತಿರು ಮುಂದೆ