ಜಗದ್ವಿಖ್ಯಾತ ಕಾರ್ಟೂನಿಸ್ಟ ಕನ್ನಡಿಗ ಆರ್.  ಕೆ. ಲಕ್ಷ್ಮಣ

ನೆನಪು

ಆರ್.  ಕೆ. ಲಕ್ಷ್ಮಣ

ಜಗದ್ವಿಖ್ಯಾತ ಕಾರ್ಟೂನಿಸ್ಟ ಕನ್ನಡಿಗ

        ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ ಅಯ್ಯರ್ – ಹಾಗೆಂದರೆ ಯಾರಿಗೂ ತಿಳಿಯಲಿಕ್ಕಿಲ್ಲ. ಆರ್. ಕೆ. ಲಕ್ಷ್ಮಣ – ಎಂದ ತಕ್ಷಣ ನಮ್ಮ ಕಣ್ಣೆದುರು ಬರುವದೂ  ಅವರಲ್ಲ, ಅವರ ” ಕಾಮನ್ ಮ್ಯಾನ್.!” ಒಂದು ದಿನಪತ್ರಿಕೆ ಯಲ್ಲಿ ಸತತ ೫೬ ವರ್ಷ ಒಬ್ಬ ವ್ಯಂಗ್ಯಚಿತ್ರಕಾರನ ಚಿತ್ರಗಳು ಬರುವದು, ಆ ವ್ಯಂಗ್ಯ ಚಿತ್ರಗಳಿಗಾಗಿಯೇ ಓದುಗರು ಆ ಪತ್ರಿಕೆಯನ್ನು ಕೊಂಡುಕೊಳ್ಳುವದು ಎಲ್ಲ ಅಸಾಮಾನ್ಯ ಸಂಗತಿಗಳೇ ಸರಿ.

        ಆರ್. ಕೆ. ನಾರಾಯಣ ಮತ್ತು ಆರ್. ಕೆ ಲಕ್ಷ್ಮಣ ಸಹೋದರರು ಹುಟ್ಟಿದ್ದು ಮೈಸೂರಿನಲ್ಲಿ. ಮೂಲತಃ ತಮಿಳ್ನಾಡಿನ ಸೇಲಮ್ ದಿಂದ ಬಂದು ನೆಲೆಸಿದ ಕುಟುಂಬ. ತಂದೆ ಕೃಷ್ಣಸ್ವಾಮಿ ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಆರ್. ಕೆ. ನಾರಾಯಣ ತಮ್ಮ ” ಮಾಲ್ಗುಡಿ ಡೇಸ್’ ಮತ್ತಿತರ ಕಥೆಕಾದಂಬರಿಗಳಿಂದ ಪ್ರಸಿದ್ಧರಾದವರು. “ದಿ ಹಿಂದೂ” ಪತ್ರಿಕೆಯಲ್ಲಿ  ಅಣ್ಣ ನಾರಾಯಣ ಬರೆದ ಇಂಗ್ಲಿಷ್ ಕಥೆಗಳಿಗೆ ಲಕ್ಷ್ಮಣ ಅವರೇ ಚಿತ್ರ ಬಿಡಿಸುತ್ತಿದ್ದರು. ಅಣ್ಣನಿಗೆ ೫೦ ರೂ. ಸಂಭಾವನೆ ಸಿಕ್ಕರೆ ತಮ್ಮನಿಗೆ ಮೂರು ರೂ. ಸಿಗುತ್ತಿತ್ತು.

               ಹೈಸ್ಕೂಲಿನಲ್ಲಿದ್ದಾಗಲೇ ಮೇಸ್ಟ್ರ  ವ್ಯಂಗ್ಯಚಿತ್ರ ಬಿಡಿಸಿ ಅವರಿಂದಲೇ ಶಾಭಾಸಗಿರಿ ಪಡೆದ ಲಕ್ಷ್ಮಣ ಅವರಿಗೆ ಆರಂಭದಲ್ಲಿ ಪ್ರೋತ್ಸಾಹ/ ಅವಕಾಶ ಕೊಟ್ಟವರು ಕೊರವಂಜಿ ಹಾಸ್ಯ ಪತ್ರಿಕೆಯ ಡಾ. ರಾ. ಶಿವರಾಮ್ ಅವರು. ಸ್ವರಾಜ್ ಮತ್ತು ಬ್ಲಿಟ್ಜ್ ಪತ್ರಿಕೆಗಳಿಗೂ ಅವರು ಕಾರ್ಟೂನ್ ಬಿಡಿಸುತ್ತಿದ್ದರು.  ನಂತರ ಲಕ್ಷ್ಮಣ್ ಫ್ರೀ ಪ್ರೆಸ್ ಜರ್ನಲ್ ಸೇರಿ ಅಲ್ಲಿಂದ ಟೈಮ್ಸ್ ಆಫ್ ಇಂಡಿಯಾಗೆ ಹೋದರು.

         ಟೈಮ್ಸ್ ಆಫ್ ಇಂಡಿಯಾದ ಮುಖಪುಟದಲ್ಲಿ ಅವರು  ದಿನಾಲು ಬಿಡಿಸುತ್ತಿದ್ದ ” ಕಾಮನ್ ಮ್ಯಾನ್ ” ವ್ಯಂಗ್ಯ ಚಿತ್ರಾಂಕಣ ಅದೆಷ್ಟು ಜನಪ್ರಿಯವಾಯಿತೆಂದರೆ  ಪತ್ರಿಕೆಗೇ ಅವರು ಅನಿವಾರ್ಯವೆಂಬಂತಾದರು.  ಒಬ್ಬ ” ಸಾಮಾನ್ಯ ಮನುಷ್ಯ” ನ ಕಣ್ಣುಗಳ ಮೂಲಕ ಭಾರತವನ್ನು ಕಾಣುವ/ ವಿಶ್ಲೇಷಿಸುವ / ವಿಡಂಬಿಸುವ ಅವರ ತೀಕ್ಷ್ಣ ವಿಚಾರಗಳು ಕೋಟಿ ಕೋಟಿ ಓದುಗರನ್ನು ಆಕರ್ಷಿಸುತ್ತಿದ್ದವು. ಅವರ.    ” ಒಂದು ರೇಖೆ ನೂರು ಮಾತು ಹೇಳುತ್ತಿದ್ದರೆ ಅವರ ಒಂದು ವಾಕ್ಯ ಸಾವಿರ ಮಾತು ಹೇಳುತ್ತಿತ್ತು. ಆಗಿನ ಪ್ರಧಾನಿ ನೆಹರೂರಿಂದ ಹಿಡಿದು ದೇಶವಿದೇಶಗಳ ರಾಜಕೀಯ ನಾಯಕರೆಲ್ಲ ಅವರ ರೇಖಾ – ವಾಗ್ಬಾಣಗಳಿಗೆ ತುತ್ತಾಗುತ್ತಿದ್ದರು. ಸುಮಾರು ಆರು ದಶಕಗಳ ಸಹಸ್ರಾರು ವ್ಯಂಗ್ಯ ಚಿತ್ರಗಳು ಹಲವು ಸಂಪುಟಗಳಲ್ಕಿ ಪ್ರಕಟಗೊಂಡಿವೆ.

        ಲಕ್ಷ್ಮಣ ಅವರಿಗೆ ಪ್ರತಿಷ್ಠಿತ ಬಿ. ಡಿ. ಗೊಯೆಂಕಾ ಪ್ರಶಸ್ತಿ, ಪದ್ಮಭೂಷ್ಣ ಪದ್ಮ ವಿಭೂಷಣ, ರೋಮನ್ ಮ್ಯಾಗ್ಸೆಸ್ಸೇ ಪ್ರಶಸ್ತಿ ಸಹಿತ ಅಸಂಖ್ಯಾತ ಗೌರವಗಳು ದೊರಕಿವೆ. ಆಗಿನ ಖ್ಯಾತ ಬ್ರಿಟಿಷ್ ಕಾರ್ಟೂನಿಸ್ಟ್ ಡೇವಿಡ್ ಲೋ ಅವರ ಪ್ರಭಾವ ಹೊಂದಿದ್ದ ಲಕ್ಷ್ಮಣ ಅವರಿಗೆ ಇಂಗ್ಲಂಡ್ ಗೆ ಬರಲು ಕರೆ ಬಂದಿತ್ತಾದರೂ ಅವರು ಭಾರತ ಬಿಟ್ಟು ಹೋಗಲು ಸಿದ್ಧರಾಗಲಿಲ್ಲ.

         ೧೯೨೪ ರ ಅಕ್ಟೋಬರ್ ೨೪ ರಂದು ಜನಿಸಿದ ಲಕ್ಷ್ಮಣ ಅವರು ೨೦೧೫ ರ ಜನವರಿ ೨೬ ರಂದು ನಿಧನ ಹೊಂದಿದರು. ವಿಶೇಷವೆಂದರೆ ಎಲ್ಲರನ್ನೂ ತಮ್ಮ ವ್ಯಂಗ್ಯಚಿತ್ರಗಳಿಂದ ನಗಿಸುತ್ತಿದ್ದ ಅವರು ಮಾತ್ರ ನಗುವದೇ ಅಪರೂಪವಾಗಿತ್ತಂತೆ!


                     – ಎಲ್. ಎಸ್. ಶಾಸ್ತ್ರಿ

Leave a Reply

Back To Top