ಶಿವಲೀಲಾ ಹುಣಸಗಿಯವರ ಕವಿತೆ-ನೀರವ ಮೌನ ಜಗದಲಿ

ಕಾವ್ಯ ಸಂಗಾತಿ

ನೀರವ ಮೌನ ಜಗದಲಿ

ಶಿವಲೀಲಾ ಹುಣಸಗಿ

ದಾರಿಯುದ್ದಕ್ಕೂ ಡಾಂಬರು
ನೇಸರನ ಕಿರಣಕೆ ನಸು ನಾಚುತ್ತ
ಮಿಂಚುತ್ತ ಹೊಳದಷ್ಟು
ಸಂಚಾರಕೆ ಹಸಿರು ನಿಶಾನೆ
ದಾರಿ ಹೋಕರಿಗೆ ಹೊರ ಸಂಚಾರ
ಟೈರಿನ ಘರ್ಷಣೆಗೆ ಮತ್ತದೇ ಗತಿ
ಎತ್ತ ಹೋದವೋ ಮರುಕಳಿಸದೇ
ಮುಚ್ಚು ಮರೆಯಿಲ್ಲದೇ ಬಯಲಾಗಿ
ಸಾಗಿದ್ದೆ ಬಂತು ಕಾಲುದಾರಿಯಲ್ಲಿ
ನನಗೂ ಅವಗೂ ಕೋಳಿ ಕಾಳಗ
ತಿವಿದು,ತಿವಿದು ಸುಸ್ತಾದರೂ
ಬಳಲಿಕೆಗೆ ನೂರೆಂಟು ಭಾವ

l.


ಬಿಸಿಲ ಬೇಟೆಗೆ ತತ್ತರಿಸಿದೆ ಮಗ್ಗುಲು
ಮೈಮಾಟದ ಒಡ್ಡೋಲಗದಲ್ಲಿ
ಚಳಿಯಬ್ಬರಕೆ ಮಬ್ಬಾಗಿದೆ ಮುಗಿಲು
ಋತು ಹೊತ್ತ ಸಾಗರವೊಮ್ಮೆ‌ ದಿಗಿಲು
ಅಯ್ಯೋ! ಕೊಂಚತಟ್ಟಿದ್ದರೆ ಸಾಕಿತ್ತು
ಸಗಣಿ ಕುಳ್ಳಾಗಲು ಹೊತ್ತೆಷ್ಟು?
ಸುಟ್ಟರೆ ಬೂದಿಯಾಗದೇ ಕುರುಳು
ಮಾನ ಮುಚ್ಚಲು ಕರವಸ್ತ್ರ ಸಾಕೆಂದೆ
ಊರುಸುಟ್ಟರೂ ಮಾರುತಿ ಹೊರಗೆ
ನಾನೆಂಬ ಡಾಂಬರು ಹೊದಿಕೆಯಷ್ಟೇ
ಕಲಸಿದ ಕಚ್ಚಾ ಮಾಲು,ಮೈಲುಗಳೆಷ್ಟು
ಮೈಲುಗಳುದ್ದಕ್ಕೂ ಮೌನದುಸಿರು
ಹೊಚ್ಚ ಹೊದಿಕೆಯಲ್ಲಿ ನರಳಿದ್ದೆ ಬಂತು
ಕಾರ್ಪಣ್ಯದ ದರ್ಪಣಂಗಳದಲ್ಲಿ
ಕಣ್ಣರಳಿಸಿ ನೋಡಿದ್ದಕ್ಕಿಂದು ದಕ್ಕಿದೆ
ಕೊನೆಗಳಿಯ ಸಂಚಕಾರದ ಗುನ್ನ
ಸಂಚಯದ ಸಂಚಲನಕೆ ಹುನ್ನಾರ
ಹಣೆಪಟ್ಟಿ ದಾರಿ ಕಟ್ಟಿ ಸಾಗಿದೆ
ಈಗೆಲ್ಲ ಮೌಲ್ಯದ ಹುಡುಕಾಟ
ಬಿಡಿಗಾಸಿಗೂ ಬಿಕ್ಕಳಿಕೆಯಷ್ಟೇ
ದಾರಿಯುದ್ದಕ್ಕೂ ಬೆಕ್ಕಿನ ಚಲ್ಲಾಟ
ಮನದೊಳಗಿನ ಇಲಿಗೆ ಪ್ರಾಣ ಸಂಕಟ
ಸುಳಿವು ಸಿಗದ ಸೆಣಸಾಟದಲಿ ಮತ್ತೆ
ನೀರವ ಮೌನ ಜಗದಲಿ!


9 thoughts on “ಶಿವಲೀಲಾ ಹುಣಸಗಿಯವರ ಕವಿತೆ-ನೀರವ ಮೌನ ಜಗದಲಿ

  1. ಕವಿತೆಯುದ್ದಕ್ಕೂ ಬದುಕಿನ ವಿವಿಧ ಭಾವಮಜಲುಗಳು ಬಹು ಸೊಗಸಾಗಿ ಮೂಡಿವೆ….
    ಸುಂದರ ಕವಿತೆ ಮೇಡಂ…
    ಸೂಪರ್

  2. ಓದುಗನಿಗೆ ದಿಗಿಲು ಮೂಡಿಸುವಷ್ಟು ಭಾವಗಳ ಹರಿವು ಅಭಿನಂದನೆಗಳು

  3. ಸಾಗುವ ಪಥ(ದಾರಿ)ದಲಿ,ಅದೆಷ್ಟು ಹೊಯ್ದಾಟಗಳು,ಭಾವ-ಸಂಗರ್ಷಗಳು!
    ಹೊಯ್ದಾಟದಲಿ,ರಾಜಿ ಮಾಡಿಕೊಳ್ಳದೆ,ಸಂಸ್ಕಾರಯುತ ಮನ,ಮೌಲ್ಯದ ಜೊತೆಸಾಗುವ ಸ-ವಿವರ ಸಂಗತಿಗಳನ್ನು ಎಳೆ ಎಳೆಯಾಗಿ ತಿಳಿಸಿದ ಪರಿ,ಸೊಗಸು ಸಹೋದರಿ.

  4. ಇಂದಿನ ಬದುಕಿನ ಚಿತ್ರಣ ಕಣ್ಣಿಗೆ ಕಟ್ಟಿದಂತಿದೆ, ಒಡೆದ ಕನ್ನಡಿಯಂತಾದ ಮನಸುಗಳ ತಾಕಲಾಟದಲ್ಲಿ ಭಾವನೆಗಳ ನೀರವ ಮೌನ ಎಲ್ಲೆಡೆಯು ಆವರಿಸಿದೆ,

  5. ಇಂದಿನ ಬದುಕಿನ ಚಿತ್ರಣ ಕಣ್ಣಿಗೆ ಕಟ್ಟಿದಂತಿದೆ, ಒಡೆದ ಕನ್ನಡಿಯಂತಾದ ಮನಸುಗಳ ತಾಕಲಾಟದಲ್ಲಿ ಭಾವನೆಗಳ ನೀರವ ಮೌನ ಎಲ್ಲೆಡೆಯು ಆವರಿಸಿದೆ,

    ನಾಗರಾಜ ಆಚಾರಿ ಕುಂದಾಪುರ

  6. ಶಿವಲೀಲಾ ಹುಣಸಗಿಯವರ ಕವಿತೆ-ನೀರವ ಮೌನ ಜಗದಲಿ

    ಟಿಪ್ಪಣೆ
    ನೀರವ ಮೌನ ಜಗದಲಿ ಹಾಗೆ ಸುಮ್ಮನೆ ಓದಿ ಮುಗಿಸುವ ಕವನವಲ್ಲ. ಈ ಕವನವನ್ನು ನಾನು ಮೂರು ಬಾರಿ ಓದಬೇಕಾಯಿತು. ಕಾವ್ಯ ಬರೆಯಲೇ ಬೇಕಂಬ ಬಲವಂತದಿಂದ ಹುಟ್ಟಿಕೊಳ್ಳುವುದಲ್ಲ. ಅಕ್ಷರಗಳನ್ನು ಜೋಡಿಸಿ ಪ್ರಾಸ ಬದ್ಧಗೊಳಿಸಿದರೆ ಕಾವ್ಯ ಎಂದೆನಿಸದು. ಅಂತರ್ಗತ ಸುಪ್ತಭಾವ ಆಕಸ್ಮಿಕವಾದ ಸನ್ನಿವೇಶಕ್ಕೆ ತೆರೆದುಕೊಳ್ಳುತ್ತದೆ. ಸೃಜನಶೀಲ ಬರಹಗಳೇ ಈ ತೆರನದು. ನಿಶ್ಯಬ್ದದಲ್ಲಿ ಥಟ್ಟನೆ ಮಿಂಚುತ್ತದೆ. ಮನಸ್ಸು ತುಡಿತಕ್ಕೊಳಗಾಗುತ್ತದೆ. ಅಂತರ್ಸ್ಫೂರ್ತಿಯೇ ಕಾವ್ಯ ಧ್ವನಿ. ಅಲ್ಲಿ ಇರುವುದು ಭಾವದ ಸೆಲೆ ಮಾತ್ರ. ಅದು ಏನು ಎಂಬುದು ಕಾವ್ಯದ ಮನಕ್ಕೆ ಗೊತ್ತು. ಒಂದಿಷ್ಟು ಗೊಂದಲವೂ ಇಲ್ಲದಿಲ್ಲ. ಅದಕ್ಕೆ ಆಕಾರ ಕೊಡಲು ಸ್ಟಜನಶೀಲ ಮನಸ್ಸು ಮಿಡಿಯುತ್ತದೆ. ಅದೇ ತುಡಿತ ಧ್ಯಾನವಾದಾಗ ಕಾವ್ಯ ಅನಾವರಣಗೊಳ್ಳುತ್ತದೆ. ಕವಿಯ ಅಂತರ್ದೃಷ್ಟಿ ಪ್ರಕಟಗೊಂಡಾಗ ಕವಿ.. ಕವಯತ್ರಿಯರು ಅಚ್ಚರಿ ಪಡದೇ ಇರಲಾರರು. ಕಾವ್ಯಕ್ಕೆ ಧ್ವನಿಯಾದ ತಾವೇ ಮತ್ತೆ ಅದರಲ್ಲಿ ಹೊಸತನ್ನು ಕಂಡು ಬೆರಗು ಪಡುತ್ತಾರೆ. ಸಹೃದಯಿ ಓದುಗರಿಗೆ ಇನ್ನೊಂದು ತೆರನ ದರ್ಶನವಾದೀತು.

    ಪ್ರಸ್ತುತ ಕವನಕ್ಕೆ ಆಧರಿಸಿದ ಚಿತ್ರ ಕವಯತ್ರಿಯರಿಗೆ ಸ್ಫೂರ್ತಿಯಾಯಿತೋ ಅಥವಾ ಸುಪ್ತಭಾವಕ್ಕೆ ಅಕ್ಷರ ರೂಪ ಕೊಟ್ಟ‌ ಮೇಲೆ ಸೂಕ್ತ ಚಿತ್ರವನ್ನು ಆಯ್ಕೆ ಮಾಡಿಕೊಂಡರೋ ಎನ್ನುವುದು ಅಪ್ರಸ್ತುತ. ಒಂದಕ್ಕೊಂದು ಪೂರಕವಾದುದೇ ಕಾವ್ಯ ಎಂಬುದು ಮಾತ್ರ ಸತ್ಯ.

    ಸಾಗರ ಮುಗಿಲುಗಳಿಗೆ ಹೊದಿಕೆಯಾದ ಮಂಜು ಜಗದ ನೀರವ‌ ಮೌನಕ್ಕೆ ಕಾರಣವಾಗಿದೆ. ಸಾಗರ‌ ಮುಗಿಲುಗಳೆರಡು ಅನನ್ಯ ಭಾವದ ನೆರಳು. ಮಂಜು ಜಗವನ್ನೇ ನೀರವತೆಯ ಮೌನದಲ್ಲಿ ಮಂಜುಳಗೊಳಿಸಿದೆ. ಪ್ರಕೃತಿಗೆ ವಿಮುಖವಾದ ವಿಕೃತಿಗೆ ಯಾವಾಗಲೂ ನರಳಾಟ. ಚಂಚಲ ಚಿತ್ತವೇ ಇಲಿ. ಅದಕ್ಕೆ ಯಾವಾಗಲೂ ನಕರಾತ್ಮಕ ಯೋಚನೆಯೆ. ಇಲ್ಲದ ಬೆಕ್ಕನ್ನು ಜ್ಞಾಪಿಸಿಕೊಳ್ಳುವುದೇ ಪ್ರಾಣ ಸಂಕಟ. ಡಾಂಬರ ಬಳಿದ ಹಾದಿ ನೇಸರನ ಕಿರಣಕ್ಕೆ ನಸು ನಗುತ್ತದೆ ನಾಚುತ್ತದೆ. ಈ ಸಾಲಿನಲ್ಲಿ ಕಾಣುವ ಪ್ರತಿಮಾರೂಪ ಬದುಕಿನ ವ್ಯಂಗ್ಯವನ್ನು ಅನಾವರಣಗೊಳಿಸುತ್ತದೆ. ಮುಖವಾಡದ ಬದುಕು ನೇಸರನ ಕಿರಣಕ್ಕೆ ಮಿಂಚುತ್ತದೆ, ನಸು ನಾಚುತ್ತದೆ. ನೂರೆಂಟು ನೋವು ಹೊತ್ತ ಬದುಕಿನ ಒಳಗಿನ ನೋವು ಮಾತ್ರ ಅವ್ಯಕ್ತ! ಬಾಳ‌‌‌ ಪಯಣಕ್ಕೆ ಡಾಂಬರು ಬಳಿದ ರಸ್ತೆ ಏನೋ ಇದೆ, ಟೈಯರುಗಳು ಸವಕಳಿಯಾಗಿ ಬಲಹೀನಗೊಂಡಿವೆ. ಆದರೆ ಮನುಷ್ಯನಿಗೆ ಮಾತ್ರ ಒಳಹಾದಿ. ಮುಖ್ಯ ಹಾದಿಯಲ್ಲಿ ಟೈಯರಿನ ಘರ್ಷಣೆ, ಒಳಹಾದಿಯಲ್ಲಿ ಬದುಕಿನ ಬವಣೆ. ಕ್ಷುಲ್ಲಕ
    ವಿಷಯಗಳ ಹಣಾಹಣಿ. ‌ಪರಸ್ಪರ ಕೋಳಿ‌ ಕಾಳಗ. ಬಳಲಿಕೆಲಿಕೆ ನೂರೆಂಟು ಭಾವಕ್ಕೆ ಎಡೆಮಾಡಿಕೊಡುತ್ತದೆ. ಮತ್ತೆ ತೇಪೆ ಹಾಕುವ ಡಾಂಬರೀಕರಣ. ಮಾನ ಮುಚ್ಚಿಕೊಳ್ಳುವುದಕ್ಕೆ ಒಂದು ಕರವಸ್ತ್ರವೇ ಸಾಕು ಎನ್ನುವಂತಾಗಿದೆ ಈ ಬದುಕು.

    ನೀರವ ಮೌನದ ಜಗದಲ್ಲಿ
    ನೂರೆಂಟು ತಾಕಲಾಟ, ನರಳಾಟ, ಬಲಹೀನಗೊಂಡ ಅನಿಸಿಕೆ! ಮಂಜಿನ ಹೊದಿಕೆ ಹಾಸಿನಲ್ಲಿ ಸಾಗರ‌ ಮುಗಿಲುಗಳೆರಡಕ್ಕೂ ಏಕತೆಯ ಭಾವ. ಅಲೌಕಿಕ ಅನುಭವಕ್ಕೆ ಮನಸ್ಸು ತೆರೆದುಕೊಳ್ಳದಿದ್ದರೆ
    ಬದುಕು ದ್ವಂದ್ವಕ್ಕೆ ಕಾರಣವಾಗುತ್ತದೆ. ನೀರವತೆ ಮೌನವೇ ಭಯವನ್ನು ಹುಟ್ಟಿಸುತ್ತದೆ. ಭ್ರಾಮಕ ಕಲ್ಪನೆಗೆ ಕಾರಣವಾಗುತ್ತದೆ.

    ಪ್ರಸ್ತುತ ಕವನದಲ್ಲಿ ಕವಯತ್ರಿ ಬಳಸಿಕೊಂಡ ಪ್ರತಿಮೆ ಕುರಿತು ದಿ.ಗಿರಡ್ಡಿ ಗೋವಿಂದರಾಯರ ಅಭಿಪ್ರಾಯವನ್ನೇ ವ್ಯಕ್ತ ಪಡಿಸಬಹುದಾಗಿದೆ.
    ” ಪ್ರತಿಮೆಗಳು ಕವಿತೆಯ ಒಳಗಡೆ ಮುಖ್ಯ ವಸ್ತುವಿಗೆ ಸಂಬಂಧಿಸಿದಂತೆ ತಮ್ಮದೇ ಆದ ಒಂದು ವಿನ್ಯಾಸವನ್ನು ರೂಪಿಸಿಕೊಂಡು ಅರ್ಥದ ಇನ್ನೊಂದು‌ ಮೈಯನ್ನು ಪಡೆಯಬಹುದು. ಆ ಮೂಲಕ ಕವಿಯ ದೃಷ್ಟಿಕೋನವನ್ನು ಸೂಚಿಸಬಹುದು…. ಪ್ರತಿಯೊಬ್ಬ ಓದುಗನಿಗೂ ಅದು ಅವನು ವೈಯಕ್ತಿಕ ಬದುಕಿನಲ್ಲಿ ಆ ಪ್ರತಿಮೆಯೊಂದಿಗೆ ಹೊಂದಿರುವ ಸಂದರ್ಭಕ್ಕನುಗುಣವಾಗಿ ಅಷ್ಟಷ್ಟೇ ಅರ್ಥವನ್ನು ಬಿಟ್ಟುಕೊಡುತ್ತದೆ”

    ಕವಯತ್ರಿ ಶಿವಲೀಲಾ ಹುಣಸಗಿ ಅವರು ತಮ್ಮ ಈ ಕವನವನ್ನು ನೀರವ ಮೌನವೆಂದು ಹೆಸರಿಸಿದ್ದಾರೆ.
    ನೀರವ ಎಂದರನೂ ಮೌನವೆ. ನೀರಸ ಮೌನವೆಂದಾದರೆ ರಸವಿಲ್ಲದ್ದು ಎಂದಾಗುತ್ತದೆ. ಕಾವ್ಯದ ಇಣುಕು ನೋಟದಲ್ಲಿ ಇಬ್ಬನಿ ಮುಸುಕಿನೊಳಗಿನ ಇಬ್ಬಂದಿತನವನ್ನು ತೆರೆದಿಟ್ಟಿದ್ದಾರೆ. ಈ ಕಾರಣದಿಂದ ಕವನ ಸಾರ್ಥಕವೆನಿಸುತ್ತದೆ.

    ಡಿ.ಎಸ್.ನಾ. ೨೧-೦೧-೨೦೨೩.

Leave a Reply

Back To Top