ಕಾವ್ಯ ಸಂಗಾತಿ
ಗಜಲ್ ಜುಗಲ್ಬಂದಿ
ನಯನ. ಜಿ. ಎಸ್—
ಅರ್ಚನಾ ಯಳಬೇರು.
ಗಜಲ್
ನಯನ. ಜಿ. ಎಸ್
ಅಕ್ಕರದ ಮೇದುರಕೆ ಅಂಚಿತ ಚೆನ್ನಿಕೆಯಿದು ಕಾವ್ಯ ದೀಪ್ತಿ
ಹುರುಪಿನ ವಾಂಛಲ್ಯಕೆ ನವ ನಲ್ಲುಲಿಯಿದು ಕಾವ್ಯ ದೀಪ್ತಿ
ಭಾವ ಮೇಘದ ಹರಯಕೆ ಕಬ್ಬದೊಡಲಲೇ ಐಸಿರಿಯು
ಪದ ಕ್ಷುಧೆಯ ತಣಿಸುವ ಪೀಯೂಷವಿದು ಕಾವ್ಯ ದೀಪ್ತಿ
ನಿಶೆಗೂ ಉಷೆಗೂ ಶಾಹಿಯಲಿ ಮಧುರ ಚುಂಬನ ಪರ್ವ
ಕಂಗಿನ ಬಸಿರಿಗೆ ಉಪಮೆಯ ಪರಿಣಯವಿದು ಕಾವ್ಯ ದೀಪ್ತಿ
ದಿವಿಜೆಯ ಉಡಿಗೆ ಅನುಭಾಷ್ಯ ಈ ಹೊಂಗಿರಣದ ಬೆಡಗು
ಹಿಗ್ಗಿನ ಭೂಮಿಕೆಗೆ ಅನುರೂಪ ಅಕ್ಷೀಣವಿದು ಕಾವ್ಯ ದೀಪ್ತಿ
ಹೃದಯ ಪುಷ್ಟಿಣಿಯ ಗಂಧದಿ ಭಾವಶೃಂಖಲೆಯು ನಯನ
ಆರುಮೆಯ ದಿವಿಯಲಿ ಅಚಿಂತ್ಯ ವ್ಯೋಮವಿದು ಕಾವ್ಯ ದೀಪ್ತಿ.
***
ಗಜಲ್
ಕಂಪಿಸುವ ಹೃದಯದ ಸಮ್ಮೋದವಿದು ಕಾವ್ಯ ದೀಪ್ತಿ
ತಲ್ಲಣಿಸುವ ಭಾವಗಳ ಉದ್ಘೋಷವಿದು ಕಾವ್ಯ ದೀಪ್ತಿ
ಪರ್ಣಕಂಟದ ಅರ್ಣವೇ ಔಡಲಕೆ ಆಸರೆಯ ತುತ್ತು
ಉರವಣಿಸುವ ಕ್ಲೇಷಗಳಿಗೆ ನಿರಶನವಿದು ಕಾವ್ಯ ದೀಪ್ತಿ
ನೇಹದ ಸಂಲಬ್ಧತೆಯಲಿ ಜೀವನವು ಸಮುಜ್ವಲ
ಉತ್ಪಲಿನಿಯಲಿ ಕಂಗೊಳಿಪ ತೋಯಜವಿದು ಕಾವ್ಯ ದೀಪ್ತಿ
ಚೆಂಬೆಳಕಿಗಿಂತಲೂ ಪ್ರಭೃತಿ ಈ ಪ್ರೀತಿಯ ಬಿಸುಪು
ಪಲ್ಲವಿಸುವ ಪ್ರೇಮಕೆ ಉಪೋದ್ಘಾತವಿದು ಕಾವ್ಯ ದೀಪ್ತಿ
ಬೇಕಿಲ್ಲ ‘ಅರ್ಚನಾ’ ಒಲವಿಗೆ ಔರಸವಾದ ಫರ್ವಾನು
ಮೌನದ ಪರಿಷೆಯಲಿ ತುಷಾರದ ಗಡಣವಿದು ಕಾವ್ಯ ದೀಪ್ತಿ
ಅರ್ಚನಾ ಯಳಬೇರು
ಸಾಹಿತ್ಯಾಸಕ್ತರಿಗೆ ಸುಗ್ರಾಸ ಭೋಜನವಿದು ಕಾವ್ಯ ದೀಪ್ತಿ
ನವನವೀನ ಪದಗಳ ಮೆರವಣಿಗೆ ತುಂಬಾ ಸೊಗಸಾಗಿದೆ ನಯನ/ಅರ್ಚನಾ ಅವರೇ.
ಪದಗುಚ್ಛಗಳ ಸವಿಯನ್ನು ಸ್ವಾದಿಸಿ ಇತ್ತ ಮೆಚ್ಚುಗೆಯ ನುಡಿಗಳನ್ನು ಓದಿ ನಮಗೂ ‘ಸುಗ್ರಾಸ ಭೋಜನ’ ಸವಿದಷ್ಟೇ ಸಾರ್ಥಕ್ಯ ಭಾವ ಮೂಡಿತು ವಿಜಯ್ ಅವರೇ
ಪ್ರೀತಿಪೂರ್ವಕ ಆತ್ಮೀಯತೆ ತಮಗೆ..