ಹೊಸ ವರ್ಷದ ವಿಶೇಷ-2023

ಶುಭದ ನವೋದಯವಾಗಲಿ ಹೊಸ ವರುಷ

ಶಾಲಿನಿ ಕೆಮ್ಮಣ್ಣು

.

ಪ್ರತಿವರ್ಷವೂ ಡಿಸೆಂಬರ್‌ ಕೊನೆಯಲ್ಲಿ ಇಡೀ ವರ್ಷ ನಾವು ನಡೆದು ಬಂದ ದಿನಗಳನ್ನು ಇಣುಕಿ ನೋಡುತ್ತಾ, ನಮ್ಮ ಅನುಭವಗಳು, ನಮ್ಮ ಸರಿ ತಪ್ಪುಗಳು, ಬದುಕಿದ ಸಂತಸದ ಕ್ಷಣಗಳು, ಮರೆಯಲಾರದ ನೆನಪುಗಳು, ಹಳೆಯ ಗೆಳೆಯರು, ಹೊಸ ಸಂಬಂಧಗಳು, ಸೋಲು ಗೆಲುವು, ಗಳಿಕೆ ಇಳಿಕೆ, ಸಾಮಾಜಿಕ ಜೀವನ, ಅದು ತಂದೊಡ್ಡಿದ ಸಂಕಟ.. ಸಾವು, ನೋವು, ದುಃಖ ದುಮ್ಮಾನ, ಈಡೇರದೆ ಉಳಿದು ಹೋದ ಬಯಕೆಗಳು.. ಹೀಗೆ ಕಳೆದ ದಿನಗಳನ್ನು ,ಪೂರೈಸಿದ ಆಯಸ್ಸುನ್ನು ನೆನಪಿಸಿ, ತೂಕ ಮಾಡಿ ಮತ್ತೆ ಹೊಸ ವರ್ಷದ ಆರಂಭವನ್ನು ಸ್ವಾಗತಿಸಿ ಸಂಭ್ರಮಿಸುವ ಜೊತೆಗೆ ಹೊಸ ವರ್ಷಕ್ಕೆ  ಹೊಸ ಹೊಸ ಪ್ರಮಾಣಗಳನ್ನು ಮಾಡುತ್ತೇವೆ.

ಎಲ್ಲ ನೋವು, ನಿರಾಸೆಗಳ ನಡುವೆಯೂ ಹೊಸವರ್ಷದ ಹೊಸ ನಿರೀಕ್ಷೆಯೊಂದು ಆಸೆಯ ಕಂಗಳಿಂದ ಅತ್ತ ನೋಡುವಂತೆ ಮಾಡಿಬಿಡುತ್ತದೆ… ಕಳೆದು ಹೋದ ವರ್ಷದಲ್ಲಿ ಮಾಡಿದ್ದೇನೂ ಇಲ್ಲ ಮುಂದಿನ ವರ್ಷವಾದರೂ ಏನಾದರೊಂದು ಮಾಡಬೇಕು. ಹೊಸ, ಹೊಸ ಕನಸುಗಳ ಕಾಣಬೇಕು, ಹೊಸ ಅಭಿವ್ಯಕ್ತಿಯನ್ನು ಬೆಳೆಸಿಕೊಳ್ಳಬೇಕು, ಹೊಸ ಸಾಧನೆಗಳನ್ನು ಮಾಡಬೇಕು ಹೊಸ ಚಿಂತನೆಗಳನ್ನು ರೂಡಿಸಿಕೊಳ್ಳಬೇಕು, ಹೊಸ ಜೀವನವನ್ನು ರೂಪಿಸಿಕೊಳ್ಳಬೇಕು ಇತ್ಯಾದಿ ಆಸೆಗಳು, ಅಭಿಲಾಷೆಗಳು ಎಲ್ಲರಲ್ಲೂ  ಮೂಡುವುದು ಸಹಜ. ಬದುಕಿಗೊಂದು ಹೊಸತನ ನೀಡಬೇಕು ಎಂದು ನಮ್ಮ ಜಡತ್ವಗೊಂಡ ಹುರುಪಿಗೆ ಸಾಣೆ ಹಿಡಿಯುವ ಪ್ರಯತ್ನ ಮಾಡುತ್ತೇವೆ.  ಎಲ್ಲವೂ ಸಾಕಾರವಾಗಬೇಕಾದರೆ ನಮ್ಮಲ್ಲಿ ಆತ್ಮವಿಶ್ವಾಸ ಉಳಿಯಬೇಕು.  ನಾವು ಸವೆಸಿ ಬಂದ ಅಷ್ಟು ವರ್ಷಗಳು ಅಮೂಲ್ಯವೇ. ಪ್ರತಿವರ್ಷದ ಆರಂಭದ ಆಂತರ್ಯದ ಉತ್ಸಾಹ ಕ್ರಮೇಣ ಮಾಸಿಹೋಗುತ್ತದೆ. ಅದರಾಚೆಗೆ ವರ್ಷದ ಆರಂಭದ ಆತ್ಮವಿಶ್ವಾಸ ಮೂಲೆಸೇರುತ್ತದೆ. ಮತ್ತೆ ಅದೇ ಬದುಕು ಮುನ್ನಡೆಯುತ್ತದೆ. ಸಾಧನೆ ಹಾದಿಗಾಗಿ ನಾವೇ ಹಾಕಿಟ್ಟ ಮಾಪನವೂ ಮಸುಕಾಗಿ ಬಿಡುತ್ತದೆ. ಇಷ್ಟಕ್ಕೂ ಎಲ್ಲ ವರ್ಷಗಳಲ್ಲಿಯೂ ಒಂದಲ್ಲ ಒಂದು ರೀತಿಯ ಘಟನಾವಳಿಗಳು ನಡೆದೇ ನಡೆದಿರುತ್ತವೆ. ಕೆಲವು ಖುಷಿ ಕೊಟ್ಟಿದ್ದರೆ ಮತ್ತೆ ಕೆಲವು ದುಃಖವನ್ನು ತಂದಿರುತ್ತವೆ. ಕೆಲವು ಮನೆಗಳಲ್ಲಿ ಶುಭ ಕಾರ್ಯಕ್ರಮಗಳು ನಡೆದಿದ್ದರೆ ಮತ್ತೆ ಕೆಲವರ ಮನೆಗಳಲ್ಲಿ ಸಾವು-ನೋವು ಘಟಿಸಿರಬಹುದು. ಆದರೆ ಕಾಲವೇ ಹಾಗೆ ಅದಕ್ಕೆ ಎಲ್ಲವನ್ನು ಮರೆಸುತ್ತಾ ಮುನ್ನಡೆಸುವ ಶಕ್ತಿಯಿದೆ.

 ಸನಾತನ ಧರ್ಮದ ಪ್ರಕಾರ ಯುಗಾದಿಯು ಹೊಸ ವರ್ಷದ ಆರಂಭದ ದಿನ. ಯುಗಾದಿ ಅಂದರೆ ಸೃಷ್ಟಿಯ ಹೊಸ ಸಂವತ್ಸರದ ಮೊದಲ ದಿನ. ಯುಗದ ಆರಂಭದ ದಿನ ಆದದ್ದರಿಂದ ಅದನ್ನು ಯುಗಾದಿ ಎಂದು ಕರೆಯುತ್ತಾರೆ. ಬ್ರಹ್ಮನು ಚೈತ್ರ ಶುದ್ಧ ಪ್ರಥಮದಂದು ಸೂರ್ಯೋದಯ ಸಮಯಕ್ಕೆ ಸರಿಯಾಗಿ, ಸಮಗ್ರವಾಗಿ ಈ ಜಗತ್ತನ್ನು ಸೃಷ್ಟಿಸಿದನೆಂದು ಪುರಾಣಗಳು ಹೇಳುತ್ತವೆ. ಅದಕ್ಕಾಗಿ ಆ ದಿನ ನಮಗೆ ಹೊಸ ವರುಷದ ಆರಂಭದ ಹಬ್ಬದ ದಿನವೆನಿಸಿದೆ. ಹೊಸ ವರುಷವಾಗಿ ಯುಗಾದಿಯ ಆಚರಣೆಗೂ ಡಿಸೆಂಬರ್ 31 ರ ರಾತ್ರಿಯ ಆಚರಣೆಗೂ ಅಜಗಜಾಂತರವಿದೆ. ಒಂದರಲ್ಲಿ ಭಾರತೀಯ ಸಂಸ್ಕೃತಿಯ ಸೊಗಡಿದ್ದರೆ ಇನ್ನೊಂದರಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ವಿಲಾಸೀ ಲೋಲುಪತೆಯಿದೆ.

ಒಬ್ಬ ಬೆಳೆಗಾರ ಒಂದು ಅಂಗಡಿಗೆ ಹೋದ. ಆಗತಾನೆ ಅಂಗಡಿಯ ಬಾಗಿಲು ತೆರೆದು ಮಾಲೀಕ ದೇವರಿಗೆ ಕೈಮುಗಿದು ಕೂತಿದ್ದ. ಬಂದವ ಅಂಗಡಿಯವನ ಹತ್ತಿರ ಒಂದು ರೂಪಾಯಿ ಕೊಟ್ಟು ಅಂಗಡಿಯಲ್ಲಿದ್ದ ಎಲ್ಲ ಸಾಮಾನುಗಳನ್ನು ಕೊಡು ಎಂದು ಕೇಳಿದ. ಆ ಅಂಗಡಿಯಲ್ಲಿದ್ದ ಯಾವ ವಸ್ತುವೂ ಒಂದು ರೂಪಾಯಿಗೆ ಸಿಗುವುದಲ್ಲ. ಅಂಗಡಿ ಮಾಲೀಕ ತುಂಬಾ ಯೋಚನೆಮಾಡಿ ಒಂದು ಮುಷ್ಟಿ ಮಣ್ಣನ್ನು ಆ ಗ್ರಾಹಕನಿಗೆ ಕೊಟ್ಟು ಹೇಳಿದ: ನೋಡು, ನೀನು ಬಯಸಿದಂತೆ ಈ ಒಂದು ಹಿಡಿ ಮಣ್ಣಲ್ಲಿ ಎಲ್ಲವೂ ಇದೆ. ಈ ಅಂಗಡಿಯಲ್ಲಿರುವ ಎಲ್ಲ ಸಾಮಾನುಗಳೂ ಕೂಡ ಮಣ್ಣಿನಿಂದಲೇ ಸೃಷ್ಟಿಯಾದದ್ದು. ನಿನ್ನ ಒಂದು ರೂಪಾಯಿಗೆ ಮಣ್ಣನ್ನು ತೆಗೆದುಕೊಂಡು ಹೋಗಿ ನಿನಗೆ ಬೇಕಾದುದನ್ನು ಪಡೆದುಕೋ. ಆಗ ಗ್ರಾಹಕನಿಗೆ ಮಣ್ಣಿನ ಮಹತ್ತ್ವ ಅರ್ಥವಾಯಿತು.ಮಣ್ಣಿನಿಂದ ಹುಟ್ಟಿದ ನಾವೆಲ್ಲರೂ ನಿಜವಾದ ಮಣ್ಣಿನ ಗೊಂಬೆಗಳೇ. ಯಾರಲ್ಲಿಯೂ ಜೀವಂತಿಕೆಯಿಲ್ಲ, ಲವಲವಿಕೆ ಇಲ್ಲ. ಹೆಚ್ಚಿನವರಿಗೆ ಜೀವನದ ಉದ್ದೇಶವೇ ಗೊತ್ತಿಲ್ಲ. ಜೀವನ ಹೋರಾಟದ ಜಂಜಾಟದಲ್ಲಿ ಸ್ಪಂದನಶಕ್ತಿಯನ್ನೆ ಕಳೆದುಕೊಂಡಿದ್ದೇವೆ. ಇಂದಿನ ಮನುಷ್ಯ ಒಬ್ಬ ವ್ಯಕ್ತಿಯಾಗಿ ಬದುಕುತ್ತಾನೆಯೇ ವಿನಾ ಸಮಷ್ಟಿಯಾಗಿ ಬದುಕುವ ಬಗ್ಗೆ ಯೋಚಿಸುವುದೇ ಇಲ್ಲ. ಹೀಗೆ ಸಮಾಜದ ಸಮಸ್ಯೆಯ ಬಗ್ಗೆ, ದೇಶದ ತೊಂದರೆಯ ಬಗ್ಗೆ ನಾವು ನಿರ್ಲಿಪ್ತರಾಗುತ್ತಿದ್ದೇವೆ. ಇಂತಹ ಮಣ್ಣಿನ ಗೊಂಬೆಯಲ್ಲಿ ಜೀವತುಂಬುವುದೆಂದರೆ ನಮ್ಮ ನಮ್ಮ ಸ್ವಭಾವಕ್ಕನುಗುಣವಾಗಿ ನಮ್ಮ ಜೀವನದ ಉದ್ದೇಶವನ್ನು ತಿಳಿದುಕೊಂಡು ಬಾಳುವುದು. ಒಂದು ಧ್ಯೇಯಕ್ಕಾಗಿ, ಉದ್ದೇಶಕ್ಕಾಗಿ ಬದುಕಿದರೆ ನಮ್ಮ ಬಾಳು ಸಾರ್ಥಕ ಆಗುತ್ತದೆ. ನಮ್ಮ ಸಮಾಜ, ನಮ್ಮ ಪರಂಪರೆಯನ್ನು ತಿಳಿದುಕೊಂಡು ಅದರ ಉಳಿವಿಗೆ ಕಟಿಬದ್ಧರಾಗುವುದೇ ನಮ್ಮಲ್ಲಿ ಜೀವತುಂಬಿಸುವ ಕೆಲಸ.

ಅಂದು ಶಾಲಿವಾಹನ ಮಾಡಿದಂತೆ ಇಂದು ಕೂಡ ಈ ದೇಶದ, ಧರ್ಮದ ಬಗ್ಗೆ ಅರಿವು ಉಂಟುಮಾಡಿ, ನಮ್ಮ ಸಂಸ್ಕೃತಿ, ಸಮಾಜದ ಬಗ್ಗೆ ಅಭಿಮಾನ ಉಂಟುಮಾಡುವ ಕೆಲಸ ಆಗಬೇಕಿದೆ. ಮನುಷ್ಯನನ್ನು ಕ್ರಿಯಾಶೀಲನನ್ನಾಗಿ, ಸಮಾಜಮುಖಿಯನ್ನಾಗಿ ಮಾಡಿ ಆತನಲ್ಲಿ ಜೀವತುಂಬಿಸುವ ಕೆಲಸದ ಪರಿಕಲ್ಪನೆ ಆಗಬೇಕಿದೆ. ರಾತ್ರಿಯೆಲ್ಲ ಕುಡಿದು ತೂರಾಡುವ ಹೊಸವರ್ಷದ ಆಚರಣೆಗಿಂತ ಉಂಡು, ಉಟ್ಟು ಸಂಭ್ರಮಿಸುವ ಯುಗಾದಿ ಹಬ್ಬದ ಆಚರಣೆ ಮನುಷ್ಯನಲ್ಲಿ ನವೋಲ್ಲಾಸವನ್ನು ತಂದುಕೊಡುತ್ತದೆ.

ಯುಗಾದಿ ಹಬ್ಬದಲ್ಲಿ ಬೇವು-ಬೆಲ್ಲ ತಿನ್ನುವ ಸಂಪ್ರದಾಯ ಇದೆ. ಜೀವನಪೂರ್ತಿ ಯಾರಿಗೂ ಸುಖ ಎಂಬುದಿಲ್ಲ; ಅದೇ ರೀತಿ ಜೀವನಪೂರ್ತಿ ದುಃಖ ಎಂಬುದೂ ಇಲ್ಲ. ಜೀವನವೆಂದರೆ ಪ್ರಕೃತಿಯ ಕತ್ತಲು-ಬೆಳಕಿನ ಚೆಲ್ಲಾಟದಂತೆ, ಸುಖ-ದುಃಖಗಳ ಸಮ್ಮಿಶ್ರಣವಾಗಿದೆ. ಇಂತಹ ಸುಖ-ದುಃಖಗಳ ಜೀವನದಲ್ಲಿ ಮಾನವನು ಧೈರ್ಯ, ಸ್ಥೈರ್ಯ ಪಡೆದು ಆನಂದದಿಂದ ದಾಪುಗಾಲು ಹಾಕಬೇಕೆಂಬುದೇ ಬೇವು-ಬೆಲ್ಲದ ಸೇವನೆಯ ಹಿಂದಿರುವ ಸತ್ಯ.  ಬೇವು ಕಹಿಯಾದರೂ, ಆರೋಗ್ಯಕ್ಕೆ ಸಿಹಿಯೇ ಆಗಿದೆ. ಹಿಂದಿನ ಕಷ್ಟಗಳನ್ನು ಮರೆತು ಸುಖ-ಸಂತೋಷ ಅನುಭವಿಸಲಿ ಎಂಬುದೇ ಹೊಸ ವರ್ಷದ ಆಚರಣೆಯ ಉದ್ದೇಶ. ಶುಭದ ನವೋದಯವೇ ಪ್ರಕೃತಿಲಾಸ್ಯ. ಅಲ್ಲಿ ನಿರಾಸೆಗೆ ಎಡೆ ಇಲ್ಲ. ಅಂತೆಯೇ ಹೊಸ ಚೈತನ್ಯ, ಹುರುಪು ಪಡೆಯಬೇಕೆಂಬ, ರಾಗ-ದ್ವೇಷಗಳ ದಮನ ಮಾಡಬೇಕೆಂಬ ನಿತ್ಯನೂತನ ವಾರ್ಷಿಕ ಸಂದೇಶವನ್ನು ಯುಗಾದಿ ಸಾರುತ್ತದೆ.

ಹೀಗೆ ಪ್ರಕೃತಿಯನ್ನು ಆರಾಧಿಸುವ, ಜೀವನವನ್ನು ಬೆಳಗಿಸುವ, ಮನಸ್ಸನ್ನು ಅರಳಿಸುವ ಯುಗಾದಿಯನ್ನು ಹೊಸ ವರ್ಷವೆಂದು ಆಚರಿಸುವುದು ಶ್ರೇಷ್ಠವೋ? ತಿಂದು, ಕುಡಿದು, ಕುಪ್ಪಳಿಸುವ, ಮನಸ್ಸನ್ನು ಕೆರಳಿಸುವ ಡಿಸೆಂಬರ್ 31ರ ಮಧ್ಯರಾತ್ರಿಯ ಆಚರಣೆ ಸೂಕ್ತವೋ? ಹೊಸ ವರ್ಷವನ್ನು ಸರಿಯಾಗಿ ಅರ್ಥೈಸಿಕೊಂಡು ಆಚರಿಸೋಣ.?

ವ್ಯಕ್ತಿಗತವಾಗಿ ನಾವೆಲ್ಲರೂ ಸಾಕಷ್ಟು ಏರುಪೇರುಗಳನ್ನು ಅನುಭವಿಸಿರಬಹುದು ಆದರೆ ರಾಷ್ಟ್ರೀಯ ವಿಪತ್ತುಗಳು ಮಾತ್ರ ಎಲ್ಲರನ್ನು ತಲ್ಲಣಿಸಿ ಬಿಡುತ್ತವೆ. ಈ ಬಾರಿ ಮುಂಗಾರು ಅಬ್ಬರಿಸಿದ ಕಾರಣ ಹಲವು ಜಲಾಶಯಗಳು ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ ಮಿನುಗುವಂತೆ ಮಾಡಿದೆ. ಅದರಾಚೆಗೆ ಅಲ್ಲಲ್ಲಿ ಸಂಭವಿಸಿದ ಅಪಘಾತಗಳು, ಆಕಸ್ಮಿಕ ಅವಘಡಗಳು ಒಂದೇ ಎರಡೇ ಲೆಕ್ಕಕ್ಕೆ ಸಿಗದಷ್ಟಿವೆ. ನಾವು ಎಲ್ಲವನ್ನು ನೆನಪಿಸಿಕೊಂಡು ಮುಂದಿನ ವರ್ಷಕ್ಕೆ ಹೆಜ್ಜೆಯಿಡುವುದು ಅನಿವಾರ್ಯವಾಗಿದೆ.

ನಮಗೆ ಗೊತ್ತು ಹೊಸ ವರ್ಷದಲ್ಲಿ ಹೊಸದೇನು ಇಲ್ಲ ಎಂಬುದು. ಆದರೂ ಹೊಸತನಕ್ಕೆ ಹಾತೊರೆಯುವ ಜಾಯಮಾನ ನಮ್ಮದಾಗಿರಲಿ. ಇಡೀ ಜಗತ್ತೇ ಹೊಸವರ್ಷದತ್ತ ತವಕಿಸುತ್ತಿರುವಾಗ ಅವರಲ್ಲಿ ನಾವು ಒಬ್ಬರಾಗಿ ಮುನ್ನಡಿಯಿಡೋಣ.  ಹೊಸ ವರ್ಷದ ಹೊಸ್ತಿಲಲ್ಲಿರುವ ನಾವು ಹಳೆಯ ವರ್ಷದ ದಿನಗಳನ್ನು ಮೆಲುಕು ಹಾಕುತ್ತಾ ಸಂತಸದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ದುಃಖದ ಕ್ಷಣಗಳನ್ನು ಮರೆಯುತ್ತಾ ಮುನ್ನಡೆಯೋಣ, ವರ್ಷದ ಮೊದಲ ದಿನವಷ್ಟೆ ಹೊಸತಾಗಿರದೆ ಪ್ರತಿ ಮುಂಜಾನೆಯು ಹೊಸದಾಗಿ ಆರಂಭಿಸೋಣ ಇನ್ನೊಂದು ಹೊಸವರ್ಷ ಬರೋ ತನಕ…


One thought on “

Leave a Reply

Back To Top