ಹೊಸ ವರ್ಷದ ವಿಶೇಷ-2023
ಸ್ಮಿತಾ ಅಮೃತರಾಜ್.ಸಂಪಾಜೆ.
ಹಾದಿ ಹಾಡು
ಗುರಿ ಸೇರಿಸುವ ಪ್ರತಿನಿತ್ಯದ
ನಂಬುಗೆಯ ಹಾದಿಯೂ ಒಮ್ಮೊಮ್ಮೆ
ಕಣ್ ಕಟ್ಟಿಸಿಬಿಡುತ್ತದೆ
ದಿಕ್ಕು ತಪ್ಪಿಸಿ ಬಿಡುತ್ತದೆ.
ಮುಗ್ಗರಿಸುವುದು,ಎಡವಿ ಬೀಳುವುದು
ಅಂಕೆ ತಪ್ಪುವುದು
ಎಷ್ಟು ಗಳಿಗೆಯ ಲೆಕ್ಕ?
ಎಷ್ಟು ಕೆಟ್ಟದ್ದು ಬಿದ್ದ ನೋವಿಗಿಂತ
ನೆಟ್ಟ ನೋಟ!
ಕ್ಷಣಾರ್ಧದಲ್ಲೇ
ಹಾದಿ ನಡುವಲ್ಲೊಂದು ಕತೆ ಹುಟ್ಟಿ ಬಿಡುತ್ತದೆ
ದಾರಿ ಹೋಕರ ಬಾಯಿ ಖರ್ಚಿಗೂ
ಸಾಕಾಗಿ ಮಿಕ್ಕುತ್ತದೆ.
ನಡು ಹಾದಿಯೂ ನಡು ವಯಸ್ಸೂ
ಎಷ್ಟು ಅಪಾಯ
ಜಾಗ್ರತೆ ಇದ್ದಷ್ಟೂ ಕಡಿಮೆಯೇ
ಜನಸಂದಣಿಯಿಂದ ಲೊಚಗುಟ್ಟುತ್ತದೆ
ನಾಲಗೆ.
ಒಮ್ಮೊಮ್ಮೆ ತಲೆ ತಿರುಗುತ್ತದೆ
ಸ್ಮೃತಿ ತಪ್ಪುತ್ತದೆ ;ಹಾದಿ ಮರೆಯುತ್ತದೆ
ಯಾರನ್ನ ಹೊಣೆಯಾಗಿಸುವುದು?
ಹಾದಿಯನ್ನೋ? ಪಾದವನ್ನೋ?
ಕಣ್ಣು ಮಂಜಾದಾಗ ಲಕ್ಷ್ಮಣ ರೇಖೆಯನ್ನೂ
ದಾಟಿ
ಸಾಕ್ಷ್ಯವನ್ನೂ ನೀರು ಪಾಲು ಮಾಡಿ
ಎಚ್ಚರಿಕೆಗೆ ಮರೆವು ಮುತ್ತಿ ಎಲ್ಲ ಎಲ್ಲೆ
ಮೀರಿಯೂ ಅಚಾತುರ್ಯ
ಸಂಭವಿಸಿ ಬಿಡುತ್ತದೆ.
ಹಾದಿ ತುದಿಗೆ ಕಣ್ಣ ಚುರಿದು ಕೊಂಡು
ಅದೆಷ್ಟು ರಾಧೆಯರಿಲ್ಲಿ
ಉಡಿಯೊಳಗಿಟ್ಟ ಕೊಳಲಿಗೆ ಉಸಿರ ತೇದಿ ರಾಗವಾಗಿಸುತ್ತಿದ್ದಾರೆ
ಹಾಡು ಹಾದಿಯಾಗುತ್ತದೆ
ಹಾದಿ ಹಾಡಾಗುತ್ತದೆ
ಸ್ವರವೊಂದು ತೇಲುತ್ತಾ ಸಾಗುತ್ತದೆ
ಕತ್ತು ತಿರುಗಿಸಿದರೆ
ಯಾವ ಹಾದಿಗಳೂ ಜತೆಯಾಗುವುದಿಲ್ಲ
ನಿಲುತಾಣ ಸೇರುವುದಿಲ್ಲ.
ಆದರೂ ಹಾದಿಯ ಆಲಾಪದ
ಗುಂಗು ನಿಲ್ಲುವುದಿಲ್ಲ.
ಚಂದದ ಕವಿತೆ
ಸುಂದರವಾಗುತ್ತು,22ರ ಕೊನೆಗೆ ಆಲೋಚನೆಗೆ ವಸ್ತು ಇಷ್ಟವಾಗಿದೆ…
ಸಿಂಹಾವಲೋಕನ ಅಂತರಂಗದಲ್ಲೂ ಮಾಡಬಹುದೆಂದು ತೋರಿಸುವ ಕವಿತೆ, ಹೀಗೆ ಹೀಗೆ ಇರಬೇಕು ಎನ್ನುವ ಕಿವಿಮಾತಿನ ಸ್ವಗತ ಕವಿತೆ ಮನಸ್ಸಿಗೆ ಬಂತು.
ಪಯಣವೊಂದೇ ನಿತ್ಯ ಸತ್ಯ ಗೆಳತಿ….ಚೆಂದದ ಕವಿತೆ ಸ್ಮಿತಾ….
Super ಕವಿತೆ.
ವಾಹ್ !! ಯಾವತ್ತಿನಂತೆ ಇದೂ ಸಹ ಕವಿ ಸ್ಮಿತಾ ಅವರು ಮಾತ್ರ ಬರೆಯಬಹುದಾದ ಭಾವಪೂರ್ಣ ಕವಿತೆ.
ಸವೆಸಿದ ಹಾದಿ ಸವೆದ ದಿನಗಳು ಮುಗಿಯಲಿ ಇಂದು,
ಸಿಗಲಿ ಕಾಲಿ ಹಾಳೆಗಳು ಗೀಚಲು ಮುಂದೆ.
ಒಳ್ಳೆಯ ಕವಿತೆ.
ಹಾದಿಯ ಕವಿತೆ ಸೊಗಸಾಗಿದೆ
ಕೆಲವು ಪದಗಳಲ್ಲಿ ಅನಾವರಣಗೊಂಡಿದೆ ಬದುಕಿನ ಹಾದಿ.
ಸ್ಮಿತಕ್ಕ ಸೂಪರ್.
Mana Muttithu Kavithe..
Abhinandhanegalu!