ಹೊಸ ವರ್ಷದ ವಿಶೇಷ-2023

ಹೊಸ ವರುಷಕ್ಕೆ – ಹೊಸ ಸಂಕಲ್ಪ

ರೋಹಿಣಿ ಯಾದವಾಡ

ಹೊಸ ವರುಷಕ್ಕೆ ಇರಲಿ ಹೊಸ ಸಂಕಲ್ಪ

    ಭಾರತೀಯರಾದ ನಮಗೆ ಹೊಸ ವರುಷ ಯುಗಾದಿನೇ ಸರಿ. ಆದರೆ ಅಕಾಡೆಮಿಕ್ ಇಯರ್ ಆಗಿ ನಾವು ಅನುಸರಿಸುತಿರುವುದು ಕ್ಯಾಲೆಂಡರ್ ಪ್ರಕಾರ ಜನವರಿ ತಿಂಗಳಿನಿಂದ ಡಿಸೆಂಬರ್. ಗೋಡೆಗೆ ನೇತು ಹಾಕಿರುವ ಕ್ಯಾಲೆಂಡರ್ ಬದಲಿಸುವ ದಿನ. ಇಸ್ವಿ ಬದಲಾಗುವ ದಿನ. ಭಾವನಾತ್ಮಕವಾಗಿ ಶೃದ್ಧೆಯಿಂದ ಹಬ್ಬದಂತೆ ಯುಗಾದಿಯಂದು ಹೊಸ ವರುಷ ಅಂದಕೊಂಡರು. ಜನವರಿ ಒಂದನ್ನು ವರುಷಗಳ ಸಂಖ್ಯಾ ದೃಷ್ಟಿಯಿಂದ ಸಂಭ್ರಮದಲ್ಲಿ ಆಚರಿಸಿ ಬರಮಾಡಿಕೊಳ್ಳುವ ವಾಡಿಕೆ ನಮ್ಮಲ್ಲಿದೆ.

      ಹೊಸ ವರುಷ ಎನ್ನುವುದು ೨೦೨೨ ಕ್ಕೆ ವಿದಾಯ ಹೇಳಿ ೨೦೨೩ ನ್ನು ಬರಮಾಡಿಕೊಳ್ಳುವ ಕ್ಷಣ. ಒಂದು ವರುಷ ಕಳೆದು ಹೋಯಿತು ಎಂದು ಲೆಕ್ಕ ಹಾಕುವ ದಿನ. ಬದುಕಿನ ಪಯಣದಲ್ಲಿ ಈ ಕಳೆದು ಹೋದ ವರುಷದಲ್ಲಿ ಗತಿಸಿದ ಒಳಿತು- ಕೆಡಕುಗಳನ್ನು ಮನಪಟಲದಲ್ಲಿ ನೆನಪಿಟ್ಟುಕೊಳ್ಳುತ್ತೇವೆ. ಆಂಗ್ಲ   ತತ್ವಜ್ಞಾನಿಯೊಬ್ಬ ಹೇಳುವಂತೆ ” ಕಳೆದು ಹೋದ ದಿನಗಳವು ಅವು ಈಗ ಕೇವಲ ನೆನಪು ಮಾತ್ರ. ಆದರೆ ವರ್ತಮಾನದ ಇಂದಿನ ದಿನ ಅದು ನನ್ನ ಸ್ವಾಧೀನದಲ್ಲಿರುವ ದಿನ, ಅದನ್ನು ಹೇಗೆ ಬೇಕೊ ಹಾಗೆ ಅನುಭವಿಸಬಹುದಾದ ದಿನ. ಅದನ್ನು ಒಳಿತಾಗಿಯೇ ಕಳೆಯಬೇಕು” ಎಂಬುದು ನಿಜಕ್ಕೂ ಮೌಲಿಕ ಮಾತು. ಬದುಕಿನ ಪಯಣ ಸುಧೀರ್ಘವಾಗಿಲ್ಲ, ಇರುವಷ್ಟು ದಿನ ಚನ್ನಾಗಿ ಬದುಕಬೇಕಲ್ಲವೇ?

     ” ಹೊಸತು” ಎಂಬುವುದೆ ಒಂದು ಸಂಚಲನ ಮೂಡಿಸುವಂತಹದು. ಹೊಸತಿಗೊಂದು ಹೊಸತು ಸಂಕಲ್ಪ ಎಂದು ಏನೇನೋ ರೆಸಲ್ಯೂಷನ್ ಗಳನ್ನು ಪಾಸ್ ಮಾಡಿಕೊಳ್ಳುತ್ತೇವೆ. ಕಳೆದು ಹೋದ ವರುಷದ ಕೆಡುಕುಗಳನ್ನು ಪುನರ್ ಘಟಿದಂತೆ ಮುನ್ನೆಚ್ಚರಿಕೆಯಲ್ಲಿ ಕೆಲವು ಸಂಕಲ್ಪಗಳನ್ನು ಮಾಡಿಕೊಂಡು ಕಡಿವಾಣ ಹಾಕಿಕೊಳ್ಳುತ್ತೇವೆ. ಒಳಿತನ್ನು ಬಯಸಿ ಧನಾತ್ಮಕ ಸಂಕಲ್ಪಗಳನ್ನೂ ಜಾರಿಗೆ ತರಲು ಹವಣಿಸುತ್ತೇವೆ.

         ಸಂಕಲ್ಪಗಳು ನಮ್ಮ ನಡೆ-ನುಡಿಗೆ, ವ್ಯಕ್ತಿತ್ವಕ್ಕೆ, ಬದುಕಿಗೆ  ಬದ್ಧತೆಯನ್ನು ತಂದುಕೊಡುತ್ತವೆ. ಪ್ರಸ್ತುತ ವರುಷದಲ್ಲಿ ” ಆರೋಗ್ಯ” ನಮ್ಮ ಮೊದಲ ಆದ್ಯತೆಯಾಗಿರಬೇಕು. ಆರೋಗ್ಯವಂತರಾಗಿರಲು ಏನೆಲ್ಲ ಎಚ್ಚರಿಕೆಗಳು ಬೇಕೋ ಅವುಗಳನ್ನು ತೆಗೆದುಕೊಳ್ಳಬೇಕು. ಆರೋಗ್ಯ ಕೇವಲ ಆಹಾರಕ್ಕೆ ಸೀಮಿತವಾಗಿಲ್ಲ. ದೈಹಿಕ ಪರಿಶ್ರಮ, ಮಾನಸಿಕ ಮನಸ್ಥಿತಿಗಳನ್ನು ಅವಲಂಬಿಸಿದೆ. ಜೊತೆಗೆ ಕುಡಿವ ನೀರು, ಸೇವಿಸುವ ಗಾಳಿಯತ್ತಲೂ ಗಮನಹರಿಸುವುದವಶ್ಯ.

      ಮನಸ್ಥಿತಿ ಎಂಬುದು ಆರೋಗ್ಯದ ಕೇಂದ್ರ ಬಿಂದು ಎನ್ನುವುದರಿಂದ ಅದನ್ನು ಸಕಾರಾತ್ಮಕವಾಗಿ ಕಾಪಿಟ್ಟುಕೊಳ್ಳುವುದಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು.  ಎಷ್ಟು ಅನುಕೂಲವೋ ಅಷ್ಟೇ ಕೆಟ್ಟದು ಎನ್ನುವು ” ಸಾಮಾಜಿಕ ಜಾಲತಾಣವು” ನಮ್ಮ ಮನಸ್ಥಿತಿಯನ್ನು ಆಳುತ್ತಿದೆ ಎಂದರೆ ಅತಿಶಯೋಕ್ತಿ ಅಲ್ಲ. ಅಲ್ಲಿ “ನಿಯಂತ್ರಣ ” ಎಂಬ ಸಂಕಲ್ಪ ಬಹು ಮುಖ್ಯವಾಗಿದೆ. ಇದೇ ಬರಲಿರುವ ಹೊಸ ವರುಷದ ಪ್ರಥಮ ರೆಸಲ್ಯೂಷನ್ ಆಗಬೇಕಿದೆ. ಒಳಿತಿಗಿಂತ ಕೇಡಕನ್ನೆ ಉಂಟುಮಾಡುವ ಇಂತವುಗಳನ್ನು ಎಷ್ಟು ಅವಶ್ಯಕವೋ ಅಷ್ಟೇ ಬಳಸುವುದಾಗಬೇಕು.

      ಎರಡನೇ ಸಂಕಲ್ಪವಾಗಿ ” ಪರಿಸರ” ಇದು ಕೂಡ ನಮ್ಮ ಬದುಕಿನ ಯಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ಪರಿಸರ ಮಾಲಿನ್ಯದ ಎಲ್ಲ ಆಯಾಮಗಳನ್ನು ಅಲಕ್ಷಿಸುವಂತಿಲ್ಲ. ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯಗಳತ್ತ ಗಮನಹರಿಸಲೇಬೇಕು. ಇಲ್ಲವಾದಲ್ಲಿ ವೈದ್ಯಲೋಕಕ್ಕೆ ವಿಸ್ಮಯ ಉಂಟು ಮಾಡುತ್ತಿರುವ ಕಾಯಿಲೆಗಳಿಗೆ ಬಲಿಯಾಗುವ ಪರಿಸ್ಥಿತಿ ತಂದುಕೊಳ್ಳುವಂತಾಗುತ್ತದೆ.

     ಪ್ರಕೃತಿದತ್ತವಾಗಿ ಉಚಿತವಾಗಿ ಸಿಗುವಂತಹ ಮೂಲಭೂತ ಅವಶ್ಯಕತೆಗಳಾದ ಬೆಳಕು,ಜಲ ಹಾಗೂ ಗಾಳಿ . ಇವುಗಳಲ್ಲಿ ಈಗಾಗಲೇ ಬೆಳಕು ನೀರು ಇಂದು ಪಾಶ್ಚಾತ್ಯ ಪ್ರಭಾವದಿಂದಾಗಿ ಕೊಳ್ಳುಬಾಕ ಸಂಸ್ಕೃತಿಗೆ ಒಳಪಟ್ಟಿವಿ. ಉಳಿದ ಇನ್ನೊಂದು ” ಗಾಳಿ” ( ವಾಯು) ಅದೂ ಕೂಡ ” ಕರೋನಾ” ಸಮಯದಲ್ಲಿ ಸಖತ್ ಪಾಠ ಕಲಿಸಿಯಾಗಿದೆ. ಇವೆಲ್ಲ ಅನುಭವದಿಂದಾಗಿ ನಾವು ಕಿಂಚಿತ್ತಾದರೂ ಎಚ್ಚೇತ್ತುಕೊಳ್ಳದಿದ್ದರೆ ಹೇಗೆ?. ” ಹಸಿರು ನಮ್ಮ‌ಉಸಿರು” ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡು ಸಾಧ್ಯವಾದಷ್ಟು ಹಸಿರು ಬೆಳೆಸಲು ಸಂಕಲ್ಪ ತೊಟ್ಟಿದ್ದಾದರೆ ಈ ಮೇಲಿನ ಎಲ್ಲ ಸಮಸ್ಯೆಗಳಿಂದಲೂ ಮುಕ್ತರಾಗಲು ಸಾಧ್ಯ.

     ಸಾಮಾಕಿಕ ಜಾಲತಾಣದ ಪರಿಣಾಮವಾಗಿ ಸೆಲಿಬ್ರಿಟಿತನ ಇಂದು ಕೆಲವರಿಗೆ, ಕೆಲ ಕ್ಷೇತ್ರಗಳಿಗೆ ಮಾತ್ರ ಮೀಸಲಾಗಿಲ್ಲ. ಅದು ಸಾರ್ವತ್ರಿಕ ವಾಗಿ ಪ್ರತಿಯೊಬ್ಬನ್ನ ಹಕ್ಕು ಎಂಬಂತಾಗಿದೆ. ಇದು ಮನುಷ್ಯನ ಮನಸ್ಸು ಕೆಡಲು ಕಾರಣವಾಗಿ ಆರೋಗ್ಯಕರ ವಾತಾವರಣಕ್ಕೆ ಧಕ್ಕೆ ತರುತ್ತಿದೆ. ಇಂತವುಗಳು ತಿಳಿ‌ಮನ ಕಲಕುತಿವೆ ಎನಿಸುವುದು ನಿಜ ಆದರೆ ತಲೆಕಡಿಸಿಕೊಳ್ಳುವ ಗೋಜಿಗೆ ಹೋಗಬಾರದು. ಸ್ಟೇಟಸ್, ಕಮೆಂಟಗಳು ನಮ್ಮ ಮನಸ್ಸಿನ ಕನ್ನಡಿಗಳಾಗಬಾರದು ಎಂಬಂತಿರಬೇಕು.

     ಹೊಸ ವರುಷದ ಆಚರಣೆ ಎಂದರೆ ಅಬ್ಬರವಲ್ಲ.‌ಕೇಕೆ ಹಾಕಿ ಕುಣಿದು ಕುಪ್ಪಳಿಸುವುದು, ಕೇಕ್ ಕತ್ತರಿಸಿ ಮುಖಕ್ಕೆ ಬಳಿಯುವುದಾಗಿ, ಪಟಾಕಿ- ಸಿಡಿಮದ್ದು ಸಿಡಿಸುವುದಾಗಲಿ, ಕುಡಿದು ಅಮಲೇರಿಸಿಕೊಳ್ಳುವುದಾಗಿ, ಬಾರ್ ಹೊಟೇಲ್ ದಾಬಾಗಳಲ್ಲಿ ಪಾರ್ಟಿಮಾಡುವ ನೆಪದಲಿ ದಾಂದಲೆ ಮಾಡುವುದಾಗಲಿ ಅಲ್ಲ. ಬದಲಿಗೆ ಕುಟುಂಬದವರು, ಬಾಂಧವರು, ಸ್ನೇಹಬಳಗದವರು, ಸಿಬ್ಬಂದಿಗಳು ಹೊಸಬಟ್ಟೆ ಧರಿಸಿ, ಸಿಹಿ ತಿನಿಸು,ಅಡುಗೆ ಸವಿದು ,ನಗುನಗುತ ಕಲೆತು ಸಂತಸಪಟ್ಟರೆ ಅದುವೇ ಹೊಸ ವರುಷ ಸಂಭ್ರಮದಾಚರಣೆ.

     ಹೊಸ ವರುಷ ನಿಮಗೆಲ್ಲ ಹೊಸ ಹರುಷ ತರಲಿ. ಬಾಳಿಗೆ ಚೈತನ್ಯ ತುಂಬಲಿ. ನಿಮ್ಮದೇ ಆದ ಹೊಸ ರೆಸಲ್ಯೂಷನ್ ಗಳಿರಲಿ. ನನ್ನೆಲ್ಲ ಓದುಗ ಸಹೃದಯಿಗಳಿಗೆ ಹೊಸ ವರುಷದ ಶುಭಾಶಯಗಳು.


Leave a Reply

Back To Top