ಪ್ರಸ್ತುತ

ಕೇಜ್ರಿವಾಲಾರವರ ಕ್ರೇಝಿವಾಲಾಗಳಿಗಾಗಿ……….

Image result for images of aam aadmi party

ಗಣೇಶಭಟ್,ಶಿರಸಿ

ಕೇಜ್ರಿವಾಲಾರವರ ಕ್ರೇಝಿವಾಲಾಗಳಿಗಾಗಿ……….


ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಪಡೆದ ದೊಡ್ಡ ಗೆಲುವು, ಆ ಪಕ್ಷದ ನೇತಾರ ಅರವಿಂದ ಕೇಜ್ರಿವಾಲಾರ ಅಭಿಮಾನಿಗಳ, ಅವರ ಕ್ರೇಝಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಕೇಜ್ರಿವಾಲಾರವರೇ ದೇಶದ ಸಮಸ್ಯೆಗಳನ್ನು ಪರಿಹರಿಸುವ ಸಾಮಥ್ರ್ಯ ಹೊಂದಿದ್ದಾರೆ ಎಂಬ ಭಾವನೆ ಇಂಥವರಲ್ಲಿ ಬಲಿಯುತ್ತಿದೆ.
ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲೂ ಗೆದ್ದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಸೋಲಿಸಿದ್ದು ದೊಡ್ಡ ಸಾಧನೆ ಎಂದೇ ಕೊಂಡಾಡಲಾಗುತ್ತಿದೆ. ಆಮ್ ಆದ್ಮಿ ಪಕ್ಷದ ಗೆಲುವಿಗೆ ಹಲವು ಕಾರಣಗಳನ್ನು ಮಾಧ್ಯಮ ತಜ್ಞರು ನೀಡಿದ್ದಾರೆ. ಈ ಸುದ್ದಿಯನ್ನು ಬಿತ್ತರಿಸುವಾಗ, ಸೋತ ಪಕ್ಷದ ವಿರುದ್ಧ ಮಾಧ್ಯಮದವರು ಬಳಸಿದ ಭಾಷೆಯಲ್ಲಿ ಆದ ಮಹತ್ತರ ಬದಲಾವಣೆಯನ್ನು ಎಷ್ಟು ಜನ ಗಮನಿಸಿದ್ದಾರೋ ಗೊತ್ತಿಲ್ಲ.


ಅಧಿಕಾರ ಹೊಂದಿರುವ ಪಕ್ಷ ಸೋತಾಗ ಮಖಾಡೆಯಾಗಿ ಮಲಗಿತು , ನೆಲಕಚ್ಚಿತು , ಹೀನಾಯ ಸೋಲು ಮುಂತಾಗಿ ಬಳಕೆಯಾಗುತ್ತಿದ್ದ ಮಾಮೂಲಿ ಶಬ್ದಗಳು ಬಿಜೆಪಿಯ ಕುರಿತು ಬಳಕೆಯಾಗಲಿಲ್ಲ. ಕಾಂಗ್ರೆಸ್ ಕುರಿತು ಕೆಲವರು ಈ ಶಬ್ದಗಳನ್ನು ಬಳಸಿದರಾದರೂ ಚುನಾವಣಾ ಪರಿಣಾಮದ ವಿಶ್ಲೇಷಣೆಯಲ್ಲಿ ಗೆಲುವಿನ ಕಾರಣಗಳ ಕುರಿತೇ ಹೆಚ್ಚಿನ ಒತ್ತು ನೀಡಲಾಗಿತ್ತು. ಇಂತಹ ಸಂದರ್ಭಗಳಲ್ಲಿ ಬಳಕೆಯಾಗುವ ಇನ್ನೊಂದು ನುಡಿಗಟ್ಟೆಂದರೆ ಮತದಾರ ಬುದ್ದಿವಂತನಾಗಿದ್ದಾನೆÀ ಎಂಬುದು. ಇದು ಕೂಡಾ ಅಷ್ಟಾಗಿ ಬಳಕೆಯಾಗಲಿಲ್ಲ.
ಮಾಧ್ಯಮದವರ ಈ ಬದಲಾವಣೆಯನ್ನು ಧನಾತ್ಮಕ ಪರಿವರ್ತನೆ ಎಂದು ಭಾವಿಸುವುದು ತಪ್ಪಾಗುತ್ತದೆ. ನಮ್ಮ ದೇಶದ ಸಮೂಹ ಮಾಧ್ಯಮಗಳು ಬಂಡವಾಳಶಾಹಿಗಳ ನಿಯಂತ್ರಣದಲ್ಲಿರುವುದು ವಾಸ್ತವ.

ಬಂಡವಾಳವಾದಿಗಳಿಗೆ ಬಿಜೆಪಿ ಅತ್ಯಂತ ಅಪ್ಯಾಯಮಾನ ಪಕ್ಷ. ಆದ್ದರಿಂದಲೇ ಆ ಪಕ್ಷದ ಸೋಲಿನ ಕುರಿತು ಹೆಚ್ಚಿನ ಟೀಕೆ ಮಾಡಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾಧ್ಯಮ ದೊರೆಗಳು ಇಷ್ಟ ಪಡುವುದಿಲ್ಲ. ಕಾಂಗ್ರೆಸ್ ಕೂಡಾ ಬಂಡವಾಳಶಾಹಿಗಳ ಪರವಾಗಿಯೇ ಇರುವ ಪಕ್ಷ. ಕಾಂಗ್ರೆಸ್ ಮತ್ತು ಬಿಜೆಪಿಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಖಾಸಗೀಕರಣವನ್ನು ನಡೆಸುತ್ತಿರುವ ವೇಗ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಾರಂಭವಾದ ಖಾಸಗೀಕರಣದ ವೇಗ ನಿಧಾನ ( ಗಂಟೆಗೆ 10 ಕಿ.ಮೀ ವೇಗ ಎನ್ನೋಣ) ಆದರೆ ಬಿಜೆಪಿ ಖಾಸಗೀಕರಣದ್ದು ಅತಿ ವೇಗ ( ಗಂಟೆಗೆ 110 ಕಿ.ಮೀ).


ಈ ಪಕ್ಷಗಳ ನಡುವೆ ಅರವಿಂದ ಕೇಜ್ರಿವಾಲಾರವರ ಆಮ್ ಆದ್ಮಿ ಪಕ್ಷದ ವೇಗ ಇನ್ನೂ ಸ್ಪಷ್ಟವಾಗಬೇಕಿದೆಯಾದರೂ ಅದು ಕೂಡ ಖಾಸಗೀಕರಣದ ಪರವಾಗಿಯೇ ಇರುವ ಪಕ್ಷ ಎಂಬುದು ಸ್ಪಷ್ಟ.
ದೆಹಲಿಯ ಚುನಾವಣೆಯಲ್ಲಿ ಆಮ್‍ಆದ್ಮಿ ಪಕ್ಷದ ಗೆಲುವಿಗೆ ಸೂಚಿತವಾಗಿರುವ ಕಾರಣಗಳಲ್ಲಿ ದೆಹಲಿಯ ಸರ್ಕಾರಿ ಶಾಲೆಗಳ ಸುಧಾರಣೆ ಪ್ರಮುಖವಾದದ್ದು. ಸರ್ಕಾರಿ ಶಾಲೆಗಳ ಮಟ್ಟವನ್ನು ಏರಿಸಲು ಸಾಧ್ಯ. ಖಾಸಗಿ ಕ್ಷೇತ್ರದ ಶಾಲೆಗಳ ಸಮಾನಕ್ಕೇರಿಸಲೂ ಬಹುದೆಂಬುದನ್ನು ಸಾಧಿಸಿರುವುದನ್ನು ಗಮನಿಸದಿರಲು ಸಾಧ್ಯವೇ ಇಲ್ಲ. ಅಮೇರಿಕಾದ ಅಧ್ಯಕ್ಷರ ಶ್ರೀಮತಿಯವರು ಸರ್ಕಾರಿ ಶಾಲೆಗೆ ಭೇಟಿ ನೀಡಿರುವುದು ಗಣನೀಯವೇ ಸರಿ.
ಆದರೂ, ಈ ವಿಷಯದಲ್ಲಿ ಎರಡು ಸಂಗತಿಗಳು ಎದ್ದು ಕಾಡುತ್ತವೆ. ಮೊದಲನೆಯದಾಗಿ ಖಾಸಗಿ ಶಾಲೆಗಳು ನಡೆಸುತ್ತಿರುವ ಶೋಷಣೆಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದು. ಅತಿ ಎನ್ನುವಷ್ಟು ಶುಲ್ಕ ಆಕರಣೆ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ಸಂಸ್ಥೆಗಳು ದೆಹಲಿ ಸರ್ಕಾರ ಲೀಸ್ ಮೇಲೆ ನೀಡಿರುವ ಭೂಮಿಯನ್ನೇ ಬಳಕೆ ಮಾಡಿಕೊಳ್ಳುತ್ತಿವೆ. ಈ ಅಂಶವನ್ನೂ ಗಮನದಲ್ಲಿರಿಸಿಕೊಂಡು ಶೋಷಕ ಶಿಕ್ಷಣ ಸಂಸ್ಥೆಗಳ ಮೇಲೆ ನಿಯಂತ್ರಣ ಕ್ರಮ ಕೈಗೊಳ್ಳಲು ಸಾಧ್ಯವೆಂದು ದೆಹಲಿಯ ಹಲವು ನಾಗರಿಕರು ಅಭಿಪ್ರಾಯ ಪಡುತ್ತಾರೆ.


ಎರಡನೇಯದೆಂದರೆ ಶಿಕ್ಷಣದ ಗುಣಮಟ್ಟದಲ್ಲಿ ಆಗಬೇಕಾದ ಮೂಲಭೂತ ಬದಲಾವಣೆ. ಖಾಸಗಿ ಶಿಕ್ಷಣ ಸಂಸ್ಥೆಗಳು, ಕಾರ್ಪೋರೇಟ್ ವಲಯಕ್ಕೆ ಬೇಕಾಗುವ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸುವ ಕಾರ್ಖಾನೆಗಳಾಗಿವೆ. ಈ ಪ್ರಕ್ರಿಯೆಯಲ್ಲಿ ತಾವೂ ಕೂಡ ಹಣ ಗಳಿಸುತ್ತವೆ. ಅಂತಹ ಶಾಲಾ, ಕಾಲೇಜುಗಳಲ್ಲಿ ಕೂಡಾ ಯೋಗ, ಧ್ಯಾನ ಮುಂತಾದವುಗಳನ್ನು ಕಲಿಸಲಾಗುತ್ತದೆ. ಆದರೆ, ಅವುಗಳ ಉದ್ದೇಶ ವಿದ್ಯಾರ್ಥಿಗಳ ಮನಸ್ಸನ್ನು ಶಾಂತಗೊಳಿಸಿ, ಅವರಲ್ಲಿ ಗುಲಾಮಗಿರಿ ಭಾವವನ್ನು ತುಂಬುವುದೇ ಆಗಿದೆ. ತಾನು ಶಿಕ್ಷಣ ಪಡೆದು, ಯಾವುದೋ ಕಂಪನಿಯಲ್ಲಿ ಕೆಲಸ ಪಡೆದು, ಹೆಚ್ಚೆಚ್ಚು ಸಂಬಳ ಪಡೆಯುತ್ತ ಕಂಪನಿಯನ್ನು (ಅಂದರೆ ಖಾಸಗೀಕರಣವನ್ನು) ಗಟ್ಟಿಗೊಳಿಸಬೇಕೆಂಬ ಭಾವವನ್ನು ಪರೋಕ್ಷವಾಗಿ ಬೆಳೆಸಲಾಗುತ್ತಿದೆ. ಇದರ ಪರಿಣಾಮವೆಂದರೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ, ಸಮಾಜದ ಇತರರೊಂದಿಗೆ ಸಹಜವಾಗಿ ಬೆರೆಯಲಾರದ ಮೇಲರಿಮೆ, ಅನಗತ್ಯವಾದ ಸ್ಪರ್ಧಾತ್ಮಕ ಮನೋಭಾವದ ಬೆಳವಣಿಗೆಯಿಂದಾಗಿ ಇತರರನ್ನು ಪ್ರೀತಿಸಲಾರದ, ಸಹಿಸಲಾರದ , ವೈರಿಗಳೋಪಾದಿಯಲ್ಲಿ ನೋಡುವ ಸ್ಥಿತಿ ನಿರ್ಮಾಣವಾಗಿದೆ.


ಬ್ರಿಟಿಷರ ಬಳುವಳಿಯ ಶಿಕ್ಷಣ ಪದ್ಧತಿಯ ಮುಂದುವರಿಕೆಯಾದ ಇಂದಿನ ಶಿಕ್ಷಣ ಪದ್ಧತಿಯನ್ನು ಖಾಸಗಿ ಕ್ಷೇತ್ರದವರು ಒಂದು ಉದ್ಯಮವನ್ನಾಗಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕೂಡಾ ಇದೇ ವಿಧದ ಶಿಕ್ಷಣ ನೀಡುವ ಬದಲಿಗೆ ಭಾರತೀಯ ಶಿಕ್ಷಣ ಪದ್ಧತಿಯನ್ನು ಅನುಷ್ಠಾನಗೊಳಿಸಲು ಕೇಜ್ರಿವಾಲರವರು ಪ್ರಯತ್ನಿಸಲಿಲ್ಲವೆಂಬ ಆಕ್ಷೇಪ ಹಲವರದು. ಆತ್ಮವಿಶ್ವಾಸದಿಂದ ಬದುಕನ್ನು ರೂಢಿಸಿಕೊಳ್ಳುವ ಶಿಕ್ಷಣ ಪದ್ಧತಿಯನ್ನು ದೆಹಲಿಯ ಮುಖ್ಯಮಂತ್ರಿಯವರು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತರುತ್ತಾರೆಂದು ನಿರೀಕ್ಷಿಸುವ ಯಾವ ಸೂಚನೆಯೂ ಅವರ ಕಾರ್ಯಸೂಚಿಯಲ್ಲಿ ಕಂಡು ಬರುತ್ತಿಲ್ಲ.


ಯಾಕೆಂದರೆ, ಕೇಜ್ರಿವಾಲಾರವರ ಆಮ್ ಆದ್ಮಿ ಪಕ್ಷವು ಬಂಡವಾಳವಾದಿ ಚೌಕಟ್ಟಿನಾಚೆಗೆ ಚಿಂತಿಸುತ್ತಿಲ್ಲ. ಅಪರಾಧ ಹಿನ್ನೆಲೆಯ ಎಮ್ಮೆಲ್ಲೆಗಳು, ಪಕ್ಷಾಂತರಿಗಳಿಗೆ ಟಿಕೆಟ್ ನೀಡಿಕೆ ಮುಂತಾದ ವಿಷಯಗಳಲ್ಲಿ ಇತರ ರಾಜಕೀಯ ಪಕ್ಷಗಳ ರೀತಿಯಲ್ಲೇ ಆಪ್‍ನ ವರ್ತನೆಯಿದೆ. ಚುನಾವಣೆಯಲ್ಲಿ ಹರಿದ ಹಣದ ಮೂಲ ಕೂಡಾ ಅವೇ ಆಗಿವೆ.


ನಗರವಾಸಿಗಳ ನಿರೀಕ್ಷೆಗಳನ್ನು ಗುರ್ತಿಸುವಲ್ಲಿ ಕೇಜ್ರಿವಾಲಾರವರು ಯಶಸ್ವಿಯಾಗಿರುವುದು ಚುನಾವಣೆಯಲ್ಲಿ ಅವರ ಸಫಲತೆಗೆ ಕಾರಣ. ಒಂದು ಹಂತದವರೆಗೆ ಉಚಿತ ವಿದ್ಯುತ್, ಉಚಿತ ನೀರು ಮುಂತಾದ ಜನಪ್ರಿಯ ಕಾರ್ಯಕ್ರಮಗಳ ಅನುಷ್ಠಾನದಿಂದ ಮತದಾರರ ಮನ ಗೆಲ್ಲಲು ಆಪ್ ಯಶಸ್ವಿಯಾಗಿದೆಯೆಂಬುದು ನಿಚ್ಚಳ. ಆದರೆ ಇಂತಹ ಕಾರ್ಯಕ್ರಮಗಳು ದೀರ್ಘಾವಧಿಯಲ್ಲಿ ಸಮಾಜಕ್ಕೆ ಹಿತಕಾರಿಯೇ ಎಂಬ ಕುರಿತು ಯೋಚಿಸಲೇಬೇಕಾಗಿದೆ.


ಸಮ ಮತ್ತು ಬೆಸ ಸಂಖ್ಯೆಯ ನೋಂದಾಯಿತ ವಾಹನಗಳ ಬಳಕೆಯನ್ನು ವಾರದ ನಿರ್ದಿಷ್ಟ ದಿನಗಳಿಗೆ ಮಿತಗೊಳಿಸಿ ದೆಹಲಿಯ ವಾಯುಮಾಲಿನ್ಯವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದೇವೆಂಬ ಕೇಜ್ರಿವಾಲಾರವರ ಹೇಳಿಕೆಯನ್ನು ಬಡಾಯಿ ಎನ್ನುವುದೇ ಸೂಕ್ತವೆಂಬುದು, ದೆಹಲಿಯ ವಾಯುಮಾಲಿನ್ಯವನ್ನು ಗಮನಿಸುವವರಿಗೆ ಅರ್ಥವಾಗುತ್ತದೆ.


ಮುಖ್ಯ ರಸ್ತೆಗಳು ಚೆನ್ನಾಗಿದ್ದರೂ ನಗರದ ಒಳ ರಸ್ತೆಗಳ ಪರಿಸ್ಥಿತಿ, ಬಿದ್ದಿರುವ ಕಸದ ರಾಶಿಗಳನ್ನು ನೋಡಿದವರಿಗೆ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಬಹಳಷ್ಟಿದೆಯೆಂಬುದರ ಅರಿವಾಗುತ್ತದೆ.


ದೆಹಲಿ ಬೆಳೆಯುತ್ತಿದೆ, ಪಕ್ಕದ ರಾಜ್ಯಗಳ ಗಡಿರೇಖೆಗಳನ್ನು ದಾಟಿಯೂ ದೆಹಲಿ ಬೆಳೆಯುತ್ತಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಸ್ವತಂತ್ರವಾಗಿ ಹೊಂದಿರದ ರಾಜ್ಯವಾದ ದೆಹಲಿಗೆ ಕೃಷಿಯ ಚಿಂತೆಯಿಲ್ಲ. ಗ್ರಾಮೀಣ ಅಭಿವೃದ್ಧಿಯ ಹೊಣೆಗಾರಿಕೆಯಿಲ್ಲ, ಆದರೂ ಉದ್ಯೋಗ ಸೃಷ್ಟಿಯ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ಒಂದರ್ಥದಲ್ಲಿ ದೆಹಲಿ ರಾಜ್ಯವೆಂದರೆ ಮಹಾನಗರ ಪಾಲಿಕೆಯ ಮುಂದಿನ ಹಂತವೇ ಆಗಿದೆ.


ಕೆಲವು ರಾಜ್ಯಗಳಲ್ಲಿ ಆಪ್‍ನ ಅಸ್ತಿತ್ವವಿದೆ. ಸರ್ಕಾರದ ಉನ್ನತ ಹುದ್ದೆಗೆ ರಾಜೀನಾಮೆ ನೀಡಿ, ಭ್ರಷ್ಟಾಚಾರ ವಿರೋಧಿ ಅಲೆಯಲ್ಲಿ ಅಧಿಕಾರಕ್ಕೇರಿದ ಅರವಿಂದ ಕೇಜ್ರೀವಾಲರ ಆಪ್ ಏಕವ್ಯಕ್ತಿ ಪಕ್ಷವಾಗುತ್ತಿದೆ. ಕೇಜ್ರಿವಾಲಾರವರ ವರ್ಚಸ್ಸೊಂದನ್ನೇ ಅವಲಂಬಿಸಿ, ರಾಜ್ಯದ, ದೇಶದ ಅಭಿವೃದ್ಧಿ ಸಾಧಿಸುತ್ತೇವೆಂದು ನಂಬುವುದು ವ್ಯಾವಹಾರಿಕವಾಗಲಾರದು.


ದುಡಿಯುವ ಸಾಮಥ್ರ್ಯ ಇರುವ ಪ್ರತಿಯೋರ್ವ ವ್ಯಕ್ತಿಗೂ ದುಡಿಮೆಯ ಅವಕಾಶ ಸೃಷ್ಟಿಸುವ , ದುಡಿಮೆಯ ಪ್ರತಿಫಲದಿಂದ ದುಡಿಮೆಗಾರ ಮತ್ತು ಅವರ ಅವಲಂಬಿತರ ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ , ಔಷಧೋಪಚಾರಗಳನ್ನು ಪಡೆಯುವ ಅವಕಾಶ ನಿರ್ಮಿಸಬೇಕಾದುದು ಸರ್ಕಾರದ ಕರ್ತವ್ಯ. ಈ ಸೌಲಭ್ಯವನ್ನು ಪಡೆಯುವುದು ಪ್ರತಿಯೋರ್ವ ನಾಗರಿಕನ ನೈಸರ್ಗಿಕ ಹಕ್ಕು. ಆದರೆ, ತಮ್ಮ ಈ ಹಕ್ಕಿನ ಅರಿವು ಹೆಚ್ಚಿನವರಿಗೆ ಇಲ್ಲದಿರುವ ಕಾರಣದಿಂದ ಸರ್ಕಾರ ನೀಡುವ ದಯಾಭಿಕ್ಷೆಯಿಂದಲೇ ಅವರು ತೃಪ್ತರು. ಈ ಕುರಿತಾಗಿ ಆಪ್ ಪಕ್ಷಕ್ಕೆ ಸ್ಪಷ್ಟ ವಿಚಾರ ಅಥವಾ ಕಾರ್ಯಕ್ರಮವಿಲ್ಲ.


ಕೃಷಿರಂಗದ ಸಮಸ್ಯೆಗಳು, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಲು ಬೇಕಾದ ಕಾರ್ಯಸಾಧ್ಯ ಯೋಜನೆಗಳು ಆಪ್ ಬಳಿ ಇಲ್ಲ. ಕೃಷಿ ರಂಗದ ಮೇಲಿನ ಅತಿಯಾದ ಅವಲಂಬನೆಯನ್ನು ತಗ್ಗಿಸಿ, ಪರ್ಯಾಯ ಉದ್ಯೋಗ ಕಲ್ಪಿಸುವ ಯೋಜನೆಗಳು ಆಪ್‍ನಲ್ಲಿ ಇಲ್ಲ.


ಮೊಹಲ್ಲಾ ಕ್ಲಿನಿಕ್‍ಗಳು ಉಪಯುಕ್ತವೆಂಬುದು ನಿಜ. ಆದರೆ ಔಷಧ ತಯಾರಿಕರ ಪ್ರಬಲ ಲಾಭಿಯನ್ನು ಹಿಮ್ಮೆಟ್ಟಿಸುವ ಸಾಮಥ್ರ್ಯ ಅವಕ್ಕಿಲ್ಲ. ಜನರನ್ನು ಶೋಷಿಸುತ್ತಿರುವ ಔಷದೋಪಚಾರ ಕ್ಷೇತ್ರದ ಹೈಟೆಕ್ ಲಾಬಿಗಳನ್ನು ಮಣಿಸಿ ಜನಪರವಾಗಿಸುವ ಚಿಂತನೆಯನ್ನು ಆಪ್ ಹೊಂದಿಲ್ಲ.


ಸ್ಥಳೀಯರಿಗೇ ಉದ್ಯೋಗಾವಕಾಶಗಳ ಮೀಸಲಾತಿಯೆಂಬ ವಿಚಾರ ಇಂದು ಜನಪ್ರಿಯವಾಗುತ್ತಿದೆ; ಪ್ರಾದೇಶಿಕವಾದ ಬೆಳೆಯುತ್ತಿದೆ. ಈ ಜನಾಂದೋಲನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅರ್ಥವ್ಯವಸ್ಥೆಯನ್ನು ಬಲಪಡಿಸುವ , ಈ ಭಾವನೆಗಳು ಸಂಕುಚಿತವಾಗದೇ ವಿಶಾಲ ಮನೋಭಾವ ತಳೆಯುವಂತೆ ಪರಿವರ್ತಿಸುವ ಕುರಿತು ಆಪ್ ಬಳಿ ವಿಚಾರಧಾರೆಯಿಲ್ಲ.


ಭ್ರಷ್ಟಾಚಾರದ ವಿರೋಧಿ ಅಲೆಯನ್ನೇರಿ ಅಧಿಕಾರಕ್ಕೆ ಬಂದಿರುವ ಆಪ್ ಭ್ರಷ್ಟಾಚಾರವನ್ನು ತಡೆಗಟ್ಟುವ , ನಿಯಂತ್ರಿಸುವ ದೀರ್ಘಕಾಲೀನ ಕಾರ್ಯಕ್ರಮಗಳನ್ನು ಪ್ರಾರಂಭಿಸಿಲ್ಲ. ಆ ಕುರಿತು ಅವರ ಬಳಿ ಸಿದ್ಧಾಂತವೂ ಇಲ್ಲ. ಬಿಜೆಪಿಯ ಹುಸಿ ರಾಷ್ಟ್ರೀಯವಾದ, ಮತೀಯ ದ್ವೇಷಗಳನ್ನು ಎದುರಿಸುವ ಧನಾತ್ಮಕ ಚಿಂತನೆ, ಕಾರ್ಯಯೋಜನೆಗಳು ಅರವಿಂದರ ಬಳಿ ಇಲ್ಲದಿರುವುದರಿಂದಲೇ ಈ ಕುರಿತು ಅವರು ಮೌನವಹಿಸಿದ್ದಾರೆ. ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಅಥವಾ ಅವಕ್ಕೆ ಪ್ರತಿಕ್ರಿಯಿಸದಿರುವುದೇ ಪರಿಹಾರವಲ್ಲ.


ನಗರವಾಸಿಗಳ ನಾಡಿ ಮಿಡಿತವನ್ನು ಸರಿಯಾಗಿ ಗ್ರಹಿಸಿ, ಚುನಾವಣೆಯಲ್ಲಿ ಗೆದ್ದು ದೆಹಲಿ ಗದ್ದುಗೆಯನ್ನು ಮೂರನೇ ಬಾರಿ ಏರಿರುವ ಅರವಿಂದ ಕೇಜ್ರಿವಾಲಾರವರ ಕುರಿತು ಕ್ರೇಝಿಗಳಾಗಿರುವವರು ಪ್ರತಿಪಾದಿಸುತ್ತಿರುವಂತೆ , ಭಾರತದ ಸಮಸ್ಯೆಗಳನ್ನು ಪರಿಹರಿಸುವ ಸಾಮಥ್ರ್ಯ ಆಪ್‍ಗೆ ಇದೆಯೇ ಎಂಬುದನ್ನು ವಸ್ತುನಿಷ್ಟವಾಗಿ ವಿಶ್ಲೇಷಿಸುವುದು ಇಂದಿನ ಅವಶ್ಯಕತೆ.

*******************************

Leave a Reply

Back To Top