ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಸಫಲ ಜೀವನದ ಸೋಪಾನ

“ಇಂದಿನ ಮಕ್ಕಳೇ ಇಂದಿನ ಪ್ರಜೆಗಳು” ಎಂಬ ಮಾತಿನಂತೆ ಮಕ್ಕಳು ಸಮಾಜದೊಂದಿಗೆ ಹೊಂದಿಕೊಂಡು ಬಾಳಲು ಬೇಕಾದ,ಮೌಲ್ಯಗಳನ್ನು ಬೆಳೆಸಲು ಶಿಕ್ಷಣವು ಅಸ್ತ್ರವಾಗಿದೆ.” ಹೊಸ ನೀರು ಹರಿಯುವಾಗ ಹಳೆಯ ನೀರು ಕೊಚ್ಚಿಕೊಂಡು ಹೋಗುವಂತೆ ನಿರಂತರತೆಯಿಂದ ನಾವಿನ್ಯತೆ ಉಂಟಾಗುತ್ತದೆ.ಈ ನಾವಿನ್ಯತೆಯೇ ಬದಲಾವಣೆ.ಇದೇ ಜಗದ ನಿಯಮವಾಗಿದೆ. ಪ್ರತಿ ಮಗುವು ನಮ್ಮ ದೇಶದ ಉನ್ನತವಾದ ಮಾನವ ಸಂಪನ್ಮೂಲವಾಗಿದೆ. ಒಂದು ದೇಶದ ಪ್ರಗತಿಯಲ್ಲಿ ಆರ್ಥಿಕ ಸಂಪನ್ಮೂಲ ,ನೈಸರ್ಗಿಕ ಸಂಪನ್ಮೂಲ ಹೇಗೆ ಮುಖ್ಯವೋ ಮಾನವ ಸಂಪನ್ಮೂಲ ಕೂಡ ಮುಖ್ಯವಾಗಿದೆ. ಇಂತಹ ಮಾನವ ಸಂಪನ್ಮೂಲ ನಿರ್ಮಾಣದಲ್ಲಿ ಕುಟುಂಬ ಹಾಗೂ ಶಾಲೆಯ ಪಾತ್ರ ತುಂಬ ಮುಖ್ಯವಾಗಿದೆ.
ಜ್ಞಾನದ ಹಂಬಲ ಮತ್ತು ತುಡಿತ ಹೊಂದಿರುವ ಮುದ್ದು ಮಕ್ಕಳ ಭವಿತವ್ಯದ ಕನಸ ಹೊಸೆದು ನನಸಾಗಿಸುವ ಪಯಣದಲ್ಲಿ ಪರಿಪಕ್ವತೆಯ ತೆರದಿ ಕಾಲಘಟ್ಟದ ಅಪೇಕ್ಷೆಗಳ ಓರೆಕೋರೆಗಳನ್ನು ಪೂರ್ವಭಾವಿಯಾಗಿ ಅರಿಯುವದು ತುಂಬಾ ಅವಶ್ಯಕವಾಗಿದೆ.ಶಿಲ್ಪದ ಚಲುವು ಇರುವದು ಶಿಲ್ಪಿಯ ಉಳಿಏಟಿನ ಕೌಶಲ್ಯದಲ್ಲಿ ಆ ಉಳಿ ಏಟನ್ನು ಸಹಿಸುವ ಸಂಯಮದ ಪರಿಸರವನ್ನು ಹೆತ್ತವರು ಕಲ್ಪಿಸಿಕೊಡಬೇಕಿದೆ.

ಒಮ್ಮೆ ಪಾಲಕರೊಬ್ಬರು ಅನಿವಾರ್ಯವಾಗಿ ಯಾವುದೋ ಕೆಲಸಕ್ಕೆ ತಮ್ಮ ಶಾಲಾ ಪ್ರಮಾಣ ಪತ್ರ ಅವಶ್ಯವಿದ್ದ ಕಾರಣ ಅದನ್ನು ಪಡೆದು ತಮ್ಮ ಮಗುವಿನ ಶೈಕ್ಷಣಿಕ ಪ್ರಗತಿಯ ಬಗ್ಗೆ ವಿಚಾರಿಸಲು ತರಗತಿಗೆ ಬಂದಾಗ ನಾನು ಮಕ್ಕಳಿಗೆ ಭಾಷೆಗೆ ಸಂಬಂಧ ಪಟ್ಟ ಚಟುವಟಿಕೆ ಮಾಡಿಸುವುದರಲ್ಲಿ ಮಗ್ನಳಾಗಿದ್ದೆ.ಎಲ್ಲಾ ಮಕ್ಕಳಿಗೂ ಚಿಕ್ಕ ಚಿಕ್ಕ ಚೀಟಿಗಳಲ್ಲಿ ಒಂದೊಂದು ವಸ್ತುವಿನ ಹೆಸರನ್ನು ಬರೆದು ಅದನ್ನು ಮಡಿಚಿ ಒಂದು ರಟ್ಟಿನ ಪೆಟ್ಟಿಗೆಯಲ್ಲಿ ಹಾಕಿ ಅವುಗಳನ್ನು ಮೇಲೆಕೆಳಗೆಮಾಡಿ ಪ್ರತಿಯೊಬ್ಬರ ಮುಂದೆ ಹಿಡಿದಾಗ ಪ್ರತಿ ಮಗು ಒಂದೊಂದು ಚೀಟಿಯನ್ನು ತೆಗೆದುಕೊಂಡು ನಂತರ ಬಿಡಿಸಿ ಓದಿ ಅದರಲ್ಲಿ ಬರೆದ ವಿಷಯಕ್ಕೆ ಸಂಬಂಧಿಸಿದಂತೆ ತಮಗೆ ತಿಳಿದಂತೆ ಮಾತನಾಡಬೇಕಿತ್ತು. ಆ ಪಾಲಕರು ಒಳಗೆ ಬರುವುದಕ್ಕೂ ಅವರ ಮಗ ಚೀಟಿಯನ್ನು ತೆಗೆದು ನೋಡುವುದಕ್ಕೂ ಸರಿಯಾಯಿತು.


“ಮೇಡಂ ನಮ್ಮ ಮಗ ಮನೆಗೆ ಬಂದು ಅಭ್ಯಾಸ ಮಾಡುವುದೇ ಇಲ್ಲ,ನೀವಾದರೂ ಹೇಳಿ”ಎಂದಾಗ ಎಲ್ಲರ ದೃಷ್ಟಿ ಅವನತ್ತ ಹರಿಯಿತು.
“ಹಾಗಾದರೆ ಏನು ಮಾಡ್ತಾನೆ?” ಅಂತ ಕೇಳಿದೆ.ಆಟ ಆಡಿ ಬಂದು ಬರೆಯುವದನ್ನು ಮುಗಿಸಿ ಸ್ವಲ್ಪ ಹೊತ್ತು ಮೊಬೈಲ್ ನಲ್ಲಿ ಆಡುತ್ತಾನೆ ನಂತರ ಟಿ.ವಿ ನೋಡುತ್ತಾನೆ.ಓದುವುದೇ ಇಲ್ಲ”ಎಂದು ಹೇಳಿದರು. “ಮೊಬೈಲನ್ನು ಏಕೆ ಕೊಡುತ್ತೀರಿ” ?ಅಂದಾಗ ಆ ಪಾಲಕರು “ಕೊರೊನಾ ಮಹಾಮಾರಿ ಬಂದಾಗ ನೀವೇ ಹೇಳಿದ್ರಲ್ಲ ಮೇಡಂ ಆನ್ಲೈನ್ ಕ್ಲಾಸ್ ಗೆ ಬೇಕು ಅಂತ. ಈಗ ಆನ್ಲೈನ್ ಕ್ಲಾಸಿಲ್ಲ, ಕೊರೊನಾ ಇಲ್ಲ ಆದರೆ ಅಂದಿನಿಂದ ಇಂದಿನವರೆಗೂ ಮೊಬೈಲ ಇವನ ಆಟಿಗೆಯಂತಾಗಿದೆ ಮೇಡಂ, ಗೇಮ್ಗಗಳನ್ನು ಆಡುವದು, ಅದರಲ್ಲಿ ಚಲನಚಿತ್ರಗಳನ್ನು ನೋಡುವದು,ಒಂದು ವೇಳೆ ಮೊಬೈಲ್ ಕರೆನ್ಸಿ ಮುಗಿದರೆ ಅದನ್ನು ಹಾಕುವವರೆಗೂ ಊಟ ಮಾಡುವದಿಲ್ಲ ಹೀಗಾದರೆ ಅವನ ಭವಿಷ್ಯ ಹೇಗೆ ಮೇಡಂ? ಎಂದು ದುಃಖದಿಂದ ಹೇಳುವಾಗ ಅವರ ಕಣ್ಣಲ್ಲಿ ನೀರು ಜಿನುಗಿತು. ಇರುವ ಒಬ್ಬ ಮಗನ ಭವಿಷ್ಯದ ಕುರಿತು ಚಡಪಡಿಕೆ ಅವರ ಮನವನ್ನು ಘಾಸಿಗೊಳಿಸಿತ್ತು.”ನೋಡಿ ಅಂದಿನ ಸನ್ನಿವೇಶಕ್ಕೆ ಅದು ಅನಿವಾರ್ಯವಾಗಿತ್ತು.ಈಗ ಅದರ ಬಳಕೆಗೆ ಪಾಲಕರಾದ ನೀವು ಕಡಿವಾಣ ಹಾಕಬೇಕಿದೆ.ಮಕ್ಕಳ ಮನಸು ಹೂವಿನಂತೆ ಮೃದು ಒಮ್ಮೇಲೆ ದುಡುಕದೇ ನಿಧಾನವಾಗಿ ಅದರ ಬಳಕೆಯನ್ನು ಮಿತಗೊಳಿಸಬೇಕು ಮುಖ್ಯವಾಗಿ ಪಾಲಕರಾದ ನೀವು ಕೂಡ. ಯಾಕೆಂದರೆ ಮಕ್ಕಳು ತಮ್ಮ ಪಾಲಕರನ್ನು ಅನುಸರಿಸುತ್ತಾರೆ ಎಂದಾಗ ಅವರು”ನಿಜ ಮೇಡಂ ಅವರ ತಾಯಿ ನೋಡುವ ಧಾರಾವಾಹಿಯನ್ನು ನೋಡುತ್ತಾನೆ.ಅವನ ತಾಯಿ ಅಭ್ಯಾಸದ ಕೊಠಡಿಯಲ್ಲಿ ಹೋಗಿ ಅಭ್ಯಾಸ ಮಾಡೆಂದರೂ ಕೇಳುವದಿಲ್ಲ. ಓದುವದಿಲ್ಲ ಬರೀ ಬರೆಯುವದಿದೆ ಎಂದು ನೋಡುತ್ತಾ ಬರೆಯುತ್ತಾನೆ ಮೇಡಂ ಎಂದರು.ಆಗ ನಾನು ” ನೋಡಿ ನಾನು ಈಗಾಗಲೇ ಹೇಳಿದೆ ನಮ್ಮ ಮಕ್ಕಳು ನಮ್ಮನ್ನು ಅನುಸರಿಸುತ್ತಾರೆ ಎಂದು, ನಿಮ್ಮ ಶ್ರೀಮತಿಗೂ ಕೂಡ ಮಗನ ಭವಿಷ್ಯದ ಕುರಿತು ಕನಸು ಇರುತ್ತದೆ. ಮಗನ ಅಭ್ಯಾಸದ ವೇಳೆಯಲ್ಲಿ ಅವನನ್ನು ಪ್ರೋತ್ಸಾಹಿಸಿ ಅವನ ಶಿಕ್ಷಕರು ನೀಡಿದ ಮನೆಕೆಲಸದ ಬಗ್ಗೆ ವಿಚಾರಿಸಿ ಅದನ್ನು ಪೂರ್ತಿಗೊಳಿಸಿದ್ದಾನೋ ಇಲ್ಲೋ? ಪೂರ್ತಿಗೊಳಿಸದಿದ್ದರೆ ಯಾಕೆ ಪೂರ್ತಿಗೊಳಿಸಿಲ್ಲ? ಎಂದು ವಿಚಾರಿಸಬೇಕು. ಪೂರ್ತಿಗೊಳಿಸಿದ್ದರೆ ಅದರ ಬಗ್ಗೆ ಪ್ರಶ್ನಿಸಿ ಓದಿಸಬೇಕಾದ ಅವಶ್ಯಕತೆ ಹೊಣೆ ಪಾಲಕರಾದ ನಿಮ್ಮ ಮೇಲೂ ಇದೆ” ಎಂದಾಗ ಪಾಲಕರ ಮುಖದ ಮೇಲೆ ಸಂತಸದ ನಗೆ ಚಿಮ್ಮಿ ನೀವು ಹೇಳಿದಂತೆ ಮಾಡುವೆ ಮೇಡಂ ಎಂದು ಹೇಳಿಹೊರಟರು. ನಂತರ ಆ ಹುಡುಗನಿಗೆ ಚೀಟಿಯಲ್ಲಿ”ತಂದೆತಾಯಿ”ಎಂದು ಬರೆದಿತ್ತು. ಅದರ ಬಗ್ಗೆ ಅವನು ಮಾತನಾಡಿದ ಏನೆಂದರೆ “ನಾವು ತಂದೆತಾಯಿಯರನ್ನು ಗೌರವಿಸಬೇಕು ಅವರ ಮಾತನ್ನು ಕೇಳಬೇಕು ಅವರಿಗೆ ಬೇಸರವಾಗುವ ರೀತಿ ನಡೆದುಕೊಳ್ಳಬಾರದು”ಎಂದು ಹೇಳಿದಾಗ ನನಗೆ ಅವನ ಬಗ್ಗೆ ಹೆತ್ತವರ ಕುರಿತಾದ ಹೆಮ್ಮೆಯನ್ನು ಕಂಡು ಆನಂದವಾಗಿ ತರಗತಿಯಲ್ಲಿಯ ಎಲ್ಲ ಮಕ್ಕಳಿಗೂ ಅವನಿಗೆಚಪ್ಪಾಳೆ ಹಾಕಲು ಹೇಳಿದಾಗ ಅವನ ನಗು ಕಂಡು ಹತ್ತಿರ ಕರೆದು ತಲೆಸವರಿ ನಿನ್ನ ತಂದೆತಾಯಿಗೆ ಬೇಸರವಾಗಬಾರದೆಂದರೆ “ಇವತ್ತಿನಿಂದ ನೀನು ಮೊಬೈಲ ಬಳಕೆ ಮಾಡಬಾರದು ಅಭ್ಯಾಸದ ಕೋಣೆಯಲ್ಲಿ ಅಭ್ಯಾಸ ಮಾಡಬೇಕು “ಎಂದು ಹೇಳಿದೆ.


ಹೀಗೆ ಪಾಲಕರ ನಿದ್ದೆಗೆಡಿಸುವ ಮಕ್ಕಳ ಮೊಬೈಲ ಗೀಳು ಅಶ್ಲೀಲ ದೃಶ್ಯಗಳನ್ನು ನೋಡುವ ತೆರದಿ ಮುಗ್ಧ ಮನಗಳಲಿ ವಿಕೃತತೆಯನ್ನು ಹುಟ್ಟುಹಾಕುತಿದೆ.
ಪ್ರಸಕ್ತ ವಿದ್ಯಮಾನಗಳನ್ನು ಅವಲೋಕಿಸಿದಾಗ ಅಪ್ರಾಪ್ತ ವಯಸ್ಸಿನ ಮಕ್ಕಳೇ ಬಲಿಯಾಗುತ್ತಿದ್ದಾರೆ. ಮಕ್ಕಳ ಮೇಲಿನ ಅತಿಯಾದ ನಂಬಿಕೆ ವ್ಯಾಮೋಹ ಕೂಡ ಇದಕೆ ಕಾರಣವಾಗಿದೆ.
ಸಂಭಾಷಣೆಗಾಗಿ ಬಳಸುತ್ತಿದ್ದ ಮೊಬೈಲ್ ಆಧುನಿಕ ತಂತ್ರ ಜ್ಞಾನದ ಪರಿಣಾಮವಾಗಿ ಸ್ಮಾರ್ಟ್ಫೋನಗಳಾದ ಮೇಲಂತೂ ಫೋಟೋ,ವಿಡಿಯೋ , ಸೆಲ್ಫಿಯ ಹುಚ್ಚು ಮಿತಿ ಮೀರಿ ಸಾಮಾಜಿಕ ಜಾಲತಾಣಗಳಲ್ಲಿ ಬಂಧುಗಳಿಗೆ ಸ್ನೇಹಿತರಿಗೆ ಬೇಕಾಬಿಟ್ಟಿಯಾಗಿ ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚಿ ಅದರ ಮಾಯಾ ಕೂಪದಲ್ಲಿ ಸಿಲುಕಿ ಬರಲಾರದ ಸ್ಥಿತಿ ಇಂದು ಯುವಕರ ಮಕ್ಕಳದಾಗಿದೆ.
ಅಮೇರಿಕಾದ ರಾಷ್ಟ್ರೀಯ ವೈದ್ಯಕೀಯ ಗ್ರಂಥಾಲಯ ನಡೆಸಿದ ಅಧ್ಯನದ ಪ್ರಕಾರ 2011ಮತ್ತು 2017ರ ನಡುವೆ ಸೆಲ್ಫಿ ತೆಗೆದುಕೊಳ್ಳುವಾಗ ಸಾವನ್ನಪ್ಪಿದ ಜನರ ಸಂಖ್ಯೆ259 ಆಗಿದೆ.

‌ ‌‌‌‌ನಾವು ಕಷ್ಟ ಪಟ್ಟು ಕಲಿತಿದ್ದೇವೆ ನಮ್ಮ ಮಕ್ಕಳು ಸುಖವಾಗಿರಲಿ ಎಂದು ಮಕ್ಕಳು ಬೇಡಿದುದನ್ನು ತಕ್ಷಣವೇ ಈಡೇರಿಸುವ ಪಾಲಕರು ಹೆಚ್ಚಿನ ಮೌಲ್ಯದ ವಸ್ತುಗಳನ್ನುಆರ್ಥಿಕ ಕಾರಣದಿಂದ ಕೊಡಿಸಲು ವಿಫಲರಾದಾಗ ಮಕ್ಕಳು ಅದನ್ನು ಸಹಿಸದೆ ಹಠಮಾರಿಗಳಾಗುವರಲ್ಲದೆ ಎಷ್ಟೋ ಆತ್ಮಹತ್ಯೆಯ ಪ್ರಕರಣಗಳನ್ನು ಕೂಡ ನೋಡಬಹುದು.
“ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೆ?”ಎಂಬಂತೆ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಹಠ ಮಾಡದಂತೆ ತಿದ್ದಿ ಬುದ್ದಿಹೇಳಬೇಕು. ಅವರಲ್ಲಿ ತಾನು ಬೇಡಿದ ವಸ್ತು ಚಿಕ್ಕದಾಗಿದ್ದರೂ ಪಡೆಯುವಾಗ ಅದು ತನ್ನ ತಂದೆಯ ಶ್ರಮದ ಫಲ ಅದನ್ನು ಹೇಗೆ ಜತನದಿಂದ ಬಳಸಬೇಕೆಂಬ ಮನೋಭಾವವನ್ನು ಮಗುವಿನಲ್ಲಿ ಬೆಳೆಸಬೇಕಿದೆ.ಇಲ್ಲಿ ಮಗು ಶ್ರಮದ ಬೆಲೆ, ಬಳಸುವ ಕಲೆ.ಅದರಿಂದಾದ ಅರಿವಿನ ನೆಲೆ ಹೀಗೆ ಪ್ರತಿಯೊಂದನ್ನು ತಿಳಿದು ಹೆತ್ತವರ ಕನಸನ್ನು ಪರಿಶ್ರಮ,ಶೃದ್ದೆಯಿಂದ ಸಾಕಾರಗೊಳಿಸುವ ಭರದಲ್ಲಿ ನೈತಿಕ ಮಾರ್ಗದಲ್ಲೇ ಸಾಗಬೇಕಿದೆ.
ಅಲ್ಬರ್ಟ ಐನ್ ಸ್ಟೈನ್ ಹೇಳುವಂತೆ”ಜಯ ಸಾಧಿಸಿದ ಮನುಷ್ಯನಾಗಲು ಮಾತ್ರ ಶ್ರಮಿಸದಿರಿ,ಬದಲಿಗೆ ಮೌಲ್ಯಾಧಾರಿತ ವ್ಯಕ್ತಿಯಾಗಲು ಶ್ರಮಿಸಿ” ಎಂಬ ಮಾತು ಶ್ಲಾಘನೀಯವಾಗಿದೆ.
ಭಾರತೀಯ ವಾಯುಪಡೆಯ ಆಯ್ಕೆ ಸಂದರ್ಶನದಲ್ಲಿಡಾ ಎ.ಪಿ.ಜೆ ಅಬ್ದುಲ ಕಲಾಂ ರವರು ಅನುತ್ತೀರ್ಣರಾಗಿ ಖೇದದಿಂದ ಕುಳಿತಾಗ ಅವರ ಬಾಡಿದ ಮುಖವನ್ನು ನೋಡಿದ ಶಿವಾನಂದ ಸ್ವಾಮಿಯವರು ” ಬಯಕೆ ಹೃದಯಾಂತರಾಳದಿಂದ ಚಿಮ್ಮಿದಾಗ ಅದು ವಿಶೇಷ ಶಕ್ತಿ ಪಡೆದು ತನ್ನ ಸುತ್ತಲಿನ ಜಗತ್ತಿನ ಮೇಲೆ ಪ್ರಭಾವ ಬೀರುತ್ತದೆ.ಬೇರೊಂದು ರೂಪದಲ್ಲಿ ಬಯಸಿದ್ದು ಕೈಗೂಡುತ್ತದೆ.ಇದು ವಾಸ್ತವ ಸತ್ಯ .ಇದೇ ಸೃಷ್ಟಿ ನಿಯಮ. ಮುಳುಗಿದ್ದ ಸೂರ್ಯ ತಪ್ಪದೇ ಮತ್ತೆ ಕಾಣಿಸಿಕೊಳ್ಳುವಂತೆ ಧೈರ್ಯಗೆಡಬೆಡ,ಭವಿಷ್ಯದಲ್ಲಿ ನಿನ್ನ ಬಯಕೆ ಈಡೇರುತ್ತದೆ” ಎಂದು ಸಂತೈಸಿದ ಮಾತು ಅವರ ಗುರಿಯನ್ನು ನಿಚ್ಚಳವಾಗುವಂತೆ ಮಾಡಿ ಆತ್ಮಸ್ಥೈರ್ಯವನ್ನು ತುಂಬಿತ್ತು.

ಮಕ್ಕಳ ಮೇಲೆ ಒತ್ತಡ ಹೇರಬಾರದು ಪ್ರೀತಿ ,ವಿಶ್ವಾಸದಿಂದ ಅವರನ್ನು ಪ್ರೋತ್ಸಾಹಿಸಬೇಕು. ಒಂದು ವೇಳೆ ಅವರ ಶೈಕ್ಷಣಿಕ ಪ್ರಗತಿ ನಿಗದಿತ ಗತಿಯಲ್ಲಾಗದಿದ್ದರೆ ಪಾಲಕರು ಆ ಮಕ್ಕಳ ದೈನಂದಿನ ಚಟುವಟಿಕೆಗಳನ್ನು ಅವಲೋಕಿಸಿ ವೇಳೆಯ ಮಹತ್ವ ತಿಳಿಸಿ ಕಷ್ಟ ಪಟ್ಟು ಕಲಿಯದೇ ಇಷ್ಟಪಟ್ಟು ಕಲಿಯುವಂತೆ ಪ್ರೇರೇಪಿಸಬೇಕು ಹಾಗೂ ಒಂದು ವೇಳೆ ಹಿಂದುಳಿದಿದ್ದರೆ ಶಿಕ್ಷಕರೊಂದಿಗೆ ಸಮಾಲೋಚಿಸಿ ಸಕಾರಾತ್ಮಕವಾಗಿ ಸ್ಪಂದಿಸುವಲ್ಲಿ ಪಾಲಕರ ಜವಾಬ್ದಾರಿ ತುಂಬಾ ಇದೆ.ಕೆಲವೊಮ್ಮೆ ಪಾಲಕರು ತಮ್ಮ ಮಕ್ಕಳ ಒಳಿತಿಗಾಗಿ ಶಿಸ್ತಿನ ಕ್ರಮ ಕೈಗೊಂಡ ಶಿಕ್ಷಕರ ವಿರುದ್ಧವೂ ರೇಗಾಡಿದ್ದಿದೆ.ಕುವೆಂಪುರವರು ಹೇಳುವಂತೆ” ಮಗು ಹುಟ್ಟುತ್ತ ದೇವಮಾನವ ಬೆಳೆಯುತ್ತ ಅಲ್ಪಮಾನವ ಅವನನ್ನು ಮತ್ತೆ ವಿಶ್ವ ಮಾನವನನ್ನಾಗಿಸುವ ಗುರುತರ ಜವಾಬ್ದಾರಿ ಶಿಕ್ಷಣದ್ದಾಗಿದೆ.ಈ ನಿಟ್ಟಿನಲ್ಲಿ ಪಾಲಕರು ಕೂಡ ಶಿಕ್ಷಕರೊಂದಿಗೆ ಕೈ ಜೋಡಿಸಿದರೆ ನಮ್ಮ ಮಕ್ಕಳು ಇಂದಿನ ಉತ್ತಮ ನಾಗರಿಕರಾಗುವಲ್ಲಿ ಸಂಶಯವಿಲ್ಲ.”ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು “ಎಂಬಂತೆ ಸಂಸ್ಕಾರದ ಅಡಿಪಾಯದ ಬೇರು ಮನೆಯಾಗಿರುತ್ತದೆ.ಕುಟುಂಬದಲ್ಲಿ ಆಚಾರ ವಿಚಾರಗಳು ಮಕ್ಕಳ ಮೇಲೆ ಅಗಾಧವಾದ ಪರಿಣಾಮಗಳನ್ನುಂಟು ಮಾಡುತ್ತವೆ.ಈ ನಿಟ್ಟಿನಲ್ಲಿ ಮನೆಯಲ್ಲಿ ಉತ್ತಮವಾದ ಪರಿಸರ ನಿರ್ಮಾಣ ಕೂಡ ಹೆತ್ತವರ ಕರ್ತವ್ಯ.

ಪಾಲಕರಾದ ನಾವು ಮಕ್ಕಳ ಕಲಿಕೆಗೆ ನಮ್ಮಿಂದಾದ ಆಗಲೇಬೇಕಾದ ಕರ್ತವ್ಯಗಳನ್ನು ಶಿರಸಾ ಪಾಲಿಸಬೇಕಾದ ಅವಶ್ಯಕತೆ ಇದೆ ಒಳ್ಳೆಯ ವ್ಯಕ್ತಿತ್ವ ನಿರ್ಮಾಣವಾಗದ ಹೊರತು ಶಿಕ್ಷಣಕ್ಕೆ ಅರ್ಥವೇ ಇಲ್ಲವೆಂಬುದು ರವೀಂದ್ರನಾಥ ಠಾಗೋರರ ವಾದವಾಗಿತ್ತು.ಅವರು ಹೇಳುವಂತೆ ಮಗುವಿನ ಆಸೆ ಕನಸುಗಳಿಗೆ ಧನಾತ್ಮಕವಾಗಿ ನೀರೆರೆದು ಪೋಷಿಸುವಂತೆ ಸಾಮಾಜಿಕ ಜೀವನಕ್ಕೆ ಅಣಿಗೊಳಿಸಬೇಕಾಗಿದೆ.ಈ ನಿಟ್ಟಿನಲ್ಲಿ ಒಳ್ಳೆಯ ವ್ಯಕ್ತಿತ್ವ ನಿರ್ಮಾಣಕ್ಕೆ ಅಡ್ಡಿಯಾಗುವ ಅಂಶಗಳನ್ನು ತಿಳಿದು ಬಿಡುವಿನ ವೇಳೆಯಲ್ಲಿ ಗ್ರಂಥಾಲಯ,ಕೈತೋಟ,ಸಮುದ್ರ ತೀರ,ದೇವಾಲಯ,ಆಟದ ಮೈದಾನ ಈ ಸ್ದಳಗಳಿಗೆ ಕರೆದೊಯ್ಯುವುದರಿಂದ ಅವರ ಮನಸನ್ನು ಬೇರೆಡೆ ಸೆಳೆದು ಅವುಗಳಿಗೆ ಸಂಬಂಧಿಸಿದ ಯೋಜನೆ,ಪ್ರಬಂಧ,ಚಿತ್ರ,ಹಾಡು-ಇವುಗಳನ್ನು ನಿಯೋಜಿತ ಕಾರ್ಯಗಳನ್ನಾಗಿ ಮಕ್ಕಳಿಗೆ ಮಾಡಿಕೊಂಡು ಬರಲು ತಿಳಿಸಬಹುದು.
.ನಮ್ಮ ಮನರಂಜನೆ.ಪ್ರತಿಷ್ಠೆಗೆ ಕಟ್ಟು ಬೀಳದೇ ಭವಿಷ್ಯದ ಆಸ್ತಿಗಳಾದ ಮಕ್ಕಳಿಗೆ ಸಮಯವನ್ನು ನೀಡಿ ಅವರ ಬಂಗಾರದಂತ ವಿದ್ಯಾರ್ಥಿ ಜೀವನವನ್ನು ಸಫಲವಾಗಿಸೋಣ ಅಲ್ಲವೇ?


ಬಾರತಿ ನಲವಡೆ

ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ.

7 thoughts on “

  1. ತುಂಬಾ ಚೆನ್ನಾಗಿ ಲೇಖನ ಮೂಡಿ ಬಂದಿದೆ ಮೇಡಂ

    1. ತುಂಬಾ ಚನ್ನಾಗಿ ಮೂಡಿಬಂದಿದೆ ಲೇಖನ ಟೀಚರ್ ಹೀಗೆ ಮುಂದೆ ಕೊಡ ಒಳ್ಳೆಯ ಲೇಖನಗಳು ತಮ್ಮಿಂದ
      ಹೊರಬರಲಿ ಎಂದು ಕೇಳಿಕೊಳ್ಳುತ್ತೇನೆ…..

  2. ಮಕ್ಕಳ ಮುಂದಿನ ಭವಿತವ್ಯಕೆ ಅಣಿಯಾದ ಸಲಹೆಗಳು ಪಾಲಕರ ಕರ್ತವ್ಯದ ಕುರಿತು ಬೆಳಕು ಚಲ್ಲುವ ಲೇಖನ ಅಭಿನಂದನೆಗಳು

  3. ತುಂಬಾ ಚೆನ್ನಾಗಿ ಲೇಕನ ಮೂಡಿ ಬಂದಿದೆ ಟೀಚರ್

Leave a Reply

Back To Top