ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಕುಟುಂಬದ ಸ್ವಾಸ್ಥ್ಯ ಕೆಟ್ಟರೆ
ಸಮಾಜದ ಅವನತಿಗೆ
ಮುನ್ನುಡಿ ಬರೆದಂತೆ!.

ನ್ಯೂಸ್ ಚಾನಲ್ ಓಪನ್ ಮಾಡಿದ್ರೆ ಸಾಕು,ಅವಶ್ಯಕ ವರದಿಗಳ ಜೊತೆ,ಮನೆ ಹಾಳು ಮಾಡಿದವರ ಫೋಕಸ್ ಇಡೀ ದಿನ ಪದೇ ಪದೇ ಪ್ರಸಾರವಾದಾಗಂತೂ,ಮಕ್ಕಳು ಮರಿ ಇರುವ ಮನೆಗಳು ಚಾನಲ್ ಚೇಂಜ್ ಮಾಡದೆ ವಿಧಿಯಿಲ್ಲ.ಇದೊಂದು ಶೀರ್ಷಿಕೆ “2025 ರಲ್ಲಿ ಹೆಂಡತಿಯಿಂದ ಬದುಕುಳಿದ ಮೊದಲನೇ ಗಂಡ ಇವನೇ ಇರಬೇಕು”.ಸೇತುವೆಯ ಮೇಲೆ ನದಿಯಲ್ಲಿ ಮೊಸಳೆ ಇವೇ ಎಚ್ಚರಿಗೆ ಅಂತ ಬೋರ್ಡ್ ಹಾಕುತ್ತಾ ಇದ್ದರು…ಇನ್ನು ಮುಂದೆ ಸೇತುವೆ ಮೇಲೆ “ಹೆಂಡ್ತಿಯಾರು ಇದ್ದರೆ ಎಚ್ಚರಿಗೆ” ಅಂತ ಹಾಕಬೇಕು.ಟಿ.ವಿ.,ಮೊಬೈಲ್ ಗಳಲ್ಲಿ ಹರಿದಾಡುವ ಸುದ್ದಿ, ಕಾಮೆಂಟ್ಗಳು.ಇದೆಲ್ಲವೂ ಒಂದು ಕ್ಷಣ ನಮ್ಮ ಚಿತ್ರಣವನ್ನೆ ಬದಲಿಸುವ ಘಟನೆಗಳು. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಏನಾದರೊಂದು ಘಟಿಸುತ್ತಿರುವುದು ಸಂಬಂಧಗಳಿಗೆ ಬೆಲೆ ಕಟ್ಟುವುದು ಇಷ್ಟು ಸುಲಭವಾ? ಅನ್ನಿಸದೆ ಇರದು.ಪರಸ್ಪರ ಯಾವ ಷರತ್ತುಗಳನ್ನು ಕಟ್ಟುನಿಟ್ಟಾಗಿ ವಿಧಿಸಿ ಜೀವಿಸುವ ನಾಟಕವಾಡಬೇಕೋ ತಿಳಿಯದು.ಬದುಕೇ ಶೋಕಿಯತ್ತ ಜಾರುತ್ತಿದೆ.ಮೂರುಕಾಸಿನ ಜ್ಞಾನ ವಿರದಿದ್ದರೂ,ಮನಸ್ಸು ಒಡಯೋ ಕಲೆಯಂತೂ ಕರಗತವಾಗಿರುತ್ತದೆ.ವಿದ್ಯೆ ಪಡೆದವನು,ಪಡೆಯದವನು ನೈತಿಕತೆಯ ಪ್ರಶ್ನೆ ಬಂದಾಗ,ತಕ್ಕಡಿ ತೂಕ ಮಾತ್ರ ಒಂದೇ ತೂಗುತ್ತದೆ.ಒಂದು ಗುಲಗಂಜಿಯಷ್ಟು ವ್ಯತ್ಯಾಸ ಬರದು.
ಗಂಡ ಹೆಂಡತಿಯನ್ನು ಬರ್ಬರವಾಗಿ ಕೊಂದು,ಕತ್ತರಿಸಿ ಫ್ರಿಜ್ನಲ್ಲಿ ತುಂಬಿರುವುದು,ಹೆಂಡತಿ ಗಂಡನಿಗೆ ವಿಷ ಹಾಕಿ ಕೊಂದಿರುವುದು, ಪ್ರಿಯಕರನ ಸಹಾಯದಿಂದ ಗಂಡನ ಕೊಂದಿರುವುದು,ಗಂಡ ಹೆಂಡತಿಯನ್ನು ಕ್ಷುಲ್ಲಕ ಕಾರಣಗಳಿಗಾಗಿ ಉದಾ. ಊಟದಲ್ಲಿ ಉಪ್ಪಿನಕಾಯಿ ಹಚ್ಚಿಲ್ಲವೆಂದು,ಸಾರಿಗೆ ಉಪ್ಪಿಲ್ಲವೆಂದು ಹೀಗೆ ಹತ್ತಾರು ವಿಷಯಗಳಿಗೆ ಮನಸೋಯಿಚ್ಛೆ ಥಳಿಸಿ ಕೊಂದಿರುವುದು ಒಂದೆಡೆ. ಮಕ್ಕಳು ಅನಾಥರಾಗಿರುವುದು.ಗಂಡ,ಹೆಂಡತಿ ತಮ್ಮ ಅನೈತಿಕ ವ್ಯವಹಾರಕ್ಕೆ ಮಕ್ಕಳು ಅಡ್ಡಿಯಂತ ಕೊಂದಿರುವುದು ಹೊಸತಲ್ಲ.ದಿನಕ್ಕೆ ಒಂದಲ್ಲ ಒಂದು ಘಟನೆಗಳು ಯಾವ ಯಾವುದೋ ಕಾರಣಕ್ಕೆ ನಡೆಯುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.ಇನ್ನೂ ಗಂಡನ ಸ್ನೇಹಿತರು ನಡೆದುಕೊಳ್ಳುವ ರೀತಿಯಿಂದ ಎಷ್ಟು ಸಂಸಾರ ಸಂಬಂಧಗಳು ಸಾಮಾಜಿಕ ಅಸ್ತಿತ್ವ ಕಳೆದುಕೊಂಡಿವೆ.ದುರ್ಯೋಧನ ಕುರುವಂಶದ ವಿನಾಶಕನಾದರೂ ಸ್ನೇಹದ ವಿಷಯದಲ್ಲಿ ಕರ್ಣನನ್ನು ಕಣ್ಮುಚ್ಚಿ ನಂಬುತ್ತಿದ್ದ,ತನ್ನ ಹೆಂಡತಿಯ ಜೊತೆ ಆಟದಲ್ಲಿ ಗೆದ್ದ ಕರ್ಣನಿಗೆ ನೀಡಬೇಕಾದ ಬಹುಮಾನ ಪಡೆಯುವ ಕೊಸರಾಟದಲ್ಲಿ ಭಾನುಮತಿಯ ಕೊರಳಲ್ಲಿದ್ದ ಮುತ್ತಿನ ಸರ ಹರಿದು ಚೆಲ್ಲಾಪಿಲ್ಲಿಯಾದಾಗ ಆ ಸಮಯದಲ್ಲಿ ಉಪಸ್ಥಿತಿಯಿದ್ದ ದುರ್ಯೋಧನ ಕಿಂಚಿತ್ತು ವಿಚಲಿತನಾಗದೆ ತಾನು ಮುತ್ತುಗಳನ್ನು ಆರಿಸಿಕೊಡಿವುದರಲ್ಲಿ ತೊಡಗಿರುವುದು ಪ್ರಶಂಸಾರ್ಹ….ಹಾಗಂತ ಇಂದಿಗೂ ಜೀವಕ್ಕೆ ಜೀವ ಕೊಡುವ ಸ್ನೇಹಿತರು ಇದ್ದಾರೆ.ಗೆಳೆಯನ ಹೆಂಡತಿ ತನ್ನ ಅಕ್ಕತಂಗಿಯರೆಂದು/ ಅಣ್ಣ ತಮ್ಮರೆಂದು ತಿಳಿದುಕೊಂಡು ಜೀವನ ಮಾಡುವವರು ಇದ್ದಾರೆ.ಬೆರಳೆಣಿಕೆಯಷ್ಟು ಗಂಡಸರು,ಹೆಂಗಸರು ತಮ್ಮ ಚೌಕಟ್ಟನ್ನು ಮೀರಿ ಇಡೀ ಮಾನವಕುಲಕ್ಕೆ ಮಸಿಬಳಿಯುವವರ ಸಂಖ್ಯೆ ಇತ್ತಿಚೆಗೆ ಹೆಚ್ಚುತ್ತಿರುವುದು ದುರದೃಷ್ಟಕರ!.

ನಮ್ಮ ನಮ್ಮ ಕುಟುಂಬದಲ್ಲಿ ಒಮ್ಮೆ ಇಣುಕಿ ನೋಡುವ ಪರಿಸ್ಥಿತಿ ಬಂದಿದೆ.ಪರಸ್ಪರ ನಂಬಿ ಬದುಕಿದ ಹಿರಿಯ ಜೀವಗಳು ಈಗ ರಸ್ತೆಯಂಚಲಿ,ವೃದ್ದಾಶ್ರಮದಲ್ಲಿ ಆಶ್ರಯ ಹುಡುಕುವಂತಾಗಿದೆ.ವಿಚಿತ್ರ ನೋಡಿ,ಅತಿಯಾಗಿ ನಂಬುವುದು ಈಗಿನ ಸಮಯದಲ್ಲಿ ಪ್ರಸ್ತುತವಲ್ಲ.ಅಪನಂಬಿಕೆಯ ಬೆನ್ನು ಹತ್ತಿ ಜೀವಿಸುವ ಸಂದರ್ಭಕ್ಕೆ ಬಂದು ನಿಂತಿದ್ದೆವೆ.ಇಷ್ಟವಿಲ್ಲವೆಂದರೆ ಕಷ್ಟ ಪಟ್ಟು ಇರುವುದು ಯಾವ ಪುರುಷಾರ್ಥಕ್ಕೆ? ಸಮಾಜದ ಭೀತಿ ಇದ್ದವರು ನೈತಿಕವಾಗಿ ನಿಯತ್ತಿನಿಂದ ಇರುವುದನ್ನು ಕಲಿಯಬೇಕು.ಮನೆಯಲ್ಲಿ ನಿಮ್ಮ ನಂಬಿರುವ ಜೀವಕ್ಕೆ ಮೋಸ ಮಾಡುವ ಯಾವ ಅಧಿಕಾರವು ಇಲ್ಲ.ಆದರೆ, ಸಮಾಜದ ರೂಪರೇಖೆ ಉದ್ದೇಶ ಎಲ್ಲವೂ ಬದಲಾಗಿದೆ.ಒಳಗೆ,ಹೊರಗೆ ತಮಗಿಷ್ಟ ಬಂದಂತೆ ದುಡ್ಡಿನ ಮದ,ಅಧಿಕಾರದ ಮದ,ತಾನು ಏನುಮಾಡಿದರೂ ನಡೆದು ಹೋಗುತ್ತದೆಂಬಚಟದಸಾರ್ವಭೌಮರಾಗಿದ್ದುದು..ವಾಸ್ತವ.
” ದೇಹವನ್ನು ಮಾರಿಕೊಂಡು ಬದುಕುವ ವೇಶ್ಯೆಯರೇ ಎಷ್ಟೋ ಮೇಲು”! ಅವರಿಗೆ ಯಾವ ಸಂಸಾರ ಹಾಳು ಮಾಡಿದ ಶಾಪ ಅಂಟಲ್ಲ..ಅವರ ಉದ್ಯೋಗವೇ ಅದು..ಸಮಾಜ ಅವರನ್ನು ಕಳಂಕಿತರೆಂದು ಅವಮಾನದ ಪಟ್ಟ ಕಟ್ಟಿ ದೋಷಿಸುವುದರಲ್ಲಿ ನಿರತರಾಗುವ ಸಮಾಜ ನಮ್ಮದು..

ಇಂದು ಇಡೀ ಸಮಾಜ ಮುಖವಾಡ ಧರಿಸಿ,ಪರದೆಯ ಹಿಂದೆ ‘ಅನೈತಿಕ’ ಎಂಬ ನಾಟಕ ಮಂಡಳಿ ಶುರುವಾಗಿರುವುದನ್ನು,ಪ್ರತಿ ಮನೆಯ ಅನುಮಾನಾತ್ಮಕ ತಾರ್ಕಿಕ ಮನಸಿನ ಕಿಟಕಿಗಳು ಮನುಷ್ಯನ ಚಲನವಲನ,ಹಾವಭಾವ,ಸುಳ್ಳು,ಮೋಸ,ನಯವಂಚನೆ,ನಟನೆ ಎಲ್ಲವೂ ಅರ್ಥೈಸಲು ಸಮಯಬೇಕಿಲ್ಲ,ಅದು ತಂತಾನೆ ಊಟದ ಜೊತೆ ಉಪ್ಪಿನಕಾಯಿಯಂತೆ ನಡೆದುಹೋಗುತ್ತದೆ.ಪತಿ ಪತ್ನಿ ಅನ್ನುವ ಋಣ.ಯಾರೊಬ್ಬರೂ ಹೊರೆಯಾಗಬಾರದು.ಅರ್ಥಹೀನ ಜೀವನಕ್ಕಿಂತ ತಮ್ಮಷ್ಟಕ್ಕೆ ತಾವು ದೂರ ಸರಿಯುವುದು ಲೇಸು…ಅದರಿಂದ ನಿರಪರಾಧಿಗಳಿಗೆ ನರಕದರ್ಶನ ಅಷ್ಟೇ. ಅತ್ತ ತವರುಮನೆಯು ಬಂದ್ ಇತ್ತ ಅನರ್ಥ ಗಂಡನ ಮನೆಯು ಬಂದ್ .ಹೆಣ್ಣು ಮಕ್ಕಳ ಜೀವನ ದೀಪಾವಳಿ ಇಲ್ಲದ ದೀಪದಂತೆ.ಧೈರ್ಯದಿಂದ,ಸ್ವಾಭಿಮಾನದಿಂದ ಒಂಟಿಯಾಗಿ ಮಕ್ಮಳೊಂದಿಗೆ ಬದುಕುವವರು ಇದ್ದಾರೆ.ಇನ್ನೂ ನೋವುಂಡ ಗಂಡು ಮಕ್ಕಳ ಜೀವವಂತೂ,ದುಶ್ಚಟಗಳ ದಾಸರಾಗಿ,ಇನ್ಯಾರನ್ನೋ ಅರಸುತ್ತಾರೆ. ಇಲ್ಲವಾದರೆ ಒಂಟಿಯಾಗಿರಲು ಬಯಸುತ್ತಾರೆ.ಒಟ್ನಲ್ಲಿ ಮದುವೆಯೆನ್ನುವ ಬಂಧನ ವಾರಂಟ್ ಅಥವಾ ಗ್ಯಾರಂಟಿ ಇಲ್ಲದ ಸರಕಾಗಿ ಬದಲಾಗುತ್ತಿದೆ.
ಆಸ್ಸಾಂ ನಲ್ಲಿ ವಿಚ್ಛೇದನ ಪಡೆದ ಪತಿ ನಲ್ವತ್ತು ಲೀಟರ್ ಹಾಲಿನಲ್ಲಿ ಸ್ನಾನ ಮಾಡುವುದರ ಮೂಲಕ ಖುಷಿ ಪಟ್ಟಿರುವುದು ಒಂದು ಘಟನೆ.ನನಗೂ ಆಶ್ಚರ್ಯ ಹೀಗೂ ಇರತಾರಾ ಅಂತ? ಕಾರಣ ತಿಳಿದು ಹೌಹಾರಿದೆ.. ಅವನ ಪತ್ನಿ ಪ್ರಿಯಕರನ ಜೊತೆ ಎರಡು ಮೂರ ಸಲ ಓಡಿಹೋದರು, ಕ್ಷಮಿಸಿದ್ದ,ಆದರೂ ಬದಲಾಗದ ಪತ್ನಿ ಪುನಃ ಓಡಿಹೋಗಿದ್ದಕ್ಕೆ ವಿಚ್ಛೇದನ ಕೋರಿದ್ದ,ಅದಕ್ಕೆ ಅಸ್ತು ಅಂದು ವಿಚ್ಛೇದನ ನೀಡಿದ್ದಕ್ಕೆ ಖುಷಿಪಟ್ಟಿದ್ದಕ್ಕೆ ಅರ್ಥಯಿದೆ ಅನ್ನಿಸಿತು.ಇಂತಹ ಹೆಂಗಸರಿಗೆ ಏನು ಹೇಳಲು ಸಾಧ್ಯ?.

ಗಂಡನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು,ಗಂಡನನ್ನು ಮೂಲೆಗುಂಪು ಮಾಡಿ ಅವನೇ ಸ್ವತಃ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುವ ಹೆಂಡತಿಯರು ಇದ್ದಾರೆ.ಅಯ್ಯೋ… ಇದೆಲ್ಲ ಯಾಕಾಗ್ತಿದೆ?….ಕಷ್ಟ ಪಟ್ಟು ದುಡಿದು ಕುಟುಂಬ ಕಟ್ಟಿಕೊಂಡು ಜೀವನ ಸಾಗಿಸುವ ಸಮಯದಲ್ಲಿ ಅಡ್ಡದಾರಿ ಹಿಡಿಯುವ ಮನಸ್ಸು ಬರುತ್ತಿದೆಯೆಂದರೆ ಸಮಾಜದ ದಿಶೆ ನಶೆ,ಆಡಂಬರ,ಶೋಕಿ, ಟೈಂಪಾಸ್,ಹಣದಾಸೆ,ಚಪಲ ಹೀಗೆ ಹತ್ತಾರು ಕಾರಣಗಳು ..! ಇವೆಲ್ಲ ನಿಲ್ಲುವುದು ಕೊಲೆಯಲ್ಲಿ ಯಾರಾದರೊಬ್ಬರ ಸಾವಂತು ಪಕ್ಕಾ! ಕುಟುಂಬ ಬೀದಿಗೆ!. ಹೀಗಾಗಿ ಎಷ್ಟು ಯುವಕ/ಯುವತಿಯರು ಬಾಳ ಸಂಗಾತಿಯೆಂದರೆ ಭಯ ಪಡುವಂತಾಗಿದೆ. ಕಲಿಯುವಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿ ಯುವತಿ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಗೆ ಪ್ರಯತ್ನ ಮಾಡಿಕೊಂಡ ಘಟನೆ ಕಣ್ಮುಂದಿದೆ.ಹೆಣ್ಣು ಮಕ್ಕಳಿಗೆ ಸುರಕ್ಷತೆಯೆ ಇಲ್ಲದಂತಾಗಿದೆ.ನಮ್ಮ ಮಕ್ಕಳು ಮಾನಸಿಕವಾಗಿ ಭಾವನಾತ್ಮಕವಾಗಿ ಅಸ್ಥಿರವಾದ ನಿಲುವನ್ನು ಹೊಂದುತ್ತಿದ್ದಾರೆಯೇ ಎಂಬುದನ್ನು ಪಾಲಕರು ಗಮನಿಸುವುದು ಇಂದು ಅನಿವಾರ್ಯ ಕೂಡ.
ಒಟ್ಟಾರೆಯಾಗಿ ಹೇಳುವುದಾದರೆ,ಸಂಸಾರ…ಇರುವಷ್ಟು ದಿನ ಹೊಂದಿಕೊಂಡು ಹೋದಷ್ಟು ದಿನ ಸ್ವರ್ಗ.ನಾವುಗಳು ಕುಟುಂಬವನ್ನು ಪ್ರೀತಿಸಬೇಕು.ಮೌಲ್ಯಗಳನ್ನು ಎತ್ತಿಹಿಡಿಯಬೇಕು.ಮಾದರಿಯಾಗಿ ಬದುಕಬೇಕು.ಎಲ್ಲರನ್ನು ಗೌರವಿಸುವ,ಮೋಸ,ವಂಚನೆ ಮಾಡುವ ದುರುದ್ದೇಶದಿಂದ ಕೂಡಿರುವ ಮನಸ್ಸಿಗೆ ಸದ್ಬುದ್ದಿ ನೀಡಬೇಕು. ಮನೆಯಲ್ಲಿ ಸಂಸ್ಕಾರವೆಂಬ ತೇರು ಎಳೆಯಬೇಕು. “ಪರಪುರುಷ,ಪರಸ್ತ್ರೀ “ವ್ಯಾಮೋಹದಂತಹ ಕೀಳು ವಿಚಾರಗಳಿಗೆ ಕಡಿವಾಣ ಹಾಕಬೇಕು..ಎಲ್ಲರೂ ಅವರವರ ವೈಯಕ್ತಿಕ ಅತೀ ಆಸೆಗೆ ಬೆಂಕಿಯಿಡಬೇಕು.ಚಪಲತೆಯ ಗುಂಗಿರುವವರಿಗೆ ಪಬ್ಲಿಕ್ ನಲ್ಲಿ ಹರಾಜು ಹಾಕಬೇಕು.ಬಡವ,ಶ್ರೀಮಂತ,ಜಾತಿ,ಧರ್ಮ,ರಾಜಕೀಯ ಹೀಗೆ ಯಾವುದು ಬೇಧ ಭಾವವಿಲ್ಲದೆ ಶಿಕ್ಷೆ ವಿಧಿಸುವಂತಾಗಬೇಕು. ಅಯ್ಯೋ.. ಇದೆಲ್ಲ ಆಗುವುದು ಸುಲಭವಾ? ಖಂಡಿತ ಅಸಾಧ್ಯ!…ಕೆಲವೊಂದು ಕಳ್ಳ ಮನಸ್ಸುಗಳು,ಕಣ್ಣಾಮುಚ್ಚಾಲೆ ಆಟದಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ಹಳದಿ ಕನ್ನಡಕ ತೆಗದು, ನೈಜವಾದ ಬದುಕನ್ನೇ ಗೌರವಿಸುವ ಸ್ಥಿತಿ ನಿರ್ಮಾಣ ಆಗುತ್ತದೆ ಎಂಬ ಹಿರಿಯರ ಮಾತು ನೆನಪಾಯಿತು.
ಕುಟುಂಬದ ಸ್ವಾಸ್ಥ್ಯ ಕೆಟ್ಟರೆ ಸಮಾಜ ಅವನತಿಗೆ ಮುನ್ನುಡಿ ಬರೆದಂತೆ!.

ಶಿವಲೀಲಾ ಶಂಕರ್


ಇಂದು ಸಾಮಾಜಿಕ ಸ್ವಾಸ್ಥ್ಯ ಎಂಬುದು ಮರೀಚಿಕೆಯಾಗುತ್ತಿದ್ದು ಭಾರತೀಯ ಸಂಸ್ಕೃತಿಯ ಅಡಿಪಾಯವಾದ ಕುಟುಂಬ ಪದ್ಧತಿ ತನ್ನ ಉನ್ನತ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವದು ಅತ್ಯಂತ ವಿಷಾದನೀಯ. ಗಂಡ-ಹೆಂಡತಿ ನಡುವೆ ಇರಬೇಕಾದ ಮಧುರ ಬಾಂಧವ್ಯ, ಪ್ರೀತಿ, ವಿಶ್ವಾಸಗಳು ಮರೆಯಾಗಿ ಅವುಗಳ ಜಾಗೆಯಲ್ಲಿ ಕೇವಲ ಹಣ, ಐಷಾರಾಮ ಮತ್ತು ಸ್ವೇಚ್ಛಾಚಾರಿ ಮನೋವೃತ್ತಿಗಳು ವಿಜ್ರಂಭಿಸುತ್ತಿವೆ..!
ಈ ಹಿನ್ನೆಲೆಯಲ್ಲಿ ಈ ಲೇಖನ ಸಕಾಲಿಕವಾಗಿದೆ. ಅಭಿನಂದನೆಗಳು ಶಿವಲೀಲಾ.. ❤❤
ಇದ್ದದ್ದನ್ನ..
ಇದ್ದಂಗೆ ಹೇಳುವ ಎದೆಗಾರಿಕೆ ತೋರಿದ್ದೀರಾ..
ತೋಚಿದ್ದನ್ನ ಹೆಡ್ಲೈನ್ ಮಾಡುವ, ಸಮಾಜದ ಸ್ವಾಸ್ಥ್ಯತೆಯನ್ನ ಹದಗೆಡಿಸುವ ಮಾಧ್ಯಮಗಳ ಅಂಕುಡೊಂಕು ಬುದ್ಧಿಗೆ ಬೇಲಿ ಹಾಕುವವರು ಯಾರು?..
ಅಂಕಣ ಅದ್ಭುತವಾಗಿ ಮೂಡಿ ಬಂದಿದೆ ಮೇಡಂ..
ಕಟು ಸತ್ಯವನ್ನು ಹೇಳಿದ್ದೀರಾ ಮೇಡಮ್, ಸಂತಸ.
ಧನ್ಯವಾದಗಳು.
………….ಶುಭ
ಶಿವಲೀಲಾ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅದರಲ್ಲೂ” ಹೆಣ್ಣು ಮಕ್ಕಳ ಜೀವನ ಮದುವೆಯ ನಂತರ ದೀಪಾವಳಿ ಇಲ್ಲದ ದೀಪದಂತಾಗಿದೆ “ಅನ್ನುವ ಸಾಲು ಅರ್ಥಪೂರ್ಣ. ಹಾಗೆಯೇ ಮದುವೆ ಎನ್ನುವುದು ಸರಕು ಸರಕಾಗಿ ಉಳಿದು ಯಾವುದೇ ವಾರೆಂಟಿ ಗ್ಯಾರಂಟಿ ಇಲ್ಲದೆ ಸರಕಾಗಿದೆ ಎನ್ನುವ ಸಾಲು ತುಂಬಾ ಮಾರ್ಮಿಕವಾಗಿ ಮೂಡಿಬಂದಿದೆ. ಹೀಗೆಯೇ ತಮ್ಮ ಬರವಣಿಗೆ ಮುಂದುವರೆಯಲಿ. ಧನ್ಯವಾದ.
ಡಾ.ಸರಸ್ವತಿ ಕಳಸದ ನಿವೃತ್ತ ಉಪನ್ಯಾಸಕರು.
ಅತ್ಯಂತ ಸುಂದರ ಅಪರೂಪದ ಮೌಲ್ಯ ಯುತ ಲೇಖನ. ಮನ ಮುಟ್ಟುವ ಹಾಗೆ ಬರೆದಿದ್ದೀರಿ..ಈ ಮೂಲಕ ನಾವು,ನಮ್ಮ ಸಮಾಜ ಉತ್ತಮ ದಾರಿಯಲ್ಲಿ ನಡೆಯುವಂತಾಗಲಿ ಎಂಬ ಆಶಯ.
ಜಾಗೃತಿ ಮೂಡಿಸುವಂತಿದೆ.
ಬಾಸಗೋಡ ರಾಮಮೂರ್ತಿ.
ನಿಜವಾದ ಸಂಸ್ಕೃತಿ ಯುಳ್ಳವರು ಈ ರೀತಿ
ತಪ್ಪುದಾರಿಹಿಡಿಯಲಾರರು
ಆದರೂ ಬದುಕಿನಲ್ಲಿ ಬಡತನ ಸಿರಿತನ ಎನ್ನದೆ
ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ಬದುಕು ಕ್ಷೇಮ ಮನಸನ್ನು ಬೀಕಾಬಿಟ್ಟಿ ಹರಿಯ ಬಿಟ್ಟರೆ
ಮಂಗನಿಗೆ ಸೆರೆಕುಡಿಸಿದಂತೆ
ಎಲ್ಲದಕ್ಕೂ ಮನಸೇ ಕಾರಣ
ಆಸೆಗೆ ಹಾಕಬೇಕು ಕಡಿವಾಣ
ಇಲ್ಲದೆ ಹೋದರೆ ಬದುಕು ಒಡೆದ ಕನ್ನಡಿಯಂತೆ
ಚೂರುಚೂರಣ್ಣ.
ನಿಮ್ಮ ಈಬರವಣಿಗೆಗೆ ನನ್ನದೊಂದು ನಮನ
ಸಮಾಜಕ್ಕೆ ದಿಟ್ಟವಾದ ಅರ್ಥಪೂರ್ಣ ಸಂದೇಶ
ರ.ಗು.ಸುತೆ
ಡಾ//ಸುಧಾ.ಚ.ಹುಲಗೂರ
ಧಾರವಾಡ