ಅಂಕಣ ಸಂಗಾತಿ
ಶಿಕ್ಷಣ ಲೋಕ
ಡಾ.ದಾನಮ್ಮ ಝಳಕಿಯವರು
ಸಬಲೀಕರಣದತ್ತ ಮೀನಾಳ ದಿಟ್ಟ ಹೆಜ್ಜೆ
ರಕ್ಷಿತಾ ಎಂಬ 7 ನೇಯ ತರಗತಿಯ ವಿದ್ಯಾರ್ಥಿನಿ ಈಗ ನಿರಂತರವಾಗಿ ಶಾಲೆಗೆ ಬರುತ್ತಿದ್ದಾಳೆ. ಮೀನಾ ಎಂಬ ಮೀನಾ ತಂಡದ ನಾಯಕಿಯ ಕಾರ್ಯದಿಂದ ಶಾಲೆಯಿಂದ ಹೊರಗುಳಿದ ರಕ್ಷಿತಾ ಹಾಗೂ ಇನ್ನೂ ಅನೇಕ ವಿದ್ಯಾರ್ಥಿನಿಯರು ಶಾಲೆಗೆ ನಿರಂತರವಾಗಿ ಬರುವುದಷ್ಟೇ ಅಲ್ಲ ಸಕ್ರೀಯವಾಗಿ ಶಾಲಾ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೇ ಆ ಪುಟ್ಟ ಹಳ್ಳಿಯಲ್ಲಿ ಅಕ್ಷರ ಜ್ಞಾನದ ಅರಿವನ್ನು ಮೂಢಿಸುತ್ತಿದ್ದಾರೆ. ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿಯ ತಡೆ, ಹೆಣ್ಣು ಬ್ರೂಣ ಹತ್ಯೆ ತಡೆ ಹಾಗೂ ವರದಕ್ಷಿಣೆ ನಿಷೇದದಂತಹ ಅನೇಕ ಅನಿಷ್ಟ ಪದ್ಧತಿಗಳ ತಡೆಗೆ ಕಾರಣೀಕರ್ತರಾಗಿದ್ದಾರೆ. ಇಡೀ ಊರಿನ ಜನರು ತಮ್ಮ ಹೆಣ್ಣು ಮಕ್ಕಳ ಬಗ್ಗೆ ಅಭಿಮಾನ ಪಡುತ್ತಿದ್ದಾರೆ. ಅಂದು ಆರ್ಯಾ ಸಮಾಜ ವಿಜ್ಞಾನ ಶಿಕ್ಷಕರ ಹತ್ತಿರ ಬಂದು ಮೇಡಂ ಕಳೆದ ವಾರ ನಾವೆಲ್ಲ ಬ್ಯಾಂಕ್ ಗೆ ಹೋಗಿ ಅಲ್ಲಿಯ ಕಾರ್ಯವನ್ನು ತಿಳಿದುಕೊಂಡೆವು ಹಾಗೂ ನಮ್ಮ ಮನೆಯಲ್ಲಿ ಸಹ ಉಳಿತಾಯದ ಬಗ್ಗೆ ತಿಳಿಸಿದೆವು. ಅದಕ್ಕಿಂತ ಮುಂಚಿನ ವಾರ ಗ್ರಾಮ ಪಂಚಾಯತಿಗೆ ಬೇಟಿ ನೀಡಿದೆವು. ಈ ವಾರ ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಕೇಳಿದಳು. ಆಗ ಶಿಕ್ಷಕರು ನಾವು ಪಕ್ಕದಲ್ಲಿಯೇ ಇರುವ ವೃದ್ಧಾಶ್ರಮಕ್ಕೆ ಹೋಗಣವೇ ಎಂದರು ಎಲ್ಲ ಮೀನಾ ತಂಡದ ಮಕ್ಕಳು ಒಕ್ಕೊರಲಿನಿಂದ ಹೋಗೋಣ ಎಂದರು.
ಎಲ್ಲ ಮಕ್ಕಳು ವೃದ್ಧಾಶ್ರಮಕ್ಕೆ ಬಂದರು. ಅಲ್ಲಿರುವ ಎಲ್ಲ ಹಿರಿಯ ಜೀವಿಗಳಿಗೆ ತಾವು ತಂದ ಹಣ್ಣು ಹಂಪಲಗಳನ್ನು ನೀಡಿ ಅವರ ಹತ್ತಿರ ಕುಳಿತರು. ಅಲ್ಲಿರುವ ಒಬ್ಬ ವೃದ್ಧರು ನೀವು ಇಲ್ಲಿಗೆ ಏಕೆ ಬಂದಿದ್ದೀರಿ ಎಂದು ಕೇಳಿದರು ಆಗ ಆ ಗುಂಪಿನಲ್ಲಿರುವ ಒಬ್ಬ ವಿದ್ಯಾರ್ಥಿಯು ನಾವು ಪ್ರತಿ ವಾರ ಅಥವಾ 15 ದಿನಗಳಿಗೊಮ್ಮೆ ನಮ್ಮ ಮೀನಾತಂಡದಿಂದ ಸಮೀಪದ ಗ್ರಾಮ ಪಂಚಾಯತಿ, ಬ್ಯಾಂಕ, ಶಾಲೆ ಬಿಟ್ಟಿರುವ ಮಕ್ಕಳ ಮನೆ ಇತ್ಯಾದಿಗಳಿಗೆ ಬೇಟಿ ಕೊಡುತ್ತೇವೆ. ಎಂದರು. ಆಗ ವೃದ್ಧರುಬ್ಬರು ಶಿಕ್ಷಕರ ಕಡೆಗೆ ನೋಡಿ ಮೀನಾ ಅಥವಾ ಮೀನಾ ತಂಡ ಎಂದರೇನು? ಎಂದು ಕೇಳಿದರು.
ಆಗ ಅಲ್ಲಿರುವ ಶಿಕ್ಷಕರು ಅದರ ಬಗ್ಗೆ ವಿವರಿಸುತ್ತಾ, ಮೀನಾ ಯಾವುದೇ ಕನಸಿನ ಲೋಕದ ಸ್ವಪ್ನ ಸುಂದರಿಯಲ್ಲ. ದೇಶದ ಅಭಿವೃದ್ಧಿಯ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಇರುವ ಮಹಿಳೆಯರ ಸಬಲೀಕರಣದ ಹಿನ್ನೆಲೆಯಲ್ಲಿ ಬಾಲಕಿಯರ ಶಿಕ್ಷಣ ಉತ್ತೇಜಿಸಲು ಕೈಗೊಂಡ ಕಾರ್ಯಕ್ರಮದ ಹೆಸರು. ಇದು ಒಂದು ಬಾಲೆಯ ಹೆಸರೂ ಹೌದು. ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಲಿಂಗ ಸಮಾನತೆಗಾಗಿ ಎಲ್ಲಾ ಬಾಲೆಯರ ಪ್ರತಿನಿಧಿಯಾಗಿ ಕಲ್ಪಸಿಕೊಂಡ ಸುಂದರ ಪಾತ್ರ. ಇವಳು ಉಲ್ಲಾಸ, ಉತ್ತೇಜನ, ಅನುಕಂಪ ಹಾಗೂ ಸಹಕಾರ ಮನೋಭಾವದ ಹಸನ್ಮುಖಿ ಬಾಲಕಿ. ತನ್ನ ತಾಯಿ, ತಂದೆ, ಅಜ್ಜಿ, ಸಹೋದರ ರಾಜು ಮತ್ತು ಸಹೋದರ ರಾಣಿಯನ್ನು ಒಳಗೊಂಡ ಕುಟುಂಬದಲ್ಲಿ ವಾಸವಾಗಿದ್ದಾಳೆ. ಮೀನಾಳ ಆಪ್ತ ಸ್ನೇಹಿತೆಯಾಗಿ ಮಿಟ್ಟು ಗಿಳಿಯೂ ಇದೆ. ಎಲ್ಲರನ್ನೂ ಪ್ರೀತಿಸುವ ಬಾಲೆಯರ ಬದುಕಿಗೆ ಮಾದರಿಯಾಗುತ್ತಾ, ಎಲ್ಲರ ಬಗೆಗೂ ಕಾಳಜಿವಹಿಸುವ ಕ್ರೀಯಾಶೀಲವಾದ ಪಾತ್ರವೇ ಮೀನಾ.
ಅನೇಕ ಹಳ್ಳಿಗಳಲ್ಲಿ ವಿದ್ಯೆ ಕಲಿಯದೇ ಇರುವ ಬಾಲಕಿಯರಂತೆ ಮೀನಾ ಕೂಡಾ ಒಬ್ಬಳು ಆದರೆ ಆ ಸಮಸ್ಯೆಯನ್ನು ತನ್ನ ಜಾಣ್ಮೆಯಿಂದ ಪರಿಹರಿಸಿಕೊಂಡಳು. ಕುಟುಂಬದ ಜೊತೆಗೆ ಸಮುದಾಯದ ಸಹಕಾರದಿಂದ ಶಿಕ್ಷಣವನ್ನು ಪಡೆದು ಬೆಳೆದಳು. ತುಂಬಾ ಸೂಕ್ಷ್ಮ ಸಂವೇದನೆಯನ್ನು ಹೊಂದಿದವಳು. ತನ್ನಂತೆ ಇತರ ಶಿಕ್ಷಣಕ್ಕೆ ಸದಾ ಶ್ರಮಿಸುತ್ತಿದ್ದಾಳೆ. ಆಕೆಯೇ ನಮ್ಮ ಬಾಲಕಿಯರಿಗೆ ಮಾದರಿಯಾಗಬೇಕಿದೆ. ಈ ಮೂಲಕ ನಮ್ಮ ಮಕ್ಕಳು ಸ್ವಾವಲಂಬಿಯಾಗಿ, ಸ್ವಾಭಿಮಾನದಿಂದ ಬೆಳೆಯಬೇಕು ಆಗ ಸಹಜವಾಗಿ ದೇಶದ ಅಭಿವೃದ್ಧಿಯಾಗುತ್ತದೆ ಎಂಬ ಕನಸನ್ನು ಹೊತ್ತು ಮೀನಾ ತಂಡ ಸಿದ್ಧಗೊಳ್ಳುತ್ತಿದೆ. ಅದರಿಂದ ನಮ್ಮ ಸಮಾಜದಲ್ಲಿ ಬಹುಕಾಲ ಬೇರೂರಿರುವ ಅನಕ್ಷರತೆ, ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಪದ್ಧತಿ, ಜೀತ ಪದ್ಧತಿ, ಬಿಕ್ಷಾಟನೆಗಳ ಮುಕ್ತ ಸಮಾಜ ನಿರ್ಮಾಣವಾಗಲು ಮೀನಾ ತಂಡ ಕ್ರೀಯಾಶಿಲವಾಗಿ ಕಾರ್ಯನಿರ್ವಹಿಸುತ್ತದೆ. ಎಂದರು. ಆಗ ವೃದ್ಧಾಶ್ರಮದಲ್ಲಿದ್ದ ವೃದ್ಧೆಯೊಬ್ಬಳು ಇದು ತುಂಬಾ ಚೆನ್ನಾದ ಕಾರ್ಯಕ್ರಮ. ನಾವು ಇದ್ದಾಗ ಇದು ಇದ್ದರೆ ನಮ್ಮಂತಹ ಅನೇಕರು ಅನಕ್ಷರಸ್ಥರಾಗಿ ಉಳಿಯುತ್ತಿರಲಿಲ್ಲ ಎಂದಳು. ಆಗ ಮತ್ತೊಬ್ಬ ವೃದ್ಧ ಇದು ಎಲ್ಲ ಶಾಲೆಯಳಲ್ಲಿ ಇದೆಯೇ ಎಂದು ಕೇಳಿದ. ಆಗ ಅಲ್ಲಿರುವ ಮೀನಾ ಹೌದು ಅಜ್ಜಾ, ಸರಕಾರಿ ಶಾಲೆಗಳಲ್ಲಿ ಎಲ್ಲೆಡೆ ಇದೆ ಎಂದಳು. ಆಗ ಅಲ್ಲಿರುವ ಇನ್ನೊಬ್ಬ ವೃದ್ಧನು ಇದು ಯಾವಾಗಿನಿಂದ ಪ್ರಾರಂಭವಾಗಿದೆ ಎಂದು ಕೇಳಿದ.
ಆಗ ಶಿಕ್ಷಕಿಯಿ ಉತ್ತರಿಸುತ್ತಾ, ದಕ್ಷಿಣ ಏಷ್ಯಾದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಯುನಿಸೆಫ್ ರೂಪಿಸಿದ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಮೀನಾ 1998 ರ ಸಪ್ಟೆಂಬರ್ 24 ರಂದು ಭಾರತ, ಬಾಂಗ್ಲಾ, ನೇಪಾಳ, ಶ್ರೀಲಂಕಾ ಹಾಗೂ ಪಾಕಿಸ್ತಾನ ಮೊದಲಾದ ದೇಶಗಳಲ್ಲಿ ಈ ಮೀನಾ ಜನ್ಮ ತಾಳಿದೆ. ಅಂದಿನಿಂದ ಸಪ್ಟೆಂಬರ್ 24 ಮೀನಾ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದರು. ಆಗ ಅಲ್ಲಿರುವ ವೃದ್ದರೊಬ್ಬರು ಮೀನಾ ತಂಡದ ರಚನೆ ಹೇಗೆ ಆಗುತ್ತದೆ ಎಂದು ಕೇಳಿದರು. ಮೀನಾ 20 ಸಮಾನ ಮನಸ್ಕ ಗೆಳೆಯ/ಗೆಳತಿಯರನ್ನು ಒಳಗೊಂಡ ಕ್ರಿಯಾಶೀಲ ಬಳಗ. ಅದರಲ್ಲಿ 10 ಗೆಳತಿಯರು, 5 ಗೆಳೆಯರು ಮತ್ತು 5 ಜನ ಅನಿಯಮಿತವಾಗಿ ಶಾಲೆಗೆ ಬರುವ ಗೆಳತಿಯರು ಇರುತ್ತಾರೆ. ಮೀನಾ ತಂಡ ಪ್ರತಿ ವರ್ಷ ಜೂನದಲ್ಲಿ ರಚನೆಯಾಗುತ್ತದೆ ಎಂದು ಶಿಕ್ಷಕಿ ತಿಳಿಸಿದರು.
ನಮ್ಮ ದೇಶದ ಉತ್ತರ ಪ್ರದೇಶದ ಹೆಚ್ಚಿನ ಶಾಲೆಗಳಲ್ಲಿ ಪ್ರಾರಂಭವಾದ ಮೀನಾ ಕಾರ್ಯಕ್ರಮ 2005 ರ ವೇಳೆಗೆ 28771 ಶಾಲೆಗಳಲ್ಲಿ ರಚನೆಯಾಗಿ ಯಶಸ್ಸನ್ನು ಕಂಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕರ್ನಾಟಕದಲ್ಲೂ ಮಹಿಳಾ ಸಾಕ್ಷರತಾ ಪ್ರಮಾಣ ಕಡಿಮೆಯಿದೆ ಅದ್ದರಿಂದ ಶಾಲೆಗಳಲ್ಲಿ ಬಾಲಕಿಯರ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಾ ಸಬಲರಾಗಲು 2008 ರಲ್ಲಿ ಹೆಣ್ಣು ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ಮೀನಾ ಕಾರ್ಯಕ್ರಮವನ್ನು ಇಬಿಬಿ (EBB ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳು) ಬ್ಲಾಕ್ ಗಳಲ್ಲಿ ಪ್ರಾರಂಭಿಸಲಾಗಿದೆ. ಅಲ್ಲಿನ ಯಶೋಗಾಥೆಯನ್ನು ಗಮನಿಸಿ ರಾಜ್ಯ ಸರ್ಕಾರವು ಈ ಸಾಲಿನಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮೀನಾ ತಂಡ ರಚನೆ, ಕಾರ್ಯಕ್ರಮಗಳ ಅನುಷ್ಟಾನಕ್ಕೆ ತರಬೇತಿ ಆಯೋಜಿಸಲಾಗಿದೆ ಎಂದು ತಿಳಿಸಿದರು. ಆಗ ಅಲ್ಲಿಯ ವೃದ್ಧೆಯೊಬ್ಬಳು ಮೀನಾ ತಂಡದ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಎಂದರು ಆಗ ಶಿಕ್ಷಕಿ ವಿವರಿಸುತ್ತಾ, ಪ್ರತಿ ಶನಿವಾರ ಕೊನೆಯ ಅವಧಿಯಲ್ಲಿ ಮೀನಾ ತಂಡದ ಸಭೆ ಜರುಗಬೇಕು, ಮೀನಾ ತಂಡದ ಸಭೆ/ಚಟುವಟಿಕೆಗಾಗಿಯೇ ಶಾಲೆಯ ಒಂದು ಕೊಠಡಿ ಮೀಸಲಾಗಿರುತ್ತದೆ. ಸಭೆಗಳಲ್ಲಿ ಸಮಸ್ಯೆಗಳು, ಯಶೋಗಾಥೆಗಳು ಕಾರ್ಯಕ್ರಮಗಳ ಆಯೋಜನೆ ಸೇರಿದಂತೆ ಒಟ್ಟಾರೆ ಮೀನಾಕ್ಕೆ ಆ ಕೊಠಡಿ ಕೇಂದ್ರವಾಗಿರುತ್ತದೆ. ಮೀನಾ ತಂಡದ ತರಬೇತಿಗಳು ಈ ಕೊಠಡಿಯಲ್ಲಿಯೇ ನಡೆಯುತ್ತವೆ. ಪ್ರತಿ ಕಾರ್ಯಕ್ರಮದ ನಂತರ ಅದರ ಮಾಹಿತಿಯನ್ನು ದಾಖಲೀಕರಣ ಮಾಡಬೇಕು ಎಂದು ಶಿಕ್ಷಕಿ ತಿಳಿಸಿದಳು ಆಗ ಅಲ್ಲಿರುವ ವೃದ್ಧರು ಉತ್ತಮ ಕಾರ್ಯಕ್ರಮವಿದು. ನಮಗೂ ಸಹ ಇದರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಎಂದರು.
ಅಲ್ಲಿ ಬೇಟಿ ಕೊಟ್ಟ ಎಲ್ಲ ವಿದ್ಯಾರ್ಥಿಗಳು ಅಲ್ಲಿರುವ ವೃದ್ಧರೊಂದಿಗೆ ಚರ್ಚಿಸುತ್ತಾ, ಅಲ್ಲಿರುವ ಅಜ್ಜ ಅಜ್ಜಿಯರಿಗೆ ನೀವು ಇಲ್ಲಿಗೆ ಬರಲು ಕಾರಣವೇನು ಎಂದು ಕೇಳಿದರು. ಅಲ್ಲಿರುವ ಒಬ್ಬ ಅಜ್ಜ ನನಗೆ ಎರಡು ಜನ ಮಕ್ಕಳು ಇಬ್ಬರೂ ಸಾಫ್ಟವೇಯರ ಇಂಜನೀಯರ ಅವರಿಗೆ ನನ್ನನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅದಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದನು ಇನ್ನೊಬ್ಬ ಅಜ್ಜಿಯು ನನಗೆ ಒಬ್ಬ ಮಗನಿದ್ದಾನೆ ಅವನು ಡಾಕ್ಟರ್ ಅವನು ವಿದೇಶದಲ್ಲಿದ್ದಾನೆ. ನನ್ನನ್ನು ನೋಡಿಕೊಳ್ಳುವವರು ಯಾರಿಲ್ಲ ಅದಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದರು ಇದನ್ನು ಕೇಳಿದ ಮಕ್ಕಳ ಕಣ್ಣಲ್ಲಿ ನೀರು ಬಂದಿತು. ಎಲ್ಲರ ಕಥೆ ಕೇಳಿ ಮರಳಿ ಶಾಲೆಯೆಡೆಗೆ ಬರುತ್ತಿದ್ದ ಮಕ್ಕಳು ಶಿಕ್ಷಕರನ್ನು ನೋಡಿ, ಮೇಡಂ ನಾವು ಏನೇ ಆದರೂ ನಮ್ಮ ತಂದೆ ತಾಯಿಯರನ್ನು ಮಾತ್ರ ಚೆನ್ನಾಗಿ ನೋಡಿಕೊಳ್ಳುತ್ತೇವೆ. ಅವರೊಂದಿಗೆ ನಾವು ಒಟ್ಟಾಗಿ ಇದ್ದು, ಆರೈಕೆ ಮಾಡುತ್ತೇವೆ. ಎಂದಿಗೂ ಅವರಿಗೆ ತೊಂದರೆಯಾಗದಂತೆ ನೋಡುತ್ತೇವೆ. ಕುಟುಂಬದ ಸದಸ್ಯರೊಂದಿಗೆ ಅವರು ಆನಂದದಿಂದ ಇರುವಂತೆ ನೋಡಿಕೊಳ್ಳುತ್ತೇವೆ. ಎಂದಾಗ ಶಿಕ್ಷಕರ ಕಣ್ಣಲ್ಲಿಯೂ ನೀರು ಬಂದಿತು. ಹೌದು ಮಕ್ಕಳೇ ನೀವೆಲ್ಲ ಉತ್ತಮ ನೈತಿಕತೆ ಹೊಂದಿದ ನಾಗರಿಕರಾಗಿ. ನಿಮ್ಮ ಹಿರಿಯನ್ನು ಉತ್ತಮವಾಗಿ ಆರೈಕೆ ಮಾಡಿ ಎಂದು ಹಾರೈಸುತ್ತಾ ಶಾಲೆ ಕಡೆಗೆ ನಡೆದರು.
ಡಾ.ದಾನಮ್ಮ ಝಳಕಿ
ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ